ಬೆಂಗಳೂರು: ಕಾರು ಖರೀದಿ ಮಾಡುವಾಗ ಪ್ರತಿಯೊಬ್ಬ ಭಾರತೀಯ ಗ್ರಾಹಕನೂ ಯೋಚನೆ ಮಾಡುವುದು ಮೈಲೇಜ್ (Milage Calculator) ಬಗ್ಗೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರುತ್ತಿರುವ ಸಂದರ್ಭದಲ್ಲಿ ಒಂದು ಲೀಟರ್ಗೆ ಎಷ್ಟು ಮೈಲೇಜ್ ಕೊಡುತ್ತದೆ ಎಂಬುದು ಪಕ್ಕಾ ಲಾಭದ ಲೆಕ್ಕಾಚಾರವಾಗಿರುತ್ತದೆ. ಅದಕ್ಕಾಗಿ ಹೆಚ್ಚು ಮೈಲೇಜ್ ಕೊಡುವ ವಾಹನಗಳು ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತವೆ. ಆದರೆ, ಒಂದು ಕಾರು ಎಲ್ಲರಿಗೂ ಒಂದೇ ರೀತಿಯ ಮೈಲೇಜ್ ಕೊಡುವುದಿಲ್ಲ ಎಂಬುದು ಗಮನಾರ್ಹ ಸಂಗತಿ. ಅವರವರ ಡ್ರೈವಿಂಗ್ ಅಭ್ಯಾಸಕ್ಕೆ ತಕ್ಕಂತೆ ಮೈಲೇಜ್ ಕೂಡ ಸಿಗುತ್ತದೆ. ಹೀಗಾಗಿ ಮೈಲೇಜ್ ಎಂಬುದು ಕೇವಲ ವಾಹನವನ್ನು ಆಧರಿಸಿಲ್ಲ. ಬದಲಾಗಿ ಚಾಲನಾ ಮಾನದಂಡಕ್ಕೆ ಪೂರಕವಾಗಿರುತ್ತದೆ. ಹಾಗಾದರೆ ಕಾರಿನ ಮೈಲೇಜ್ ಹೆಚ್ಚಿಸುವುದು ಹೇಗೆ? ಈ ಲೇಖನದಲ್ಲಿ ಕೆಲವೊಂದು ಸಿಂಪಲ್ ಟ್ರಿಕ್ಸ್ ಹೇಳಲಾಗಿದೆ.
ನಿಧಾನವಾಗಿ ಆಕ್ಸಿಲೇಟರ್ ಒತ್ತಿ
ಕಾರನ್ನು ಓಡಿಸುವಾಗ ಏಕಾಏಕಿ ಆಕ್ಸಿಲೇಟ್ ಒತ್ತುವ ಅಭ್ಯಾಸ ಟ್ಯಾಂಕ್ನಲ್ಲಿ ಹೆಚ್ಚು ಪೆಟ್ರೋಲ್ ಖಾಲಿಯಾಗುವಂತೆ ಮಾಡುತ್ತದೆ. ಅನಗತ್ಯ ಅಥವಾ ಗೇರ್ ಬದಲಿಸಿದ ತಕ್ಷಣ ಒಂದೇ ಸಮ ಆಕ್ಸಿಲೇಟರ್ ಒತ್ತಿದರೆ ಎಂಜಿನ್ ಆರ್ಪಿಎಮ್ ಒಂದೇ ಬಾರಿಗೆ ಏರಿಕೆಯಾಗುತ್ತದೆ. ಈ ವೇಳೆ ಪೆಟ್ರೋಲ್ ಏಕಾಏಕಿ ಸುಟ್ಟು ಹೋಗುತ್ತದೆ. ಹೀಗಾಗಿ ಮೈಲೇಜ್ ಹೆಚ್ಚು ಕೊಡಬೇಕು ಎಂದಾದರೆ ಆಕ್ಸಿಲೇಟರ್ ಅನ್ನು ನಿಧಾನವಾಗಿ ಹಾಗೂ ಸಾವಧಾನದಿಂದ ಒತ್ತಿ.
ಒಂದೇ ವೇಗದಲ್ಲಿ ಓಡಿಸಿ
ಕಾರನ್ನು ಒಂದೇ ವೇಗದಲ್ಲಿ ಓಡಿಸುವುದು ಕೂಡ ಮೈಲೇಜ್ ಹೆಚ್ಚು ತೆಗೆಯುವ ಮತ್ತೊಂದು ಸುಲಭ ತಂತ್ರ. ರಸ್ತೆಯ ಮೇಲಿನ ಟ್ರಾಫಿಕ್ ಹಾಗೂ ರಸ್ತೆಯ ಗುಣಮಟ್ಟಕ್ಕೆ ಪೂರಕವಾಗಿ ಕಾರನ್ನು ಸ್ಥಿರ ವೇಗದಲ್ಲಿ ಓಡಿಸಬೇಕು. ಒಂದೇ ಬಾರಿಗೆ ವೇಗವನ್ನು ಹೆಚ್ಚು ಮಾಡುವುದು ಅಥವಾ ಏಕಾಏಕಿ ಬ್ರೇಕ್ ಹಿಡಿದು ಮತ್ತೆ ಜೋರಾಗಿ ಓಡಿಸುವುದರಿಂದ ಪೆಟ್ರೋಲ್ ಅಥವಾ ಡೀಸೆಲ್ ಬಳಕೆ ಹೆಚ್ಚುತ್ತದೆ. ಗಿಜಿಗುಡುವ ರಸ್ತೆಯಲ್ಲಿ ಇರುವ ಟ್ರಾಫಿಕ್ಗೆ ಅನುಗುಣವಾಗಿ ನಿಮ್ಮ ಕಾರಿನ ವೇಗವನ್ನು ಕಾಪಾಡಿಕೊಳ್ಳಬೇಕು.
ನಿಯಮಿತವಾಗಿ ಸರ್ವಿಸ್ ಮಾಡಿಸಿ
ಸರ್ವಿಸ್ ಮಾಡಿಸಬೇಕಾದ ದಿನಾಂಕ ಅಥವಾ ಗರಿಷ್ಠ ಕಿಲೋ ಮೀಟರ್ಗೆ ತಕ್ಕ ಹಾಗೆ ಕಾರನ್ನು ಸೂಕ್ತ ಕಾಲಕ್ಕೆ ಸರ್ವಿಸ್ ಮಾಡಿಸಬೇಕು. ಭಾರತದಲ್ಲಿ ಸಾಕಷ್ಟು ಕಾರು ಮಾಲೀಕರು, ಯಾವತ್ತಾದರೂ ಮಾಡಿಸಿದರಾಯ್ತು ಎಂಬ ಮನೋಭಾವ ಹೊಂದಿರುತ್ತಾರೆ. ಆದರೆ, ಎಂಜಿನ್ ಆಯಿಲ್, ಫಿಲ್ಟರ್ ಹಾಗೂ ಏರ್ ಫಿಲ್ಟರ್ಗಳನ್ನು ಕಾಲಕಾಲಕ್ಕೆ ಬದಲಾಯಿಸಬೇಕು. ಇವುಗಳನ್ನು ಸರಿಯಾದ ಸಮಯಕ್ಕೆ ಬದಲಾಯಿಸದೇ ಇದ್ದರೆ ಎಂಜಿನ್ನ ದಹನ ಪ್ರಕ್ರಿಯೆಯಲ್ಲಿ ಏರುಪೇರಾಗಿ ಮೈಲೇಜ್ ಕುಸಿಯುತ್ತದೆ.
ಟೈರ್ ಪ್ರೆಶರ್ ಕಾಪಾಡಿಕೊಳ್ಳಬೇಕು
ಕಾರಿನ ಟೈರ್ನ ಗಾಳಿಯ ಬಗ್ಗೆ ಬಹುತೇಕ ಮಾಲೀಕರಿಗೆ ಕಾಳಜಿ ಇರುವುದಿಲ್ಲ. ಆದರೆ, ಟೈರ್ನಲ್ಲಿ ಸರಿಯಾದ ಪ್ರಮಾಣದಲ್ಲ ಗಾಳಿ ಇಲ್ಲದಿದ್ದರೆ ಮೈಲೇಜ್ ಖಂಡಿತವಾಗಿಯೂ ಸಿಗುವುದಿಲ್ಲ. ನಿಮ್ಮ ಕಾರಿನ ಟೈರ್ನಲ್ಲಿ ಲೆಕ್ಕಕ್ಕಿಂತ ಕಡಿಮೆ ಗಾಳಿಯದ್ದರೆ ಅದರು ರಸ್ತೆಗೆ ಹೆಚ್ಚು ಅಂಟಿಕೊಂಡಿರುತ್ತದೆ. ಇಂಥ ವೇಳೆ ವಾಹನ ಮುಂದಕ್ಕೆ ಸಾಗಲು ಎಂಜಿನ್ ಹೆಚ್ಚು ಶಕ್ತಿಯನ್ನು ಉತ್ಪಾದಿಸಬೇಕಾಗುತ್ತದೆ. ಈ ವೇಳೆ ಸಹಜವಾಗಿ ಮೈಲೇಜ್ ಕಡಿಮೆಯಾಗುತ್ತದೆ. ಇದರ ಜತೆಗೆ ಕಾರಿನ ವೀಲ್ ಅಲೈನ್ಮೆಂಟ್ ಹಾಗೂ ಬ್ಯಾಲೆನ್ಸ್ ಕೂಡ ಕಾಪಾಡಿಕೊಳ್ಳಬೇಕಾಗುತ್ತದೆ.
ಇದನ್ನೂ ಓದಿ : ಹೊಸ ಕಾರಿಗೆ ಆಲ್ಟ್ರೇಷನ್ ಮಾಡಿಸಬೇಡಿ ಎಚ್ಚರ; ಅನಾಹುತವಾದರೆ ನೀವೇ ಹೊಣೆ
ಉತ್ತಮ ಗುಣಮಟ್ಟದ ಇಂಧನ ಬಳಸಬೇಕು
ನಿಮ್ಮ ಕಾರಿಗೆ ಪೆಟ್ರೊಲ್ ಅಥವಾ ಡೀಸೆಲ್ ಹಾಕುವಾಗ ಅದರ ಗುಣಮಟ್ಟವನ್ನು ಪರೀಕ್ಷಿಸಿ. ಕಲಬೆರಕೆಯ ಇಂಧನದಿಂದ ನಿಮ್ಮ ಕಾರಿನ ಎಂಜಿನ್ ಆರೋಗ್ಯ ಕೆಟ್ಟು ಹೋಗುತ್ತದೆ. ಈ ಕಾರಣಕ್ಕೂ ಕಡಿಮೆ ಮೈಲೇಜ್ ಸಿಗುವ ಸಾಧ್ಯತೆಗಳಿವೆ. ಹೀಗಾಗಿ ಉತ್ತಮ ಕಂಪನಿಗಳ ಪೆಟ್ರೋಲ್ ಅಥವಾ ಡೀಸೆಲ್ ಮಾತ್ರ ಬಳಸಿ.