ನವ ದೆಹಲಿ : ಹ್ಯುಂಡೈ ಇಂಡಿಯಾ ಈಗ ತನ್ನ ಎಲ್ಲಾ ಮಾದರಿಗಳಲ್ಲಿ (Hyundai Cars) 6 ಏರ್ ಬ್ಯಾಗ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುವುದಾಗಿ ಘೋಷಿಸಿದೆ. ಆ ಮೂಲಕ ಈ ಸಾಧನೆ ಮಾಡಿದ ಮೊದಲ ಕಾರು ತಯಾರಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್ ಎಂಐಎಲ್) ಇತ್ತೀಚೆಗೆ ತನ್ನ ಹಾಟ್ ಸೆಲ್ಲಿಂಗ್ ಉತ್ಪನ್ನಗಳಲ್ಲಿ ಒಂದಾದ ವೆರ್ನಾವನ್ನು ಕ್ರ್ಯಾಶ್ ಟೆಸ್ಟ್ ಗಾಗಿ ಕಳುಹಿಸಿತ್ತು. ಕಾರ್ ಗ್ಲೋಬಲ್ ಅನ್ಕ್ಯಾಪ್ನಿಂದ ಐದು ಸ್ಟಾರ್ ರೇಟಿಂಗ್ ಅನ್ನು ಸಾಧಿಸಿದೆ. ನಿರ್ಮಾಣ ಗುಣಮಟ್ಟದ ವಿಷಯದಲ್ಲಿ ಭಾರತದ ಪ್ರಮುಖ ಕಾರು ತಯಾರಕ ಕಂಪನಿ ಗ್ರಾಹಕರಿಂದ ವಿಶ್ವಾಸವನ್ನು ಗಳಿಸಲು ಹೆಣಗಾಡುತ್ತಿರುವ ಸಮಯದಲ್ಲಿ ಈ ಫಲಿತಾಂಶ ಬಂದಿದೆ. ಇದರ ಹಿನ್ನೆಲೆಯಲ್ಲಿ ಏರ್ ಬ್ಯಾಗ್ಗಳ ಮಾಹಿತಿಯನ್ನೂ ಪ್ರಕಟಿಸಿದೆ.
ಕಂಪನಿಯು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದು, ಅಲ್ಲಿ ಇನ್ನು ಮುಂದೆ ಪ್ರತಿ ವಾಹನವು ಎಲ್ಲಾ ವೇರಿಯೆಂಟ್ಗಳಲ್ಲಿ 6 ಏರ್ ಬ್ಯಾಗ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ ಎಂದು ಹೇಳಿದೆ. ಈ ವೇಳೆ ಮಾತನಾಡಿದ ಕಂಪನಿಯ ಅಧಿಕಾರಿಗಳು, ಭಾರತ್ ಅನ್ಕ್ಯಾಪ್ನ ಸುರಕ್ಷತಾ ಪರೀಕ್ಷೆಗಾಗಿ ಕಂಪನಿಯ ಮೂರು ವಾಹನಗಳನ್ನು ಕಳುಹಿಸುವುದಾಗಿಯೂ ಹೇಳಿದೆ.
ಹ್ಯುಂಡೈ ಮೋಟಾರ್ ಇಂಡಿಯಾ ಈಗಾಗಲೇ ತನ್ನ ಐಷಾರಾಮಿ ಕಾರುಗಳಲ್ಲಿ 6 ಏರ್ ಬ್ಯಾಗ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿತ್ತು. ಆದರೆ, ಗ್ರ್ಯಾಂಡ್ ಐ 10 ನಿಯೋಸ್, ಔರಾ ಮತ್ತು ವೆನ್ಯೂವಿನಲ್ಲಿ ಕೊಟ್ಟಿರಲಿಲ್ಲ. ಇಲ್ಲಿಯವರೆಗೆ, ಈ ಮಾಡೆಲ್ಗಳು 4 ಏರ್ ಬ್ಯಾಗ್ ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತಿದ್ದವು. ಈಗ ಎಲ್ಲಾ ವೇರಿಯೆಂಟ್ಗಳಲ್ಲಿ 6 ಏರ್ ಬ್ಯಾಗ್ ಗಳನ್ನು ಪಡೆಯುತ್ತವೆ.
ಸೀಟ್ ಬೆಲ್ಟ್ ರಿಮೈಂಡರ್
2023ರ ವರ್ಷಾರಂಭದಲ್ಲಿ ಹ್ಯುಂಡೈ ಎಲ್ಲಾ ಕಾರುಗಳಲ್ಲಿ ಸೀಟ್ ಬೆಲ್ಟ್ ರಿಮೈಂಡರ್ ಸ್ಟ್ಯಾಂಡರ್ಡ್ ಆಗಿ ನೀಡಿತ್ತು. 3 ಪಾಯಿಂಟ್ ಸೀಟ್ ಬೆಲ್ಟ್ ಗಳನ್ನು ತಯಾರಿಸಿತ್ತು. ವಿಶೇಷವೆಂದರೆ, ಹ್ಯುಂಡೈ ಭಾರತದಲ್ಲಿ ಮಾರಾಟವಾಗುತ್ತಿರುವ 13 ಮಾದರಿಗಳಲ್ಲಿ, 10 ಇಎಸ್ಸಿ ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ ಅನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿವೆ. ಎಕ್ಸ್ಟೆರ್ ಗ್ರ್ಯಾಂಡ್ ಐ 10 ನಿಯೋಸ್ ಮತ್ತು ಔರಾ ಮಾತ್ರ ಹೊಂದಿಲ್ಲ .
ಹ್ಯುಂಡೈ ಕಂಪನಿಯು 3 ಮಾದರಿಗಳನ್ನು ಕ್ರ್ಯಾಶ್ ಟೆಸ್ಟಿಂಗ್ ಗಾಗಿ ಭಾರತ್ ಎನ್ ಸಿಎಪಿಗೆ ಕಳುಹಿಸಿದೆ ಎಂದು ಹೇಳಿಕೊಂಡಿದೆ. ಆದಾಗ್ಯೂ ಈ ಮಾದರಿಗಳು ಯಾವುವು ಎಂಬುದನ್ನು ಇನ್ನೂ ನಿರ್ದಿಷ್ಟಪಡಿಸಿಲ್ಲ. ಮುಂಬರುವ ತಿಂಗಳುಗಳಲ್ಲಿ ಫಲಿತಾಂಶಗಳನ್ನು ನಿರೀಕ್ಷಿಸಬಹುದು.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದೇನು?
ಕಂಪನಿಯ ಸಾಧನೆಗಳ ಬಗ್ಗೆ ಪ್ರತಿಕ್ರಿಯಿಸಿದ ಕಂಪನಿಯ ಎಂಡಿ ಮತ್ತು ಸಿಇಒ ಉನ್ಸೂ ಕಿಮ್, ಎಲ್ಲರಿಗೂ ಸುರಕ್ಷತೆ ನೀಡುವುದು ನಮ್ಮ ಅತ್ಯಂತ ಆದ್ಯತೆಯಾಗಿದೆ. ವಾಹನ ಸುರಕ್ಷತಾ ವೈಶಿಷ್ಟ್ಯಗಳ ಪ್ರಮಾಣೀಕರಣದಲ್ಲಿ ನಾವು ಮಾನದಂಡಗಳನ್ನು ಸೃಷ್ಟಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Hyundai Creta : ಅಡ್ವೆಂಚರ್ ಪ್ರೇಮಿಗಳಿಗೆ ಇದೋ ಬಂದಿದೆ ಹ್ಯುಂಡೈನ ಎರಡು ಕಾರುಗಳು
ಸುರಕ್ಷಿತ ಪ್ರಯಾಣಕ್ಕಾಗಿ ಹ್ಯುಂಡೈ ಮೊದಲು ಮೈಲಿಗಲ್ಲನ್ನು ಸಾಧಿಸಿದೆ, ಹ್ಯುಂಡೈ ವೆರ್ನಾವ ಗ್ಲೋಬಲ್ ಅನ್ಕ್ಯಾಪ್ನಿಂದ ಹಿರಿಯರ ಮತ್ತು ಮಕ್ಕಳ ಪ್ರಯಾಣಿಕರ ರಕ್ಷಣೆಗಾಗಿ 5-ಸ್ಟಾರ್ ಎಂದು ರೇಟಿಂಗ್ ಪಡೆದುಕೊಂಡಿದೆ. ನಾವು ಸ್ಮಾರ್ಟ್ ಮೊಬಿಲಿಟಿ ಪರಿಹಾರಗಳನ್ನು ಒದಗಿಸುವವರು ಮಾತ್ರವಲ್ಲ, ಸುರಕ್ಷಿತ ಚಲನಶೀಲತೆ ಪರಿಹಾರಗಳನ್ನು ಸಹ ಒದಗಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಹ್ಯುಂಡೈ ವರ್ನಾ ಸುರಕ್ಷತೆ
ಎಚ್ಎಂಐಎಲ್ ವೆರ್ನಾವನ್ನು ಬಿಡುಗಡೆ ಮಾಡಿದಾಗಿನಿಂದ, ಗ್ರಾಹಕರಿಂದ ಬೇಡಿಕೆ ಪಡೆಯುತ್ತಿದೆ. ಅದರ ನಿರ್ಮಾಣ ಗುಣಮಟ್ಟ ಮತ್ತು ವಿಎಸ್ಎಂ (ವಾಹನ ಸ್ಥಿರತೆ ನಿರ್ವಹಣೆ), ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (ಎಚ್ಎಸಿ), ಇಂಪ್ಯಾಕ್ಟ್ ಸೆನ್ಸಿಂಗ್ ಆಟೋ ಡೋರ್ ಅನ್ಲಾಕ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ (ಇಎಸ್ಎಸ್), ಐಎಸ್ಒಫಿಕ್ಸ್, ಹೆಡ್ಲ್ಯಾಂಪ್ ಎಸ್ಕಾರ್ಟ್ ಫಂಕ್ಷನ್ ಸುರಕ್ಷತೆಯನ್ನು ಹೆಚ್ಚಿಸಿದೆ. ಲೆವೆಲ್ 2 ಎಡಿಎಎಸ್, ಫ್ರಂಟ್ ಪಾರ್ಕಿಂಗ್ ಸೆನ್ಸರ್ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಇತರ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.