ಮುಂಬಯಿ : ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯ ಹೊಚ್ಚ ಹೊಸ ಥಾರ್ 4×2 ಸೋಮವಾರ (ಜನವರಿ 9ರಂದು) ಅನಾವರಣಗೊಂಡಿತು. ಮಹೀಂದ್ರಾ ಥಾರ್ RWD ಎಂದೂ ಕರೆಯುವ ಈ ಕಾರನ್ನು ಅಗ್ಗದ ದರದಲ್ಲಿ ಮಾರುಕಟ್ಟೆಗೆ ಇಳಿಸುವ ಸೂಚನೆಯನ್ನು ಕಂಪನಿ ಈ ಹಿಂದೆ ನೀಡಿತ್ತು. ಅಂತೆಯೇ ಆರಂಭಿಕ ವೇರಿಯೆಂಟ್ 9.9 ಲಕ್ಷ ರೂಪಾಯಿ ಎಕ್ಸ್ಶೂ ರೂಮ್ ಬೆಲೆಗೆ ಲಭ್ಯವಾಗಲಿದೆ. ಟಾಪ್ ಎಂಡ್ ಕಾರಿನ ಬೆಲೆ 14.49 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ.. ಈ ದರ ತಾತ್ಕಾಲಿಕವಾಗಿದ್ದು, ಮೊದಲ 10 ಸಾವಿರ ಗ್ರಾಹಕರಿಗೆ ಮಾತ್ರ ಇದರ ಪ್ರಯೋಜನ ಎಂಬುದಾಗಿ ಕಂಪನಿ ತಿಳಿಸಿದೆ.
ಮಾರುಕಟ್ಟೆಯಲ್ಲಿ ಈಗಾಗಲೇ ಅಧಿಪತ್ಯ ಸ್ಥಾಪಿಸಿರುವ ಥಾರ್ 4×4 ಕಾರು ಫೋರ್ ವೀಲ್ ಡ್ರೈವ್ ಆಯ್ಕೆ ಹೊಂದಿದೆ. ಆದರೆ ಹೊಸ ಕಾರು RWD (Rear wheel Drive) ಆಯ್ಕೆ ಹೊಂದಿದೆ. ಹೊಸ ಕಾರಿನಲ್ಲಿ ಡೀಸೆಲ್ 117 CRDe ಎಂಜಿನ್ ಇದ್ದು, 117 ಬಿಚ್ಪಿ ಪವರ್ ಹಾಗೂ 300 ಎನ್ಎಮ್ ಟಾರ್ಕ್ಯೂ ಬಿಡುಗಡೆ ಮಾಡುತ್ತದೆ. ಪೆಟ್ರೋಲ್ ಕಾರಿನಲ್ಲಿ 150 TGDi ಎಂಜಿನ್ ಇದ್ದು, ಇದು 150 ಬಿಎಚ್ಪಿ ಪವರ್ ಹಾಗೂ 320 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಡೀಸೆಲ್ ಕಾರಿನಲ್ಲಿ ಮ್ಯಾನುಯಲ್ ಗೇರ್ಬಾಕ್ಸ್ ಇದ್ದರೆ ಪೆಟ್ರೋಲ್ ಕಾರಿನಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದೆ. ಬ್ಲೇಜಿಂಗ್ ಬ್ರಾಂಜ್ ಹಾಗೂ ಎವರೆಸ್ಟ್ ವೈಟ್ ಎಂಬ ಎರಡು ಬಣ್ಣಗಳಲ್ಲಿ ಮಾತ್ರ ಕಾರು ಲಭ್ಯವಿದೆ.
ಥಾರ್ ಇದುವರೆಗೆ ಆಫ್ರೋಡಿಂಗ್ ಇಷ್ಟ ಪಡುವವರಿಗೆ ಮಾತ್ರ ನೆಚ್ಚಿನ ಕಾರಾಗಿತ್ತು. ಇನ್ನಷ್ಟು ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಹಾಗೂ ಥಾರ್ ಪ್ರೇಮಿಗಳಿಗೆ ಅದರ ನಿಜವಾದ ಅನುಭವ ನೀಡುವ ನಿಟ್ಟಿನಲ್ಲಿ ಥಾರ್ RWD ಬಿಡುಗಡೆ ಮಾಡಲಾಗಿದೆ ಎಂಬುದಾಗಿ ಮಹೀಂದ್ರಾ ಆಟೋಮೊಟಿವ್ನ ಅಧ್ಯಕ್ಷರಾದ ವೀಜೇ ನಕ್ರಾ ಅವರು ಹೇಳಿದ್ದಾರೆ.
ಮಹೀಂದ್ರಾ ಥಾರ್ನ ನೂತನ ಅವತರಣಿಕೆ 2020ರಲ್ಲಿ ಬಿಡುಗಡೆಯಾಗಿತ್ತು. ಅಲ್ಲಿಂದ ಅದು ಏಕಾಏಕಿ ಜನಪ್ರಿಯತೆ ಪಡೆಯಿತು. ಆಫ್ರೋಡಿಂಗ್ ಪ್ರೇಮಿಗಳು ಕಾರನ್ನು ಬಹುವಾಗಿ ಇಷ್ಟಪಟ್ಟರು. ಅದರ 4×4 ಡ್ರೈವ್ ಆಯ್ಕೆಯೂ ಸಂಪೂರ್ಣವಾಗಿ ಯಶಸ್ಸು ಕಂಡಿತ್ತು. ಆದರೆ, ಹೊಸದಾಗಿ ಬಿಡುಗಡೆಯಾಗಿರುವ RWD ಇನ್ನೂ ಹೆಚ್ಚು ಜನಪ್ರಿಯಗೊಳ್ಳುವ ಎಲ್ಲ ಸಾಧ್ಯತೆಗಳಿಗೆ. ಡೀಸೆಲ್ ಎಂಜಿನ್ ಹೊಂದಿರುವ 4×4 ಹಾಗೂ 4×2 ಕಾರಿನ ನಡುವೆ 4.15 ಲಕ್ಷ ರೂಪಾಯಿ ದರ ವ್ಯತ್ಯಾಸವಿದ್ದು, ಪೆಟ್ರೋಲ್ ಎಂಜಿನ್ ಹೊಂದಿರುವ ಕಾರಿಗೆ 2.33 ಲಕ್ಷ ರೂಪಾಯಿ ವ್ಯತ್ಯಾಸವಿದೆ. ಬೆಲೆಯೇ ಇಲ್ಲಿ ಜನಪ್ರಿಯತೆಯ ಮಾನದಂಡ ಎನ್ನಲಾಗುತ್ತಿದೆ.
ಇದನ್ನೂ ಓದಿ | BMW Vision DEE | ಈ ಕಾರು ಮಾತನಾಡುತ್ತದೆ, ಬಣ್ಣವೂ ಬದಲಾಯಿಸುತ್ತದೆ; ಯಾವ ಕಂಪನಿಯ ಕಾರು ಇದು?