Site icon Vistara News

Increase mileage : ನಿಮ್ಮ ಕಾರಿನಲ್ಲಿ ಜಾಸ್ತಿ ಮೈಲೇಜ್​ ಸಿಗಬೇಕಾ? ಈ ತಂತ್ರಗಳನ್ನು ಬಳಸಿ

Milage

ಬೆಂಗಳೂರು: ಪೆಟ್ರೋಲ್​, ಡೀಸೆಲ್ (Fuel Rate)​ ಬೆಲೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು, ವಾಹನ ಮಾಲೀಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಎಲ್ಲಿಗಾದರೂ ಪ್ರಯಾಣ ಹೊರಟರೆ ಇಂಧನ ದರವೇ ಜಾಸ್ತಿಯಾಗುತ್ತದೆ. ಅದು ಪ್ರಯಾಣದ ಒಟ್ಟು ಸಂತೋಷವನ್ನು ಕಸಿದುಕೊಳ್ಳುತ್ತದೆ. ಹೀಗಾಗಿ ಗಗನಕ್ಕೇರುತ್ತಿರುವ ಇಂಧನ ವೆಚ್ಚವನ್ನು ಸರಿದೂಗಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ನಿಮ್ಮ ವಾಹನದಲ್ಲಿ ಪ್ರತಿ ಲೀಟರ್​ಗೆ ಹೆಚ್ಚು ಮೈಲೇಜ್​ ಪಡೆಯುವುದು. ಅದಕ್ಕೆ ಕೆಲವೊಂದು ಸರಳ ಸೂತ್ರಗಳನ್ನು ಪಾಲಿಸಬೇಕು (Increase mileage). ಅವುಗಳನ್ನು ಇಲ್ಲಿ ವಿವರಿಸಲಾಗಿದೆ.

ನಿಧಾನಕ್ಕೆ ಆಕ್ಸಿಲೇಟರ್ ಕೊಡಿ

ಡ್ರೈವಿಂಗ್ ಮಾಡುವಾಗ ಸಾಧ್ಯವಾದಷ್ಟು ನಿಧಾನಕ್ಕೆ ಆಕ್ಸಿಲೇಟರ್​ ಒತ್ತುವ ಅಭ್ಯಾಸ ಬೆಳೆಸಿ. ನಿಧಾನವಾಗಿ ಹೋಗುವ ವಾಹನದ ವೇಗ ವೃದ್ಧಿಸಲು ಆಕ್ಸಿಲೇಟರ್​ ಒತ್ತಲೇಬೇಕು ನಿಜ. ಆದರೆ ಏಕಾಏಕಿ ಆಕ್ಸಿಲೇಟರ್​ ಒತ್ತುವ ಮೂಲಕ ವೇಗ ಹೆಚ್ಚಿಸಲು ಹೋದರೆ ಇಂಧನ ಏಕಾಏಕಿ ಉರಿದು ಹೊಗೆಯಾಗುತ್ತದೆ. ಈ ರೀತಿ ಇಂಧನ ಹೆಚ್ಚು ಉರಿದು ಹೋಗದಂತೆ ನೋಡಿಕೊಳ್ಳುವುದಕ್ಕೆ ನಯವಾದ ಮತ್ತು ಸ್ಥಿರವಾದ ರೀತಿಯಲ್ಲಿ ವೇಗವನ್ನು ಹೆಚ್ಚಿಸಬೇಕು. ಅದಕ್ಕಾಗಿ ನಿಧಾನವಾಗಿ ಆಕ್ಸಿಲರೇಟರ್ ಒತ್ತಬೇಕು. ಅಗತ್ಯ ಇರುವಷ್ಟು ವೇಗವು ಕೆಟ್ಟದ್ದಲ್ಲ, ಆದರೆ ವೇಗವನ್ನು ನಿಧಾನಕ್ಕೆ ಹೆಚ್ಚಿಸಿದರೆ ಮಾತ್ರ ಉತ್ತಮ ಮೈಲೇಜ್ ಸಿಗುತ್ತದೆ.

ನಿಮ್ಮ ವಾಹನ ಚಲಾಯಿಸುವುದನ್ನು ಮ್ಯಾರಥಾನ್ ಓಟ ಎಂದೇ ಭಾವಿಸಬೇಕು. ಎಷ್ಟು ವೇಗ ಬೇಕು ಸರಾಗವಾಗಿ ಹೋಗುವುದಕ್ಕೆ ಎಷ್ಟು ಸಾಮರ್ಥ್ಯ ಅಗತ್ಯ ಎಂಬುದನ್ನು ಸ್ಪಷ್ಟವಾಗಿದ್ದರೆ ಹೆಚ್ಚು ಮೈಲೇಜ್ ಪಡೆಯಬಹುದು. ಬೇರೆ ವಾಹನದ ಚಾಲಕರ ಜತೆ ಜಿದ್ದಿಗೆ ಬಿದ್ದು ಏಕಾಏಕಿ ವೇಗ ಹೆಚ್ಚಿಸಲು ಯತ್ನಿಸಿದರೆ ಮೈಲೇಜ್​ ಡ್ರಾಪ್​ ಆಗುವುದು ಖಚಿತ.

ಕಾಲಕಾಲಕ್ಕೆ ಸರ್ವಿಸ್​ ಮಾಡಿಸಿ

ಕಾರು ಮಾಲೀಕರು ಮಾಡುವ ಒಂದು ಸಾಮಾನ್ಯ ತಪ್ಪು ಎಂದರೆ ಅದು ಹಣ ಉಳಿಸಲೆಂದು ಸೂಕ್ತ ಕಾಲಕ್ಕೆ ಮೆಂಟೇನೆನ್ಸ್ ಮಾಡದಿರುವುದು ಮತ್ತು ಕಾರು ಕೆಟ್ಟುಹೋದ ನಂತರವೇ ಅದನ್ನು ಸರಿಪಡಿಸುವುದು. ಆದರೆ ಕಾರನ್ನು ಆರೋಗ್ಯಕರವಾಗಿಡಲು ಕಾಲಕಾಲಕ್ಕೆ ಸರ್ವಿಸ್ ಮಾಡಿಸಲೇಬೇಕು. ಕೆಲವೊಂದು ಪಾರ್ಟ್​​ಗಳನ್ನೂ ಬದಲಾಯಿಸಬೇಕು. ಇಲ್ಲದಿದ್ದರೆ ನಿಮ್ಮ ಕಾರು ಸರಿಯಾಗಿ ಮೈಲೇಜ್ ಕೊಡುವುದಕ್ಕೆ ಸಾಧ್ಯವೇ ಇಲ್ಲ.

ಎಂಜಿನ್ ಆಯಿಲ್ ಜೊತೆಗೆ ಏರ್ ಮತ್ತು ಆಯಿಲ್ ಫಿಲ್ಟರ್ ನಂತಹ ಕೆಲವು ಬಿಡಿಭಾಗಗಳನ್ನು ನಿಯಮಿತವಾಗಿ ಬದಲಾಯಿಸಬೇಕಾಗುತ್ತದೆ. ಏರ್ ಫಿಲ್ಟರ್ ಧೂಳು ಎಂಜಿನ್ ಗೆ ಪ್ರವೇಶಿಸುವುದನ್ನು ತಡೆಯುತ್ತದೆ. ಆದರೆ ಪರಿಸರದ ಪರಿಸ್ಥಿತಿಗಳಿಂದಾಗಿ ಕೆಲವಷ್ಟು ಸಾವಿರ ಕಿಲೋಮೀಟರ್ ಓಡಿದ ನಂತರ ಪಿಲ್ಟರ್ ಧೂಳಿನಿಂದ ಮುಚ್ಚಿಕೊಳ್ಳುತ್ತದೆ. ಹೀಗಾಗಿ ಎಂಜಿನ್​ಗೆ ಕಡಿಮೆ ಗಾಳಿ ಹೋಗುವ ಕಾರಣ ಒಳಗೆ ದಹ್ಯ ಕ್ರಿಯೆ ಸರಿಯಾಗಿ ನಡೆಯುವುದಿಲ್ಲ. ಇದರಿಂದ ವಾಹನದಲ್ಲಿ ಸಮಸ್ಯೆ ಉಂಟಾಗುತ್ತದೆ.

ಎಂಜಿನ್ ಆಯಿಲ್ ಒಳಗಿರುವ ಭಾಗಗಳನ್ನು ನಯಗೊಳಿಸುತ್ತದೆ. ಈ ಆಯಿಲ್​ ನಿಧಾನವಾಗಿ ತನ್ನ ಸ್ಥಿಗ್ಧತೆ ಕಳೆದುಕೊಳ್ಳುತ್ತದೆ. ಹೀಗಾಗಿ ಆಯಿಲ್​ ಬದಲಾಯಿಸದಿರುವುದು ಎಂಜಿನ್ ಅನ್ನು ಹೆಚ್ಚು ಒತ್ತಡಕ್ಕೆ ಸಿಲುಕಿಸುತ್ತದೆ. ಇದರಿಂದ ಮೈಲೇಜ್ ಕಡಿಮೆಯಾಗುತ್ತದೆ. ಹೀಗಾಗಿ ಕಾಲಕಾಲಕ್ಕೆ ಸರ್ವಿಸ್ ಮಾಡಿಸಿದರೆ ಮಾತ್ರ ಉತ್ತಮ ಮೈಲೇಜ್ ಪಡೆಯುವುದಕ್ಕೆ ಸಾಧ್ಯವಿದೆ.

ಟೈರ್​ನಲ್ಲಿ ಗಾಳಿಯ ಒತ್ತಡ ಸಮರ್ಪಕವಾಗಿರಲಿ

ಟೈರ್​ಗಳಲ್ಲಿ ಸೂಕ್ತ ಪ್ರಮಾಣದ ಗಾಳಿಯ ಒತ್ತಡ ಇರುವಂತೆ ನೋಡಿಕೊಳ್ಳುವುದು ಅತ್ಯಗತ್ಯ. ಅದರಿಂದ ಮಾತ್ರ ಉತ್ತಮ ಮೈಲೇಜ್​ ಸಿಗುತ್ತದೆ. ಟೈರ್​ಗಳಲ್ಲಿ ಗಾಳಿ ಕಡಿಮೆ ಇದ್ದರೆ ವಾಹನ ಮತ್ತು ನೆಲಕ್ಕೆ ಹೆಚ್ಚು ಅಂಟಿಕೊಳ್ಳುತ್ತವೆ. ಇದರಿಂದ ತಿರುಗುವುದಕ್ಕೆ ಕಷ್ಟ ವಾಗುತ್ತದೆ (ರೋಲಿಂಗ್ ಪ್ರತಿರೋಧ). ಇಂಥ ಸಂದರ್ಭದಲ್ಲಿ ಎಂಜಿನ್ ನ ಹೆಚ್ಚಿನ ಶಕ್ತಿಯನ್ನು ರೋಲ್ ಮಾಡಲು ಬಳಸಬೇಕಾಗುತ್ತದೆ. ಇದು ಅದರ ಇಂಧನ ಬಳಕೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಟೈರ್ ಗಳಲ್ಲಿ ಶಿಫಾರಸು ಮಾಡಿದ ಗಾಳಿಯ ಒತ್ತಡ ಇರಬೇಕು. ವಾರಕ್ಕೊಮ್ಮೆ ಅಥವಾ ಲಾಂಗ್ ಡ್ರೈವ್ ಗೆ ಹೋಗುವ ಮೊದಲು ಟೈರ್ ಒತ್ತಡವನ್ನು ಪರಿಶೀಲಿಸಿಬೇಕು. ಟೈರ್ ಒತ್ತಡದ ಮಾಹಿತಿಯನ್ನು ಸಾಮಾನ್ಯವಾಗಿ ಚಾಲಕನ ಸೈಡ್ ಡೋರ್ ಕೆಳಗೆ ಬರೆದಿರಲಾಗುತ್ತದೆ. ಅವುಗಳನ್ನು ಒಂದು ಬಾರಿ ನೋಡಿಕೊಳ್ಳಬೇಕು.

ಹೊಸ ಮಾಡೆಲ್​ನ ವಾಹನಗಳಲ್ಲಿ ಟೈರ್​ ಪ್ರೆಶರ್​ ಮಾಹಿತಿ ಇನ್​ಸ್ಟ್ರುಮೆಂಟ್​ ಕ್ಲಸ್ಟರ್​ನಲ್ಲಿ ಡಿಸ್​ಪ್ಲೇ ಆಗುತ್ತದೆ. ಅವುಗಳ ಬಗ್ಗೆಯೂ ಗಮನ ಇಟ್ಟುಕೊಳ್ಳಬೇಕು.

ಮುಂದಿರುವ ವಾಹನಗಳ ಅಂತರ ಗಮನಿಸಿ ಓಡಿಸಿ

ಮುಂದಿರುವ ರಸ್ತೆಯನ್ನು ನೋಡಿ ಮತ್ತು ಸಂಚಾರದ ವೇಗವನ್ನು ಸ್ಥಿರವಾಗಿಟ್ಟುಕೊಳ್ಳುವುದು ಮೈಲೇಜ್​ ಪಡೆಯುವ ಮತ್ತೊಂದು ವಿಧಾನ. ಅಂದರೆ ನೀವು ಚಲಾಯಿಸುವ ವಾಹನದ ಮುಂದಿರುವ ವಾಹನ ಹಾಗೂ ನಿಮ್ಮ ವಾಹನಗಳ ನಡುವಿನ ಅಂತರವನ್ನು ಅಂದಾಜು ಮಾಡಿಕೊಂಡು ಚಲಾಯಿಸುವುದು. ಈ ಸ್ಥಿತಿ ಪ್ರಮುಖವಾಗಿ ಎದುರಾಗುವುದು ನಗರದೊಳಗೆ.

ಕೆಲವರು ವೇಗವಾಗಿ ಹೋಗಿ ಮುಂದಿರುವ ವಾಹನ ಸಮೀಪದಲ್ಲಿ ಬ್ರೇಕ್​ ಹಾಕುತ್ತದೆ. ಇದರಿಂದ ಬ್ರೇಕಿಂಗ್ ಶಕ್ತಿ ಹಾಗೂ ಅನಗತ್ಯವಾಗಿ ಗೇರ್ ಬದಲಾಯಿಸಬೇಕಾಗುತ್ತದೆ. ಅಂತರ ಕಾಪಾಡಿಕೊಂಡು ಹೋಗುವ ಮೂಲಕ ಸುಮ್ಮನೆ ಆಕ್ಸಿಲೇಟರ್ ಕೊಡುವುದನ್ನು ಹಾಗೂ ಅನಗತ್ಯ ಬ್ರೇಕ್ ಹಾಕುವುದನ್ನು ತಪ್ಪಿಸಬಹುದು. ಸಿಟಿಯಲ್ಲಾದರೆ ಟ್ರಾಫಿಕ್ ಸಿಗ್ನಲ್ ಗಳನ್ನು ಮುಂಚಿತವಾಗಿ ಗುರುತಿಸಿ ಅನಗತ್ಯ ಬ್ರೇಕ್ ಹಾಕುವುದು ತಪ್ಪಿಸಬಹುದು. ಸ್ಥಿರವಾದ ವೇಗದಲ್ಲಿ ಚಾಲನೆ ಮಾಡುವ ಮೂಲಕ, ನೀವು ಇಂಧನವನ್ನು ಉಳಿಸಬಹುದು ಮತ್ತು ವಾಹನದ ಬ್ರೇಕ್ ಸವೆಯುವುದನ್ನು ಕೂಡ ತಪ್ಪಿಸಬಹುದು.

ಸಿಗ್ನಲ್​ಗಳಲ್ಲಿ ಎಂಜಿನ್ ಆಫ್​ ಮಾಡಿ

ಕೆಲವರು ಎರಡು ನಿಮಿಷಗಳಷ್ಟು ಹೊತ್ತು ಸಿಗ್ನಲ್ ಇದ್ದರೂ ಎಂಜಿನ್​ ಸ್ಟಾರ್ಟ್​ ಮಾಡಿಟ್ಟುಕೊಂಡಿರುತ್ತಾರೆ. ಇದರಿಂದ ಅನಗತ್ಯವಾಗಿ ಇಂಧನ ಖರ್ಚಾಗುತ್ತದೆ. ಹೀಗಾಗಿ ಸಿಗ್ನಲ್​ಗಳಲ್ಲಿ ಎಂಜಿನ್ ಆಫ್​ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಅದೇ ರೀತಿ ಎಲ್ಲಾದರೂ ವಾಹನ ನಿಲ್ಲಿಸಿದಾಗಲೂ ತಕ್ಷಣ ಎಂಜಿನ್ ಆಫ್​ ಮಾಡಿ. ಇದರಿಂದ ಸಾಕಷ್ಟು ಇಂಧನ ಉಳಿಸಬಹುದು.

ಹೊಸ ವಾಹನಗಳಲ್ಲಿ ಸ್ಟಾರ್ಟ್​, ಸ್ಪಾಟ್ ಎಂಬ ಹೊಸ ತಾಂತ್ರಿಕತೆ ಇರುತ್ತದೆ. ಇದು ವಾಹನನ್ನು ತಟಸ್ಥವಾಗಿ ಇಟ್ಟ ತಕ್ಷಣ ಎಂಜಿನ್ ಆಫ್​ ಮಾಡುತ್ತದೆ. ಮತ್ತೆ ಕ್ಲಚ್ ಒತ್ತಿದಾಗ ಎಂಜಿನ್ ಸ್ಟಾರ್ಟ್​ ಆರಂಭವಾಗುತ್ತದೆ. ಈ ಅಭ್ಯಾಸದಿಂದ ಮೈಲೇಜ್ ಜಾಸ್ತಿ ಸಿಗುವ ಜತೆಗೆ ಪರಿಸರಕ್ಕೂ ಪೂರಕವಾಗಿರುತ್ತದೆ.

ಅನಗತ್ಯ ಭಾರ ಹಾಕಬಾರದು

ಎಲ್ಲಾ ತಯಾರಕರು ವಾಹನದ ಸುರಕ್ಷತೆಯ ಮೇಲೆ ಪರಿಣಾಮ ಬೀರದೆ ವಾಹನದ ತೂಕವನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಪ್ರಯತ್ನಿಸುತ್ತಾರೆ. ಒಟ್ಟಾರೆ ತೂಕವು ಕಡಿಮೆಯಾದಾಗ, ಎಂಜಿನ್ ಮೇಲೆ ಕಡಿಮೆ ಒತ್ತಡ ಸೃಷ್ಟಿಯಾಗುತ್ತದೆ. ಹಗುರವಾದ ವಾಹನವು ಎಂಜಿನ್ ನಿಂದ ಚಾಲಿತ ಭಾರವಾದ ವಾಹನಕ್ಕಿಂತ ಕಡಿಮೆ ಇಂಧನವನ್ನು ಬಳಸುತ್ತದೆ. ಆದ್ದರಿಂದ, ಸಾಧ್ಯವಾದಷ್ಟು ವಾಹನವನ್ನು ಹಗುರವಾಗಿಡುವುದು ಅತ್ಯಗತ್ಯ. ಹೀಗಾಗಿ ನಿಮ್ಮ ವಾಹನದಲ್ಲಿ ಅನಗತ್ಯ ವಸ್ತುಗಳು ಇದ್ದರೆ, ಬೂಟ್​ ಸ್ಪೇಸ್​ನಲ್ಲಿ ಬೇಡದ ವಸ್ತುಗಳನ್ನು ತುಂಬಿದ್ದರೆ ಅವರುಗಳನ್ನು ತೆಗೆದು ಹಾಕುವ ಮೂಲಕ ಮೈಲೇಜ್ ಹೆಚ್ಚಿಸಬಹುದು.

ಇದನ್ನೂ ಓದಿ : Monsoon car care tips : ಮಳೆಗಾಲದಲ್ಲಿ ನಿಮ್ಮ ಕಾರನ್ನು ಈ ರೀತಿ ಮೆಂಟೇನ್ ಮಾಡಿ

ಕಾರು ತಯಾರಕರು ತಮ್ಮ ವಾಹನಗಳನ್ನು ಸಾಧ್ಯವಾದಷ್ಟು ಏರೋಡೈನಾಮಿಕ್ಸ್​ಗೆ ಪೂರಕವಾಗಿ ವಿನ್ಯಾಸಗೊಳಿಸುತ್ತಾರೆ. ಆದಾಗ್ಯೂ, ಕಾರಿನ ರೂಫ್ ರ್ಯಾಕ್ ಗಾಳಿಯ ಪ್ರತಿರೋಧವನ್ನು ಹೆಚ್ಚಿಸುತ್ತದೆ. ಕೆಲವು ವಾಹನಗಳ ಟಾಪ್​ ಮೇಲೆಯೂ ಸರಕುಗಳನ್ನು ಇಡುತ್ತಾರೆ. ಇದು ಕೂಡ ಮೈಲೇಜ್​ ಕಡಿಮೆಯಾಗಲು ಕಾರಣವಾಗುತ್ತದೆ.

ಗುಣಮಟ್ಟದ ಇಂಧನ ಹಾಕಿಸಿ

ಕಲಬೆರಕೆ ಇಂಧನವು ಇಂಧನ ದಕ್ಷತೆಯನ್ನು ಕಡಿಮೆ ಮಾಡುವುದಲ್ಲದೆ, ಎಂಜಿನ್ ಗೆ ಹಾನಿ ಮಾಡುತ್ತದೆ. ನಿಮ್ಮ ವಾಹನವನ್ನು ಇಂಧನ ಹಾಕುವ ಮೊದಲು ಇಂಧನದ ಗುಣಮಟ್ಟ ಪರಿಶೀಲಿಸಿ. ಇಂದು, ನೀವು ಯಾವುದೇ ಪಂಪ್ ನಲ್ಲಿ ಮಾರಾಟವಾಗುವ ಇಂಧನದ ಸಾಂದ್ರತೆಯನ್ನು ಪರಿಶೀಲನೆ ಮಾಡಬಹುದು. ಹೆದ್ದಾರಿಯಲ್ಲಿ ಸಂಚರಿಸುವ ವೇಳೆ ಸಣ್ಣಪುಟ್ಟ ಬಂಕ್​ಗಳಲ್ಲಿ ಆಗುವ ಮೋಸದಿಂದ ತಪ್ಪಿಸಿಕೊಳ್ಳಿ. ಉತ್ತಮ ಗುಣಮಟ್ಟದ ಇಂಧನದಿಂದ ಮಾತ್ರ ಮೈಲೇಜ್​ ಹೆಚ್ಚಿಸಲು ಸಾಧ್ಯ.

Exit mobile version