ಬೆಂಗಳೂರು: ಹೋಂಡಾ ಕಂಪನಿಯು ತನ್ನ ಬಹುನಿರೀಕ್ಷಿತ ಎಸ್ಯುವಿ ಕಾರು ಎಲಿವೇಟ್ ಅನ್ನು 2023ರ ಸೆಪ್ಟೆಂಬರ್ ನಲ್ಲಿ ಬಿಡುಗಡೆ ಮಾಡಲಿದೆ. ಈ ಕಾರಿನ ಇಂಧನ ದಕ್ಷತೆಯ ವಿವರಗಳನ್ನು ಇದೀಗ ಬಹಿರಂಗಪಡಿಸಲಾಗಿದ್ದು, ಬುಕಿಂಗ್ ಮಾಡುವವರಿಗೆ ಹಾಗೂ ಆಸಕ್ತರಿಗೆ ಇದರಿಂದ ಅನುಕೂಲವಾಗಲಿದೆ. ಎಲಿವೇಟ್ ಕಾರಿನ ಟೆಸ್ಟ್ ಡ್ರೈವ್ ಆಗಸ್ಟ್ ಮಧ್ಯದಲ್ಲಿ ಪ್ರಾರಂಭವಾಗಲಿದೆ. ಅಂದಿನೀದಮ ಕಾರು ಡೀಲರ್ಶಿಪ್ ತಲುಪಲಿದೆ. ಎಲಿವೇಟ್ ಭಾರತಕ್ಕೆ ಹೋಂಡಾದ ಪ್ರಮುಖ ಉತ್ಪನ್ನಗಳಲ್ಲಿ ಒಂದಾಗಿದೆ. ಇದೀಗ ಹೆಚ್ಚು ಬೇಡಿಕೆಯಲ್ಲಿರುವ ಸ್ಪರ್ಧಾತ್ಮಕ ಮಧ್ಯಮ ಗಾತ್ರದ ಎಸ್ಯುವಿ ವಿಭಾಗದಲ್ಲಿ ಇದು ಸಂಚಲನ ಮೂಡಿಸಲಿದೆ. ಮಾಹಿತಿ ಪ್ರಕಾರ ಎಲಿವೇಟ್ ಮ್ಯಾನುಯಲ್ ಆವೃತ್ತಿಯ 15.31 ಕಿಲೋ ಮೀಟರ್ ಮೈಲೇಜ್ ನೀಡಿದರೆ, ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಕಾರು 16.92 ಕಿಲೋ ಮೀಟರ್ ಮೈಲೇಜ್ ನೀಡಲಿದೆ.
ಹೋಂಡಾ ಕಂಪನಿಯು ಎಲಿವೇಟ್ನಲ್ಲಿ ಎರಡು ಪವರ್ ಟ್ರೇನ್ ಆಯ್ಕೆಗಳು ಲಭ್ಯವಿದೆ. ಎರಡನ್ನೂ ಸಿಟಿ ಸೆಡಾನ್ ಕಾರಿ ನೊಂದಿಗೆ ಹಂಚಿಕೊಳ್ಳಲಾಗಿದೆ. ಎಂಟ್ರಿ ಲೆವೆಲ್ ಪವರ್ ಟ್ರೇನ್ 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 121 ಬಿಎಚ್ಪಿ, 145 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದರಲ್ಲಿ 6 ಸ್ಪೀಡ್ನ ಮ್ಯಾನುಯಲ್ ಗೇರ್ಬಾಕ್ಸ್ ಇದೆ. ಈ ಎಂಜಿನ್ 7 ಸ್ಟೆಪ್ ಸಿವಿಟಿ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಯನ್ನು ಸಹ ಪಡೆಯುತ್ತದೆ. ಎಲಿವೇಟ್ನಲ್ಲಿ ಪೆಟ್ರೋಲ್ ಹೈ ಬ್ರಿಡ್ ಪವರ್ ಟ್ರೇನ್ ಇಲ್ಲ. ಎಲಿವೇಟ್ ಆಧಾರಿತ ಬಿಇವಿಯನ್ನು ಬಿಡುಗಡೆ ಮಾಡಲಿದೆ.
ಹೋಂಡಾ ಎಸ್ ಯುವಿಯ ಇಂಧನ ದಕ್ಷತೆಯ ಅಂಕಿಅಂಶಗಳನ್ನು ಹಂಚಿಕೊಂಡಿದೆ. ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಎಲಿವೇಟ್ 15.31 ಕಿ.ಮೀ ಮೈಲೇಜ್ ನೀಡಿದರೆ ಸಿವಿಟಿಯೊಂದಿಗೆ ಇದು 16.92 ಕಿ.ಮೀ ನೀಡುತ್ತದೆ. 40-ಲೀಟರ್ ಫ್ಯೂಯಲ್ ಟ್ಯಾಂಕ್ ಇದರಲ್ಲಿ ಇರಲಿದ್ದು. ಒಂದು ಬಾರಿ ಟ್ಯಾಂಕ್ ತುಂಬಿಸಿದರೆ 612 ಕಿ.ಮೀ ವರೆಗೆ ಪ್ರಯಾಣ ಮಾಡಬಲ್ಲದು. ಆಟೋಮ್ಯಾಟಿಕ್ ಆವೃತ್ತಿಯು 679 ಕಿ.ಮೀ ವರೆಗೆ ಕ್ರಮಿಸಬಹುದು. ರಿಯಲ್ಟೈಮ್ನಲ್ಲಿ ಅದು ಎಷ್ಟು ಇದೆ ಎಂಬುದು ಟೆಸ್ಟ್ ರೈಡ್ಗೆ ಬಂದ ಮೇಲೆ ಗೊತ್ತಾಗಬೇಕಷ್ಟೆ.
ಗಾತ್ರ ಎಷ್ಟಿದೆ?
ಎಲಿವೇಟ್ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಕಾರನ್ನು ಹೋಲುತ್ತದೆ. 4,312 ಎಂಎಂ ಉದ್ದ, 1,790 ಎಂಎಂ ಅಗಲ ಮತ್ತು 1,650 ಎಂಎಂ ಎತ್ತರ ಮತ್ತು 2,650 ಎಂಎಂ ವ್ಹೀಲ್ ಬೇಸ್ ಹೊಂದಿದೆ. ಇದು ಸೆಗ್ಮೆಂಟ್ನಲ್ಲೇ ಅತ್ಯಧಿಕವಾಗಿರುವ 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಸಹ ಪಡೆಯುತ್ತದೆ.
ಎಲಿವೇಟ್ ಎಸ್ವಿವಿ, ವಿಎಕ್ಸ್ ಮತ್ತು ಝಡ್ಎಕ್ಸ್ ಎಂಬ ನಾಲ್ಕು ಮಾದರಿಗಳಲ್ಲಿ ಲಭ್ಯವಿದೆ. ಎಂಟ್ರಿ ಲೆವೆಲ್ ಎಸ್ ವಿ ಕಾರಿನಲ್ಲಿ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 16 ಇಂಚಿನ ಸ್ಟೀಲ್ ವ್ಹೀಲ್ ಮತ್ತು ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ಗಳು ಸಿಗಲಿವೆ.
ಟಾಪ್ ಸ್ಪೆಕ್ ಎಲಿವೇಟ್ ಝಡ್ಎಕ್ಸ್ ಕಾರಿನಲ್ಲಿ 10.25 ಇಂಚಿನ ಟಚ್ ಸ್ಕ್ರೀನ್, 6 ಏರ್ಬ್ಯಾಗ್ಗಳು, ಹೋಂಡಾ ಸೆನ್ಸಿಂಗ್ ಎಡಿಎಎಸ್ ಸೂಟ್, 8 ಸ್ಪೀಕರ್ಗಳು, ಸಾಫ್ಟ್ ಟಚ್ ಡ್ಯಾಶ್ಬೋರ್ಡ್ ಮತ್ತು ಆಟೋ ಡಿಮ್ಮಿಂಗ್ ಇಂಟೀರಿಯರ್ ಡೇ ಆ್ಯಂಡ್ ನೈಟ್ ಮಿರರ್ ಅನ್ನು ಹೊಂದಿದೆ.
ಇದನ್ನೂ ಓದಿ : Honda Unicorn : ಮುಂದಿನ ಹಬ್ಬದ ಋತುವಿನಲ್ಲಿ ರಸ್ತೆಗಿಳಿಯಲಿದೆ ಹೋಂಡಾದ ಹೊಸ ಬೈಕ್
ಬೆಲೆ ಎಷ್ಟಿರಬಹುದು?
ಡೀಲರ್ ಮೂಲಗಳ ಪ್ರಕಾರ, ಎಲಿವೇಟ್ ಬೆಲೆಯು ಸಮಾನ ಸಿಟಿ ಕಾರಿಗಿಂತ ಸುಮಾರು 1ರಿಂದ 1.5 ಲಕ್ಷ ರೂ.ಗಳಷ್ಟು ಹೆಚ್ಚಾಗಲಿದೆ. ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ 11 ಲಕ್ಷ ರೂಪಾಯಿಗಳು. ಟಾಪ್ ಎಂಡ್ ಬೆಲೆ 19 ಲಕ್ಷ ರೂಪಾಯಿ. ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆಯುವ ಹ್ಯುಂಡೈ ಕ್ರೆಟಾ ಮತ್ತು ಇತ್ತೀಚೆಗೆ ಬಿಡುಗಡೆಯಾದ ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್, ಪೆಟ್ರೋಲ್-ಹೈಬ್ರಿಡ್ ಪವರ್ ಟ್ರೇನ್ ಆಯ್ಕೆಗಳನ್ನು ಪಡೆಯುವ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಹೈರೈಡರ್ ಮತ್ತು ಸ್ಕೋಡಾ ಕುಶಾಕ್ ಮತ್ತು ಫೋಕ್ಸ್ ವ್ಯಾಗನ್ ಟೈಗುನ್ ಕಾರುಗಳಿಂದ ಎಲಿವೇಟ್ ಸ್ಪರ್ಧೆ ಎದುರಿಸಲಿದೆ.