ನವ ದೆಹಲಿ: ದಿನದಿಂದ ದಿನಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿಕೊಂಡು ಬರುತ್ತಿರುವ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿ ತನ್ನ ಮೊಟ್ಟ ಮೊದಲ ಬ್ಯಾಟರಿ ಚಾಲಿತ ಎಸ್ಯುವಿ ಕಾರು ಎಕ್ಸ್ಯುವಿ 400 (Mahindra XUV400 EV) ಬೆಲೆಯನ್ನು ಜನವರಿ 16ರಂದು ಪ್ರಕಟಿಸಿದೆ. ಇಸಿ ಮತ್ತು ಇಎಲ್ ಎಂಬ ಎರಡು ವೇರಿಯೆಂಟ್ಗಳಲ್ಲಿ ಲಭ್ಯವಿರುವ ಈ ಕಾರಿನ ಆರಂಭಿಕ ಬೆಲೆ 15.99 ಲಕ್ಷ ರೂಪಾಯಿಗಳಾಗಿದ್ದರೆ ಟಾಪ್ ಎಂಡ್ ಕಾರಿನ ಬೆಲೆ 18.99 ಲಕ್ಷ ರೂಪಾಯಿಗಳು (ಎಕ್ಸ್ಶೋರೂಮ್ ದರ). ಹೀಗಾಗಿ ಟಾಟಾ ಮೋಟಾರ್ಸ್ನ ನೆಕ್ಸಾನ್ ಇವಿ ಸೇರಿದಂತೆ ಹಲವು ಕಾರುಗಳಿಗೆ ಪೈಪೋಟಿ ಒಡ್ಡಲು ಸಜ್ಜಾಗಿ ಬಂದಿದೆ ಎನ್ನಲಾಗುತ್ತಿದೆ.
ಪ್ರಸ್ತುತ ಘೋಷಣೆ ಮಾಡಿರುವ ಬೆಲೆ ಮೊದಲ 5000 ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ ಎನ್ನುವ ಮೂಲಕ ಭವಿಷ್ಯದಲ್ಲಿ ದರ ಏರಿಕೆ ಕಾಣಲಿದೆ ಎಂಬ ಸೂಚನೆಯನ್ನು ಮಹೀಂದ್ರಾ ಕಂಪನಿ ನೀಡಿದೆ. ಅದೇ ರೀತಿ ಒಂದು ಬಾರಿ ವಿತರಣೆ ಆರಂಭಗೊಂಡ ಬಳಿಕ ವರ್ಷಾಂತ್ಯದೊಳಗೆ 20 ಸಾವಿರ ಕಾರುಗಳನ್ನು ಉತ್ಪಾದನೆ ಮಾಡಿ ರಸ್ತೆಗಳಿಸುತ್ತೇವೆ ಎಂಬುದಾಗಿಯೂ ಭರವಸೆ ನೀಡಿದೆ.
ಈ ಕಾರಿನ ಬುಕಿಂಗ್ ಜನವರಿ 26ರಂದು ಆರಂಭಗೊಳ್ಳಲಿದೆ. ಅಲ್ಲದೆ, ಹಂತಹಂತವಾಗಿ ದೇಶದ ಎಲ್ಲ ನಗರಗಳಿಗೆ ವಿತರಣೆಯಾಗಲಿದೆ. ಅಂತೆಯೇ ದೇಶದ 34 ನಗರಗಳಲ್ಲಿ ಮೊದಲ ಹಂತದಲ್ಲಿ ಕಾರು ಲಭ್ಯವಿರುತ್ತದೆ ಎಂದು ಕಂಪನಿಯು ಹೇಳಿದೆ. ಹೊಸ ಎಸ್ಯುವಿ (Mahindra XUV400 EV) ಮೂರು ವರ್ಷಗಳು ಅಥವಾ ಅನಿಯಮಿತ ಕಿಲೋಮೀಟರ್ಗಳ ಸ್ಟಾಂಡರ್ಡ್ ವಾರಂಟಿ ಹೊಂದಿದ್ದರೆ, ಎಂಟು ವರ್ಷ ಅಥವಾ 1.6 ಲಕ್ಷ ಕಿಲೋ ಮೀಟರ್ ಬ್ಯಾಟರಿ ಮತ್ತು ಮೋಟಾರ್ ವಾರಂಟಿಯನ್ನು ಹೊಂದಿದೆ.
ಮಹಿಂದ್ರಾ ಎಕ್ಸ್ಯುವು 300 ಕಾರಿನ ಸುಧಾರಿತ ಇವಿ ಆವೃತ್ತಿಯೇ ಎಕ್ಸ್ಯುವಿ 400. ಗಾತ್ರ ಹಾಗೂ ನೋಟದಲ್ಲಿ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಸದ್ಯ ಅತಿ ಹೆಚ್ಚು ಮಾರಾಟವಾಗುತ್ತಿರುವ ಇವಿ ಟಾಟಾ ನೆಕ್ಸಾನ್ಗಿಂತ ಭಿನ್ನವಾಗಿದೆ. ಜತೆಗೆ ನೆಕ್ಸಾನ್ ಕಾರಿನ ಆರಂಭಿಕ ಬೆಲೆ 14.99 ಲಕ್ಷ ರೂಪಾಯಿಗಳಾಗಿದ್ದು ಅದಕ್ಕಿಂತ ಒಂದು ಲಕ್ಷ ರೂಪಾಯಿ ಅಧಿಕ ಬೆಲೆಗೆ ಲಭ್ಯವಾಗುತ್ತಿದೆ. ಹೀಗಾಗಿ ನೆಕ್ಸಾನ್ ಜತೆಗೆ ನೇರ ಪೈಪೋಟಿ ಗ್ಯಾರಂಟಿ. ಇದೇ ವೇಳೆ ಹ್ಯುಂಡೈ ಕೋನಾ. ಎಮ್ಜಿ ಝಡ್5ಗೂ ಸ್ಪರ್ಧೆಯೊಡ್ಡಬಹುದು.
ಆರ್ಕ್ಟಿಕ್ ಬ್ಲ್ಯೂ, ಎವರೆಸ್ಟ್ ವೈಟ್, ಗ್ಯಾಲಕ್ಸಿ ಗ್ರೇ, ನಪೋಲಿ ಬ್ಲ್ಯಾಕ್, ಇನ್ಫಿನಿಟಿ ಬ್ಲ್ಯೂ ಎಂಬ ಐದು ವಿಭಿನ್ನ ಬಣ್ಣಗಳಲ್ಲಿ ಕಾರು ಲಭ್ಯವಿರುತ್ತದೆ.
ರೇಂಜ್ ಎಷ್ಟು?
ಕಾರಿನಲ್ಲಿ 34.5 ಕಿಲೋ ವ್ಯಾಟ್ನ ಬ್ಯಾಟರಿ ಅಳವಡಿಸಲಾಗಿದೆ. ಇದು ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 375 ಕಿಲೋ ಮೀಟರ್ ಸಾಗಬಹುದು ಎನ್ನಲಾಗಿದೆ. ಇದರ ಮೋಟಾರ್ 150 ಪಿಎಸ್ ಪವರ್ ಹಾಗೂ 310 ಟಾರ್ಕ್ಯೂ ಬಿಡುಗಡೆ ಮಾಡುವ ಸಾಮರ್ಥ್ಯ ಹೊಂದಿದೆ. ಇದರ ಟಾಪ್ ಎಂಡ್ ವೇರಿಯೆಂಟ್ ಕಾರು 39.4 ಕಿಲೋ ವ್ಯಾಟ್ನ ಬ್ಯಾಟರಿ ಹೊಂದಿರುತ್ತದೆ. ಮೋಟಾರ್ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ, ಒಂದು ಬಾರಿ ಚಾರ್ಜ್ ಮಾಡಿದರೆ 456 ಕಿಲೋ ಮೀಟರ್ ದೂರ ಪ್ರಯಾಣ ಮಾಡಬಹುದು ಎನ್ನಲಾಗಿದೆ.
ಕಾರು ಕೇವಲ 8 ಸೆಕೆಂಡ್ಗಳಲ್ಲಿ ಸೊನ್ನೆಯಿಂದ 100 ಕಿಲೋ ಮೀಟರ್ ವೇಗ ಪಡೆಯಬಲ್ಲದು ಹಾಗೂ ಗರಿಷ್ಠ 150 ಕಿಲೋ ಮೀಟರ್ ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ | Mahindra Scorpio | 1470 ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಕಾರುಗಳನ್ನು ಬುಕ್ ಮಾಡಿದ ಭಾರತೀಯ ಸೇನೆ