ಬೆಂಗಳೂರು: ಹೋಂಡಾ ಮೋಟಾರ್ ಸೈಕಲ್ ಕಂಪನಿಯು ಕೆಲವೇ ದಿನಗಳ ಹಿಂದೆ ಡಿಯೊ ಮಾಡೆಲ್ನಲ್ಲಿ 125 ಸಿಸಿಯ ಸ್ಕೂಟರ್ ರಸ್ತೆಗೆ ಇಳಿಸಿತ್ತು. ಇದೀಗ ಮತ್ತೊಂದು ಹೊಸ ಬೈಕ್ ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ. ಅದೇನಾದರೂ ಕಾರ್ಯರೂಪಕ್ಕೆ ಬಂದಿದೆ ಮುಂಬರುವ ಹಬ್ಬದ ಋತುವಿನಲ್ಲಿ ಎಸ್ಪಿ 160 ಬೈಕ್ ಭಾರತದ ರಸ್ತೆಗೆ ಇಳಿಯಲಿದೆ. ಇದು ಯೂನಿಕಾರ್ನ್ 160 ಬೈಕ್ನ ಫ್ಲ್ಯಾಟ್ಫಾರ್ಮ್ ಮೇಲೆ ನಿರ್ಮಾಣಗೊಳ್ಳಲಿದೆ. ಅದೇ ಎಂಜಿನ್ ಮತ್ತು ಚಾಸಿಸ್ ಬಳಸಿಕೊಂಡು ಹೊಸ ಬೈಕ್ ಬಿಡುಗಡೆಗೊಳ್ಳಲಿದೆ.
ಹೋಂಡಾ ಈ ಹಿಂದೆ ಹೊಸ 160 ಸಿಸಿ ಬೈಕ್ ಅನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿತ್ತು. ಅಂದಾಜಿನ ಪ್ರಕಾರ ಅದೇ ಬೈಕ್ ಈ ಎಸ್ಪಿ 160. ಇದು 125 ಸಿಸಿ ಸಾಮರ್ಥ್ಯದ ಎಸ್ ಪಿ 125 ನೊಂದಿಗೆ ಸಾಕಷ್ಟು ಸ್ಟೈಲಿಂಗ್ ಅನ್ನು ಶೇರ್ ಮಾಡಿಕೊಳ್ಳಲಿದೆ. ಆದಾಗ್ಯೂ, ಎಂಜಿನ್ ಮತ್ತು ಚಾಸಿಸ್ ಅನ್ನು ಇತ್ತೀಚೆಗೆ ನವೀಕರಿಸಿದ ಒಬಿಡಿ 2 ಕಾಂಪ್ಲೈಂಟ್ ಯೂನಿಕಾರ್ನ್ ಜತೆ ಹಂಚಿಕೊಳ್ಳುವ ಸಾಧ್ಯತೆಗಳಿವೆ. ಎಸ್ಪಿ 160 ಬೈಕ್ ಏರ್ ಕೂಲ್ಡ್, 162.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 7,500 ಆರ್ಪಿಎಂನಲ್ಲಿ 12.9 ಬಿಹೆಚ್ ಪಿ ಪವರ್ ಮತ್ತು 5,500 ಆರ್ಪಿಎಂನಲ್ಲಿ 14 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಎಸ್ಪಿ 160 ಯೂನಿಕಾರ್ನ್ ಗಿಂತ ಭಿನ್ನವಾಗಿರುವ ಪ್ರಮುಖ ಅಂಶವೆಂದರೆ ಇದು ಸ್ವಲ್ಪ ಚಿಕ್ಕದಾದ 12 ಲೀಟರ್ ಫ್ಯೂಯಲ್ ಟ್ಯಾಂಕ್ ಅನ್ನು ಪಡೆಯುತ್ತದೆ. ಇದು 2 ಕೆಜಿ ಹೆಚ್ಚು ತೂಕವನ್ನು ಹೊಂದಿರಲಿದೆ. ಅಂದರೆ 141 ಕೆ. ಜಿ ಇರಬಹು್ಮಉ. ಎಸ್ಪಿ 160ಬೈಕ್ ಯೂನಿಕಾರ್ನ್ನಲ್ಲಿರುವ 18 ಇಂಚಿನ ಚಕ್ರಗಳನ್ನು ಪರ್ಯಾಯವಾಗಿ 17-ಇಂಚಿನ ಚಕ್ರಗಳಲ್ಲಿ ಚಲಿಸುತ್ತದೆ. ಎಸ್ಪಿ 125 ಬೈಕ್ ಮುಂಭಾಗದಲ್ಲಿ 276 ಎಂಎಂ ಡಿಸ್ಕ್ ಅನ್ನು ಪಡೆಯುತ್ತದೆ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಅಥವಾ 130 ಎಂಎಂ ಡ್ರಮ್ ಬ್ರೇಕ್ ನೊಂದಿಗೆ ಬರಬಹುದು. ಎಸ್ಪಿ 125 ಎರಡು ವೇರಿಯೆಂಟ್ಗಳಲ್ಲಿ ಲಭ್ಯವಾಗಲಿದೆ.
ಹೋಂಡಾ ಯೂನಿಕಾರ್ನ್ ಬೈಕ್ನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1,09,800ಗಳಾಗಿದೆ. ಮುಂದಿನ ತಿಂಗಳ ಎಸ್ಪಿ 160 ಬಿಡುಗಡೆಯಾಗಲಿದ್ದು ಬೆಲೆಯೂ ಯೂನಿಕಾರ್ನ್ಗೆ ಸಮೀಪ ಇರಲಿದೆ ಎಂದು ಹೇಳಲಾಗಿದೆ.