Site icon Vistara News

Citroen C3 : ಸಿಟ್ರೋಯೆನ್​ ಸಿ3 ಏರ್ ಕ್ರಾಸ್ ಮೈಲೇಜ್​ ಎಷ್ಟಿದೆ ಗೊತ್ತಾ? ಇಲ್ಲಿದೆ ಪೂರ್ಣ ಮಾಹಿತಿ

Citroen C3 Aircross

ನವ ದೆಹಲಿ: ಭಾರತದಲ್ಲಿ ಮಧ್ಯಮ ಗಾತ್ರದ ಎಸ್​ಯುವಿಗಳು ಪ್ರಾಬಲ್ಯ ಮೆರೆಯುತ್ತಿವೆ. ಆಟೊ ಉದ್ಯಮ ಈ ಸೆಗ್ಮೆಂಟ್​ನಲ್ಲಿ ಹೆಚ್ಚು ಹೂಡಿಕೆಗಳನ್ನು ಮಾಡುತ್ತಿದೆ. ಇತ್ತೀಚೆಗೆ ಕಿಯಾ ಕಂಪನಿಯೂ ಸೆಲ್ಟೋಸ್ ಫೇಸ್​ಲಿಫ್ಟ್​ ಕಾರನ್ನು ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೇ ಹೋಂಡಾ ಎಲಿವೇಟ್​ ಎಸ್​ಯುವಿಯನ್ನು ಪ್ರಕಟಿಸಿದೆ. ಇದೀಗ ಹೊಸ ಸಿಟ್ರೋಯೆನ್ ಸಿ 3 ಏರ್ ಕ್ರಾಸ್ ಸಹ ಭಾರತೀಯ ಕಾರು ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಲು ಸಿದ್ಧವಾಗಿದೆ. ಸಿಟ್ರೋಯೆನ್ಇ ಸಿ3 ಏರ್ ಕ್ರಾಸ್​ ಕಾರಿನ ಮೈಲೇಜ್ ಹಾಗೂ ಇನ್ನಿತರ ಮಾಹಿತಿಯನ್ನು ಪ್ರಕಟಿಸಿದೆ.

ಸಿಟ್ರೋಯೆನ್​ ಸಿ3 ಏರ್ ಕ್ರಾಸ್ ಕಾರಿನಲ್ಲಿ 1.2 ಲೀಟರಿನ ಮೂರು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದ್ದು, 6 ಸ್ಪೀಡಿನ ಮ್ಯಾನುವಲ್ ಗೇರ್ ಬಾಕ್ಸ್ ನೀಡಲಅಗಿದೆ. ಸಣ್ಣ ಸಿ 3 ಹ್ಯಾಚ್ ಬ್ಯಾಕ್ ನಲ್ಲಿ ಈಗಾಗಲೇ ಲಭ್ಯವಿರುವ ಈ ಪವರ್ ಟ್ರೇನ್ ಅನ್ನು ಇಲ್ಲೂ ಬಳಸಲಾಗಿದೆ. ಇದು 110 ಬಿಹೆಚ್​ಪಿ ಪವರ್ ಮತ್ತು 190 ಎನ್ಎಂ ಟಾರ್ಕ್​ ಬಿಡುಗಡೆ ಮಾಡುತ್ತದೆ. ಇಂಧನ ದಕ್ಷತೆ ವಿಚಾರಕ್ಕೆ ಬಂದಾಗ ಏರ್ ಕ್ರಾಸ್ 18.5 ಕಿ.ಮೀ ಮೈಲೇಜ್​ ನೀಡುತ್ತದೆ ಎಂದು ಕಂಪನಿಯು ಹೇಳಿದೆ.

ಈ ಮೈಲೇಜ್​ನೊಂದಿಗೆ ಸಿಟ್ರೋಯೆನ್​ ಸಿ3 ಏರ್ ಕ್ರಾಸ್ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ನಂತರ ಮೈಲೇಜ್​ ವಿಚಾರದಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಎರಡೂ ಎಸ್ ಯುವಿಗಳ 1.5-ಲೀಟರ್ ನ್ಯಾಚುರಲಿ-ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 21.12 ಕಿ.ಮೀ ಮೈಲೇಜ್ ನೀಡುತ್ತವೆ.

ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ, ಸಿ3 ಏರ್ ಕ್ರಾಸ್​ನ ಟರ್ಬೊ-ಪೆಟ್ರೋಲ್ ಎಂಜಿನ್ ಹ್ಯುಂಡೈ ಕ್ರೆಟಾ (16.85 ಕಿ.ಮೀ) ಮತ್ತು ಕಿಯಾ ಸೆಲ್ಟೋಸ್ (17.35 ಕಿ.ಮೀ) ನಲ್ಲಿ ಕಂಡುಬರುವ 1.5-ಲೀಟರ್ ನಾಲ್ಕು ಸಿಲಿಂಡರ್ ನ್ಯಾಚುರಲಿ-ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ನ ಮೈಲೇಜ್​ ಅನ್ನು ಮೀರಿಸುತ್ತದೆ. ಇದು ಸ್ಕೋಡಾ ಕುಶಾಕ್ (16.83 ಕಿ.ಮೀ) ಮತ್ತು ಟೈಗುನ್ (18.23 ಕಿ.ಮೀ) ನ 1.0-ಲೀಟರ್ ಮೂರು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್​​ಗಿಂತ ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದೆ. ಹೋಂಡಾ ಎಲಿವೇಟ್ ತನ್ನ 1.5-ಲೀಟರ್ ನಾಲ್ಕು ಸಿಲಿಂಡರ್ ನ್ಯಾಚುರಲಿ-ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 16.11 ಕಿ.ಮೀ ಮೈಲೇಜ್ ನೀಡುವ ಮೂಲಕ ಅತ್ಯಂತ ಕಡಿಮೆ ಇಂಧನ ದಕ್ಷತೆಯನ್ನು ಹೊಂದಿದೆ.

5 ಮತ್ತು 7 ಸೀಟರ್ ಆಯ್ಕೆಯಲ್ಲಿ ಲಭ್ಯವಿರುತ್ತದೆ

ಸಿಟ್ರೋಯೆನ್​ ಸಿ 3 ಏರ್ ಕ್ರಾಸ್ ಐದು ಮತ್ತು ಏಳು ಆಸನಗಳ ಕಾನ್ಫಿಗರೇಶನ್​​ನಲ್ಲಿ ಲಭ್ಯವಿರುತ್ತದೆ. ನಾಲ್ಕು ಕಸ್ಟಮೈಸೇಶನ್ ಪ್ಯಾಕ್​​ಗಳೊಂದಿಗೆ ಬರಲಿದೆ. ಈ ಎಸ್​​ಯುವಿಯಲ್ಲಿ 7 ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, 10.25 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್​​ಮೆಂಟ್ ಸಿಸ್ಟಂ, ವೈರ್​ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂನಂತಹ ಫೀಚರ್​ಗಳು ಇರಲಿವೆ. ಆದಾಗ್ಯೂ, ಇದು ತನ್ನ ವಿಭಾಗದಲ್ಲಿ ಕಡಿಮೆ ಸುಸಜ್ಜಿತ ಎಸ್ ಯುವಿಯಾಗಿದೆ. ಸನ್ ರೂಫ್, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಪುಶ್ ಸ್ಟಾರ್ಟ್-ಸ್ಟಾಪ್ ಬಟನ್​ನಂಥ ಫೀಚ್​​ಗಳು ಇಲ್ಲ.

ಸೆಪ್ಟೆಂಬರ್​ನಲ್ಲಿ ಬುಕಿಂಗ್​ ಆರಂಭ

ಸಿ 3 ಏರ್ ಕ್ರಾಸ್​ ಬುಕಿಂಗ್ ಸೆಪ್ಟೆಂಬರ್​​ನಲ್ಲಿ ಪ್ರಾರಂಭವಾಗಲಿದೆ ಎಂದು ಸಿಟ್ರೋಯೆನ್​ ಘೋಷಿಸಿದೆ. ಹಬ್ಬದ ಋತುವಿನ ಸಮಯಕ್ಕೆ ಸರಿಯಾಗಿ ಅಕ್ಟೋಬರ್ 2023 ರಲ್ಲಿ ವಿತರಣೆಗಳು ಪ್ರಾರಂಭವಾಗಲಿವೆ.

Exit mobile version