ನವ ದೆಹಲಿ: ಮುಂಗಾರು ಮಳೆ (Rain News) ದೇಶಾದ್ಯಂತ ಆರ್ಭಟಿಸುತ್ತಿದೆ. ಮಳೆಯ ಅಬ್ಬರಕ್ಕೆ ನದಿಗಳೆಲ್ಲವೂ ತುಂಬಿ ಹರಿಯುತ್ತಿದ್ದು ಅಪಾಯಕಾರಿ ಮಟ್ಟವನ್ನೂ ಮೀರಿದೆ. ಇದರಿಂದಾಗಿ ಅಲ್ಲಲ್ಲಿ ಅವಾಂತರಗಳು ನಡೆಯುತ್ತಿವೆ. ಮಳೆಯಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಕಾರುಗಳು, ಜಾನುವಾರುಗಳು ಸೇರಿದಂತೆ ನಾನಾ ಬಗೆಯ ಮಳೆ ಹಾನಿಯ ದೃಶ್ಯಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಅಂತೆಯೇ ನೋಯ್ಡಾದಲ್ಲಿ 500 ಹೊಚ್ಚ ಹೊಸ ಕಾರುಗಳು ಹಿಂಡನ್ ನದಿಯಲ್ಲಿ ಮುಳುಗಿರುವ ವಿಡಿಯೊವೊಂದು ವೈರಲ್ ಆಗಿದೆ.
500 ಕಾರುಗಳನ್ನು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಯಾರ್ಡ್ ನಲ್ಲಿ ನಿಲ್ಲಿಸಲಾಗಿತ್ತು.. ಹಿಂಡನ್ ನದಿ ಉಕ್ಕಿ ಹರಿಯುತ್ತಾ ನಿಲ್ಲಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕಾರುಗಳನ್ನು ಎಳೆದುಕೊಂಡು ಹೋಗಿದೆ. ಉತ್ತರ ಭಾರತದ ಕೆಲವು ಭಾಗಗಳಲ್ಲಿ ಇತಿಹಾಸದಲ್ಲಿಯೇ ಅತಿ ಹೆಚ್ಚು ಮಳೆಯಾಗಿದ್ದು ಭೀಕರ ಪ್ರವಾಹ, ಭೂಕುಸಿತ ಮತ್ತು ಇತರ ನೈಸರ್ಗಿಕ ವಿಪತ್ತುಗಳಿಗೆ ಸಾಕ್ಷಿಯಾಗಿವೆ. ಈ ಪ್ರದೇಶದಲ್ಲಿ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ನೂರಾರು ಜನರನ್ನು ಸ್ಥಳಾಂತರಿಸಲಾಗಿದೆ. ಆದರೆ, ವಸ್ತುಗಳನ್ನು ಅಲ್ಲೇ ಬಿಟ್ಟು ಹೋಗಿರುವ ಕಾರಣ ಅವುಗಳು ನೀರುಪಾಲಾಗುತ್ತಿವೆ.
ಗ್ರೇಟರ್ ನೋಯ್ಡಾದ ಸುಥಿಯಾನಾ ಗ್ರಾಮದ ಡ್ರೋನ್ ವಿಡಿಯೊ ತುಣುಕು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಯಾರ್ಡ್ನಲ್ಲಿ ನಿಲ್ಲಿಸಿದ್ದ ಹಲವಾರು ಕಾರುಗಳು ಪ್ರವಾಹದ ನೀರಿನಲ್ಲಿ ಮುಳುಗಿವೆ. ಅಧಿಕಾರಿಗಳ ಪ್ರಕಾರ, ಹಿಂಡನ್ ನದಿಯ ನೀರಿನ ಮಟ್ಟವು ಇದ್ದಕ್ಕಿದ್ದಂತೆ ಏರಿದ್ದು, ಪಕ್ಕದ ಪ್ರದೇಶಗಳಲ್ಲಿ ಪ್ರವಾಹಕ್ಕೆ ಕಾರಣವಾಯಿತು. ಈ ಸ್ಟಾಕ್ ಯಾರ್ಡ್ ಕೂಡ ನೀರಲ್ಲಿ ಮುಳುಗಿತು ಎಂದು ಹೇಳಿದ್ದಾರೆ.
ವಿಮೆ ಪಾವತಿಸದ ಕಾರಣ ಈ ವಾಹನಗಳಿವು ಎಂದು ಹೇಳಲಾಗುತ್ತಿದೆ. ಪೊಲೀಸ್ ಇಲಾಖೆ ವಶಪಡಿಸಿಕೊಂಡು ತಂದು ನಿಲ್ಲಿಸಿತ್ತು ಎಂದು ಹೇಳಲಾಗಿದೆ. ವಿಮೆಯ ಅವಧಿ ಮುಗಿದಿರುವುದರಿಂದ ಮಾಲೀಕರು ತಮ್ಮ ಜೇಬಿನಿಂದ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ : Monsoon Diet: ಮಳೆಗಾಲದಲ್ಲಿ ಆಹಾರ ಸೇವನೆ ಹೀಗಿರಲಿ
ಕೆಲವು ವಾರಗಳ ಹಿಂದೆ, ಪರ್ವತಗಳ ಕುಸಿತದಿಂದ ವಾಹನಗಳಿಗೆ ಹಾನಿಯಾಗಿರುವ ವೀಡಿಯೊಗಳು ಹರಿದಾಡಿದ್ದವು. ಬೆಟ್ಟಗಳಿಂದ ಧಾರಾಕಾರವಾಗಿ ಹರಿದು ಬಂದಿದ್ದ ನೀರು ನಿಲ್ಲಿಸಿದ್ದ ಕಾರುಗಳನ್ನು ಎಳೆದುಕೊಂಡು ಹೋಗಿತ್ತು. ಅವು ಗೊತ್ತುಪಡಿಸಿದ ಪಾರ್ಕಿಂಗ್ ಪ್ರದೇಶವೆಂದು ಎಂದು ಹೇಳಲಾಗುತ್ತಿದೆ. ಮನಾಲಿಯಂತಹ ಗುಡ್ಡಗಾಡು ಪಟ್ಟಣಗಳು ಭಾರಿ ಮಳೆಗೆ ದೊಡ್ಡ ಪ್ರಮಾಣದ ಹಾನಿ ಉಂಟಾಗಿದೆ. ಹಿಮಾಚಲ ಪ್ರದೇಶದ ಪ್ರಮುಖ ರಸ್ತೆಗಳು ಮತ್ತು ಸೇತುವೆಗಳಿಗೆ ಪ್ರವಾಹದಿಂದಾಗಿ ಗಮನಾರ್ಹ ಹಾನಿಯಾಗಿದೆ.
ತೀವ್ರ ಪ್ರವಾಹದ ಪರಿಣಾಮವಾಗಿ, ಈ ಗುಡ್ಡಗಾಡು ಪ್ರದೇಶಗಳು ಮತ್ತು ಹತ್ತಿರದ ನಗರಗಳಾದ ಚಂಡೀಗಢ ಮತ್ತು ನವದೆಹಲಿ ನಡುವಿನ ಸಂಪರ್ಕವು ಅಸ್ತವ್ಯಸ್ತಗೊಂಡಿದೆ. ಎರಡೂ ನಗರಗಳು ಭಾರಿ ಮಳೆ ಮತ್ತು ಪ್ರವಾಹದಿಂದ ನಲುಗಿವೆ. ಇದು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಹವಾಮಾನ ಇಲಾಖೆ ಎಚ್ಚರಿಕೆಗಳನ್ನು ನೀಡಿದೆ.
ಸಂಭಾವ್ಯ ಹಾನಿಯನ್ನು ತಗ್ಗಿಸುವ ಸಲುವಾಗಿ ಕಾರು ಮಾಲೀಕರು ತಮ್ಮ ವಾಹನಗಳನ್ನು ವೇಗವಾಗಿ ಹರಿಯುವ ನೀರಿನಿಂದ ದೂರವಿರುವ ಎತ್ತರದ ಪ್ರದೇಶಗಳಲ್ಲಿ ನಿಲ್ಲಿಸಲು ಸೂಚಿಸಲಾಗಿದೆ. ಪ್ರವಾಹದಂತಹ ಪರಿಸ್ಥಿತಿಗಳು ಮುಂದುವರಿಯುತ್ತಿರುವುದರಿಂದ ಉತ್ತರ ಭಾರತದ ಕೆಲವು ನಗರಗಳಲ್ಲಿ ಮತ್ತಷ್ಟು ಹಾನಿಯಾಗುವ ಅಪಾಯವಿದೆ.