ಬೆಂಗಳೂರು : ಮಾರುತಿ ಸುಜುಕಿಯ ಮೊಟ್ಟ ಮೊದಲ ಮಿಡ್‌ಸೈಜ್ ಎಎಸ್‌ಯುವಿ ಕಾರು ಗ್ರಾಂಡ್ ವಿಟಾರ (Maruti Grand Vitara) ಸೋಮವಾರ ಅಧಿಕೃತವಾಗಿ ಭಾರತೀಯ ಕಾರು ಮಾರುಕಟ್ಟೆ ಪ್ರವೇಶಿಸಿತು. ಕಾರಿನ ಅರಂಭಿಕ ಬೆಲೆ ೧೦.೪೫ ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಇದು ಭಾರತದಲ್ಲಿ ರಸ್ತೆಗಿಳಿಯುತ್ತಿರುವ ಎರಡನೇ ಸ್ಟ್ರಾಂಗ್ ಹೈಬ್ರಿಡ್ ಕಾರು. ಇದಕ್ಕಿಂತ ಮೊದಲು ಟೊಯೋಟಾದ ಅರ್ಬನ್ ಕ್ರೂಸರ್ ಹೈರೈಡರ್ ರಸ್ತೆಗೆ ಎಂಟ್ರಿ ಪಡೆದುಕೊಂಡಿತ್ತು. ಇದರಲ್ಲಿ ಮೈಲ್ಡ್ ಹೈಬ್ರಿಡ್ ಅಥವಾ ಸ್ಮಾರ್ಟ್ ಹೈಬ್ರಿಡ್ ಎಂಬ ಇನ್ನೊಂದು ಆಯ್ಕೆಯೂ ಇದೆ.
ಟೊಯೋಟಾದ ಹೈರೈಡರ್‌ನ ತಂತ್ರಜ್ಞಾನವನ್ನು ಮಾರುತಿ ಕಂಪನಿ ಗ್ರಾಂಡ್ ವಿಟಾರಾ ಕಾರಿಗಾಗಿ ಎರವಲು ಪಡೆದುಕೊಂಡಿದೆ. ಹೀಗಾಗಿ ಎರಡೂ ಕಾರಿನ ಗುಣ, ಲಕ್ಷಣಗಳು ಬಹುತೇಕ ಒಂದೇ ರೀತಿ ಇವೆ. ಆದರೆ, ಮಾರುತಿ ತನ್ನದೇ ಆದ ಕೆಲವೊಂದು ಮಾರ್ಪಾಟುಗಳನ್ನು ಮಾಡಿಕೊಂಡಿದೆ. ಈ ಎರಡೂ ಕಾರುಗಳು ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳಾಗಿರುವ ಜತೆಗೆ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತ ಟಾಟಾ ಹ್ಯಾರಿಯರ್‌ಗೂ ಪೈಪೋಟಿ ಒಡ್ಡಲಿದೆ.
ಯಾವ ಎಂಜಿನ್?
ಸ್ಟ್ರಾಂಗ್ ಹೈಬ್ರಿಡ್ ಹಾಗೂ ಮೈಲ್ಡ್ ಹೈಬ್ರಿಡ್ ಕಾರಿನಲ್ಲಿ ೧.೫ ಲೀಟರ್ ಎಂಜಿನ್ ಇರುತ್ತದೆ. ಸ್ಟ್ರಾಂಗ್ ಹೈಬ್ರಿಡ್ ಕಾರಿನಲ್ಲಿ ಹೆಚ್ಚುವರಿ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಅದರ ಶಕ್ತಿಯನ್ನು ಕೂಡ ಕಾರಿನ ಎಂಜಿನ್ ಬಳಸಿಕೊಳ್ಳಲಿದೆ. ಈ ಮೂಲಕ ಹೆಚ್ಚು ಮೈಲೇಜ್ ನೀಡುತ್ತದೆ. ಸ್ಟ್ರಾಂಗ್ ಹೈಬ್ರಿಡ್ ಕಾರು ೧೧೫ ಬಿಎಚ್‌ಪಿ ಪವರ್ ಹಾಗೂ ೧೪೧ ಎನ್‌ಎಮ್ ಟಾರ್ಕ್ ಬಿಡುಗಡೆ ಮಾಡಿದರೆ, ಮೈಲ್ಡ್ ಹೈಬ್ರಿಡ್ ಎಂಜಿನ್ ೧೦೩ ಎಚ್‌ಪಿ ಪವರ್ ಹಾಗೂ ೧೩೫ ಎನ್‌ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ.
ಮೈಲೇಜ್ ಎಷ್ಟು?
ಕಂಪನಿ ಹೇಳಿರುವ ಪ್ರಕಾರ ಸ್ಟ್ರಾಂಗ್ ಹೈಬ್ರಿಡ್ ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ ೨೮ ಕಿ.ಲೋಮೀಟರ್ ಮೈಲೇಜ್ ಕೊಟ್ಟರೆ, ಮೈಲ್ಡ್ ಹೈಬ್ರಿಡ್ ಕಾರು ೨೦ ಕಿಲೋಮೀಟರ್ ಮೈಲೇಜ್ ಕೊಡುತ್ತದೆ.
ಬೆಲೆ ಎಷ್ಟು?
ಸಿಗ್ಮಾ, ಡೆಲ್ಟಾ, ಝೀಟಾ ಮತ್ರು ಜೀಟಾ ಪ್ಲಸ್, ಆಲ್ಫಾ ಮತ್ತು ಆಲ್ಫಾ ಪ್ಲಸ್ ಎಂಬ ನಾಲ್ಕು ವೇರಿಯೆಂಟ್‌ನಲ್ಲಿ ಕಾರು ಲಭ್ಯವಿದೆ. ಕಾರಿನ ಆರಂಭಿಕ ಬೆಲೆ ೧೦.೪೫ ಲಕ್ಷ ರೂಪಾಯಿಗಳಾದರೆ, ಟಾಪ್ ಎಂಡ್ ಕಾರಿನ ಬೆಲೆ ೧೯.೬೫ ಲಕ್ಷ ರೂಪಾಯಿಯಿದೆ. (ಎಕ್ಸ್‌ಶೋರೂಮ್ ಬೆಲೆ). ಮ್ಯಾನುಯಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸೇರಿದಂತೆ ಒಟ್ಟಾರೆ ೧೫ ಆಯ್ಕೆಗಳನ್ನು ನೀಡಲಾಗಿದೆ.
ಇದನ್ನೂ ಓದಿ | Mahindra SUV | ಟರ್ಬೊಚಾರ್ಚರ್ ಸಮಸ್ಯೆ; ಥಾರ್, ಎಕ್ಸ್‌ಯುವಿ700 ಕಾರುಗಳನ್ನು ವಾಪಸ್ ಪಡೆದ ಕಂಪನಿ