ನವದೆಹಲಿ: ಹೋಂಡಾ ಕಂಪನಿಯು (Honda Motor) ಭಾರತದಲ್ಲಿ ಹೊಸ ಕಾಂಪಾಕ್ಟ್ ಎಸ್ಯುವಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಎಲೆವೇಟ್ ಎಂಬ ಹೆಸರಿನಲ್ಲಿ ರಸ್ತೆಗೆ ಇಳಿಯಲಿರುವ ಕಾರಿನ ಟೀಸರ್ಗಳನ್ನು ಬಿಡುಗಡೆ ಮಾಡಿತ್ತು. ಆದರೆ, ಈ ಕಾರು ಇನ್ನೂ ರಸ್ತೆಗೆ ಇಳಿದಿಲ್ಲ. ಜೂನ್ 6ರಂದು ಬಿಡುಗಡೆಗೊಳ್ಳಲಿದೆ ಎಂದು ಹೇಳಲಾಗಿದೆ. ಏತನ್ಮಧ್ಯೆ, ಈ ಕಾರಿನ ಅನಧಿಕೃತ ಬುಕಿಂಗ್ ಆರಂಭ ಮಾಡಲಾಗಿದೆ. ಹೋಂಡಾ ಶೋರೂಮ್ಗಳಲ್ಲಿ ಕಾರಿನ ಬುಕಿಂಗ್ ಆರಂಭಗೊಂಡಿದೆ ಎಂದು ಹೇಳಲಾಗಿದ್ದು, ಗ್ರಾಹಕರು 21 ಸಾವಿರ ರೂಪಾಯಿ ಪಾವತಿ ಮಾಡಿ ಬುಕ್ ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ.
ಹೋಂಡಾ ಕಾರಿನ ಪ್ರೇಮಿಗಳಿಗೆ ಡಬ್ಲ್ಯುಆರ್-ವಿ ಮತ್ತು ಹೋಂಡಾ ಸಿಟಿ ಸೆಡಾನ್ ಆಯ್ಕೆಗಳಿದ್ದವು. ಇದೀಗ ಅವರಿಗೆ ಎಲಿವೇಟ್ ಎಸ್ಯುವಿ ಬಗ್ಗೆ ಹೆಚ್ಚು ಆಸಕ್ತಿ ಮೂಡಿದೆ ಎಂದು ಡೀಲರ್ಗಳು ಮಾಹಿತಿ ನೀಡಿದ್ದಾರೆ. ಕೆಲವು ಶೋ ರೂಮ್ಗಳಲ್ಲಿ ಅನಧಿಕೃತವಾಗಿ ಬುಕಿಂಗ್ ಸ್ವೀಕರಿಸಲೂ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. ಬುಕಿಂಗ್ ಮೊತ್ತವು 11,000 ರೂ.ಗಳಿಂದ 21,000 ರೂಪಾಯಿವರೆಗೆ ನಿಗದಿಯಾಗಿದೆ ಎನ್ನಲಾಗುತ್ತಿದೆ.
ಎಲೆವೇಟ್ ಎಸ್ಯುವಿ ತನ್ನ ಸಿಟಿ ಕಾರಿನ ಫ್ಲಾಟ್ಫಾರ್ಮ್ ಹಂಚಿಕೊಳ್ಳುತ್ತದೆ ಎನ್ನಲಾಗಿದೆ. ಹೀಗಾಗಿ ಪಕ್ಕಾ ಭಾರತೀಯ ಕಾರು ಎನಿಸಿಕೊಳ್ಳಲಿದೆ. ಅದರ ವಿನ್ಯಾಸಗಳು ಪ್ರಸ್ತುತ ವಿದೇಶದಲ್ಲಿ ಮಾರಾಟವಾಗುತ್ತಿರುವ ಹೋಂಡಾದ ಇತರ ಎಸ್ಯುವಿಗಳಂತೆ ಇರುವುದಿಲ್ಲ ಎಂದು ಹೇಳಲಾಗಿದೆ. ಎಲೆವೇಟ್ ಎಸ್ಯುವಿಯನ್ನು ಭಾರತದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಸಮತಟ್ಟಾದ ಮುಂಭಾಗ ಮತ್ತು ಎತ್ತರದ ಗ್ರಿಲ್ನಿಂದ ಹಿಡಿದು ರೂಫ್ಲೈನ್ವರೆಗೆ ಭಾರತೀಯ ವಿನ್ಯಾಸ ಹೊಂದಿರಲಿದೆ.
ಇದನ್ನೂ ಓದಿ : Maruti Suzuki WagonR : ಮಾರುತಿ ಸುಜುಕಿ ವ್ಯಾಗನ್‌ಆರ್ 30 ಲಕ್ಷ ಸೇಲ್ಸ್ ದಾಖಲೆ
ಹೋಂಡಾ ಎಲೆವೇಟ್ನ ಟೀಸರ್ ಅನ್ನು ಕಂಪನಿಯು ಇತ್ತಿಚೆಗೆ ಬಿಡುಗಡೆ ಮಾಡಿತ್ತು. ಅದರಲ್ಲಿ ಸಿಂಗಲ್ ಪ್ಯಾನ್ ಸನ್ ರೂಫ್ ಕಂಡು ಬಂದಿದೆ. ಪನೊರಮಿಕ್ ಸನ್ರೂಫ್ಗಳನ್ನು ನೀಡಲಾಗಿಲ್ಲ. ಸೆಲ್ಟೋಸ್, ಟೈಗುನ್ ಮತ್ತು ಕುಶಾಕ್ ಮತ್ತಿತರ ಕಾರುಗಳಿಗೆ ಸ್ಪರ್ಧೆಯೊಡ್ಡುವ ರೀತಿಯಲ್ಲಿ ನಿರ್ಮಿಸಲಾಗಿದ್ದರೂ ಇದು ದೊಡ್ಡ ಕೊರತೆ ಎನಿಸಿಕೊಳ್ಳಲಿದೆ. ಸೆಲ್ಟೋಸ್ ಸೇರಿದಂತೆ ಉಳಿದ ಕಾರುಗಳು ಪನೋರಮಿಕ್ ಸನ್ರೂಫ್ಗಳನ್ನು ಹೊಂದಿದೆ.
ಎಲೆವೇಟ್ನ ವೈಶಿಷ್ಟ್ಯಗಳ ಬಗ್ಗೆ ಇನ್ನೂ ಸಂಪೂರ್ಣ ಮಾಹಿತಿ ಇಲ್ಲವಾದರೂ ವೆಂಟಿಲೇಟೆಡ್ ಸೀಟುಗಳ ನಿರೀಕ್ಷೆಯಿದೆ. ಈ ಫೀಚರ್ ಹೋಂಡಾ ಸಿಟಿಯಲ್ಲಿ ಇಲ್ಲ. ಆದರೆ, ಹೋಂಡಾ ಸಿಟಿಯಲ್ಲಿ ಕಂಡುಬರುವ ಹೆಚ್ಚಿನ ಫೀಚರ್ಗಳು ಇರಬಹುದು ಎಂದು ಡೀಲರ್ಗಳೂ ಅಂದಾಜಿಸಿದ್ದಾರೆ.
ಪವರ್ ಟ್ರೇನ್ ಆಯ್ಕೆಗಳು
ಹೋಂಡಾ ಕಂಪನಿಯು ತನ್ನ ಡೀಸೆಲ್ ಎಂಜಿನ್ಗಳನ್ನು ಇತ್ತೀಚೆಗೆ ವಾಪಸ್ ಪಡೆದುಕೊಂಡಿತ್ತು. ಹೀಗಾಗಿ ಎಲೆವೇಟ್, ಭಾರತದಲ್ಲಿ ಮಾರಾಟವಾಗುವ ಇತರ ಎಲ್ಲಾ ಹೋಂಡಾಗಳಂತೆ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿರುತ್ತದೆ. ಇದನ್ನು ಒಂದೇ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್ನೊಂದಿಗೆ ರಸ್ತೆಗಿಳಿಸುವ ಸಾಧ್ಯತೆಗಳಿವೆ. ಈ ಪೆಟ್ರೋಲ್ ಎಂಜಿನ್ ಅನ್ನು ಸಿಟಿ ಸೆಡಾನ್ ಜತೆ ಹಂಚಿಕೊಳ್ಳಲಿದೆ. ಹಾಗಾದರೆ. ಇದು 121 ಬಿಎಚ್ಪಿ ಮತ್ತು 145 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. ಮ್ಯಾನುವಲ್ ಮತ್ತು ಸಿವಿಟಿ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಯೂ ಇರಲಿದೆ.
ಡೆಲಿವರಿ ಯಾವಾಗ ಆರಂಭ?
ಹೋಂಡಾ ಎಲಿವೇಟ್ ಕಾರಿನ ಡೆಲಿವರಿಗಳನ್ನು ಆಗಸ್ಟ್ ಅಂತ್ಯದ ವೇಳೆಗೆ ಆರಂಭವಾಗಲಿದೆ. ಬೆಲೆಯೂ ಅದೇ ದಿನ ಪ್ರಕಟಗೊಳ್ಳಲಿದೆ ಎಂದು ಡೀಲರ್ ಮೂಲಗಳು ತಿಳಿಸಿವೆ.