ನವ ದೆಹಲಿ: ಹೀರೋ ಕಂಪನಿಯು ಭಾರತದಲ್ಲಿ ಎಕ್ಸ್ ಟ್ರೀಮ್ 160ಆರ್ 4ವಿ (Hero Xtreme) ಬೈಕ್ ಬಿಡುಗಡೆಗೊಳಿಸಿದೆ. ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ 1.27 ಲಕ್ಷಗಳಿಂದ ಆರಂಭವಾಗಿ 1.36 ಲಕ್ಷ ರೂಪಾಯಿಗಳ ತನಕ ಇದೆ. ವಿಶೇಷವೆಂದರೆ, ಹೊಸ ಬೈಕ್ನಲ್ಲಿ 37 ಎಂಎಂ ಕೆವೈಬಿ ಯುಎಸ್ಡಿ ಫೋರ್ಕ್ ಮತ್ತು ಶೋವಾ ಮೊನೊಶಾಕ್ ನೀಡಲಾಗಿದೆ. ಜತೆಗೆ ಹೆಚ್ಚು ಶಕ್ತಿಶಾಲಿ 4-ವಾಲ್ವ್ ಎಂಜಿನ್ ಮತ್ತು ಇತರ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ.
ಹೀರೋ ಎಕ್ಸ್ ಟ್ರೀಮ್ 160ಆರ್ 4ವಿ ಹೊಸ ಬೈಕಿನಲ್ಲಿ (Hero Xtreme) ಅತ್ಯಂತ ಗಮನಾರ್ಹ ಬದಲಾವಣೆಯೆಂದರೆ ಹೊಸ ಗೋಲ್ಡನ್ 37 ಎಂಎಂ ಕೆವೈಬಿ ಯುಎಸ್ ಡಿ ಫೋರ್ಕ್. ಇದು ಬೈಕಿನ ಮುಂಭಾಗ ಹೆಚ್ಚು ದಷ್ಟಪುಷ್ಟವಾಗಿರುವಂತೆ ನೋಡಿಕೊಂಡಿದೆ. ಅದೇ ರೀತಿ ಹೊಸ ಮೊನೊಶಾಕ್ 7 ಹಂತದ ಪ್ರಿಲೋಡ್ ಅಡ್ಜಸ್ಟ್ಮೆಂಟ್ ಹೊಂದಿದೆ. ಈ ವಿಶೇಷ ಸಸ್ಪೆನ್ಷನ್ ಟಾಪ್ ವೇರಿಯೆಂಟ್ನಲ್ಲಿ ಮಾತ್ರ ಲಭ್ಯವಿದೆ. ಇತರ ಎರಡು ವೇರಿಯೆಂಟ್ಗಳಲ್ಲಿ ಟೆಲಿಸ್ಕೋಪಿಕ್ ಫೋರ್ಕ್, ಮೊನೊಶಾಕ್ನೊಂದಿಗೆ ಲಭ್ಯವಿದೆ.
ಹೊಸ ಬೈಕ್ಗೆ (Hero Xtreme) ಸಿಂಗಲ್ ಸೀಟ್ ಅಥವಾ ಸ್ಪ್ಲಿಟ್ ಸೀಟ್ ಆಯ್ಕೆ ನೀಡಲಾಗಿದೆ. ಎರಡನ್ನೂ ಪರಸ್ಪರ ಬದಲಾಯಿಸಲೂ ಅವಕಾಶವಿದೆ. ಟ್ಯಾಂಕ್ ಎಕ್ಸ್ಟೆನ್ಷನ್ಗಳನ್ನು ಉದ್ದ ಮಾಡಲಾಗಿದೆ. ಇದು ಡ್ಯುಯಲ್ ಟೋನ್ ಪೇಂಟ್ನೊಂದಿಗೆ ಬಂದಿದೆ. ಮರುವಿನ್ಯಾಸಗೊಳಿಸಿದ ಪೂರ್ಣ ಎಲ್ಇಡಿ ಹೆಡ್ ಲೈಟ್ ಕೂಡ ಪಡೆದಿದೆ.. ಹೊಸ ಸ್ವಿಚ್ಗೇರ್ ಹಿಂದಿಗಿಂತಲೂ ಹೆಚ್ಚು ಪ್ರೀಮಿಯಂ ಆಗಿದೆ. ಅಪ್ಡೇಟೆಡ್ ಹೀರೋ ಎಕ್ಸ್ ಪಲ್ಸ್ 200 4 ವಿ ಬೈಕಿನಂತೆಯೇ ಇದೆ.
163 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಈಗ ಏರ್-ಕೂಲ್ಡ್ ಜೊತೆಗೆ ಆಯಿಲ್-ಕೂಲರ್ ಆಯ್ಕೆಯನ್ನೂ ಹೊಂದಿದೆ. ಹೆಚ್ಚು ಆಧುನಿಕ 4-ವಾಲ್ವ್ ಹೆಡ್ ಕೂಡ ನೀಡಲಾಗಿದೆ. ಈ ಎಂಜಿನ್ 8,500 ಆರ್ಪಿಎಂನಲ್ಲಿ 16.9 ಬಿಎಚ್ಪಿ ಪವರ್ ಮತ್ತು 6,500 ಆರ್ ಪಿಎಂನಲ್ಲಿ 14.6 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಎಕ್ಸ್ ಟ್ರೀಮ್ 160ಆರ್ 4ವಿಯ ಸ್ಟ್ಯಾಂಡರ್ಡ್ ಮತ್ತು ಕನೆಕ್ಟೆಡ್ ವೇರಿಯೆಂಟ್ಗಳು 144 ಕೆಜಿ ತೂಕವನ್ನು ಹೊಂದಿದ್ದರೆ, ಪ್ರೊ ವೇರಿಯೆಂಟ್ 145 ಕೆ.ಜಿ ತೂಕ ಹೊಂದಿದೆ. 12 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಸೇರಿದಂತೆ ಇತರ ಫೀಚರ್ಗಳು ಹಿಂದಿನಂತೆಯೇ ಇವೆ.
ಹೀರೋ ಎಕ್ಸ್ ಟ್ರೀಮ್ 160 ಆರ್ 4ವಿಯಲ್ಲಿ ಬ್ಲೂಟೂತ್ ಸಂಪರ್ಕ ಸಾಧಿಸಬಹುದಾದ ಎಲ್ಸಿಡಿ ಡಿಸ್ಪ್ಲೇ ಹೊಂದಿದೆ. ಫೋನ್ ಕಾಲ್ ಮತ್ತು ನೋಟಿಫಿಕೇಶನ್ ಅಲರ್ಟ್ ಆಯ್ಕೆಯನ್ನೂ ನೀಡಲಾಗಿದೆ. ಸಿಂಗಲ್ ಸೀಟ್, ಫೋನ್ ಮೌಂಟ್, ಬಾರ್ ಎಂಡ್ ಮಿರರ್ ಸೇರಿದಂತೆ ಹಲವು ಆಕ್ಸೆಸರಿಗಳನ್ನೂ ನೀಡಲಾಗಿದೆ.
2023 ಹೀರೋ ಎಕ್ಸ್ ಟ್ರೀಮ್ 160ಆರ್ 4ವಿ: ಬೆಲೆ, ಪ್ರತಿಸ್ಪರ್ಧಿಗಳು
ಹೀರೋ ಎಕ್ಸ್ಟ್ರೀಮ್ (Hero Xtreme) 160ಆರ್ 4ವಿ ಬೈಕ್ನ ಸ್ಟ್ಯಾಂಡರ್ಡ್ ಆವೃತ್ತಿ 1,27,300 ರೂಪಾಯಿ ಎಕ್ಸ್ಶೋರೂಮ್ ಬೆಲೆಗೆ ಲಭ್ಯವಿದೆ. ಕನೆಕ್ಟೆಡ್ ವೇರಿಯೆಂಟ್ಗೆ 1,32,800 ರೂಪಾಯಿ. ಪ್ರೊ ವೇರಿಯೆಂಟ್ ಟಾಪ್ ಎಂಡ್ ಆಗಿದ್ದು ಅದಕ್ಕೆ 1,36,50 ರೂಪಾಯಿ ನಿಗದಿ ಮಾಡಲಾಗಿದೆ. ಸ್ಟ್ಯಾಂಡರ್ಡ್ ವೇರಿಯೆಂಟ್ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಸಿಂಗಲ್ ಸೀಟ್ ನೊಂದಿಗೆ ಬರುತ್ತದೆ, ಕನೆಕ್ಟೆಡ್ ವೇರಿಯೆಂಟ್ ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಬರುತ್ತದೆ. ಪ್ರೊ ವೇರಿಯೆಂಟ್ ಯುಎಸ್ ಡಿ ಫೋರ್ಕ್, ಸ್ಪ್ಲಿಟ್-ಸೀಟ್ ಸೆಟಪ್ ಮತ್ತು ಆಕರ್ಷಕ ಡ್ಯುಯಲ್-ಟೋನ್ ಬಣ್ಣಗಳೊಂದಿಗೆ ಲಭ್ಯವಿದೆ. ಹಿಂದಿನ ಮಾಡೆಲ್ ಅಂದರೆ ಎಕ್ಸ್ ಟ್ರೀಮ್ 160ಆರ್ 2ವಿ ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ದರದಂತೆ 1,18,886 ನಿಂದ 1,30,008ಗಳಾಗಿತ್ತು. ಹೀಗಾಗಿ ಸ್ಟಾಂಡರ್ಡ್ ವೇರಿಯೆಂಟ್ಗೆ ಸುಮಾರು 10 ಸಾವಿರ ರೂಪಾಯಿ ಜಾಸ್ತಿಯಾಗಿದ್ದರೆ ಟಾಪ್ ಎಂಜ್ ಬೈಕ್ಗೆ 6 ಸಾವಿರ ರೂಪಾಯಿ ಹೆಚ್ಚಳವಾಗಿದೆ.
ಬೆಲೆಯ ವಿಚಾರಕ್ಕೆ ಬಂದಾಗ ಎಕ್ಸ್ಟ್ರೀಮ್ 160ಆರ್ 4ವಿ ಬೈಕ್ ಬಜಾಜ್ ಪಲ್ಸರ್ ಎನ್ 160 1.23 ಲಕ್ಷ ರೂಪಾಯಿಂದ ಆರಂಭ ಟಿವಿಎಸ್ ಅಪಾಚೆ ಆರ್ ಟಿಆರ್ 160 4ವಿ (1.24 ಲಕ್ಷ ರೂಪಾಯಿಂದ ಆರಂಭ) ಬೈಕ್ಗಳಿಗೆ ಪೈಪೋಟಿ ಒಡ್ಡಲಿವೆ. ಜುಲೈ ಎರಡನೇ ವಾರದಿಂದ ಈ ಬೈಕ್ನ ವಿತರಣೆಗಳು ಪ್ರಾರಂಭವಾಗಲಿವೆ.