ಬೆಂಗಳೂರು: ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಏಪ್ರಿಲ್ 24ರಂದು 50ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದಾರೆ. ಈ ವೇಳೆ ಅವರ ಕ್ರಿಕೆಟ್ ಸಾಧನೆಗಳ ಬಗ್ಗೆ ಮೆಲುಕು ಹಾಕಲಾಗುತ್ತಿದೆ. ಸಾಮಾನ್ಯ ಕುಟುಂಬದ ಕುಡಿಯಾಗಿ ಜನಿಸಿದ ಅವರು ಕ್ರಿಕೆಟ್ ಸಾಧನೆಗಳ ಮೂಲಕ ಸಾಮ್ರಾಜ್ಯ ಕಟ್ಟಿಕೊಂಡವರು ಸಚಿನ್. ತೆಂಡೂಲ್ಕರ್ ಅವರಿಗೆ ಕ್ರಿಕೆಟ್ ಬಗ್ಗೆ ಎಷ್ಟು ಪ್ರೀತಿ ಇತ್ತೊ, ಕಾರುಗಳ ಮೇಲೆಯೂ ಅಷ್ಟೇ ಆಕರ್ಷಣೆಯಿದೆ. ಅವರ ಗ್ಯಾರೇಜ್ನಲ್ಲಿ ಔಡಿ, ಫೆರಾರಿ, ವೋಲ್ವೊ ಹಾಗೂ ಹಲವು ಬಿಎಂಡಬ್ಲ್ಯು ಕಾರುಗಳಿವೆ. ಅವರ ಜನುಮ ದಿನದಂದು ಅವರು ಹೊಂದಿರುವ ಕಾರುಗಳ ಬಗ್ಗೆಯೂ ಒಂದು ನೋಟ ಹರಿಸೋಣ.
ಮಾರುತಿ 800
ಸಚಿನ್ ತೆಂಡೂಲ್ಕರ್ ಅವರ ಮೊದಲ ಕಾರು ಮಾರುತಿ 800. 80ರ ದಶಕದಲ್ಲಿ ಅವರು ಅದನ್ನು ಕಷ್ಟಪಟ್ಟು ಹಾಗೂ ಇಷ್ಟಪಟ್ಟು ತೆಗೆದುಕೊಂಡಿದ್ದರು. ಸಂದರ್ಶನವೊಂದರಲ್ಲಿ ಅವರು, ”ಮಾರುತಿ 800 ತಮ್ಮ ಕನಸಿನ ಕಾರು,” ಎಂದು ಹೇಳಿದ್ದರು. ಅದು ಅವರ ಕಾರು. ನಂತರದಲ್ಲಿ ಎಸ್ಟೀಮ್ 1000 ಕೂಡ ಖರೀದಿ ಮಾಡಿದ್ದರು.
ಫೆರಾರಿ 360 ಮೊಡೆನಾ
2002ರಲ್ಲಿ ಫಾರ್ಮುಲಾ ಒನ್ ಚಾಂಪಿಯನ್ ಮೈಕೆಲ್ ಶೂಮೇಕರ್ ಫೆರಾರಿ 360 ಮೊಡೆನಾ ಕಾರನ್ನು ಸಚಿನ್ ತೆಂಡೂಲ್ಕರ್ ಅವರಿಗೆ ಉಡುಗೊರೆಯಾಗಿ ಕೊಟ್ಟಿದ್ದರು. 2011ರಲ್ಲಿ ಸಚಿನ್ ಅವರು ಅದನ್ನು ಮಾರಾಟ ಮಾಡಿದ್ದರು. ಈ ಕಾರು ಬಳಿಕ ಫೆರಾರಿ ಕಿ ಸವಾರಿ ಎಂಬ ಸಿನಿಮಾದಲ್ಲಿ ಬಳಕೆಯಾಯಿತು. ಈ ಕಾರು 3.6 ಲೀಟರ್ನ ವಿ8 ಎಂಜಿನ್ ಹೊಂದಿದೆ. ಇದು 400 ಬಿಎಚ್ಪಿ ಪವರ್ ಹಾಗೂ 373 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ.
ವೋಲ್ವೊ ಎಸ್80
ಏಕದಿನ ಕ್ರಿಕೆಟ್ನಲ್ಲಿ ಪಂದ್ಯವೊಂದರಲ್ಲಿ 200 (ದ್ವಿಶತಕ) ಬಾರಿಸಿದ್ದಕ್ಕಾಗಿ ಸಚಿನ್ ತೆಂಡೂಲ್ಕರ್ಗೆ ವೋಲ್ವೊ ಎಸ್80 ಕಾರು ಬಹುಮಾನ ರೂಪದಲ್ಲಿ ಸಚಿನ್ಗೆ ಸಿಕ್ಕಿತ್ತು. ಈ ಕಾರು ಟ್ವಿನ್ ಟರ್ಬೊ 5 ಸಿಲಿಂಡರ್ ಎಂಜಿನ್ ಹೊಂದಿದೆ. ಇದು 205 ಬಿಎಚ್ಪಿ ಪವರ್ ಹಾಗೂ 420 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ.
ಫಿಯೆಟ್ ಫಾಲಿಯೊ
ಫಿಯೆಟ್ ಕಂಪನಿ ಭಾರತದಲ್ಲಿ ಫಾಲಿಯೊ ಕಾರನ್ನು ಬಿಡುಗಡೆ ಮಾಡಿದ ತಕ್ಷಣವೇ ಸಚಿನ್ ತೆಂಡೂಲ್ಕರ್ ಅವರಿಗೆ ಉಡುಗೊರೆಯಾಗಿ ಒಂದು ಕಾರನ್ನು ನೀಡಿತ್ತು. ಈ ಕಾರು 1.6 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 100 ಬಿಎಚ್ಪಿ ಪವರ್ ಹಾಗೂ 145 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. 2000ನೇ ಇಸವಿಯಲ್ಲಿ ಅದು ಪವರ್ಫುಲ್ ಕಾರು ಹಾಗೂ 5 ಲಕ್ಷ ರೂಪಾಯಿಗೆ ಸಿಗುತ್ತಿತ್ತು.
ಇದನ್ನೂ ಓದಿ : Maruti Suzuki : ಮಾರುತಿ ಸುಜುಕಿಯ ಕಾಂಪಾಕ್ಟ್ ಎಸ್ಯುವಿ ಫ್ರಾಂಕ್ಸ್ ಬಿಡುಗಡೆ; ಬೆಲೆ ಎಷ್ಟು?
ಔಡಿ ಕ್ಯೂ7
ಭಾರತದ ಸೆಲೆಬ್ರಿಟಿಗಳ ನೆಚ್ಚಿನ ಕಾರು ಔಡಿ ಕ್ಯೂ7. ಅಂತೆಯೇ ಸಚಿನ್ ಬಳಿಯೂ ಈ ಕಾರಿದೆ. ಇದರಲ್ಲಿ 4.2 ಲೀಟರ್ ಡೀಸೆಲ ಎಂಜಿನ್ ಇದೆ. ಇದು 335 ಬಿಎಚ್ಪಿ ಪವರ್ ಹಾಗೂ 800 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ.
ಬಿಎಮ್ಡಬ್ಲ್ಯು ಕಾರುಗಳು
ಸಚಿನ್ ತೆಂಡೂಲ್ಕರ್ ಅವರು ಭಾರತದಲ್ಲಿ ಬಿಎಮ್ಡಬ್ಲ್ಯು ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಹೀಗಾಗಿ ಅವರ ಬಳಿಕ ಬಿಎಂಡಬ್ಲಯು ಕಂಪನಿಯ ಹಲವಾರು ಕಾರುಗಳಿವೆ. 1.9 ಕೋಟಿ ರೂಪಾಯಿ ಬೆಲೆಯ ಬಿಎಮ್ಡಬ್ಲ್ಯು 7 ಸೀರಿಸ್ 750 LI M Sports ಕಾರಿದೆ. ಇದು 4.4 ಲೀಟರ್ ಎಂಜಿನ್ ಹೊಂದಿದೆ. 30ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕಂಪನಿ ತಯಾರಿಸಿದ 300 ವಿಶೇಷ ಕಾರುಗಳಲ್ಲೊಂದು ಸಚಿನ್ ಬಳಿಯಿದೆ. ಇದು ಕೂಡ 4.4 ಲೀಟರ್ ಸಾಮರ್ಥ್ಯದ ಎಂಜಿನ್ ಹೊಂದಿದೆ. ಬಿಎಮ್ಡಬ್ಲ್ಯು ಇ60 ಎಮ್5 ಕಾರು ಕೂಡ ಸಚಿನ್ ಬಳಿ ಇದೆ. ಬಿಎಮ್ಡಬ್ಲ್ಯು ಎಮ್6 ಗ್ರಾನ್ ಕೊಪ್ ಭಾರತದಲ್ಲಿ ಬಿಡುಗಡೆಗೊಂಡಾಗ ಮೊದಲ ಡೆಲಿವರಿ ಪಡೆದದ್ದು ಸಚಿನ್ ತೆಂಡೂಲ್ಕರ್. ಇದರಲ್ಲಿ 4.4 ಲೀಟರ್ನ ವಿ8 ಎಂಜಿನ್ ಇದ್ದು, 560 ಬಿಎಚ್ಪಿ ಪವರ್ ಹಾಗೂ 680 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. 2.54 ಕೋಟಿ ರೂಪಾಯಿ ಬೆಲೆಯ ಬಿಎಮ್ಡಬ್ಲ್ಯು ಐ8 ಹಾಗೂ ಬಿಎಮ್ಡಬ್ಲ್ಯು ಎಕ್ಸ್5ಎಮ್ ಕಾರು ಕೂಡ ಸಚಿನ್ ಅವರಲ್ಲಿದೆ. ಇದು ಕೂಡ 4.4 ಲೀಟರ್ನ ಎಂಜಿನ್ ಹೊಂದಿದ್ದು, 2018ರಲ್ಲಿ 21 ಲಕ್ಷ ರೂಪಾಯಿಗೆ ಬಿಡುಗಡೆಗೊಂಡಿತ್ತು.
ನಿಸ್ಸಾನ್ ಆರ್35 ಜಿಟಿ-ಆರ್
ಇದು ಸಚಿನ್ ಬಳಿ ಇರುವ ಇನ್ನೊಂದು ಸ್ಪೋರ್ಟ್ಸ್ ಕಾರು. ಈ ಕಾರಿನಲ್ಲಿ ಟ್ವಿನ್ ಟರ್ಬೊ ವಿ6 3.8 ಲೀಟರ್ನ ಎಂಜಿನ್ ಇದೆ. ಇದು 562 ಬಿಎಚ್ಪಿ ಪವರ್ ಹಾಗೂ 637 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. 2016ರಲ್ಲಿ ಈ ಕಾರು ಭಾರಕ್ಕೆ ಪ್ರವೇಶ ಮಾಡಿತ್ತು. ಆಗ ಅದರ ಬೆಲೆ 1.99 ಕೋಟಿ ರೂಪಾಯಿಗಳಿತ್ತು.