Site icon Vistara News

Bajaj CNG Bike: ಬಜಾಜ್‌‌ನ ವಿಶ್ವದ ಮೊದಲ ಸಿಎನ್‌‌ಜಿ ಬೈಕ್ ಬೆಲೆ ‌ಕಡಿತ ಸಾಧ್ಯತೆ; ನಿತೀನ್ ಗಡ್ಕರಿ ಸೂಚನೆ

Bajaj CNG Bike

Bajaj CNG Bike

ವಿಶ್ವದ ಮೊದಲ ಸಿಎನ್‌ಜಿ ಮೋಟಾರ್‌ಸೈಕಲ್ (Bajaj CNG Bike) ಬಜಾಜ್ ಫ್ರೀಡಂ 125 (Bajaj Freedom 125) ಬೆಲೆ ಇಳಿಯುವ ನಿರೀಕ್ಷೆಗಳಿವೆ. ಯಾಕೆಂದರೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ (Union Minister) ನಿತಿನ್ ಗಡ್ಕರಿ (Nitin Gadkari) ಅವರು ಬಜಾಜ್ ಆಟೋ ಸಿಇಒ ರಜಿಬ್ ಬಜಾಜ್ ಅವರ ಬಳಿ ವಾಹನದ ಬೆಲೆಯನ್ನು 1 ಲಕ್ಷ ರೂ. ಗಿಂತ ಕಡಿಮೆ ಮಾಡಲು ಒತ್ತಾಯಿಸಿದ್ದಾರೆ.

ಬಜಾಜ್ ಫ್ರೀಡಂ 125 ಬಿಡುಗಡೆಯೊಂದಿಗೆ ಸಾಂಪ್ರದಾಯಿಕ ಪೆಟ್ರೋಲ್ ಬೈಕ್ ಗಳಿಗಿಂತ ಅಗ್ಗವಾಗಿ ಮತ್ತು ಪರಿಸರ ಸ್ನೇಹಿ ವಾಹನವಾಗಿ ದ್ವಿಚಕ್ರ ವಾಹನ ಉದ್ಯಮವು ಬೃಹತ್ ಕ್ರಾಂತಿಯನ್ನು ಕಂಡಿದೆ. ಇದೇ ರೀತಿಯ ಐಸಿಇ ಮೋಟಾರ್‌ಸೈಕಲ್‌ಗಳಿಗೆ ಹೋಲಿಸಿದರೆ ಹೊಸ ಬೈಕ್ ನಿರ್ವಹಣಾ ವೆಚ್ಚವನ್ನು ಶೇ. 50ರಷ್ಟು ಕಡಿಮೆ ಮಾಡುತ್ತದೆ.

ಪುಣೆಯಲ್ಲಿ ಜುಲೈ 5ರಂದು ನಡೆದ ಬಜಾಜ್ ಫ್ರೀಡಂ 125 ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವರು, ವಾಹನದ ಬೆಲೆಯನ್ನು 1 ಲಕ್ಷ ರೂ. ಗಿಂತ ಕಡಿಮೆ ಮಾಡಲು ರಾಜೀವ್ ಜಿ. ಅವರಲ್ಲಿ ವಿನಂತಿಸುವುದಾಗಿ ಹೇಳಿದ್ದರು.


ಬಜಾಜ್ ಫ್ರೀಡಂ 125 ದೇಶದಲ್ಲಿ ಹೆಚ್ಚು ಜನಪ್ರಿಯವಾಗಲಿದೆ ಮತ್ತು ಕಡಿಮೆ ಬೆಲೆಗೆ ಜನರಿಗೆ ಸಿಗಲಿದೆ. ಸರಾಸರಿಗೆ ಹೋಲಿಸಿದರೆ ಒಂದು ವರ್ಷದೊಳಗೆ ಗ್ರಾಹಕರಿಗೆ ಅವರ ಹಣವನ್ನು ಹಿಂತಿರುಗಿಸುತ್ತದೆ ಮತ್ತು ಇದರ ವಿನ್ಯಾಸ ಅತ್ಯಂತ ಸುಂದರವಾಗಿದೆ ಎಂದು ಹೇಳಿ ಕೇಂದ್ರ ಸಚಿವರು ಬಜಾಜ್ ಫ್ರೀಡಂ 125 ರ ಗುಣಮಟ್ಟವನ್ನು ಶ್ಲಾಘಿಸಿದರು.

ಗುಣಮಟ್ಟದ ಬಗ್ಗೆ ಯಾವುದೇ ಸಂದೇಹವಿಲ್ಲ. ಪ್ರಾಮಾಣಿಕತೆ, ಗುಣಮಟ್ಟ ಮತ್ತು ಸ್ಪಷ್ಟತೆ 21 ನೇ ಶತಮಾನದ ಅತಿದೊಡ್ಡ ಬಂಡವಾಳವಾಗಿದೆ. ಗುಣಮಟ್ಟವು ತುಂಬಾ ಸುಧಾರಣೆಯಾಗಿದೆ ಎಂದು ನಾನು ನಿಜವಾಗಿಯೂ ಸಂತೋಷಪಡುತ್ತೇನೆ. ಹೊಸ ಮೋಟಾರ್‌ಸೈಕಲ್‌ನ ಗುಣಮಟ್ಟ ತುಂಬಾ ಚೆನ್ನಾಗಿದೆ ಎಂದು ತಿಳಿಸಿದರು.

ಬಜಾಜ್ ಫ್ರೀಡಂ 125 ಮಾರುಕಟ್ಟೆಯನ್ನು ಆಕರ್ಷಿಸಲಿದೆ ಎಂದು ಹೇಳಿರುವ ಗಡ್ಕರಿ, ಈ ಹೊಸ ಉಪಕ್ರಮ ಉತ್ತಮ ಗುಣಮಟ್ಟ ಮತ್ತು ವಿನ್ಯಾಸದಿಂದಾಗಿ 100 ಪ್ರತಿಶತದಷ್ಟು ಪ್ರಪಂಚದಲ್ಲಿ ಹೆಚ್ಚಿನ ಮಾರುಕಟ್ಟೆಯನ್ನು ಪಡೆಯುತ್ತದೆ. ಇದು ಬಜಾಜ್ ಆಟೋಗೆ ಯಶಸ್ಸಿನ ಕಥೆಯಾಗಿದೆ ಎಂದರು.

ಇದನ್ನೂ ಓದಿ: Car price Discounts: ರಿನೊ ಕೈಗರ್, ಕ್ವಿಡ್, ಟ್ರೈಬರ್ ಕಾರುಗಳಿಗೆ 40,000 ರೂ. ತನಕ ರಿಯಾಯಿತಿ

ಬಜಾಜ್ ಫ್ರೀಡಂ 125

ಬಜಾಜ್ ಫ್ರೀಡಂ 125 ಮೂರು ಆವೃತ್ತಿಗಳಲ್ಲಿ ಬರಲಿದೆ. ಫ್ರೀಡಮ್ 125 ಎನ್ ಜಿ04 ಡಿಸ್ಕ್ ಎಲ್ ಇಡಿ, ಫ್ರೀಡಮ್ 125 ಎನ್ ಜಿ04 ಡ್ರಮ್ ಎಲ್ ಇಡಿ ಮತ್ತು ಫ್ರೀಡಮ್ 125 ಎನ್ ಜಿ04 ಡ್ರಮ್. ದೆಹಲಿಯಲ್ಲಿನ ಈ ಮೂರು ಆವೃತ್ತಿಗಳ ಎಕ್ಸ್ ಶೋ ರೂಂ ಬೆಲೆ 95,000 ರೂ., 1,05,000 ರೂ. ಮತ್ತು 1,10,000 ರೂ. ಆಗಿದೆ.

ಬಜಾಜ್ ಫ್ರೀಡಮ್ ಸಿಎನ್‌ಜಿ ಪ್ರತಿ ಕೆ.ಜಿ. ಸಿಎನ್‌ಜಿಗೆ 102 ಕಿ.ಮೀ. ಓಡುತ್ತದೆ. ಅಂದರೆ ಇದು ಸಿಎನ್‌ಜಿಯ ಒಂದು ಪೂರ್ಣ ಟ್ಯಾಂಕ್‌ನಲ್ಲಿ ಸುಮಾರು 200 ಕಿ.ಮೀ. ವ್ಯಾಪ್ತಿಯನ್ನು ಹೊಂದಿರುತ್ತದೆ. ಸಿಎನ್ ಜಿ ಟ್ಯಾಂಕ್ ಅನ್ನು ಸೀಟಿನ ಕೆಳಗೆ ಇರಿಸಲಾಗುವುದು ಮತ್ತು ಎರಡು ಕಿಲೋಗ್ರಾಂಗಳಷ್ಟು ಸಾಮರ್ಥ್ಯ ಹೊಂದಿದೆ. ಇದು ಎರಡು ಲೀಟರ್ ಪೆಟ್ರೋಲ್ ಟ್ಯಾಂಕ್‌ನೊಂದಿಗೆ ಜೋಡಿಸಲ್ಪಟ್ಟಿರುತ್ತದೆ ಮತ್ತು 330 ಕಿ.ಮೀ. ವ್ಯಾಪ್ತಿಯನ್ನು ಹೊಂದಿರುತ್ತದೆ ಎಂದು ಕಂಪೆನಿ ಹೇಳಿದೆ.

Exit mobile version