Site icon Vistara News

CNG CARS | ಸಿಎನ್‌ಜಿ ಕ್ಷೇತ್ರಕ್ಕೆ ಟೊಯೋಟಾ ಎಂಟ್ರಿ, ಗ್ಲಾನ್ಜಾ, ಹೈರೈಡರ್‌ ಮಾರುಕಟ್ಟೆಗೆ

CNG CARS

ನವ ದೆಹಲಿ : ಕಾರುಗಳ ಮಾರುಕಟ್ಟೆಯಲ್ಲಿ ಈಗ ಸಿಎನ್‌ಜಿ ಕಾರುಗಳ (CNG CARS) ಹವಾ ಜೋರಾಗಿದೆ. ಪೆಟ್ರೋಲ್‌ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚು ಮೈಲೇಜ್‌ ಕೊಡುವ ಸಿಎನ್‌ಜಿ ಕಾರುಗಳ ಕಡೆಗೆ ಗ್ರಾಹಕರು ಮುಗಿಬಿದ್ದಿದ್ದಾರೆ. ಅದಕ್ಕೆ ಪೂರಕವಾಗಿ ಕಾರು ತಯಾರಕರು ಕೂಡ ತಮ್ಮ ಕಾರುಗಳಿಗೆ ಸಿಎನ್‌ಜಿ ಅಳವಡಿಕೆ ಮಾಡುತ್ತಿದೆ. ಅಂತೆಯೇ ಟೊಯೋಟಾ ಮೋಟಾರ್‌ ಕೂಡ ತನ್ನೆರಡು ಕಾರುಗಳಲ್ಲಿ ಸಿಎನ್‌ಜಿ ಆಯ್ಕೆಗಳನ್ನು ನೀಡಲಿದೆ.

ಮಾರುತಿ ಸುಜುಕಿಯ ಬಲೆನೊ ಕಾರಿನ ತಂತ್ರಜ್ಞಾನವನ್ನು ಪಡೆದುಕೊಂಡು ತಯಾರಿಸಿರುವ ಗ್ಲಾನ್ಜಾ ಹಾಗೂ ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಅರ್ಬನ್‌ ಕ್ರೂಸರ್‌ ಹೈರೈಡರ್‌ ಕಾರಿನಲ್ಲಿ ಸಿಎನ್‌ಜಿ ಆಯ್ಕೆಯನ್ನು ನೀಡುವುದಾಗಿ ಟೊಯೊಟಾ ಕಂಪನಿ ಬುಧವಾರ (ಅಕ್ಟೋಬರ್‌ ೯ರಂದು) ಘೋಷಿಸಿದೆ. ಫ್ಯಾಕ್ಟರಿ ಫಿಟೆಡ್‌ ಗ್ಲಾಂಜಾ ಕಾರಿನ ಆರಂಭಿಕ ಬೆಲೆ ೮.೪೩ ಲಕ್ಷ ರೂಪಾಯಿಯಿಂದ ಆರಂಭಗೊಂಡು, ೯.೪೬ ಲಕ್ಷ ರೂಪಾಯಿ ತನಕವಿದೆ. ಗ್ಲಾನ್ಜಾದ ಎಸ್‌ ಹಾಗೂ ಜಿ ವೇರಿಯೆಂಟ್‌ನ ಕಾರಿನಲ್ಲಿ ಸಿಎನ್‌ಜಿ ಆಯ್ಕೆಯು ಸಿಗಲಿದ್ದು, ಕೇವಲ ಮ್ಯಾನುಯಲ್‌ ಟ್ರಾನ್ಸ್‌ಮಿಷನ್‌ ಇದ್ದ ಕಾರುಗಳಲ್ಲಿ ಮಾತ್ರ ಲಭ್ಯವಿದೆ.

ಎರಡು ತಿಂಗಳ ಹಿಂದೆ ಟೊಯೋಟಾ ಕಂಪನಿಯ ಅರ್ಬನ್‌ ಕ್ರೂಸರ್‌ ಹೈರೈಡರ್‌ ಕಾರನ್ನು ಮಾರುಕಟ್ಟೆಗೆ ಇಳಿಸಿತ್ತು. ಇದು ಹೈಬ್ರಿಡ್‌ ತಂತ್ರಜ್ಞಾನವನ್ನು ಹೊಂದಿರುವ ಕಾರಾಗಿದೆ. ಇದರ ಪೆಟ್ರೋಲ್‌ ಕಾರಿನಲ್ಲಿ ಸಿಎನ್‌ಜಿ ಆಯ್ಕೆ ನೀಡುವುದಾಗಿ ಕಂಪನಿ ಘೋಷಿಸಿದೆ. ಇದರ ಸಿಎನ್‌ಜಿ ಕಾರಿನ ಬೆಲೆಯನ್ನು ಪ್ರಕಟಿಸಿಲ್ಲ.

ಮಾರುತಿ ಸುಜುಕಿ ಸಂಸ್ಥೆ ತಾನು ಉತ್ಪಾದಿಸುವ ೧೦ಕ್ಕೂ ಹೆಚ್ಚು ಕಾರುಗಳಲ್ಲಿ ಸಿಎನ್‌ಜಿ ಆಯ್ಕೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಟೊಯೋಟಾ ಸಂಸ್ಥೆಯು ಈ ವಿಭಾಗಕ್ಕೆ ಪ್ರವೇಶ ಪಡೆದುಕೊಂಡಿದೆ.

ಬಿಡುಗಡೆ ಕುರಿತು ಮಾತನಾಡಿದ ಟಿಕೆಎಂನ ಸೇಲ್ಸ್ ಮತ್ತು ಸ್ಟ್ರಾಟೆಜಿಕ್ ಮಾರ್ಕೆಟಿಂಗ್‌ನ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಶ್ರೀ ಅತುಲ್ ಸೂದ್ ” ಗ್ರಾಹಕರ ಆಕಾಂಕ್ಷೆಗಳ ಮೇಲೆ ಸ್ಪಷ್ಟವಾಗಿ ಗಮನ ಹರಿಸುವ ಮೂಲಕ ಮತ್ತು ನಮ್ಮ ಗ್ರಾಹಕರಿಗೆ ಅತ್ಯಂತ ಕಾರ್ಯಸಾಧ್ಯವಾದ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುವ ಮೂಲಕ ಮಾರುಕಟ್ಟೆಗಳ ಅಗತ್ಯಗಳನ್ನು ಪೂರೈಸುವುವ ಮಹತ್ವಾಕಾಂಕ್ಷೆಯ ಗುರಿಯನ್ನು ಟೊಯೋಟಾ ಹೊಂದಿದೆ. ಇದೇ ದೃಷ್ಟಿಕೋನದಿಂದ ನಾವು ಸಿ ಎನ್ ಜಿ ವಿಭಾಗಕ್ಕೆ ಪ್ರವೇಶಿಸಿದ್ದೇವೆ,”ಎಂದರು.

ಎಂಜಿನ್‌ ಸಾಮರ್ಥ್ಯವೇನು?

ಗ್ಲಾಂಜಾ ಕಾರಿನಲ್ಲಿ ೧.೨ ಲೀಟರ್‌ ಸಾಮರ್ಥ್ಯದ ಕೆ. ಸೀರಿಸ್‌ ಎಂಜಿನ್‌ ಇದ್ದು, ಇದರ ಸಿಎನ್‌ಜಿ ಆವೃತ್ತಿಯು ೭೭.೫ ಪಿಎಸ್‌ ಪವರ್‌ ಬಿಡುಗಡೆ ಮಾಡುತ್ತದೆ. ಇದು ೩೦.೬೧ ಕಿಲೋ ಮೀಟರ್‌ ಮೈಲೇಜ್‌ ನೀಡುತ್ತದೆ ಎಂದು ಕಂಪನಿ ಹೇಳಿದೆ. ಹೈರೈಡರ್‌ ಕಾರಿನಲ್ಲಿ ೧.೫ ಲೀಟರ್‌ ಕೆ- ಸೀರಿಸ್‌ ಎಂಜಿನ್‌ ಇದ್ದು, ೨೬.೧ ಕಿಲೋ ಮೀಟರ್‌ ಮೈಲೇಜ್ ನೀಡುತ್ತದೆ ಎನ್ನಲಾಗಿದೆ.

ಇದನ್ನೂ ಓದಿ | Super Meteor 650 | ಸೂಪರ್‌ ಮೀಟಿಯೋರ್‌ ಬೈಕ್‌ ಅನಾವರಣ ಮಾಡಿದ ರಾಯಲ್‌ ಎನ್‌ಫೀಲ್ಡ್‌

Exit mobile version