ಬೆಂಗಳೂರು : ಅಗ್ಗದ ಬೆಲೆಗೆ ದೊರೆಯುವ ೩೫೦ ಸಿಸಿ ಬೈಕ್ ಎಂಬ ಅಗ್ಗಳಿಕೆಯೊಂದಿಗೆ ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಪಡೆದಿರುವ “ಹಂಟರ್’ ಪ್ರಭಾವದಿಂದಾಗಿ, ರಾಯಲ್ ಎನ್‌ಫೀಲ್ಡ್ (Royal Enfield) ಬೈಕ್‌ಗಳ ಮಾರಾಟದಲ್ಲಿ ನವೆಂಬರ್ ೨೦೨೨ರಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಕಂಪನಿಯು ನವೆಂಬರ್ ತಿಂಗಳಲ್ಲಿ ಒಟ್ಟು ೭೦,೭೬೬ ಬೈಕ್‌ಗಳನ್ನು ಮಾರಾಟ ಮಾಡಿದ್ದು, ಹಿಂದಿನ ವರ್ಷ ಈ ಅವಧಿಯಲ್ಲಿ ೫೧,೬೫೪ ಬೈಕ್‌ಗಳು ಮಾರಾಟವಾಗಿದ್ದವು. ಅಕ್ಟೋಬರ್ ತಿಂಗಳಲ್ಲಿ ಈ ಕಂಪನಿಯ ಒಟ್ಟು ಬೈಕ್‌ಗಳ ಮಾರಾಟ ೮೦ ಸಾವಿರ ದಾಟಿ ದಾಖಲೆ ನಿರ್ಮಿಸಿತ್ತು.
ರಾಯಲ್ ಎನ್‌ಫೀಲ್ಡ್ ಕಂಪನಿಯ ಸಿಇಒ ಬಿ ಗೋವಿಂದರಾಜನ್ ಅವರು ಈ ಮಾಹಿತಿಯನ್ನು ಖಚಿತಪಡಿಸಿ, ಸಂತಸ ವ್ಯಕ್ತಪಡಿಸಿದ್ದಾರೆ. “ಈ ವರ್ಷದ ಹಬ್ಬದ ಋತುವಿನಲ್ಲಿ ನಮ್ಮ ಬೈಕ್‌ಗಳ ಬೇಡಿಕೆ ಹೆಚ್ಚಾಗಿತ್ತು. ಅಂತೆಯೇ ೬೫೦ ಸಿಸಿ ಎಂಜಿನ್ ಸಾಮರ್ಥ್ಯದ ಸೂಪರ್ ಮೀಟಿಯೋರ್ ಬೈಕ್ ಇತ್ತೀಚೆಗೆ ಅನಾವರಣಗೊಂಡಿದ್ದು, ಅದಕ್ಕೂ ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಮಾಣದ ಬೇಡಿಕೆ ಸೃಷ್ಟಿಯಾಗಿದೆ,” ಎಂದು ಹೇಳಿದ್ದಾರೆ.
ನವೆಂಬರ್ ತಿಂಗಳಲ್ಲಿ ಒಟ್ಟಾರೆ ೬೫,೭೬೦ ಬೈಕ್‌ಗಳು ಭಾರತದಲ್ಲಿ ಮಾರಾಟವಾಗಿದ್ದರೆ, ೬೮೨೪ ಬೈಕ್‌ಗಳನ್ನು ರಫ್ತು ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಇದು ಕ್ರಮವಾಗಿ ಶೇಕಡಾ ೪೭ ಹಾಗೂ ಶೇ. ೨೭ರಷ್ಟು ಹೆಚ್ಚಳ.
೩೫೦ ಸಿಸಿಗೆ ಬೇಡಿಕೆ ಹೆಚ್ಚು
ರಾಯಲ್ ಎನ್‌ಫೀಲ್ಡ್‌ನ ೩೫೦ ಸಿಸಿ ಬೈಕ್‌ಗಳಿಗೆ ಬೇಡಿಕೆ ಹೆಚ್ಚಿದೆ. ನವೆಂಬರ್‌ನಲ್ಲಿ ಒಟ್ಟಾರೆ ೬೫,೯೫೬ ಈ ವಿಭಾಗದ ಬೈಕ್‌ಗಳನ್ನು ಮಾರಾಟ ಮಾಡಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ ೪೩,೩೪೬ ಬೈಕ್‌ಗಳನ್ನು ಮಾರಾಟ ಮಾಡಲಾಗಿತ್ತು. ಪ್ರಮುಖವಾಗಿ ರಾಯಲ್ ಎನ್‌ಫೀಲ್ಡ್ ಹಂಟರ್ ಬೈಕ್‌ಗಳಿಗೆ ಅತಿ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ.
ಮುಂದಿನ ವರ್ಷಾರಂಭಕ್ಕೆ ಸೂಪರ್ ಮೀಟಿಯೋರ್ ೬೫೦ ಬೈಕ್ ರಸ್ತೆಗೆ ಇಳಿಯಲಿದ್ದು, ಹಿಮಾಲಯನ್ ಬೈಕ್ ಇನ್ನಷ್ಟು ಬಣ್ಣಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿದೆ. ಈ ಮೂಲಕ ಮಾರುಕಟ್ಟೆ ವ್ಯಾಪ್ತಿಯನ್ನು ವೃದ್ಧಿಸುವ ಯೋಜನೆ ರೂಪಿಸಿಕೊಂಡಿದೆ ರಾಯಲ್ ಎನ್‌ಫೀಲ್ಡ್.
ಇದನ್ನೂ ಓದಿ ವ| Super Meteor 650 | ಸೂಪರ್ ಮೀಟಿಯೋರ್ ಬೈಕ್ ಅನಾವರಣ ಮಾಡಿದ ರಾಯಲ್ ಎನ್‌ಫೀಲ್ಡ್