ನವದೆಹಲಿ: ಹ್ಯುಂಡೈ ಮೋಟಾರ್ ಕಂಪನಿಯ (Hyundai Motor) ಮಿನಿ ಎಸ್ಯವಿ ಎಕ್ಸ್ಟೆರ್ನ ಬುಕಿಂಗ್ ಈಗಾಗಲೇ ಆರಂಭಗೊಂಡಿದೆ. ಜುಲೈ 10ರಂದು ಈ ಹೊಚ್ಚ ಹೊಸ ಕಾರು ಭಾರತದ ಮಾರುಕಟ್ಟೆಗೆ ದಾಪುಗಾಲಿಡಲಿದೆ. ಬುಕಿಂಗ್ ಆರಂಭ ಮಾಡಿದ ಬಳಿಕವೂ ಇದರ ಸಂಪೂರ್ಣ ವಿನ್ಯಾಸವನ್ನು ಸಂಪೂರ್ಣವಾಗಿ ಬಹಿರಂಗ ಮಾಡಿಲ್ಲ. ಹಂತಹಂತವಾಗಿ ಕಂಪನಿಯು ಗ್ರಾಹಕರಿಗೆ ಅದರ ನೋಟವನ್ನು ವಿವರಿಸುತ್ತಿದೆ. ಅಂತೆಯೇ ಇದೀಗ ಹಿಂಭಾಗದ ನೋಟವನ್ನು ತೋರಿಸಿದೆ.
ಕಾರು ಬಿಡುಗಡೆಯಾಗುವ ಮೊದಲು ದಕ್ಷಿಣ ಕೊರಿಯಾದಲ್ಲಿ ಅದರ ಪ್ರಯೋಗಾರ್ಥ ಸವಾರಿ ನಡೆದಿತ್ತು. ಈ ವೇಳೆಯ ಅದರ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಅದೇ ವಿನ್ಯಾಸ ಅಧಿಕೃತ ಅನಾವರಣದ ಬಳಿಕವೂ ಉಳಿದಿದೆ ಎನ್ನಲಾಗಿದೆ.
ಹೇಗಿದೆ ವಿನ್ಯಾಸ?
ಎಕ್ಸ್ಟೆರ್ನ ಹಿಂಭಾಗದ ವಿನ್ಯಾಸದಲ್ಲಿ ಅತ್ಯಾಕರ್ಷಕ ವಿನ್ಯಾಸದವೆಂದರೆ ದಪ್ಪ ಕಪ್ಪು ಟ್ರಿಮ್, ಇದು ಟೈಲ್ ಗೇಟ್ ಪೂರ್ತಿ ವ್ಯಾಪಿಸಿದೆ. ಎರಡೂ ತುದಿಗಳಲ್ಲಿ ಸ್ಕ್ವೇರಿಷ್ ಎಲ್ಇಡಿ ಟೈಲ್-ಲ್ಯಾಂಪ್ ನೀಡಲಾಗಿದೆ. ಕಪ್ಪು ಕಾಂಟ್ರಾಸ್ಟಿಂಗ್ ಟ್ರಿಮ್ ಮಧ್ಯದಲ್ಲಿ ಹ್ಯುಂಡೈ ಲೋಗೊವನ್ನು ಹೊಂದಿರುವ ಟೆಕ್ಸ್ಚರ್ಡ್ ಫಿನಿಶ್ ಅನ್ನು ಪಡೆದಿದೆ. ಮುಂಭಾಗದಲ್ಲಿರುವ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ಗಳಂತೆ ಟೈಲ್ ಲ್ಯಾಂಪ್ಗಳು ಎಚ್ನಂತೆ ಕಾಣುತ್ತಿವೆ.
ಎಕ್ಸ್ಟೆರ್ ಹಿಂಭಾಗದಿಂದ ಸಾಕಷ್ಟು ನೇರವಾಗಿ ಕಾಣುತ್ತದೆ. ನಂಬರ್ ಪ್ಲೇಟ್ ಹೊಂದಿರುವ ಉತ್ತಮವಾಗಿ ವಿನ್ಯಾಸ ಮಾಡಿರುವ ಟೈಲ್ ಗೇಟ್ ಇದೆ. ಹಿಂಭಾಗದ ಬಂಪರ್ ಕಪ್ಪು ಕ್ಲಾಡಿಂಗ್ ಮತ್ತು ಫಾಕ್ಸ್ ಸಿಲ್ವರ್ ಸ್ಕಿಡ್ ಪ್ಲೇಟ್ ಹೊಂದಿದೆ. ಜತೆಗೆ ಡ್ಯುಯಲ್ ಟೋನ್ ನೋಟವನ್ನು ಹೊಂದಿದೆ. ಹಿಂಭಾಗದ ರಿಫ್ಲೆಕ್ಟರ್ಗಳನ್ನು ಕ್ಲಾಡಿಂಗ್ ಒಳಗೆ ತುಂಬಾ ನಾಜೂಕಾಗಿ ಇರಿಸಲಾಗಿದೆ
ಎಂಜಿನ್ ಸಾಮರ್ಥ್ಯ ಎಷ್ಟು?
ಗ್ರ್ಯಾಂಡ್ ಐ10 ನಿಯೋಸ್ ಮತ್ತು ಔರಾ ಕಾರಿನ ಫ್ಲಾಟ್ಪಾರ್ಮ್ ಅನ್ನು ಎಕ್ಸ್ಟೆರ್ ಹಂಚಿಕೊಂಡಿದೆ ಎನ್ನಲಾಗಿದೆ. ಹೀಗಾಗಿ ಆ ಕಾರುಗಳಲ್ಲಿ ಇರುವ 1.2 ಲೀಟರಿನ ನಾಲ್ಕು ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಸ ಎಸ್ಯುವಿನಲ್ಲಿ ಇರಲಿದೆ. ಈ ಎಂಜಿನ್ 83 ಬಿಎಚ್ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 5 ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ಒಳಗೊಂಡಿದೆ. ಇದು ಸಿಎನ್ಜಿ ಆಯ್ಕೆಯೊಂದಿಗೂ ಬರಲಿದೆ ಎನ್ನಲಾಗಿದೆ.
ಇದನ್ನೂ ಓದಿ : MotoGp : ಭಾರತದಲ್ಲಿ ನಡೆಯಲಿರುವ ಬೈಕ್ ರೇಸ್ ನೋಡುವ ಆಸೆಯೇ? ಟಿಕೆಟ್ ರೇಟ್ ಕೇಳಿದ್ರೆ ಗಾಬರಿ ಗ್ಯಾರಂಟಿ!
ಫೀಚರ್ಗಳೇನು?
ಹ್ಯುಂಡೈ ಎಕ್ಸ್ಟೆರ್ ಇಂಟೀರಿಯರ್ ಇನ್ನೂ ಬಹಿರಂಗವಾಗಿಲ್ಲ. ಆದರೆ ಕಂಪನಿಯು ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವುದನ್ನು ದೃಢಪಡಿಸಿದೆ. ಡ್ಯುಯಲ್ ಕ್ಯಾಮೆರಾಗಳು ಮತ್ತು 2.31 ಇಂಚಿನ ಡ್ಯಾಶ್ಕ್ಯಾಮ್ ಗಮನಾರ್ಹ ಹೈಲೈಟ್ ಆಗಿದೆ. ಇದು ವೆನ್ಯೂ ಎನ್ಲೈನ್ನಲ್ಲಿ ಲಭ್ಯವಿರುವ ಫೀಚರ್ ಆಗಿದೆ. ಇದು ಸ್ಟ್ಯಾಂಡರ್ಡ್ ಆಗಿ 6 ಏರ್ ಬ್ಯಾಗ್ ಗಳನ್ನು ಮತ್ತು ಹೆಚ್ಚಿನ ಟ್ರಿಮ್ ಎಲೆಕ್ಟರಿಕ್ ಸನ್ ರೂಫ್ ಸಹ ಪಡೆಯುತ್ತದೆ. ಇಎಸ್ಸಿ, ಹಿಲ್ ಅಸಿಸ್ಟ್ ಕಂಟ್ರೋಲ್, 3 ಪಾಯಿಂಟ್ ಸೀಟ್ ಬೆಲ್ಟ್ ಮತ್ತು ಎಲ್ಲಾ ಸೀಟ್ಗಳಿಗೆ ಸೀಟ್ ಬೆಲ್ಟ್ ರಿಮೈಂಡರ್, ಕನೆಕ್ಟೆಡ್ ಕಾರ್, ಕೀಲೆಸ್ ಎಂಟ್ರಿ, ಎಬಿಎಸ್ ವಿತ್ ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸರ್, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಹೊಂದಿದೆ.
ವೇರಿಯೆಂಟ್ಗಳ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಆದರೂ ಹ್ಯುಂಡೈ ಎಕ್ಸ್ಟರ್ ಐದು ವೇರಿಯೆಂಟ್ಗಳಲ್ಲಿ ಲಭ್ಯವಿದೆ. ಅವುಗಳು ಇಂತಿವೆ. ಇಎಕ್ಸ್, ಎಸ್, ಎಸ್ಎಕ್ಸ್, ಎಸ್ಎಕ್ಸ್ (ಒ) ಮತ್ತು ಎಸ್ಎಕ್ಸ್ (ಒ) ಕನೆಕ್ಟ್.
ಪ್ರತಿಸ್ಪರ್ಧಿಗಳು ಯಾವ ಕಾರುಗಳು?
ಎಕ್ಸ್ಟೆರ್ ಈಗಾಗಲೇ 11,000 ರೂ.ಗಳ ಟೋಕನ್ ಮೊತ್ತಕ್ಕೆ ಬುಕಿಂಗ್ ಆರಂಭಿಸಿಕೊಂಡಿದೆ. ಜುಲೈ ಅಂತ್ಯದ ವೇಳೆಗೆ ಡೆಲಿವರಿಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಬಿಡುಗಡೆಯಾದ ಟಾಟಾ ಪಂಚ್, ಸಿಟ್ರೋನ್ ಸಿ 3 ಮತ್ತು ಮಾರುತಿ ಇಗ್ನಿಸ್ ಕಾರುಗಳಿಗೆ ಇದು ಪೈಪೋಟಿ ನೀಡಲಿದೆ.