ಗುವಾಹಟಿ : ರಾಜ್ಯದ ಸಿಎಂ ಒಬ್ಬರಿಗೆ ಯಾರಾದರೂ ನಕಲಿ ಕಾರನ್ನು ಗಿಫ್ಟ್ ಆಗಿ ಕೊಟ್ಟು ಯಾಮಾರಿಸಲು ಸಾಧ್ಯವೇ? ಖಂಡಿತಾ ಇಲ್ಲ. ಆದರೆ, ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಅವರಿಗೆ ಮೆಕ್ಯಾನಿಕ್ ಒಬ್ಬ ಆ ರೀತಿ ಮಾಡಿ ಬೆಚ್ಚಿ ಬೀಳುವಂತೆ ಮಾಡಿದ್ದಾನೆ. ಆದರೆ, ಕಾರು ಗಿಫ್ಟ್ ಕೊಟ್ಟ ಯುವಕನ ವಿರುದ್ಧ ಸಿಎಂ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಆತನನ್ನು ಬೆನ್ನು ತಟ್ಟಿ ಶಹಬ್ಬಾಸ್‌ಗಿರಿ ಕೊಟ್ಟಿದ್ದಾರೆ. ಯಾಕೆ ಗೊತ್ತೇ?
ಸಿಎಂ ಹಿಮಂತ್ ಬಿಸ್ವಾ ಶರ್ಮ ಅವರು ತಮ್ಮ ಪಕ್ಷದ ಕಾರ್ಯಕರ್ತರ ಜತೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಎದುರಾದ ಮೆಕ್ಯಾನಿಕ್ ನೂರುಲ್ ಹಕ್, ನಿಮಗೆ ಲ್ಯಾಂಬೊರ್ಗಿನಿ ಗಿಫ್ಟ್ ಕೊಡುವುದಾಗಿ ಹೇಳಿದ್ದಾನೆ. ಅದಕ್ಕೆ ಸಿಎಂ ಸರಿ ಎಂದು ಒಪ್ಪಿ ಕಾರಿದ್ದಲ್ಲಿಗೆ ಹೋಗಿದ್ದಾರೆ. ಅಲ್ಲಿ ನೋಡಿದರೆ ಲ್ಯಾಂಬೊರ್ಗಿನಿ ಕಾರು ಪಾರ್ಕ್ ಮಾಡಿತ್ತು. ಸಿಎಂ ಕಾರು ಹತ್ತಿ ಕುಳಿತು ಕುಳಿತು ಸವಾರಿ ಅನುಭವವನ್ನೂ ಪಡೆದುಕೊಂಡಿದ್ದಾರೆ.
ಅಚ್ಚರಿಯೆಂದರೆ ಅದು ಲ್ಯಾಂಬೊರ್ಗಿನಿಯೇ ಆಗಿರಲಿಲ್ಲ. ಬದಲಾಗಿ ಮಾರುತಿ ಸ್ವಿಫ್ಟ್ ಕಾರನ್ನು ಲ್ಯಾಂಬೊರ್ಗಿನಿ ರೀತಿಯಲ್ಲಿ ಮಾರ್ಪಾಟು ಮಾಡಲಾಗಿತ್ತು. ಕಾರ್ಬನ್ ಫೈಬರ್ ಹಾಗೂ ಲೋಹದ ಹಾಳೆಗಳನ್ನು ಬಳಸಿಕೊಂಡು ಕಾರಿಗೆ ಲ್ಯಾಂಬೊರ್ಗಿನಿಯ ಆಕಾರ ಕೊಟ್ಟಿದ್ದ ಮೆಕ್ಯಾನಿಕ್ ನೂರುಲ್ ಹಕ್. ಅದೇ ರೀತಿ ಸಿಗ್ನೇಚರ್ ಸೀಸರ್ ಡೋರ್ ಕೂಡ ಅಳವಡಿಸಲಾಗಿತ್ತು. ಆದರೆ, ಆಟೋಮ್ಯಾಟಿಕ್ ವ್ಯವಸ್ಥೆ ಮಾಡಲಾಗಿಲ್ಲ. ಕಾರಿನಿಂದ ಇಳಿದವರೇ ಮೆಕ್ಯಾನಿಕ್ ನೂರುಲ್‌ನ ಚಾತುರ್ಯಕ್ಕೆ ಮೆಚ್ಚಿ ಬೆನ್ನು ತಟ್ಟಿ ಕಳುಹಿಸಿದ್ದಾರೆ.
ನಮ್ಮ ಕಾರ್ಯಕರ್ತರೊಂದಿಗೆ ಇಟ್ಖೋಲಾದಿಂದ ಸರ್ಕ್ಯೂಟ್ ಹೌಸ್‌ಗೆ ನಡೆದಾಡುವುದರೊಂದಿಗೆ ಸಿಲ್ಚಾರ್‌ನಲ್ಲಿ ನನ್ನ ದಿನವನ್ನು ಮುಗಿಸಿದೆ. ದಾರಿಯುದ್ದಕ್ಕೂ ಬಹಳಷ್ಟು ಆತ್ಮೀಯರನ್ನು ಭೇಟಿಯಾದೆ. ಕರೀಮ್‌ಗಂಜ್‌ನ ಕಾರು ಪ್ರೇಮಿ ನೂರುಲ್ ಹಕ್ ಅವರು ತಯಾರಿಸಿದ್ದ ಲ್ಯಾಂಬೋರ್ಗಿನಿ ಸಾಕಷ್ಟು ಥ್ರಿಲ್ ಕೊಟ್ಟಿತು,” ಎಂಬುದಾಗಿ ಸಿಎಂ ಹಿಮಂತ್ ಟ್ವೀಟ್ ಮಾಡಿದ್ದಾರೆ.
ನೂರುಲ್ ಹಕ್ ಕಾರನ್ನು ಗುವಾಹಟಿಗೆ ಕೊಂಡೊಯ್ದು ಅಲ್ಲಿ ಓಡಿಸುವ ಯೋಜನೆ ರೂಪಿಸಿಕೊಂಡಿದ್ದಾನೆ. ಅದರೆ, ಭಾರತದಲ್ಲಿ ಮಾರ್ಪಾಟು ಮಾಡಿರುವ ಕಾರನ್ನು ರಸ್ತೆಯಲ್ಲಿ ಓಡಿಸಲು ಕಾನೂನಿನ ಸಮ್ಮತಿ ಸಿಗುವುದಿಲ್ಲ. ಒಂದು ವೇಳೆ ಕಾರನ್ನು ಓಡಿಸಲೇಬೇಕಾದರೆ ಮರು ನೋಂದಣೆ ಮಾಡಬೇಕು ಹಾಗೂ ಫಿಟ್ನೆಸ್ ಪ್ರಮಾಣಪತ್ರ ಪಡೆಯಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ಕಾರಿಗೆ ವಿಮೆ ಸಿಗುವುದಿಲ್ಲ. ಹೀಗಾಗಿ ರಸ್ತೆಯಲ್ಲಿ ಓಡಿಸುವುದು ಅಪಾಯಕಾರಿ.
ಇದನ್ನೂ ಓದಿ | ಹಿಮಂತ್ ಬಿಸ್ವಾ ಶರ್ಮಾ ವಂಚಿಸುತ್ತಿದ್ದಾರೆ, ಎಚ್ಚರವಿರಲಿ; ಪ್ರಧಾನಿ ಮೋದಿಗೆ ಸಲಹೆ ನೀಡಿದ ಕಾಂಗ್ರೆಸ್