Site icon Vistara News

Cyber Crime : ಸೈಬರ್​ ದಾಳಿಯ ಪರಿಣಾಮ, ಸುಜುಕಿ ಮೋಟಾರ್ಸ್​​ನ ಉತ್ಪಾದನಾ ಘಟಕ ಒಂದು ವಾರ ಬಂದ್

Suzuki Motorcycle

#image_title

ನವ ದೆಹಲಿ: ಸುಜುಕಿ ಮೋಟಾರ್ ಸೈಕಲ್ (Cyber Crime) ಇಂಡಿಯಾದ ಕಾರ್ಯಾಚರಣೆಗಳ ಮೇಲೆ ಸೈಬರ್ ದಾಳಿ ನಡೆದಿದ್ದು, ಉತ್ಪಾದನೆಯನ್ನು ಒಂದು ವಾರಗಳ ಕಾಲ ಸ್ಥಗಿತಗೊಳಿಸಲಾಗಿದೆ. ಬಲ್ಲ ಮೂಲಗಳ ಪ್ರಕಾರ, ಮೇ10 ರ ಶನಿವಾರದಿಂದ ಉತ್ಪಾದನೆ ಸ್ಥಗಿತಗೊಂಡಿದೆ. ಅಲ್ಲಿಂದ ಆರಂಭಗೊಂಡು ಒಂದು ವಾರದ ಅವಧಿಯೊಳಗೆ 20,000 ಕ್ಕೂ ಹೆಚ್ಚು ದ್ವಿಚಕ್ರವಾಹನಗಳ ಉತ್ಪಾದನೆಯಲ್ಲಿ ಕೊರತೆ ಉಂಟಾಗಿದೆ.

ಸೈಬರ್ ದಾಳಿಯ ಪರಿಣಾಮ ಸುಜುಕಿಯ ಸಂಪೂರ್ಣ ವ್ಯವಸ್ಥೆ ಹಾಳಾಗಿ ಹೋಗಿದೆ. ಹೀಗಾಗಿ ಮುಂದಿನ ವಾರ ನಡೆಯಬೇಕಿದ್ದ ತನ್ನ ವಾರ್ಷಿಕ ಪೂರೈಕೆದಾರರ ಸಮ್ಮೇಳನವನ್ನೂ ಮುಂದೂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಜುಕಿ ಮೋಟಾರ್​ ಸೈಕಲ್ ಇಂಡಿಯಾ ವಕ್ತಾರರು “ದಾಳಿ ನಡೆದ ತಕ್ಷಣ ನಮಗೆ ಮಾಹಿತಿ ಬಂತು. ತಕ್ಷಣ ಸಂಬಂಧಪಟ್ಟ ಸರ್ಕಾರಿ ಇಲಾಖೆಗೆ ವರದಿ ಮಾಡಿದ್ದೇವೆ. ಈ ಕುರಿತು ತನಿಖೆ ಪ್ರಗತಿಯಲ್ಲಿದೆ. ಭದ್ರತಾ ಉದ್ದೇಶಕ್ಕಾಗಿ ತಕ್ಷಣವೇ ಎಲ್ಲ ಮಾಹಿತಿಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸುಜುಕಿ ಮೋಟಾರ್​​ ಸೈಕಲ್ ಕಂಪನಿಯು ದಾಳಿಯ ಮೂಲವನ್ನು ಹೇಳಿಲ್ಲ. ಅಲ್ಲದೆ, ಉತ್ಪಾದನೆ ಯಾವಾಗ ಪುನರಾರಂಭಗೊಳ್ಳುತ್ತದೆ ಎಂಬುದನ್ನು ತಿಳಿಸಿಲ್ಲ. ಮುಂದಿನ ಕೆಲವು ದಿನಗಳಲ್ಲಿ ಘಟಕದಲ್ಲಿ ಉತ್ಪಾದನೆ ಅರಂಭವಾಗಲಿದೆ. ದಿನಾಂಕವನ್ನು ತಿಳಿಸುವುದು ಕಷ್ಟ ಎಂಬುದಾಗಿ ಹೇಳಿದೆ.

ಸುಜುಕಿ ಮೋಟಾರ್ ಸೈಕಲ್ 2023ರ ಹಣಕಾಸು ವರ್ಷದಲ್ಲಿ ಸುಮಾರು ಒಂದು ಮಿಲಿಯನ್ ಯುನಿಟ್ ಗಳ ಉತ್ಪಾದನೆಯೊಂದಿಗೆ ದೇಶದ ಐದನೇ ಅತಿದೊಡ್ಡ ದ್ವಿಚಕ್ರ ವಾಹನ ಉತ್ಪಾದಕ ಕಂಪನಿ ಎನಿಸಿಕೊಂಡಿತ್ತು. ಸಹೋದರ ಸಂಸ್ಥೆ ಮಾರುತಿ ಸುಜುಕಿಯಂತೆ, ಜಪಾನ್​ಗಿಂತ ಹೊರಗೆ ಭಾರತವೇ ಸುಜುಕಿ ಮೋಟಾರ್​ ಸೈಕಲ್​​ಗೆ ಅತಿದೊಡ್ಡ ಮಾರುಕಟ್ಟೆಯಾಗಿದೆ. ಭಾರತದ ಉತ್ಪಾದನೆಯ ಶೇಕಡಾ 20 ಪ್ರಮುಖ ಜಾಗತಿಕ ಮಾರುಕಟ್ಟೆಗಳಿಗೆ ರವಾನೆಯಾಗುತ್ತದೆ.

ಅಂದಹಾಗಿಎ ಸುಜುಕಿ ಮೋಟಾರ್ ಕಾರ್ಪೊರೇಷನ್ ಜಾಗತಿಕವಾಗಿ ಉತ್ಪಾದನೆ ಮಾಡುವ ಸ್ಕೂಟರ್​​ಗಳಲ್ಲಿ ಶೇಕಡಾ 50 ಪಾಲು ಭಾರತ ಹೊಂದಿದೆ. ಅದೇ ರೀತಿ ಕಳೆದ ಹಣಕಾಸು ವರ್ಷದಲ್ಲಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ. 2023ರ ಹಣಕಾಸು ವರ್ಷದಲ್ಲಿ ಸುಜುಕಿಯ ಜಾಗತಿಕ ಉತ್ಪಾದನೆಯು 2.2 ಲಕ್ಷ ಯೂನಿಟ್​​ಗಳಷ್ಟು ಹೆಚ್ಚಾಗಿತ್ತು.

ಸುಜುಕಿ ಮೋಟಾರ್ ಸೈಕಲ್ ಹೆಚ್ಚು ಸ್ಪರ್ಧಾತ್ಮಕ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಶೇಕಡಾ 5 ಮಾರುಕಟ್ಟೆ ಪಾಲು ಪಡೆದುಕೊಂಡಿದೆ. ಬರ್ಗ್​ಮನ್​ ಸ್ಟ್ರೀಟ್ ಮತ್ತು ಆಕ್ಸೆಸ್ ಸ್ಕೂಟರ್​ ಅತಿ ಹೆಚ್ಚು ಮಾರಾಟ ಕಂಡಿವೆ. ಈ ಸ್ಕೂಟರ್​​ಗಳು ಕಂಪನಿಯ 2023ನೇ ಆರ್ಥಿಕ ವರ್ಷದಲ್ಲಿ ಉತ್ಪಾದನೆ ಮಾಡಿರುವ ಒಟ್ಟು ವಾಹನಗಳಲ್ಲಿ ಶೇಕಡಾ 90 ಪಾಲನ್ನು ಪಡೆದುಕೊಂಡಿದ್ದು, ಶೇ. 14ರಷ್ಟು ಮಾರುಕಟ್ಟೆ ಪಾಲು ಪಡೆದುಕೊಂಡಿದೆ.

ಸುಜುಕಿ ಮೋಟಾರ್ ಕಂಪನಿಯು 2024ರ ಹಣಕಾಸು ವರ್ಷದಲ್ಲಿ ಜಾಗತಿಕ ಉತ್ಪಾದನೆಯನ್ನು 4.4% ರಷ್ಟು ಏರಿಕೆ ಮಾಡುವ ಉದ್ದೇಶ ಹೊಂದಿಎ. ಭಾರತದ ಮೂಲಕ ಜಾಗತಿಕ ಮಾರಾಟವನ್ನು ಮುಂದುವರಿಸುವ ನಿರೀಕ್ಷೆಯಿದೆ.

Exit mobile version