ಬೆಂಗಳೂರು: ಭಾರತದಲ್ಲಿ ಕಾರುಗಳ ಮಾರುಕಟ್ಟೆಗೆ ದಿನದಿಂದ ದಿನಕ್ಕೆ ವಿಸ್ತರಿಸುತ್ತಲೇ ಹೋಗುತ್ತಿದೆ. ಹೊಸ ತಾಂತ್ರಿಕತೆ ಹಾಗೂ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಇಳಿಯುತ್ತಿರುವ ಕಾರುಗಳು ಕಾರು ಪ್ರೇಮಿಗಳನ್ನು ತನ್ನತ್ತ ಸೆಳೆಯುತ್ತಿವೆ. ಜತೆಗೆ ಜನರ ಆದ್ಯತೆಯೂ ಬದಲಾಗಿರುವ ಕಾರಣ ಮನೆಯಲ್ಲೊಂದು ಕಾರು ಇರಬೇಕು ಎಂದ ಜನ ಬಯಸುತ್ತಿದ್ದಾರೆ. ಹೀಗಾಗಿ ಕಾರುಗಳ ಮಾರಾಟ ಏರುಗತಿಯಲ್ಲಿ ಸಾಗುತ್ತಿದೆ. ಹಾಗಾದರೆ, 2023ರ ವರ್ಷಾರಂಭದಲ್ಲಿ ಮಾರಾಟವಾದ 10 ಕಾರು ಬ್ರಾಂಡ್ಗಳು (Top 10 cars sold in January) ಯಾವುದೆಲ್ಲ ಎಂಬುದನ್ನು ಗಮನಿಸೋಣ.
ಮಾರುತಿ ಅಲ್ಟೊ
ಮಾರುತಿ ಸುಜುಕಿ ಕಂಪನಿಯ ಸಣ್ಣ ಹ್ಯಾಚ್ ಬ್ಯಾಕ್ ಆಲ್ಟೋ ಮತ್ತೆ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ. ಜನವರಿಯಲ್ಲಿ ಒಟ್ಟು 21, 411 ಆಲ್ಟೊ ಕಾರುಗಳು ಮಾರಾಟವಾಗಿದ್ದು ಕಳೆದ ವರ್ಷದ ಜನವರಿಗೆ ಹೋಲಿಕೆ ಮಾಡಿದರೆ ಶೇಕಡಾ 70ರಷ್ಟು ಏರಿಕೆಯಾಗಿದೆ. ಕಳೆದ ವರ್ಷ 12,342 ಕಾರುಗಳು ಮಾರಾಟವಾಗಿದ್ದವು. ಹಲವಾರು ಹೊಸ ಫೀಚ್ರ್ಗಳೊಂದಿಗೆ ಮಾರುಕಟ್ಟೆಗೆ ಇಳಿದಿರುವ ಹೊಸ ಪೀಳಿಗೆಯ ಆಲ್ಟೊ ಕಾರಿನ ಆರಂಭಿಕ ಬೆಲೆ 3.99 ಲಕ್ಷ ರೂಪಾಯಿ.
ಮಾರುತಿ ವ್ಯಾಗನ್ಆರ್
2023ರ ಜನವರಿಯಲ್ಲಿ 20,466 ವ್ಯಾಗನ್ಆರ್ ಕಾರುಗಳು ಮಾರಾಟವಾಗಿವೆ ಎಂದು ಕಂಪನಿಯ ಹೇಳಿದೆ. ಕಳೆದ ವರ್ಷ ಇದೇ ತಿಂಗಳು 20,334 ಕಾರುಗಳು ಮಾರಾಟವಾಗಿದ್ದವು. 2022ರ ಡಿಸೆಂಬರ್ನಲ್ಲೂ ಮಾರುತಿ ಸುಜುಕಿಯ ಒಟ್ಟು ಕಾರುಗಳ ಮಾರಾಟದಲ್ಲಿ ವ್ಯಾಗನ್ಆರ್ ಅರ್ಧದಷ್ಟು ಪಾಲು ಪಡೆದುಕೊಂಡಿತ್ತು. ಜನವರಿಯಲ್ಲಿ ಒಟ್ಟು ಮಾರಟದ ಪೈಕಿ ಎರಡನೇ ಸ್ಥಾನ.
ಮಾರುತಿ ಸ್ವಿಫ್ಟ್
ಮಾರುತಿ ಸ್ವಿಫ್ಟ್ ಹ್ಯಾಚ್ಬ್ಯಾಕ್ ಸೆಗ್ಮೆಂಟ್ನಲ್ಲಿ ತನ್ನ ಪಾರಮ್ಯ ಮುಂದುವರಿಸಿದೆ. ಆದರೆ, ಜನವರಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟು ಮಾರಾಟದ ಸಂಖ್ಯೆ ಇಳಿಕೆಯಾಗಿದೆ. 2023ರ ಜನವರಿಯಲ್ಲಿ 16, 440 ಕಾರುಗಳು ಮಾರಾಟವಾಗಿದ್ದರೆ, ಕಳೆದ ವರ್ಷ 19, 108 ಕಾರುಗಳು ಮಾರಾಟವಾಗಿದ್ದವು. ಆದರೆ, 2022ರ ಡಿಸೆಂಬರ್ನಲ್ಲಿ ಮಾರಾಟವಾಗಿರುವ 12, 061 ಕಾರುಗಳ ಸಂಖ್ಯೆಗೆ ಹೋಲಿಕೆ ಮಾಡಿದರೆ ಮಾರಾಟದಲ್ಲಿ ಪ್ರಗತಿ ಕಂಡಿದೆ.
ಮಾರುತಿ ಬಲೆನೊ
ಪ್ರೀಮಿಯಮ್ ಹ್ಯಾಚ್ಬ್ಯಾಕ್ ಕಾರುಗಳ ಪೈಕಿ ಭಾರತೀಯರು ಅತಿ ಹೆಚ್ಚು ಇಷ್ಟ ಪಡುವುದು ಬಲೆನೊವನ್ನು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಜನವರಿಯಲ್ಲಿ ಒಟ್ಟು 16,357 ಕಾರುಗಳು ಮಾರಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 6, 791 ಬಲೆನೊ ಕಾರು ರಸ್ತೆಗಿಳಿದಿರುವುದನ್ನು ಹೋಲಿಸಿದರೆ ಈ ಬಾರಿ ದೊಡ್ಡ ಅಂತರದ ಪ್ರಗತಿ ಕಂಡಿದೆ ಹಾಗೂ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
ಟಾಟಾ ನೆಕ್ಸಾನ್
ಎಸ್ಯುವಿ ಸೆಗ್ಮೆಂಟ್ನಲ್ಲಿ ತಾನೇ ರಾಜ ಎಂಬುದನ್ನು ಟಾಟಾದ ನೆಕ್ಸಾನ್ ಮತ್ತೊಮ್ಮೆ ದೃಢೀಕರಿಸಿದೆ. ಐಸಿವಿ ಹಾಗೂ ಇವಿ ಸೇರಿ ಒಟ್ಟು 15, 567 ನೆಕ್ಸಾನ್ ಕಾರುಗಳನ್ನು ಟಾಟಾ ಮೋಟಾರ್ಸ್ ಜನವರಿ 2023ರಲ್ಲಿ ಮಾರಾಟ ಮಾಡಿದೆ. ಕಳೆದ ವರ್ಷ ಈ ಅವಧಿಯಲ್ಲಿ 13, 816 ನೆಕ್ಸಾನ್ ರಸ್ತೆಗಳಿದಿದ್ದವು. ಈ ಜನವರಿಯಲ್ಲಿ ಗರಿಷ್ಠ ಮಾರಾಟದ ಪೈಕಿ ಐದನೇ ಸ್ಥಾನ ಪಡೆದುಕೊಂಡಿದೆ.
ಹ್ಯುಂಡೈ ಕ್ರೆಟಾ
ದೀರ್ಘ ಕಾಲದ ವೇಟಿಂಗ್ ಪಿರಿಯೆಡ್ ಇರುವ ಹೊರತಾಗಿಯೂ ಕ್ರೆಟಾ ಕಾರು ಕಾಂಪಾಕ್ಟ್ ಎಸ್ಯುವಿ ಮಾದರಿಯಲ್ಲಿನ ಜನಪ್ರಿಯತೆಯನ್ನು ಕಾಪಾಡಿಕೊಂಡಿದೆ. ಜನವರಿ 2023ರಲ್ಲಿ ಒಟ್ಟು 15,03 ಕಾರುಗಳು ಮಾರಾಟವಾಗಿವೆ. ಕಳೆದ ವರ್ಷ 9, 869 ಕಾರುಗಳು ಮಾರಾಟವಾಗಿರುವ ಲೆಕ್ಕಾಚಾರವನ್ನು ನೋಡಿದರೆ ಇದು ದೊಡ್ಡ ಜಿಗಿತ. ಡಿಸೆಂಬರ್ನಲ್ಲಿ ಒಟ್ಟು 12, 53 ಕಾರುಗಳನ್ನು ಮಾರುವ ಮೂಲಕ ಹ್ಯುಂಡೈ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತ್ತು. ಇದೀಗ ಜನವರಿಯಲ್ಲಿ ಟಾಪ್ 10 ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದುಕೊಂಡಿದೆ.
ಮಾರುತಿ ಬ್ರೆಜಾ
ಹೊಸ ಪೀಳಿಗೆಯ ಬ್ರೆಜಾ ಕಳೆದ ವರ್ಷ ಬಿಡುಗಡೆಯಾಗಿರುವ ಹೊರತಾಗಿಯೂ ಈ ಸೆಗ್ಮೆಂಟ್ನ ಲೀಡರ್ ಎನಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಜನವರಿಯಲ್ಲಿ 14,359 ಕಾರುಗಳು ಮಾರಾಟವಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 11,200 ರಸ್ತೆಗೆ ಇಳಿದಿದ್ದವು.
ಟಾಟಾ ಪಂಚ್
ಮಿನಿ ಎಸ್ಯುವಿ ಪಂಚ್, ಟಾಟಾ ಮೋಟಾರ್ಸ್ ಪಾಲಿನ ಗರಿಷ್ಠ ಮಾರಾಟವಾಗುವ ಎರಡನೇ ಕಾರು ಎನಿಸಿಕೊಂಡಿದೆ. 2023ರ ಜನವರಿಯಲ್ಲಿ 12,006 ಕಾರುಗಳು ಮಾರಾಟವಾಗಿದ್ದು, ಇದೇ ಅವಧಿಯಲ್ಲಿ ಕಳೆದ ವರ್ಷ 10,027 ಕಾರುಗಳು ಸೇಲ್ ಅಗಿದ್ದವು. 2022ರ ಡಿಸೆಂಬರ್ನಲ್ಲಿ 10,586 ಕಾರುಗಳು ಮಾರಾಟವಾಗಿದ್ದವು.
ಮಾರುತಿ ಇಕೊ
ಇಕೊ ತನ್ನ ಮಾರಾಟದಲ್ಲಿ ಹೆಚ್ಚಿನ ಬದಲಾವಣೆ ಕಂಡಿಲ್ಲ. ಆದಾಗ್ಯೂ ಟಾಪ್ 10 ಪಟ್ಟಿಯಲ್ಲಿ 9 ಸ್ಥಾನ ಪಡೆದುಕೊಂಡಿದೆ. 2023ರ ಜನವರಿಯಲ್ಲಿ 11, 709 ಕಾರುಗಳು ಸೇಲ್ ಆಗಿದ್ದರೆ, ಕಳೆದ ವರ್ಷದ ಜನವರಿಯಲ್ಲಿ 10,528 ಇಕೊ ಮಾರಾಟವಾಗಿದ್ದವು. 2022ರ ಡಿಸೆಂಬರ್ನಲ್ಲಿ 10,581 ಕಾರುಗಳು ರೋಡಿಗಿಳಿದಿದ್ದವು.
ಇದನ್ನೂ ಓದಿ : Crash Testing : ಕಾರುಗಳ ಸುರಕ್ಷತಾ ಟೆಸ್ಟ್ನ ಮೇಲಿನ ಸುಂಕ ಇಳಿಕೆ, ಭಾರತವನ್ನು ಕ್ರ್ಯಾಶ್ ಟೆಸ್ಟಿಂಗ್ ತಾಣವನ್ನಾಗಿಸುವ ಗುರಿ
ಮಾರುತಿ ಡಿಸೈರ್
ಟಾಪ್ 10 ಪಟ್ಟಿಯ ಕೊನೇ ಕಾರು ಮಾರುತಿ ಡಿಸೈರ್. ಸೆಡಾನ್ ಸೆಗ್ಮೆಂಟ್ನ ಲೀಡರ್ ಡಿಸೈರ್. ಒಟ್ಟು 11,317 ಕಾರುಗಳು 2023ರ ಜನವರಿಯಲ್ಲಿ ಮಾರಾಟವಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮಾರಾಟದಲ್ಲಿ ಕುಸಿತ ಕಂಡಿದೆ. 2022ರ ಜನವರಿಯಲ್ಲಿ 14,967 ಕಾರುಗಳು ಸೇಲ್ ಆಗಿದ್ದವು. ಡಿಸೆಂಬ್ನ 11, 997 ಕಾರುಗಳಿಗೆ ಹೋಲಿಗೆ ಮಾಡಿದರೂ ಒಟ್ಟು ಮಾರಾಟದಲ್ಲಿ ಇಳಿಕೆಯಾಗಿದೆ.