ನವ ದೆಹಲಿ: ಹೀರೋ ಮೋಟೊಕಾರ್ಪ್ ಅಧಿಕೃತವಾಗಿ ಭಾರತದಲ್ಲಿ ಪ್ಯಾಷನ್ ಪ್ಲಸ್ ಬೈಕ್ ಮರು ಬಿಡುಗಡೆ ಮಾಡಿದೆ. ಇದು ಈಗ 100 ಸಿಸಿ ವಿಭಾಗದಲ್ಲಿ ಹೀರೊ ಕಂಪನಿಯ ಐದನೇ ಬೈಕ್. ಮೂರು ವರ್ಷಗಳ ಹಿಂದೆ ಪ್ಯಾಶನ್ ಪ್ಲಸ್ ಬೈಕ್ ಮಾರಾಟವನ್ನು ಕಂಪನಿ ನಿಲ್ಲಿಸಿತ್ತು. ಇದೀಗ 100 ಸಿಸಿಯ ಬೈಕ್ಗಳಿಗೆ ಬೇಡಿಕೆ ಹೆಚ್ಚಾಗಿರುವ ಬೆನ್ನಲ್ಲೇ ಮರುಬಿಡುಗಡೆಗೊಂಡಿದೆ.
ಹೊಸ ಪ್ಯಾಷನ್ ಪ್ಲಸ್ ಈ ಹಿಂದೆ ಮಾರಾಟವಾದ ಮಾದರಿಯಿಂದ ಹೆಚ್ಚಿನ ವಿನ್ಯಾಸ ಅಂಶಗಳನ್ನು ಉಳಿಸಿಕೊಂಡಿದ್ದರೂ, ಈಗ ಕಾಸ್ಮೆಟಿಕ್ ಬದಲಾವಣೆ ಮಾಡಲಾಗಿದೆ. ಪ್ರಮುಖವಾಗಿ ಮುಂಬದಿಯ ನೋಟವನ್ನು ಹೆಚ್ಚಿಸಲಾಗಿದೆ. 2023ರ ಬೈಕ್ನಲ್ಲಿ ಪರಿಷ್ಕೃತ ಹೆಡ್ ಲೈಟ್ ಕೌಲ್, ಟೈಲ್ ಲ್ಯಾಂಪ್ ಮತ್ತು ಗ್ರಾಬ್ ರೈಲ್ ನೀಡಲಾಗಿದೆ. ನಿಲುವು, ಸರಳ ವಿನ್ಯಾಸ ಮತ್ತು ರಚನೆ ಸೇರಿದಂತೆ ಉಳಿದ ಬಾಡಿವರ್ಕ್ ಅನ್ನು ಮುಂದುವರಿಸಲಾಗಿದೆ.
ಹೀರೋ ಪ್ಯಾಷನ್ ಪ್ಲಸ್ ಬೈಕಿನಲ್ಲಿ 97.2 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದ್ದು, 7.9 ಬಿಎಚ್ಪಿ ಮತ್ತು 8.05 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ . ಇದು ಒಬಿಡಿ2 (ಆನ್ಬೋರ್ಡ್ ಡಯಾಗ್ನೋಸ್ಟಿಕ್ಸ್) ವ್ಯವಸ್ಥೆಯನ್ನು ಪಡೆದುಕೊಂಡಿದೆ. ನಾಲ್ಕು-ಸ್ಪೀಡ್ ಗೇರ್ ಬಾಕ್ಸ್ಗೆ ಈ ಎಂಜಿನ್ ಅನ್ನು ಲಿಂಕ್ ಮಾಡಲಾಗಿದೆ. ಪ್ಯಾಷನ್ ಪ್ಲಸ್ ಬೈಕಿನಲ್ಲಿ ಸಾಂಪ್ರದಾಯಿಕ ಹೆಡ್ಲೈಟ್ ನೀಡಲಾಗಿದೆ. ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್ಬಿ ಚಾರ್ಜಿಂಗ್ ಪೋರ್ಟ್, ಸೈಡ್-ಸ್ಟ್ಯಾಂಡ್ ಕಟ್-ಆಫ್ ಮತ್ತು ಹೀರೋನ ಐ3ಎಸ್ ಟೆಕ್ನಾಲಜಿಯನ್ನು ಇದು ಹೊಂದಿದೆ.
ಹೀರೋ ಮೋಟೊಕಾರ್ಪ್ ಹಾರ್ಡ್ ವೇರ್ ಅನ್ನು ಬದಲಾಯಿಸಿಲ್ಲ. ಹೀಗಾಗಿ ಪ್ಯಾಷನ್ ಪ್ಲಸ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಗಳು ಮತ್ತು ಡ್ಯುಯಲ್ ರಿಯರ್ ಶಾಕ್ ಅಬ್ಸಾರ್ಬರ್ಗಳನ್ನು ನೀಡಲಾಗಿದೆ. ಮುಂಭಾಗ ಮತ್ತು ಹಿಂಭಾಗದ ಡ್ರಮ್ ಬ್ರೇಕ್ ಹೊಂದಿದೆ. ಅಲಾಯ್ ವೀಲ್ ಹಾಗೂ ಚಕ್ರಗಳನ್ನು ಹಿಂದಿನ ಆವೃತ್ತಿಯದ್ದೇ ಮುಂದುವರಿಸಲಾಗಿದೆ.
ಇದನ್ನೂ ಓದಿ: Honda Dio: ಸ್ಮಾರ್ಟ್ ಆಗಿ ಬಿಡುಗಡೆಗೊಂಡ 2023ರ ಹೋಂಡಾ ಡಿಯೋ
ಹೀರೋ ಪ್ಯಾಷನ್ ಪ್ಲಸ್ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂನಂತೆ 76,301 ರೂಪಾಯಿಗಳು. ಸ್ಪೋರ್ಟ್ಸ್ ರೆಡ್, ಬ್ಲ್ಯಾಕ್ ನೆಕ್ಸಸ್ ಬ್ಲೂ ಮತ್ತು ಬ್ಲ್ಯಾಕ್ ಹೆವಿ ಗ್ರೇ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ.
ಮರು ಬಿಡುಗಡೆ ಕುರಿತು ಹೀರೋ ಮೋಟೋಕಾರ್ಪ್ ಸಂಸ್ಥೆಯ ಮುಖ್ಯ ಅಭಿವೃದ್ಧಿ ಅಧಿಕಾರಿ (CGO) ರಂಜಿವ್ಜಿತ್ ಸಿಂಗ್ ಅವರು ಮಾತನಾಡಿ, ಮೋಟಾರ್‌ಸೈಕಲ್ ವಿಭಾಗದಲ್ಲಿ ಸ್ಟೈಲ್, ವಿಶ್ವಾಸಾರ್ಹತೆಯನ್ನು ವ್ಯಾಖ್ಯಾನಿಸಿರುವ ಐಕಾನಿಕ್ ಬ್ರ್ಯಾಂಡ್ Passion. ಕಳೆದ ದಶಕದಲ್ಲಿ ಬೈಕ್ ಪ್ರೇಮಿಗಳ ಮನ ಗೆದ್ದಿತ್ತು ಈ ಬೈಕ್ . ಈ ಬ್ರಾಂಡ್ ಹೊಂದಿರುವ ಅಗಾಧ ನಂಬಿಕೆ ಗ್ರಾಹಕರೊಂದಿಗಿನ ಬಾಂಧವ್ಯದ ಕಾರಣಕ್ಕೆ ನವೀಕೃತ ಅವತಾರದಲ್ಲಿ ಪರಿಚಯಿಸಲಾಗಿದೆ. ಸೊಗಸಾದ ನೋಟ ಮತ್ತು ಸವಾರರ ಅನುಕೂಲಕ್ಕಾಗಿ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.