Site icon Vistara News

Tata Nexon EV | ಟಾಟಾದ ನೆಕ್ಸಾನ್​ ಇವಿಯ ಆರಂಭಿಕ ಬೆಲೆ ಇನ್ನಷ್ಟು ಅಗ್ಗ; ಕಿಲೋ ಮೀಟರ್ ರೇಂಜ್​ ಕೂಡ ಏರಿಕೆ

Tata nexon ev

ಮುಂಬಯಿ : ಟಾಟಾ ಮೋಟಾರ್ಸ್​ನ ನೆಕ್ಸಾನ್​ ಇವಿ (Tata Nexon EV) ಭಾರತದಲ್ಲಿ ಸಿಗುತ್ತಿರುವ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಾನಿಕ್​ ಎಸ್​ಯುವಿ. ಇದೀಗ ಆ ಕಾರಿನ ಆರಂಭಿಕ ವೇರಿಯಂಟ್​ನ ಬೆಲೆ ಇನ್ನಷ್ಟು ಕಡಿಮೆಯಾಗಿದ್ದು, 14.49 ಲಕ್ಷ ರೂಪಾಯಿಯಲ್ಲಿ ಆರಂಭಗೊಳ್ಳಲಿದೆ. ಅದೇ ರೀತಿ ಟಾಪ್​ ಎಂಡ್​ ನೆಕ್ಸಾನ್​ ಆಗಿರುವ ಇವಿ ಮ್ಯಾಕ್ಸ್ ಕಾರಿನ ಕಿಲೋ ಮೀಟರ್ ರೇಂಜ್ ಅನ್ನು 453 ಕಿಲೋ ಮೀಟರ್​ಗೆ ಹೆಚ್ಚಿಸಲಾಗಿದೆ. ಇದು ಇವಿ ಕಾರು ಪ್ರಿಯರಿಗೆ ಟಾಟಾ ಮೋಟಾರ್ಸ್ ಕೊಟ್ಟಿರುವ ಶುಭ ಸುದ್ದಿ.

ಜನವರಿ 16ರಂದು ಮಹೀಂದ್ರಾ ಕಂಪನಿಯ ಎಕ್ಸ್​ಯುವಿ 400 ಇವಿ ಕಾರು 15.99 ಲಕ್ಷ ರೂಪಾಯಿ ಎಕ್ಸ್​ಶೋ ರೂಮ್​ ಬೆಲೆಗೆ ಮಾರುಕಟ್ಟೆಗೆ ಇಳಿದಿತ್ತು. ಈ ಕಾರು ನೆಕ್ಸಾನ್​ಗೆ (Tata nexon ev) ಪೈಪೋಟಿ ಒಡ್ಡುವುದು ಖಾತರಿ ಎಂದು ಹೇಳಲಾಗಿತ್ತು. ಇದರ ಬೆನ್ನಲ್ಲೇ ಟಾಟಾ ಮೋಟಾರ್ಸ್​ ತನ್ನ ಆರಂಭಿಕ ವೇರಿಯೆಂಟ್​ ನೆಕ್ಸಾನ್​ ಇವಿಯ ದರವನ್ನು ಪರಿಷ್ಕರಣೆ ಮಾಡಿದೆ.

ಈಗಾಗಲೇ ನೆಕ್ಸಾನ್​ ಇವಿ ಮ್ಯಾಕ್ಸ್ (Tata nexon ev) ಕಾರು ಖರೀದಿ ಮಾಡಿದ ಗ್ರಾಹಕರಿಗೂ ಕಿಲೋ ಮೀಟರ್​ ರೇಂಜ್​ ವಿಸ್ತರಣೆಯ ಅವಕಾಶ ನೀಡಲಾಗಿದೆ. ಫೆಬ್ರವರಿ 15ರ ಬಳಿಕ ಅಧಿಕೃತ ಶೋರೂಮ್​ಗೆ ತೆರಳಿ ಸಾಫ್ಟ್​ವೇರ್ ಅಪ್​ಡೇಟ್​ ಮಾಡಿ ಸೌಲಭ್ಯವನ್ನು ಪಡೆಯಬಹುದಾಗಿದೆ.

ಕಡಿಮೆ ಬೆಲೆ ಹೇಗೆ ಸಾಧ್ಯ?

ನೆಕ್ಸಾನ್​ ಇವಿ ಮ್ಯಾಕ್ಸ್ (Tata nexon ev)​ ಕಾರು ಎಕ್ಸ್​ಝಡ್​ ವೇರಿಯೆಂಟ್​ನಿಂದ ಆರಂಭಗೊಳ್ಳುತ್ತಿತ್ತು. ಇದೀಗ ಮ್ಯಾಕ್ಸ್​ನಲ್ಲಿ ಎಕ್ಸ್ಎಮ್​ ವೇರಿಯೆಂಟ್​ ಕೂಡ ನೀಡಲಾಗುತ್ತಿದೆ. ಹೀಗಾಗಿ ಬೆಲೆಯನ್ನು 50 ಸಾವಿರ ರೂಪಾಯಿಯಷ್ಟು ಇಳಿಕೆ ಮಾಡಲು ಸಾಧ್ಯವಾಗಿದೆ. ಇದೇ ವೇಳೆ ಟಾಪ್​ ಎಂಡ್​ನ ಎಕ್ಸ್​ಜಡ್​ಪ್ಲಸ್​ ಎಲ್​ಯುಎಕ್ಸ್​ನ ಬೆಲೆಯನ್ನೂ ಪರಿಷ್ಕರಣೆ ಮಾಡಲಾಗಿದೆ. ಅದಕ್ಕೀಗ 18.49 ಲಕ್ಷ ರೂಪಾಯಿ ಎಕ್ಸ್​ಶೋರೂಮ್​ ಬೆಲೆ ನಿಗದಿ ಮಾಡಲಾಗಿದೆ.

ಇದನ್ನೂ ಓದಿ | Mahindra SUV | ಟರ್ಬೊಚಾರ್ಚರ್‌ ಸಮಸ್ಯೆ; ಥಾರ್‌, ಎಕ್ಸ್‌ಯುವಿ700 ಕಾರುಗಳನ್ನು ವಾಪಸ್‌ ಪಡೆದ ಕಂಪನಿ

Exit mobile version