ನವ ದೆಹಲಿ: 2019 ರಲ್ಲಿ ಭಾರತದ ಮಾರುಕಟ್ಟೆ ಬಿಟ್ಟು ಹೋಗಿದ್ದ ಫಿಯೆಟ್ ತನ್ನ ಜನಪ್ರಿಯ ಇಟಾಲಿಯನ್ ಬ್ರಾಂಡ್ ಆಲ್ಫಾ ರೋಮಿಯೋದೊಂದಿಗೆ ಮರಳಿ ಬರಲಿದೆ ಎಂಬುದಾಗಿ ಸುದ್ದಿಯಾಗಿದೆ. ವಿಶ್ವದ ಮೂರನೇ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಸ್ಟೆಲ್ಲಾಂಟಿಸ್, ಫಿಯೆಟ್ ಮತ್ತು ಆಲ್ಫಾ ರೋಮಿಯೋ ಸೇರಿದಂತೆ ಇತರ ಕೆಲವು ಪ್ರಮುಖ ಬ್ರಾಂಡ್ಗಳ ಸಮೂಹ ಇದಾಗಿದೆ. ಇದೀಗ ಭಾರತೀಯ ಮಾರುಕಟ್ಟೆ ಕಡೆಗೆ ಗಮನ ಹರಿಸಿದೆ ಎನ್ನಲಾಗಿದೆ. ಜೀಪ್ ಮತ್ತು ಸಿಟ್ರಯೋನ್ ಬ್ರಾಂಡ್ಗಳಿಗೆ ನೆಲೆ ಕಂಡಕೊಳ್ಳುವುದು ಈ ಸಮೂಹದ ಪ್ರಾಥಮಿಕ ಗುರಿಯಾಗಿದೆ. ಸಿಟ್ರೋಯೆನ್ ಅಕ್ಟೋಬರ್ನಲ್ಲಿ ಸಿ 3 ಏರ್ ಕ್ರಾಸ್ ಎಸ್ಯುವಿಯನ್ನು ಬಿಡುಗಡೆ ಮಾಡುತ್ತಿದೆ. ಮುಂದಿನ ವರ್ಷದ ಆರಂಭದಲ್ಲಿ ಮತ್ತೊಂದು ಮಾದರಿಯನ್ನು ಬಿಡುಗಡೆ ಮಾಡಲು ಯೋಜನೆ ಹಾಕಿದೆ.
ಇದನ್ನೂ ಓದಿ : Hyundai Creta : ಅಡ್ವೆಂಚರ್ ಪ್ರೇಮಿಗಳಿಗೆ ಇದೋ ಬಂದಿದೆ ಹ್ಯುಂಡೈನ ಎರಡು ಕಾರುಗಳು
ಸ್ಟೆಲ್ಲಾಂಟಿಸ್ ನ ಭಾರತ ಮತ್ತು ಏಷ್ಯಾ ಪೆಸಿಫಿಕ್ ಪ್ರದೇಶದ ಹಿರಿಯ ಉಪಾಧ್ಯಕ್ಷ ಬಿಲ್ಲಿ ಹೇಯ್ಸ್ ಮಾತನಾಡಿ, ಫಿಯೆಟ್ ಬಗ್ಗೆ ಇನ್ನೂ ಸಾಕಷ್ಟು ಭಾರತೀಯರಿಗೆ ಪ್ರೀತಿ ಇದೆ. ನಾವು ಇನ್ನೂ ಫಿಯೆಟ್ ಗ್ರಾಹಕರನ್ನು ಬೆಂಬಲಿಸುತ್ತಿದ್ದೇವೆ. ಇದು ಕೇವಲ ಫಿಯೆಟ್ ಮಾತ್ರವಲ್ಲ, ಆಲ್ಫಾ ರೋಮಿಯೋದಂತಹ ಇತರ ಬ್ರಾಂಡ್ಗಳಿಗೂ ನೀಡುತ್ತಿದ್ದೇವೆ. ಜೀಪ್ ಮತ್ತು ಸಿಟ್ರನ್ ಮಾರುಕಟ್ಟೆ ವಿಸ್ತಾರದ ಅಗ್ರಸ್ಥಾನದಲ್ಲಿದ್ದರೂ, ಇತರ ಬ್ರಾಂಡ್ ಗಳ ಬಗ್ಗೆ ಚರ್ಚೆಗಳು ಎಂದಿಗೂ ನಿಲ್ಲುವುದಿಲ್ಲ. ಮಾರುಕಟ್ಟೆ ವಿಕಸನಗೊಳ್ಳುತ್ತಿದ್ದಂತೆ ಯಾವುದು ಹೆಚ್ಚು ಸೂಕ್ತವಾಗಿದೆ ಎಂಬುದನ್ನು ನಾವು ಕಂಡುಹಿಡಿಯಬೇಕಾಗಿದೆ, ಯಾವುದೇ ದೃಢವಾದ ಯೋಜನೆಗಳು ಇಲ್ಲದಿದ್ದರೂ, ಫಿಯೆಟ್ ಮಾರುಕಟ್ಟೆಗೆ ಹೇಗೆ ಹೊಂದಿಕೊಳ್ಳುತ್ತದೆ ಮತ್ತು ಅದನ್ನು ಹೇಗೆ ಮತ್ತೆ ಪ್ರಾರಂಭಿಸಬೇಕು ಎಂಬ ಪ್ರಶ್ನೆಗಳಿವೆ ಎಂದು ಹೇಳಿದ್ದಾರೆ.
1964ರಲ್ಲಿ ಭಾರತಕ್ಕೆ ಬಂದಿದ್ದ ಫಿಯೆಟ್
ಫಿಯೆಟ್ ಕಾರನ್ನು ಮೊದಲ ಬಾರಿಗೆ 1964 ರಲ್ಲಿ ಪರಿಚಯಿಸಲಾಯಿತು. 2019ರಲ್ಲಿ ಈ ಕಂಪನಿ ಭಾರತೀಯ ಮಾರುಕಟ್ಟೆಯನ್ನು ತೊರೆಯಿತು. ಆದಾಗ್ಯೂ, ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳಿಗೆ (ಎಸ್ ಯುವಿ) ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಫಿಯೆಟ್ ಮಾತೃ ಸಂಸ್ಥೆಯಾಗಿರುವ ಫಿಯೆಟ್ ಕ್ರಿಸ್ಲರ್ ಆಟೋಮೊಬೈಲ್ಸ್ (ಎಫ್ಸಿಎ) ಭಾರತದಲ್ಲಿ ಜೀಪ್ ಬ್ರಾಂಡ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತು.
ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸುವ ಮೊದಲು ಫಿಯೆಟ್ ಎರಡು ಕಾರುಗಳನ್ನು ಮಾರಾಟ ಮಾಡುತ್ತಿತ್ತು/ಅವುಗಳೆಂದರೆ ಫಿಯೆಟ್ ಲೀನಿಯಾ ಮತ್ತು ಫಿಯೆಟ್ ಪುಂಟೊ. ಈ 2 ಕಾರುಗಳು ಭಾರತದ ಸಂಪೂರ್ಣ ಫಿಯೆಟ್ ಸರಣಿಯಲ್ಲಿ ಅತ್ಯಂತ ಜನಪ್ರಿಯವಾಗಿದ್ದವು. ಈ ಕಾರುಗಳು ಇನ್ನೂ ಭಾರತದ ರಸ್ತೆಯಲ್ಲಿ ಸಂಚರಿಸುತ್ತಿವೆ.
ಎರಡು ಆಯ್ಕೆಗಳು
ಫಿಯೆಟ್ ಲೀನಿಯಾ ಮತ್ತು ಪುಂಟೊ ಎರಡೂ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದ್ದವು, ಒಂದು ಪೆಟ್ರೋಲ್ ಮತ್ತು ಒಂದು ಡೀಸೆಲ್. ಫಿಯೆಟ್ ಲೀನಿಯಾ 1368 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 88.7 ಬಿಹೆಚ್ಪಿ ಪವರ್ ಮತ್ತು 115 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಫಿಯೆಟ್ ಪುಂಟೊ 1172 ಸಿಸಿ ಪೆಟ್ರೋಲ್ ಎಂಜಿನ್ ಸಹಾಯದಿಂದ 67.1 ಬಿಹೆಚ್ ಪಿ ಮತ್ತು 96 ಎನ್ಎಂ ಟಾರ್ಕ್ ಅನ್ನು ಬಿಡುಗಡೆ ಮಾಡುತ್ತದೆ. ಎರಡೂ ಕಾರುಗಳಲ್ಲಿನ ಡೀಸೆಲ್ ಎಂಜಿನ್ ಒಂದೇ ಆಗಿತ್ತು. ಈ ಎಂಜಿನ್ 74 ಬಿಎಚ್ಪಿ ಪವರ್ ಹಾಗೂ 190 ಎನ್ಎಂ ಟಾರ್ಕ್ ಉತ್ಪಾದಿಸಿದರೆ, ಲೀನಿಯಾ 89 ಬಿ ಹೆಚ್ಪಿ ಪವರ್ ಮತ್ತು 209 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ. 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಇತ್ತು. ಆಟೋಮ್ಯಾಟಿಕ್ ಆಯ್ಕೆ ಲಭ್ಯವಿರಲಿಲ್ಲ. ಕಡಿಮೆ ಮಾರಾಟ ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಸೋತಿರುವುದೇ ಫಿಯೆಟ್ ನಿರ್ಗಮನಕ್ಕೆ ಕಾರಣವಾಗಿತ್ತು. ಫಿಯೆಟ್ ಕೆಲವು ವಿಫಲ ಪಾಲುದಾರಿಕೆಗಳು, ಸೇವೆ ಮತ್ತು ವಿಶ್ವಾಸಾರ್ಹತೆ ಸಮಸ್ಯೆಗಳನ್ನು ಹೊಂದಿತ್ತು. ಹಳೆಯ ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಕೂಡ ಮಾರುಕಟ್ಟೆಗೆ ಪೂರಕವಾಗಿರಲಿಲ್ಲ. ಈ ಎಲ್ಲಾ ಅಂಶಗಳು ಕಂಪನಿಯನ್ನು ಭಾರತೀಯ ಮಾರುಕಟ್ಟೆಯನ್ನು ತೊರೆಯುವಂತೆ ಮಾಡಿದವು.