ಬೆಂಗಳೂರು : ಟೊಯೋಟಾದ ಮೊದಲ ಸ್ವಯಂ ಚಾಲಿತ ಹೈಬ್ರಿಡ್ ಎಲೆಕ್ಟ್ರಿಕ್ ಎಂಜಿನ್ ಹೊಂದಿರುವ ಎಸ್‌ಯುವಿ Urban Cruiser Hyryder ಶುಕ್ರವಾರ ನವದೆಹಲಿಯಲ್ಲಿ ಅನಾವರಣಗೊಂಡಿತು. ಈ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿ ಮಾರುಕಟ್ಟೆಗೆ ಟೊಯೋಟಾ ಬಲವಾದ ಹೆಜ್ಜೆ ಇಡುವ ಪ್ರಯುತ್ನ ನಡೆಸಿದೆ. ಅರ್ಬನ್ ಕ್ರೂಸರ್ ಹಿಂದೆ ಮಾರುಕಟ್ಟೆಯಲ್ಲಿ ಇದ್ದರೂ, ಇದೀಗ ಸುಧಾರಿತ ತಂತ್ರಜ್ಞಾನ ಹಾಗೂ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಇಳಿದಿದ್ದು ಕಾಂಪಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನ ಗ್ರಾಹಕರ ಮನ ಸೆಳೆಯಲು ಮುಂದಾಗಿದೆ.
ಮುಂಬರುವ ಹಬ್ಬಗಳ ಋತುವಿಗೆ ಕಾರು ಗ್ರಾಹಕರ ಕೈಸೇರಲಿದ್ದು, ಪ್ರಮುಖವಾಗಿ ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾ, ಫೋಕ್ಸ್ ವ್ಯಾಗನ್ ಟೈಗೂನ್, ಸ್ಕೋಡಾ ಕುಶಾಖ್ ಹಾಗೂ ಎಂಜಿ ಆಸ್ಟರ್ ಕಾರುಗಳ ಜತೆ ಪೈಪೋಟಿ ನಡೆಸಲು ಸಜ್ಜಾಗಿದೆ. ಟೊಯೊಟಾ ಕಂಪನಿಯು ಈಗಲೇ ಬುಕಿಂಗ್ ಆರಂಭಿಸಿದ್ದು, ೨೫ ಸಾವಿರ ರೂಪಾಯಿ ನೀಡಿ ಬುಕ್ ಮಾಡಿಕೊಳ್ಳಬಹುದು.
ಹೈಬ್ರಿಡ್ ತಂತ್ರಜ್ಞಾನ
ಹೈಬ್ರಿಡ್ ತಂತ್ರಜ್ಞಾನವೇ ಈ ಕಾರಿನ ವಿಶೇಷತೆಯಾಗಿದ್ದು, ಈ ಸೆಗ್ಮೆಂಟ್‌ನ ಮೊಟ್ಟ ಮೊದಲ ಹೈಬ್ರಿಡ್ ಎಂಜಿನ್ ಇರುವ ಕಾರು ಎನಿಸಿಕೊಂಡಿದೆ. ಮಾರುತಿ ಸುಜುಕಿಯ ೧.೫ ಲೀಟರ್ ಸಾಮರ್ಥ್ಯದ ಎಂಜಿನ್ ಅನ್ನು ಬಳಸಲಾಗಿದ್ದು, mild-hybrid ಹಾಗೂ strong-hybrid ಎಂಬ ಎರಡು ಎಂಜಿನ್‌ಗಳ ಆಯ್ಕೆಯಿದೆ. ಜತೆಗೆ ಆಲ್ ವೀಲ್ ಡ್ರೈವ್ (ಎಡಬ್ಲ್ಯುಡಿ) ಆಯ್ಕೆ ಹೊಂದಿರುವ ಈ ಸೆಗ್ಮೆಂಟ್‌ನ ಮೊದಲ ಕಾರು ಎಂಬ ಹೆಗ್ಗಳಿಕೆಯೂ ಅರ್ಬನ್ ಕ್ರೂಸರ್‌ಗೆ ಲಭಿಸಿದೆ.
ಅರ್ಬನ್ ಕ್ರೂಸರ್ ಎಸ್‌ಯುವಿ ಮಾರುತಿಯ ಬ್ರೆಜಾ ಕಾರಿನ ತಂತ್ರಜ್ಞಾನ ಹಂಚಿಕೆಯ ಭಾಗವಾಗಿದ್ದರೂ, ಭಿನ್ನ ನೋಟವನ್ನು ಹೊಂದಿದೆ. ಪ್ರಮುಖವಾಗಿ ಟೊಯೋಟಾದ ತಯಾರಿಕೆ ಎಂಬ ಪ್ರತ್ಯೇಕತೆಯನ್ನು ಕಂಡು ಹಿಡಿಯಲು ಸಾಧ್ಯವಿದೆ.
ಎಕ್ಸ್‌ಟೀರಿಯರ್
ಅರ್ಬನ್ ಕ್ರೂಸರ್ ಹೈರೈಡರ್ ಕಾರು ಎಲ್‌ಡಿ ಪ್ರಾಜೆಕ್ಟರ್ ಹೆಡ್‌ಲ್ಯಾಂಪ್, ಟ್ವಿನ್ ಎಲ್ಇಡಿ ಡಿಆರ್‌ಎಲ್, ಸೈಡ್ ಟರ್ನ್ ಇಂಡಿಕೇಟರ್, ಸ್ಪೋರ್ಟಿ ರಿಯರ್ ಸ್ಕಿಡ್ ಪ್ಲೇಟ್, ಅಗಲವಾದ ಲೋವರ್ ಗ್ರಿಲ್, ಡ್ಯುಯಲ್ ಟೋನ್ ಬಾಡಿ ಕಲರ್ ಹೊಂದಿದೆ. ೧೭ ಇಂಚಿನ ಅಲಾಯ್ ವೀಲ್‌ಗಳು ಕಾರಿನ ನೋಟ ಹೆಚ್ಚಿಸುತ್ತದೆ.
ಕ್ಯಾಬಿನ್
9 ಇಂಚಿನ ಸ್ಮಾರ್ಟ್ ಪ್ಲೇ ಕಾಸ್ಟ್ ಆಡಿಯೋ, ಡ್ರೈವ್ ಮೋಡ್ ಸ್ವಿಚ್, ವೈರ್‌ಲೆಸ್ ಚಾರ್ಜಿಂಗ್, 360-ಡಿಗ್ರಿ ಕ್ಯಾಮೆರಾ, ಆಂಬಿಯೆಂಟ್ ಲೈಟ್, ಡೋರ್ ಸ್ಪಾಟ್ + ಐಪಿ ಲೈನ್, ಹೆಡ್-ಅಪ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ಟಿಲ್ಟ್. ಮತ್ತು ಟೆಲಿಸ್ಕೋಪಿಕ್ ಸ್ಟೇರಿಂಗ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಕನೆಕ್ಟೆಡ್ ಕಾರ್ ತಂತ್ರಜ್ಞಾನವನ್ನು ಹೊಂದಿದೆ.
ಸುರಕ್ಷತೆ: ಕಾರಿನಲ್ಲಿ ಆರು ಏರ್ ಬ್ಯಾಗ್‌ಗಳು ಇರಲಿವೆ. ಜತೆಗೆ ಎಬಿಎಸ್ ಬ್ರೇಕಿಂಗ್, ಇಬಿಡಿ, ಟ್ರಾಕ್ಷನ್ ಕಂಟ್ರೋಲ್, ಹಿಲ್ ಹೋಲ್ಡ್ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ವ್ಯವಸ್ಥೆಗಳಿವೆ. ೩೬೦ ಡಿಗ್ರಿ ಕ್ಯಾಮೆರಾ ಹಾಗೂ ಹಿಂದೆ ಹಾಗೂ ಮುಂದೆ ಪಾರ್ಕಿಂಗ್ ಸೆನ್ಸರ್ ವ್ಯವಸ್ಥೆಯನ್ನೂ ಹೊಂದಿದೆ.