ಮುಂಬಯಿ : ಜಪಾನ್ ಮೂಲದ ಕಾರು ತಯಾರಕ ಕಂಪನಿ ಹೋಂಡಾದ ಅಮೇಜ್ (Honda Amaze) ಭಾರತ ಮಾರುಕಟ್ಟೆಯ ಜನಪ್ರಿಯ ಸಬ್ ಕಾಂಪಾಕ್ಟ್ ಸೆಡಾನ್ ಕಾರು. ಅದರಲ್ಲಿ 1.2 ಲೀಟರ್ನ ಪೆಟ್ರೋಲ್ ಹಾಗೂ 1.5 ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಆಯ್ಕೆಗಳು ಇದ್ದವು. ಆದರೆ, ಇನ್ನು ಮುಂದೆ ಡೀಸೆಲ್ ಎಂಜಿನ್ ಕಾರು ತಯಾರಿಸದೇ ಇರಲು ಕಂಪನಿ ನಿರ್ಧರಿಸಿದೆ. ಭಾರತದಲ್ಲಿ ವಾಹನ ನಿರ್ಮಾಣದ ವೇಳೆ ಪಾಲಿಸಬೇಕಾದ ಪರಿಸರ ಮಾಲಿನ್ಯ ಮಾನದಂಡಗಳು ಕಠಿಣವಾಗಿರುವ ಹಿನ್ನೆಲೆಯಲ್ಲಿ ಡೀಸೆಲ್ ಎಂಜಿನ್ ಕಾರನ್ನು ಮಾರಾಟ ಮಾಡದಿರಲು ಕಂಪನಿ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಹೋಂಡಾ ಕಂಪನಿಯು ತನ್ನ ವೆಬ್ಸೈಟ್ನಲ್ಲಿ ಡೀಸೆಲ್ ಕಾರುಗಳ ಮಾಹಿತಿಯನ್ನು ತೆಗೆದು ಹಾಕಿದೆ. ವೇರಿಯೆಂಟ್ ಹಾಗೂ ಬೆಲೆಯ ಕುರಿತು ವಿವರಗಳು ಇಲ್ಲ. ಇದು ಡೀಸೆಲ್ ಎಂಜಿನ್ ಕಾರಿನ ಉತ್ಪಾದನೆ ನಿಲ್ಲಿಸುವ ಸೂಚನೆ ಎನ್ನಲಾಗಿದೆ. ಇದೇ ವೇಳೆ ಪೆಟ್ರೋಲ್ ಹಾಗೂ ಹೈಬ್ರಿಡ್ ಎಂಜಿನ್ ಕಡೆಗೆ ಕಂಪನಿ ಗಮನ ಕೊಡಲಿದೆ ಹಾಗೂ ಮಾರುತಿ ಡಿಸೈರ್, ಹ್ಯುಂಡೈ ಔರಾ, ಟಾಟಾ ಟಿಗೋರ್ಗೆ ಪೈಪೋಟಿ ನೀಡುವುದನ್ನು ಮುಂದುವರಿಸಲಿದೆ. ಈ ಮೂರು ಕಾರುಗಳು ತಮ್ಮ ಡೀಸೆಲ್ ಎಂಜಿನ್ ಆಯ್ಕೆಯನ್ನು ಈ ಹಿಂದೆಯೇ ನಿಲ್ಲಿಸಿತ್ತು.
ಏನು ಇದಕ್ಕೆ ಕಾರಣ?
ಕೇಂದ್ರ ಸರಕಾರ ರಿಯಲ್ ಡ್ರೈವಿಂಗ್ ಎಮಿಷನ್ (RDE) ಮಾನದಂಡವನ್ನು ಇತ್ತೀಚೆಗೆ ಘೋಷಣೆ ಮಾಡಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದೆ. ಆ ನಿಯಮದ ಪ್ರಕಾರ ಸಣ್ಣ ಗಾತ್ರದ ಡೀಸೆಲ್ ಎಂಜಿನ್ಗಳಿಗೆ ಮಾಲಿನ್ಯ ತಡೆಯುವುದಕ್ಕೆ ಸಾಧ್ಯವಿಲ್ಲ. ಹೋಂಡಾದ 1.5 ಡೀಸೆಲ್ ಎಂಜಿನ್ಗೆ ಹೊಸ ಕಾನೂನು ಪಾಲಿಸಲು ಸಾಧ್ಯವಾಗದ ಕಾರಣ ಉತ್ಪಾದನೆ ನಿಲ್ಲಿಸಲು ಕಂಪನಿ ತೀರ್ಮಾನಿಸಿದೆ. ಅದೇ ರೀತಿ ಡೀಸೆಲ್ ಕಾರುಗಳಿಗೆ ಬೇಡಿಕೆ ಕೂಡ ಕಡಿಮೆಯಾಗಿರುವುದು ಕೂಡ ಆಯ್ಕೆಯನ್ನು ತೆಗೆದು ಹಾಕಲು ಕಾರಣ.
ಹೋಂಡಾ ಕಂಪನಿಯು ಇದೇ ವೇಳೆ ಜಾಝ್, ಡಬ್ಲ್ಯುಆರ್ ವಿ ಹಾಗೂ ನಾಲ್ಕನೇ ಪೀಳಿಗೆಯ ಸಿಟಿ ಕಾರಿನ ಮಾರಾಟವನ್ನೂ 2023ರ ಮಾರ್ಚ್ನಿಂದ ನಿಲ್ಲಿಸಲಿದೆ. ಜತೆಗೆ ಸಿಟಿ ಕಾರಿನ ಡೀಸೆಲ್ ಆವೃತ್ತಿಯೂ ಸಿಗುವುದಿಲ್ಲ. ಅಮೇಜ್ ಪೆಟ್ರೋಲ್ ಹಾಗೂ ಹೋಂಡಾ ಸಿಟಿ ಪೆಟ್ರೋಲ್ ಹಾಗೂ ಹೈಬ್ರಿಡ್ ಕಾರು ದೊರೆಯಲಿದೆ. ಇದೇ ವೇಳೆ ಕಂಪನಿಯು ನವ ದೆಹಲಿಯಲ್ಲಿ ನಡೆದ ಆಟೊ ಎಕ್ಸ್ಪೋದಲ್ಲಿ ಕಾಂಪಾಕ್ಟ್ ಎಸ್ಯುವಿ ಕಾರನ್ನು ಅನಾವರಣ ಮಾಡಿತ್ತು. ಅದು ಮೆ ತಿಂಗಳಲ್ಲಿ ಮಾರುಕಟ್ಟೆಗೆ ಇಳಿಯಲಿದೆ.
1.2 ಲೀಟರ್ನ ಅಮೇಜ್ ಕಾರು i-VTEC ಎಂಜಿನ್ ಹೊಂದಿದ್ದು, 89 ಬಿಎಚ್ಪಿ ಪವರ್ ಹಾಗೂ 110 ಎನ್ಎಮ್ ಗರಿಷ್ಠ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದರಲ್ಲಿ 5 ಸ್ಪೀಡ್ನ ಮ್ಯಾನಯಲ್ ಹಾಗೂ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದೆ.
ಇದನ್ನೂ ಓದಿ | Tata Nexon EV | ಟಾಟಾದ ನೆಕ್ಸಾನ್ ಇವಿಯ ಆರಂಭಿಕ ಬೆಲೆ ಇನ್ನಷ್ಟು ಅಗ್ಗ; ಕಿಲೋ ಮೀಟರ್ ರೇಂಜ್ ಕೂಡ ಏರಿಕೆ