Site icon Vistara News

India Cars : ಸುರಕ್ಷಿತವಲ್ಲದ ಭಾರತದ 7 ಕಾರುಗಳ ಪಟ್ಟಿ ಇಲ್ಲಿದೆ; ನಿಮ್ಮ ಕಾರು ಎಷ್ಟು ಸೇಫ್​ ಎಂದು ತಿಳಿದುಕೊಳ್ಳಿ

Here is a list of seven unsafe cars in India; Find out how safe your car is

#image_title

ಬೆಂಗಳೂರು: ಪ್ರಯಾಣಿಕರ ಸುರಕ್ಷತೆ ಎಂಬುದು ಭಾರತೀಯ ಮಾರುಕಟ್ಟೆಯ ಬಹುಚರ್ಚಿತ ವಿಷಯ. ಭಾರತೀಯರು ಕಡಿಮೆ ಬೆಲೆಗೆ ದೊಡ್ಡ ಕಾರಿಗೆ ಬೇಡಿಕೆ ಇಡುವ ಕಾರಣ ಸುರಕ್ಷತೆ ಫೀಚರ್​ಗಳನ್ನು ಅಳವಡಿಸುವುದು ಕಾರು ತಯಾರಿಕಾ ಕಂಪನಿಗಳಿಗೆ ಸವಾಲಿನ ಸಂಗತಿಯಾಗಿದೆ. ಕಾರುಗಳ ಸುರಕ್ಷತಾ ಮಾನದಂಡವನ್ನು ಗ್ಲೋಬಲ್​ ಎನ್​ಕ್ಯಾಪ್​ ರೇಟಿಂಗ್​ ಮೂಲಕ ನಿರ್ಧರಿಸಲಾಗುತ್ತದೆ. ಐದಕ್ಕೆ ಐದು ಅಂಕಗಳನ್ನು ಪಡೆಯುವ ಕಾರುಗಳು ಮಾತ್ರ ಸಂಪೂರ್ಣ ಸೇಫ್​. ಆದರೆ, ಗ್ರಾಹಕರ ಮನಸ್ಥಿತಿಗೆ ತಕ್ಕಂತೆ ಕಡಿಮೆ ಬೆಲೆಗೆ ಆಕರ್ಷಕ ಕಾರುಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತಿವೆ. ಇಂಥ ಕಾರುಗಳು ಅನಿರೀಕ್ಷಿತ ಅವಘಡಗಳ ವೇಳೆ ಒಳಗಿದ್ದ ಪ್ರಯಾಣಿಕರಿಗೆ ಕನಿಷ್ಠ ಸುರಕ್ಷತೆ ನೀಡುತ್ತದೆ. ಪ್ರಾಣ ಹಾನಿ ಹಾಗೂ ನೋವಿನ ಪ್ರಸಂಗ ಹೆಚ್ಚಾಗುತ್ತದೆ. ಅಂಥ ಕೆಲವು ಕಾರುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ನಿಮ್ಮಲ್ಲಿರುವ ಕಾರು ಈ ಪಟ್ಟಿಯಲ್ಲಿದೆಯೇ ಪರೀಕ್ಷಿಸಿ.

1 ಹ್ಯುಂಡೈ ಗ್ರಾಂಡ್​ ಐ10 ನಿಯೋಸ್​ (Hyundai Grand i10 NIOS)

ಹ್ಯುಂಡೈ ಗ್ರಾಂಡ್​ ಐ10 ನಿಯೋಸ್​ ಕಾರು ಗ್ಲೋಬಲ್​ ಎನ್​ಕ್ಯಾಪ್​ ಟೆಸ್ಟ್​ನಲ್ಲಿ ಕೇವಲ 2 ರೇಟಿಂಗ್​ ಮಾತ್ರ ಪಡೆದುಕೊಂಡಿದೆ. ಈ ಕಾರಿನಲ್ಲಿ ಮುಂಬದಿ ಎರಡು ಏರ್​ಬ್ಯಾಗ್​ಗಳು ಮಾತ್ರ ಇವೆ. ಮುಂಬದಿಯ ಸೀಟ್​​ಗೆ ಮಾತ್ರ ಪ್ರೆಟೆನ್ಷರ್ ಅನ್ನು ನೀಡಲಾಗಿದೆ.

2 ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10)

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರು ಮಾರುತಿ ಸುಜುಕಿ ಅಲ್ಟೊ ಕೆ10 ಗ್ಲೋಬಲ್​ ಎನ್​ಕ್ಯಾಪ್​ ಟೆಸ್ಟ್​ಗೆ ಒಳಗಾಗಿದೆ. ಈ ಕಾರಿಗೆ ಕೇವಲ 2 ರೇಟಿಂಗ್ ಸಿಕ್ಕಿದೆ. ಮಕ್ಕಳ ಸುರಕ್ಷತೆ ವಿಚಾರಕ್ಕೆ ಬಂದಾಗ ಈ ಕಾರಿನಲ್ಲಿ ಮಕ್ಕಳಿಗೆ ಯಾವುದೇ ಸುರಕ್ಷತೆ ಇರುವುದಿಲ್ಲ. ಸರಕಾರ ನಿಗದಿ ಮಾಡಿರುವ ಕಡ್ಡಾಯ ಮಾನದಂಡ ಬಿಟ್ಟರೆ ಬೇರೆನೂ ಇಲ್ಲ.

3 ಮಾರುತಿ ಸುಜುಕಿ ಸ್ವಿಪ್ಟ್​ (Maruti Suzuki Swift)

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮಿಡ್​ಸೈಜ್​ ಹ್ಯಾಚ್​ ಬ್ಯಾಕ್​ ಮಾರುತಿ ಸುಜುಕಿ ಸ್ವಿಫ್ಟ್​. ಇತ್ತೀಚೆಗೆ ಈ ಕಾರಿನ ಎನ್​ಕ್ಯಾಪ್​ ಟೆಸ್ಟ್​ ವರದಿಯೂ ಬಂದಿದೆ. ಅದರ ಪ್ರಕಾರ ದೊಡ್ಡವರು ಹಾಗೂ ಮಕ್ಕಳಿಗೆ ಕೇವಲ 1 ರೇಟಿಂಗ್​ ಸುರಕ್ಷತೆಯನ್ನು ನೀಡುತ್ತಿದೆ.

4. ರಿನೋ ಕ್ವಿಡ್ (Renault Kwid)

ಮಾರುತಿ ಸುಜುಕಿಯ ಆಲ್ಟೊ ಕಾರಿಗೆ ಅತಿ ಹೆಚ್ಚು ಪೈಪೋಟಿ ಕೊಟ್ಟ ಕಾರು ರಿನೋ ಕಂಪನಿಯ ಕ್ವಿಡ್. ಎಸ್​​ಯುವಿ ನೋಟ ಹೊಂದಿರುವ ಈ ಸಣ್ಣ ಹ್ಯಾಚ್ ಬ್ಯಾಕ್​ ಕಾರನ್ನು ಭಾರತೀಯರು ಅತಿ ಹೆಚ್ಚು ಮೆಚ್ಚಿದ್ದರು. ಆದರೆ, ಈ ಕಾರು ಕೂಡ ವಯಸ್ಕ ಹಾಗೂ ಮಕ್ಕಳ ಸುರಕ್ಷತೆಯ ವಿಚಾರಕ್ಕೆ ಬಂದಾಗ ಕನಿಷ್ಠ ರೇಟಿಂಗ್ ಹೊಂದಿದೆ. ಗ್ಲೋಬಲ್ ಎನ್​ಕ್ಯಾಪ್​ ಪ್ರಕಾರ ಇದರ ರೇಟಿಂಗ್​ ಕೇವಲ 1.

5. ಮಾರುತಿ ಸುಜುಕಿ ವ್ಯಾಗನ್​ ಆರ್​ (Maruti Suzuki Wagon R)

ವ್ಯಾಗನ್​ ಆಕಾರದಲ್ಲಿರುವ ಮಾರುತಿ ಸುಜುಕಿ ವ್ಯಾಗನ್​ ಆರ್​ ಕಾರಿಗೆ ದೊಡ್ಡ ಅಭಿಮಾನಿ ವರ್ಗವೇ ಇದೆ. ಮಧ್ಯಮ ಗಾತ್ರದ ಈ ಕಾರು ಸ್ಥಳವಕಾಶದ ವಿಚಾರಕ್ಕೆ ಬಂದಾಗ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಆದರೆ, ಈ ಗ್ಲೋಬಲ್​ ಎನ್​ಕ್ಯಾಪ್​ ವಿಚಾರದಲ್ಲಿ ದೊಡ್ಡವರಿಗೆ ಸಿಂಗಲ್​ ಸ್ಟಾರ್ ಸುರಕ್ಷತೆ ಮಾತ್ರ ನೀಡುತ್ತದೆ. ಮಕ್ಕಳ ವಿಚಾರಕ್ಕೆ ಬಂದಾಗ ಸೊನ್ನೆ.

6. ಮಾರುತಿ ಸುಜುಕಿ ಇಗ್ನಿಸ್​ (Maruti Suzuki Ignis)

ಮಾರುತಿ ಸುಜುಕಿ ಕಂಪನಿ ತನ್ನ ನೆಕ್ಸಾ ಮಾರಾಟ ಜಾಲದ ಮೂಲಕ ಗ್ರಾಹಕರಿಗೆ ಒದಗಿಸುತ್ತಿರುವ ಕಾರು ಇಗ್ನಿಸ್​. ಇದನ್ನೂ ಕೂಡ ಇತ್ತೀಚೆಗೆ ಗ್ಲೋಬಲ್​ ಎನ್​ಕ್ಯಾಪ್​ ಕ್ರ್ಯಾಶ್​ ಟೆಸ್ಟ್​​ಗೆ ಒಳಪಡಿಸಲಾಗಿದೆ. ಅದರಲ್ಲಿ ಕೇವಲ ಒಂದು ಸ್ಟಾರ್​ ರೇಟಿಂಗ್​ ಪಡೆದುಕೊಂಡಿದೆ. ಮಕ್ಕಳ ವಿಚಾರಕ್ಕೆ ಬಂದ ಮತ್ತೆ ಶೂನ್ಯ.

7. ಮಾರುತಿ ಸುಜುಕಿ ಎಸ್​ ಪ್ರೆಸೊ (Maruti Suzuki S- Presso)

ಎಸ್​ಯುವಿ ಆಕಾರದಲ್ಲಿರುವ ಎಸ್​ಪ್ರೆಸೊ ಕಾರನ್ನು ಭಾರತದ ಗ್ರಾಹಕರು ಸಿಕ್ಕಾಪಟ್ಟೆ ಮೆಚ್ಚಿದ್ದಾರೆ. ಕಡಿಮೆ ಬೆಲೆಗೆ ಹೆಚ್ಚು ಸ್ಥಳವಾಕಾಶ ಹೊಂದಿರುವ ಈ ಕಾರು ಮಾರುಕಟ್ಟೆಯಲ್ಲಿ ದೊಡ್ಡ ಪಾಲು ಪಡೆಯುತ್ತಿದೆ. ಆದರೆ, ಈ ಕಾರಿನಲ್ಲಿ ದೊಡ್ಡವರ ಸುರಕ್ಷತೆ ಕೇವಲ 1 ರೇಟಿಂಗ್ ಆಗಿದ್ದರೆ, ಮಕ್ಕಳಿಗೆ ಶೂನ್ಯ ಸುರಕ್ಷತೆ ನೀಡುತ್ತದೆ.

ಇದನ್ನೂ ಓದಿ :Skoda Slavia : 5 ಸ್ಟಾರ್​ ರೇಟಿಂಗ್​ ಪಡೆದ ಸ್ಕೋಡಾದ ಸ್ಲಾವಿಯಾ

ಏನಿದು ಕ್ರ್ಯಾಶ್​ ಟೆಸ್ಟ್​​?

ಬ್ರಿಟನ್​ನಲ್ಲಿರುವ ಝೀರೊ ಫೌಂಡೇಷನ್​ ಗ್ಲೋಬಲ್ ಎನ್​ಕ್ಯಾಪ್​ (ಗ್ಲೋಬಲ್ ನ್ಯೂ ಕಾರ್​ ಅಸೆಸ್​ಮೆಂಟ್ ಪ್ರೋಗ್ರಾಮ್​ – GNCAP) ಪರೀಕ್ಷೆ ನಡೆಸುತ್ತಿದೆ. ಇದೊಂದು ಎನ್​ಜಿಒ ಆಗಿದ್ದು ಪ್ರಯಾಣಿಕರಿಗೆ ಹೆಚ್ಚು ಸುರಕ್ಷಿತವಾಗಿರುವ ಕಾರನ್ನು ನೀಡುವಂತೆ ತಯಾರಿಕಾ ಕಂಪನಿಗಳಿಗೆ ಉತ್ತೇಜನ ನೀಡುತ್ತದೆ. ಅಪಘಾತಗೊಂಡಾಗ ಪ್ರಯಾಣಿಕರಿಗೆ ನೀಡಲು ಕಾರುಗಳು ಏನೆಲ್ಲ ಸುರಕ್ಷತಾ ಸಾಧನಗಳನ್ನು ಹೊಂದಿರಬೇಕು ಎಂಬ ಮಾನದಂಡವನ್ನು ಈ ಎನ್​ಜಿಒ ಸಂಶೋಧನೆಗಳ ಮೂಲಕ ನಿಗದಿ ಮಾಡುತ್ತದೆ. ಎಲ್ಲ ದೇಶಗಳಲ್ಲಿ ತಯಾರಾಗುವ ಕಾರುಗಳನ್ನು ತನ್ನ ಮಾನದಂಡಗಳ ಮೂಲಕ ಪರೀಕ್ಷೆಗೆ ಒಳಪಡಿಸುತ್ತದೆ. ಕಾರುಗಳನ್ನು ನಿರ್ದಿಷ್ಟ ವೇಗದಲ್ಲಿ ಗುದ್ದಿಸಿ ಪರೀಕ್ಷೆ ಮಾಡುತ್ತದೆ. ಹಿಂದೆ- ಮುಂದೆ ಹಾಗೂ ಎಡ ಮತ್ತು ಬಲ ಪಾರ್ಶ್ವಗಳಲ್ಲಿ ಎಷ್ಟು ಸುರಕ್ಷತೆ ನೀಡುತ್ತದೆ ಎಂಬುದನ್ನು ಪರೀಕ್ಷೆ ಮಾಡಿ ರೇಟಿಂಗ್ ನೀಡುತ್ತದೆ. ಒಳಗಿರುವ ದೊಡ್ಡವರು ಹಾಗೂ ಮಕ್ಕಳಿಗೆ ಎಷ್ಟು ಸುರಕ್ಷತೆ ಎಂಬುದನ್ನು ಲೆಕ್ಕಾಚಾರ ಹಾಕಿ ಹೇಳುತ್ತದೆ. ಗರಿಷ್ಠ ಐದು ಅಂಕಗಳನ್ನು ನಿಗದಿ ಮಾಡುತ್ತದೆ. ಐದಕ್ಕೆ 5 ಅಂಕಗಳನ್ನು ಪಡೆಯುವ ಕಾರುಗಳನ್ನು ಸುರಕ್ಷಿತ ಎಂದು ಪರಿಗಣಿಸುತ್ತದೆ.

Exit mobile version