ನವ ದೆಹಲಿ : ಇನ್ನು ಮುಂದೆ ಎಲೆಕ್ಟ್ರಿಕ್ ವಾಹನಗಳ ಯುಗ ಎಂಬುದು ಬಹುತೇಕ ನಿಶ್ಚಯಗೊಂಡಿದೆ. ಹೀಗಾಗಿ ಆಟೋಮೊಬೈಲ್ ಕೈಗಾರಿಕೆಗಳೆಲ್ಲವೂ ಬ್ಯಾಟರಿ ಚಾಲಿತ ವಾಹನಗಳ ತಯಾರಿಗಾಗಿ ಬೃಹತ್ ಯೋಜನೆಗಳನ್ನು ರೂಪಿಸಿಕೊಂಡಿವೆ. ಅಂತೆಯೇ ಒಂದು ಕಾಲದಲ್ಲಿ ಭಾರತದ ಜನರ ಜೀವನಾಡಿಯಾಗಿದ್ದ ಅಂಬಾಸಿಡರ್ ಕಾರು ತಯಾರಿಕಾ ಕಂಪನಿಯಾಗಿರುವ ಹಿಂದೂಸ್ತಾನ್ ಮೋಟಾರ್ಸ್ ಕೂಡ ಎಲೆಕ್ಟ್ರಿಕ್ ದ್ವಿ ಚಕ್ರ ವಾಹನಗಳ ಉತ್ಪಾದನೆಗೆ ಯೋಜನೆ ರೂಪಿಸಿಕೊಂಡಿದೆ.
ಸಿಕೆ ಬಿರ್ಲಾ ಮಾಲೀಕತ್ವದ ಹಿಂದೂಸ್ತಾನ್ ಮೋಟಾರ್ಸ್ ಯುರೋಪ್‌ನ ಕಂಪನಿಯೊಂದರ ಜತೆ ಒಪ್ಪಂದ ಮಾಡಿಕೊಂಡಿದ್ದು, ಭಾರತದಲ್ಲಿ ಇವಿ ಸ್ಕೂಟರ್‌ಗಳ ಮಾರುಕಟ್ಟೆಗೆ ಪ್ರವೇಶ ಪಡೆಯಲು ಯೋಜನೆ ರೂಪಿಸಿಕೊಂಡಿದೆ. ಮುಂದಿನ ಕೆಲವು ತಿಂಗಳ ಒಳಗೆ ಜಂಟಿ ಯೋಜನೆಗೆ ತಾಂತ್ರಿಕ ಒಪ್ಪಿಗೆ ಸಿಗಲಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ೨೦೧೪ರಲ್ಲಿ ಸ್ಥಗಿತಗೊಂಡಿದ್ದ ಪಶ್ಚಿಮ ಬಂಗಾಳದ ಉತ್ತರ್‌ಪಾರದಲ್ಲಿರುವ ಹಿಂದೂಸ್ತಾನ್ ಮೋಟಾರ್ಸ್‌ನ ಕಾರ್ಖಾನೆ ಮತ್ತೆ ಆರಂಭವಾಗಲಿದೆ.
“ಹಿಂದೂಸ್ತಾನ್ ಮೋಟಾರ್ಸ್ ಹಾಗೂ ಯುರೋಪ್‌ನ ಕಂಪನಿಯೊಂದರ ನಡುವಿನ ಮಾತುಕತೆ ಫಲಪ್ರದವಾಗಿದೆ. ಕೆಲವೇ ದಿನಗಳಲ್ಲಿ ವಿದೇಶಿ ಕಂಪನಿಯ ಹೆಸರನ್ನು ಬಹಿರಂಗಗೊಳಿಸಲಾಗುವುದು. ಬಂಡವಾಳ ಹೂಡಿಕೆಯಲ್ಲಿನ ಅನುಪಾತ ಸೇರಿದಂತೆ ಇನ್ನಿತರ ತಾಂತ್ರಿಕ ವಿಷಯಗಳಿಗೆ ಮುಂದಿನ ವರ್ಷದ ಫೆಬ್ರವರಿ ೧೫ರ ಒಳಗೆ ಒಪ್ಪಿಗೆ ದೊರೆಯಲಿದೆ. ಅಲ್ಲಿಂದ ಆರು ತಿಂಗಳ ಒಳಗೆ ವಾಹನ ರಸ್ತೆಗೆ ಇಳಿಯಲಿದೆ,” ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಎರಡೂ ಕಂಪನಿಗಳು ಸುಮಾರು ೬೦೦ ಕೋಟಿ ರೂಪಾಯಿ ಆರಂಭಿಕ ಹಂತದಲ್ಲಿ ಹೂಡಿಕೆ ಮಾಡಲಿವೆ. ಸದ್ಯಕ್ಕೆ ದ್ವಿ ಚಕ್ರ ವಾಹನಗಳ ತಯಾರಿಗೆ ಮಾತ್ರ ಗಮನ ಹರಿಸಲಾಗಿದೆ. ಭವಿಷ್ಯದಲ್ಲಿ ನಾಲ್ಕು ಚಕ್ರದ ವಾಹನಗಳನ್ನು ತಯಾರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು. ಕೋಲ್ಕೊತಾದಲ್ಲಿರುವ ೯೮ ಎಕರೆ ಪ್ರದೇಶದ ಉತ್ಪಾದನಾ ಘಟಕದಲ್ಲಿ ಸ್ಕೂಟರ್‌ಗಳು ತಯಾರಾಗಲಿವೆ ಎಂಬುದಾಗಿ ಕಂಪನಿ ತಿಳಿಸಿದೆ.
೨೦೧೪ರಲ್ಲಿ ಹಿಂದೂಸ್ತಾನ್ ಮೋಟಾರ್ಸ್ ಕಂಪನಿಯು ತನ್ನ ಅಂಬಾಸಿಡರ್ ಕಾರುಗಳ ಉತ್ಪಾನೆಯನ್ನು ಸ್ಥಗಿತಗೊಳಿಸಿತ್ತು. ಬಂಡವಾಳದ ಕೊರತೆ, ತಾಂತ್ರಿಕ ಹಿನ್ನಡೆ ಹಾಗೂ ಬೇಡಿಕೆ ಕುಸಿತದಿಂದಾಗಿ ಘಟಕವನ್ನು ನಿಲ್ಲಿಸಲಾಗಿತ್ತು. ಇದೇ ವೇಳೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ೨೫೦೦ ಮಂದಿ ಉದ್ಯೋಗ ಕಳೆದುಕೊಂಡಿದ್ದರು.
ಅಂಬಾಸಿಡರ್ ಕಾರು ಸರಕಾರಿ ಇಲಾಖೆಗಳ ಪ್ರಥಮ ಆದ್ಯತೆಯ ಕಾರಾಗಿತ್ತು. ಈಗಲೂ ಕೋಲ್ಕೊತಾ ನಗರದಲ್ಲಿ ಈ ಕಾರುಗಳು ಟ್ಯಾಕ್ಸಿಗಳಾಗಿ ಬಳಕೆಯಾಗುತ್ತಿವೆ. ಬ್ರಿಟನ್‌ನ ಮಾರಿಸ್ ಆಕ್ಸ್‌ಫರ್ಡ್ ವಿನ್ಯಾಸದ ಈ ಕಾರು ಭಾರತದಲ್ಲೇ ತಯಾರಾದ ಮೊಟ್ಟ ಮೊದಲ ಕಾರು ಎಂಬ ಹೆಗ್ಗಳಿಕೆ ಹೊಂದಿತ್ತು. ೨೦೧೪ರಲ್ಲಿ ಕಂಪನಿಯ ಕಾರ್ಯಾಚರಣೆ ನಿಲ್ಲಿಸುವ ಮೊದಲು ಆ ವರ್ಷದಲ್ಲಿ ಕೇವಲ ೨೨೦೦ ಕಾರುಗಳನ್ನು ಮಾತ್ರ ಉತ್ಪಾದನೆ ಮಾಡಿತ್ತು.
ಇದನ್ನೂ ಓದಿ | Tata Tiago EV | ಶೀಘ್ರ ಮಾರುಕಟ್ಟೆಗೆ ಇಳಿಯಲಿದೆ ಕಡಿಮೆ ಬೆಲೆಯ ಇವಿ ಕಾರು