ಬೆಂಗಳೂರು: ಲೋನ್ ಮೇಲೆ ಕಾರು ಖರೀದಿಸಿ ಬಳಿಕ ಇಎಮ್ಐ ಸರಿಯಾಗಿ ಪಾವತಿ ಮಾಡದೇ ಹೋದರೆ ಏನಾಗಬಹುದು? ಬ್ಯಾಂಕ್ನವರು ಹಲವು ನೋಟಿಸ್ಗಳನ್ನು ಕಳುಹಿಸುತ್ತಾರೆ. ಅದಕ್ಕೂ ಪ್ರತಿಕ್ರಿಯೆ ಕೊಡದಿದ್ದರೆ ವಸೂಲಿ ತಂಡವನ್ನು ಮನೆಗೆ ಕಳುಹಿಸುತ್ತಾರೆ. ಆಗ ಕಟ್ಟಿದರೆ ವಾಪಸ್ ಹೋಗುತ್ತಾರೆ. ಆಗಲೂ ಕಟ್ಟದಿದ್ದರೆ ಕಾರನ್ನು ಟೋಯಿಂಗ್ ಮಾಡಿಕೊಂಡು ಹೋಗುತ್ತಾರೆ. ಇಷ್ಟೆಲ್ಲ ಪ್ರಕ್ರಿಯೆಗಳಾಗಲೂ ಕನಿಷ್ಠ ಒಂದು ವರ್ಷ ಬೇಡವೇ? ಬ್ಯಾಂಕ್ನವರು ಬೇಸತ್ತು ಹೋಗುವುದಿಲ್ಲವೇ? ಇಂಥ ಸಮಸ್ಯೆಗೆಲ್ಲ ತಾಂತ್ರಿಕ ಪರಿಹಾರವೊಂದು ಬಂದಿದೆ. ಲೋನ್ ಇಎಮ್ಐ ಕಟ್ಟದೇ ಕಾರನ್ನು ಏನಾದರೂ ಓಡಿಸಿದರೆ ಅದು ಅರ್ಧ ದಾರಿಯಲ್ಲಿ ಏಕಾಏಕಿ ಬಂದ್ ಆಗುತ್ತದೆ. ಮಾಲೀಕ ಒಳಗೆ ಲಾಕ್ ಆಗುತ್ತಾನೆ. ಇದು ಅಮೆರಿಕದ ಮೂಲದ ಫೋರ್ಡ್ (Ford Motor) ಕಂಪನಿಯ ಕಂಡು ಹಿಡಿದಿರುವ ಟೆಕ್ನಾಲಜಿ.
ಅಂದ ಹಾಗೆ ಈ ಟೆಕ್ನಾಲಜಿ ಬಂದಿರುವುದು ಅಮೆರಿಕದಲ್ಲಿ. ಒಂದು ವೇಳೆ ಸಕ್ಸಸ್ ಆದರೆ ಭಾರತಕ್ಕೂ ಕಾಲಿಡುವುದರಲ್ಲಿ ಯಾವುದೇ ಸಂಶಯ ಇಲ್ಲ. ಆದರೆ, ಫೋರ್ಡ್ ಮೋಟಾರ್ ಸದ್ಯ ಭಾರತದಲ್ಲಿ ಇಲ್ಲ. ಒಟ್ಟಿನಲ್ಲಿ ಬ್ಯಾಂಕ್ ಸಿಬ್ಬಂದಿಗೆ ಯಾಮಾರಿಸಬಹುದು ಎಂದು ಅಂದುಕೊಂಡಿದ್ದವರಿಗೆಲ್ಲರಿಗೂ ಇದು ಶಾಕಿಂಗ್ ನ್ಯೂಸ್.
ಫೋರ್ಡ್ ಮೋಟಾರ್ ಈ ಟೆಕ್ನಾಲಜಿಯನ್ನು ಅಭಿವೃದ್ದಿ ಮಾಡಿ ಪೇಟೆಂಟ್ಗೆ ಅರ್ಜಿ ಹಾಕಿದೆ. ಪೇಟೆಂಟ್ ಸಿಕ್ಕರೆ ಅದನ್ನವರ ಮಾರ್ಕೆಂಟಿಂಗ್ ಮಾಡಲಿದ್ದಾರೆ. ಒಂದು ವೇಳೆ ಸಾರಿಗೆ ಇಲಾಖೆ ಹಾಗೂ ಬ್ಯಾಂಕ್ಗಳು ಜಂಟಿಯಾಗಿ ಇಂಥದ್ದೊಂದು ತಾಂತ್ರಿಕತೆಯ ಅಳವಡಿಕೆ ಹೊಸ ಕಾರುಗಳಿಗೆ ಕಡ್ಡಾಯ ಎಂದು ಹೇಳಿದರೆ ಭಾರತದಲ್ಲೂ ಇಎಂಐ ಕಟ್ಟದೇ ಕಾರು ಓಡಿಸುವುದು ಸಾಧ್ಯವೇ ಇಲ್ಲ.
ಹೇಗೆ ಕಾರ್ಯಾಚರಣೆ?
ಅಂದ ಹಾಗೆ ಕಾರು ಒಂದೇ ಬಾರಿಗೆ ಆಫ್ ಆಗುವುದಿಲ್ಲ ಎಂದೂ ಹೇಳಲಾಗಿದೆ. ಮೊದಲ ಕಂತು ಬಾಕಿಯಾದರೆ ಕಾರಿನ ಏರ್ಕಂಡೀಷನ್ ವ್ಯವಸ್ಥೆ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ನಂತರದಲ್ಲಿ ಸೈಡ್ ವಿಂಡೋಗಳು ಮೇಲಕ್ಕೇರುವುದಿಲ್ಲ. ಇನ್ನೂ ಕಟ್ಟದೆ ಹೋದರೆ ಕಾರಿನ ಎಂಜಿನ್ ಜಾಮ್ ಆಗುತ್ತದೆ. ಆಕ್ಸಿಲೇಟರ್ ಕೂಡ ಕೊಡಲಾಗುವುದಿಲ್ಲ. ಬಳಿಕ ಜಿಪಿಎಲ್ ಮೂಲಕ ಕಾರು ಎಲ್ಲಿ ನಿಂತಿದೆ ಎಂದು ಬ್ಯಾಂಕ್ನವರಿಗೆ ತೋರಿಸಿಕೊಡುತ್ತದೆ. ಅಲ್ಲಿಗೆ ಹೋಗಿ ಕಾರನ್ನು ಟೋಯಿಂಗ್ ಮಾಡಬಹುದು.
ಇದನ್ನೂ ಓದಿ : ಗುಜರಾತ್‌ನಲ್ಲಿ ಫೋರ್ಡ್ ಘಟಕವನ್ನು 750 ಕೋಟಿ ರೂ.ಗೆ ಖರೀದಿಸಲಿರುವ ಟಾಟಾ ಮೋಟಾರ್ಸ್
ಅಮೆರಿಕದ ಕಾನೂನೂ ಪ್ರಾಧಿಕಾರಗಳು ಇದಕ್ಕೆ ಮಾನ್ಯತೆ ಕೊಡುವ ವಿಚಾರದಲ್ಲಿ ದ್ವಂದ ಮನಸ್ಸು ಹೊಂದಿದೆ. ಒಂದು ಬಾರಿ ಸರಿಯಾದ ಕ್ರಮ ಎಂದರೂ, ಮತ್ತೊಂದು ಕಡೆ ಹಣಕಾಸು ಸಂಸ್ಥೆಗಳು ಇದನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಗಳಿವೆ ಎಂದಿದೆ.
ಫೋರ್ಡ್ ಕಂಪನಿಯೂ ಈ ಟೆಕ್ನಾಲಜಿಯನ್ನು ಕಂಡು ಹಿಡಿದಿರುವ ಕಾರಣ ಪೇಟೆಂಟ್ಗೆ ಅರ್ಜಿ ಹಾಕಿದ್ದೇವೆ. ಆದರೆ ತಕ್ಷಣವೇ ಬಳಸುತ್ತೇವೆ ಎಂದು ಹೇಳುತ್ತಿಲ್ಲ. ಒಂದು ವೇಳೆ ಅದು ಉದ್ಯಮವಾಗಿ ಮಾರ್ಪಟ್ಟರೆ ಬಳಸುತ್ತೇವೆ ಎಂದಿದೆ.