ನವ ದೆಹಲಿ: ಹೋಂಡಾ ಕಂಪನಿಯು ತನ್ನ ಬಹುನಿರೀಕ್ಷಿತ ಮಿಡ್ಸೈಜ್ ಎಸ್ಯುವಿ ಎಲಿವೇಟ್ ಕಾರಿನ (Honda Elevate) ಬುಕಿಂಗ್ ಅನ್ನು ಜುಲೈ 3 ರಂದು ಬುಕಿಂಗ್ ಆರಂಭಿಸಲಿದೆ. ಡೀಲರ್ಗಳು ನೀಡಿರುವ ಮಾಹಿತಿಯಂತೆ 21,000 ರೂಪಾಯಿ ಟೋಕನ್ ಮೊತ್ತ ನೀಡಿ ಕಾರು ಬುಕ್ ಮಾಡಿಕೊಳ್ಳಬಹುದು. ಹೋಂಡಾ ಆಗಸ್ಟ್ ಕೊನೆಯಲ್ಲಿ ಅಥವಾ ಸೆಪ್ಟೆಂಬರ್ ಆರಂಭದಲ್ಲಿ ಬೆಲೆಗಳನ್ನು ಘೋಷಿಸುವ ಸಾಧ್ಯತೆಗಳಿವೆ. ಎಲಿವೇಟ್ ಜುಲೈ ಅಂತ್ಯದ ವೇಳೆಗೆ ಶೋರೂಂಗಳಲ್ಲಿ ಲಭ್ಯವಿರುತ್ತದೆ. ಆಗಸ್ಟ್ ಆರಂಭದಲ್ಲಿ ಟೆಸ್ಟ್ ಡ್ರೈವ್ ಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಅಂತೆಯೇ ಹಬ್ಬದ ಋತುವಿನಲ್ಲಿ ರಸ್ತೆಗೆ ಇಳಿಯಲಿದೆ.
ಎಲಿವೇಟ್ ಅನ್ನು ನಾಲ್ಕು ಟ್ರಿಮ್ಗಳಲ್ಲಿ ನೀಡಲಾಗುವುದು ಎಂದು ಮೂಲಗಳು ಸೂಚಿಸಿವೆ. ನಿಖರವಾದ ಟ್ರಿಮ್ ವಿವರಗಳು ಇನ್ನೂ ತಿಳಿದಿಲ್ಲವಾದರೂ, ಇದು ಸಿಟಿ ಸೆಡಾನ್ನಂತೆಯೇ ಎಸ್ವಿ, ವಿ, ವಿಎಕ್ಸ್ ಮತ್ತು ಝಡ್ ಎಕ್ಸ್ ಎಂಬ ನಾಲ್ಕು ವೇರಿಯೆಂಟ್ಗಳಲ್ಲಿ ಸಿಗಲಿವೆ. ಮ್ಯಾನುವಲ್ ಗೇರ್ ಬಾಕ್ಸ್ ತನಕ ಎಲ್ಲ ಫೀಚರ್ಗಳು ಸ್ಟಾಂಡರ್ಡ್ ಆಗಿ ಲಭಿಸಲಿದೆ. ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಬೇಸ್ ಟ್ರಿಮ್ ಹೊರತುಪಡಿಸಿ ಎಲ್ಲದರಲ್ಲೂ ನೀಡುವ ಸಾಧ್ಯತೆಗಳಿವೆ.
ಎಲಿವೇಟ್ ಎಸ್ ಯುವಿಯಲ್ಲಿ 1.5 ಲೀಟರ್ 4 ಸಿಲಿಂಡರ್, ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಇರಲಿದೆ. ಇದು 121 ಬಿಹೆಚ್ ಪಿ ಪವರ್, 145 ಎನ್ಎಂ ಟಾರ್ಕ್ ಬಿಡುಗಡೆ ಮಾಡಲಿದೆ. ಈ ಪವರ್ ಟ್ರೇನ್ ಅನ್ನು ಸಿಟಿಯೊಂದಿಗೆ ಹಂಚಿಕೊಳ್ಳಲಾಗಿದ್ದರೂ, ಆ ಸೆಡಾನ್ನಲ್ಲಿ ಇರುವ 1.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಪವರ್ ಟ್ರೇನ್ ಎಲಿವೇಟ್ನಲ್ಲಿ ಲಭ್ಯವಾಗುವ ಸಾಧ್ಯತೆಗಳು ಕಡಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡುವುದಾದರೆ ಹೈಬ್ರಿಡ್ ಆಯ್ಕೆ ಕಷ್ಟ.
ಎಲಿವೇಟ್ ವಿನ್ಯಾಸ, ಒಳಾಂಗಣ ಮತ್ತು ವೈಶಿಷ್ಟ್ಯಗಳು
ಎಲಿವೇಟ್ ಸದ್ಯ ಮಾರುಕಟ್ಟೆಯಲ್ಲಿರುವ ಹ್ಯುಂಡೈ ಕಂಪನಿಯ ಕ್ರೆಟಾ ಮತ್ತು ಕಿಯಾದ ಸೆಲ್ಟೋಸ್ ಗೆ ಹೋಲುತ್ತದೆ, 4,312 ಎಂಎಂ ಉದ್ದ, 1,790 ಎಂಎಂ ಅಗಲ, 1,650 ಎಂಎಂ ಎತ್ತರ ಮತ್ತು 2,650 ಎಂಎಂ ವ್ಹೀಲ್ ಬೇಸ್ ಹೊಂದಿದೆ. ಇದು ಸೆಗ್ಮೆಂಡ್ನಲ್ಲಿ ಗರಿಷ್ಠ 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಪಡೆಯುತ್ತದೆ. ಸ್ಟೈಲಿಂಗ್ ವಿಚಾರಕ್ಕೆ ಬಂದಾಗ ಸಿಆರ್-ವಿ ಮತ್ತು ಡಬ್ಲ್ಯುಆರ್-ವಿ ನಂತಹ ಬ್ರಾಂಡ್ನ ವೈಶಿಷ್ಟ್ಯಗಳನ್ನು ಹೊಂದುವ ಸಾಧ್ಯತೆಗಳಿವೆ.
ಇದನ್ನೂ ಓದಿ : Viral News : ತಮ್ಮ ಜೀಪ್ಗೆ ಫೈನ್ ಹಾಕಿದ ಪೊಲೀಸ್ ಠಾಣೆಯ ಕರೆಂಟ್ ಕಟ್ ಮಾಡಿದ ವಿದ್ಯುತ್ ಮಂಡಳಿ!
ಎಲಿವೇಟ್ನ ಆಕರ್ಷಕ ಸಂಗತಿ ಎಂದರೆ ಅದರ ಇಂಟೀರಿಯರ್ . ಕ್ಯಾಬಿನ್ ಸಾಫ್ಟ್-ಟಚ್ ಪ್ಯಾನೆಲ್ಗಳು ಮತ್ತು ಆರಾಮದಾಯಕ ಮತ್ತು ವಿಶಾಲವಾದ ಸೀಟ್ಗಳೊಂದಿಗೆ ಸಾಕಷ್ಟು ಪ್ರೀಮಿಯಂ ಅನಿಸುತ್ತದೆ. ಇದು 10.25 ಇಂಚಿನ ಟಚ್ ಸ್ಕ್ರೀನ್, 7 ಇಂಚಿನ ಸೆಮಿ-ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಲೇನ್ ವಾಚ್ ಕ್ಯಾಮೆರಾ, ವೈರ್ ಲೆಸ್ ಚಾರ್ಜಿಂಗ್, ವೈರ್ ಲೆಸ್ ಆಂಡ್ರಾಯ್ಡ್ ಆಟೋ/ ಆಪಲ್ ಕಾರ್ ಪ್ಲೇ ಜೊತೆಗೆ ಹೋಂಡಾದ ಎಡಿಎಎಸ್ ಸೂಟ್ ಹೊಂದಿದೆ. ಘರ್ಷಣೆ ತಗ್ಗಿಸುವ ಬ್ರೇಕಿಂಗ್ ಸಿಸ್ಟಮ್, ಲೇನ್ ನಿರ್ಗಮನ ಎಚ್ಚರಿಕೆ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ. ಆದಾಗ್ಯೂ, ಇದು ಸಿಂಗಲ್ ಪೇನ್ ಸನ್ ರೂಫ್ ಅನ್ನು ಮಾತ್ರ ಪಡೆಯುತ್ತದೆ.
ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳು
ಬಿಡುಗಡೆಯಾದ ನಂತರ ಎಲಿವೇಟ್ ಕಾರು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಫೋಕ್ಸ್ ವ್ಯಾಗನ್ ಟೈಗುನ್, ಸ್ಕೋಡಾ ಕುಶಾಕ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಎಂಜಿ ಆಸ್ಟರ್ ಮತ್ತು ಮುಂಬರುವ ಸಿಟ್ರೋನ್ ಸಿ 3 ಏರ್ ಕ್ರಾಸ್ ಕಾರುಗಳಿಗೆ ಪೈಪೋಟಿ ನೀಡಲಿದೆ. ಆದರೆ, ಬೆಲೆಯೇ ಮಾರುಕಟ್ಟೆಯಲ್ಲಿ ನಿರ್ಣಾಯ ಎನಿಸಿಕೊಳ್ಳಲಿದೆ.