ಮುಂಬಯಿ : ಇತ್ತೀಚೆಗೆ ಅನಾವರಣಗೊಂಡ ಮಹೀಂದ್ರಾ ಕಂಪನಿಯ Mahindra Scorpio N ಎಸ್‌ಯುವಿ ಕಾರು ಬುಕಿಂಗ್ ಜುಲೈ ೩೦ರಂದು ಆರಂಭಗೊಂಡಿತು. ೧೧ ಗಂಟೆಗೆ ಬುಕಿಂಗ್ ಆರಂಭಗೊಂಡ ಅರ್ಧಗಂಟೆಯಲ್ಲಿ ೧ ಲಕ್ಷ ಕಾರುಗಳಿಗೆ ಬೇಡಿಕೆ ಬಂದಿದ್ದು, ಭಾರತೀಯ ಕಾರು ಮಾರುಕಟ್ಟೆಯಲ್ಲಿ ನೂತನ ದಾಖಲೆ ಎನಿಸಿದೆ. ಆರ್ಡರ್ ಪ್ರಕ್ರಿಯೆ ಆರಂಭಗೊಂಡ ಕೇವಲ ಒಂದು ನಿಮಿಷದಲ್ಲಿ ೨೫ ಸಾವಿರ ಗ್ರಾಹಕರು ಬುಕ್ ಮಾಡಿದ್ದಾರೆ ಎಂಬುದಾಗಿಯೂ ಕಂಪನಿ ಹೇಳಿದೆ.
ಕಾರಿನ ಬುಕಿಂಗ್ ಆರಂಭಗೊಂಡ ಕೆಲವೇ ಕ್ಷಣಗಳಲ್ಲಿ ಸಂಭಾವ್ಯ ಮಾರಾಟ ಮೌಲ್ಯ ೧೮ ಸಾವಿರ ಕೋಟಿ ರೂಪಾಯಿ ದಾಟಿದೆ ಎಂದು ಹೇಳಲಾಗಿದೆ. ಒಟ್ಟಾರೆಯಾಗಿ ಇಷ್ಟೊಂದು ಬೇಡಿಕೆ ಭಾರತದ ಕಾರು ಮಾರುಕಟ್ಟೆಯಲ್ಲಿನ ಹೊಸ ಬೆಳವಣಿಗೆಯಾಗಿದ್ದು, ವಾಹನ ಡೆಲಿವರಿ ಆರಂಭಗೊಳ್ಳುವ ಮೊದಲು ಇಷ್ಟೊಂದು ಬೇಡಿಕೆ ಸೃಷ್ಟಿಯಾಗಿರುವುದು ಇದೇ ಮೊದಲು.
ಮಹಿಂದ್ರಾ ಕಂಪನಿಯ ಕಾರುಗಳಿಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಿದ್ದು, XUV7oo ಹಾಗೂ ಥಾರ್ ಕಾರುಗಳಿಗೆ ಒಂದು ವರ್ಷಕ್ಕಿಂತಲೂ ಅಧಿಕ ವೇಟಿಂಗ್ ಸಮಯವಿದೆ. ಅಂತೆಯೇ ನೂತನ ಸ್ಕಾರ್ಪಿಯೊ ಕಾರಿನ ವಿತರಣೆ ಸೆಪ್ಟೆಂಬರ್ ೨೬ಕ್ಕೆ ಆರಂಭಗೊಂಡಿದ್ದು, ಡಿಸೆಂಬರ್ ೨೬ರ ಒಳಗೆ ೨೦ ಸಾವಿರ ಕಾರುಗಳನ್ನು ಮಾರಾಟ ಮಾಡುವ ಗುರಿ ಕಂಪನಿಗಿದೆ.
ಸ್ಕಾರ್ಪಿಯೊ ಎನ್ ಎಸ್‌ಯುವಿ ಪೆಟ್ರೊಲ್ ಕಾರಿನ ಬೆಲೆ ೧೨ ಲಕ್ಷ ರೂಪಾಯಿಂದ ಆರಂಭಗೊಂಡು ೧೯ ಲಕ್ಷ ರೂಪಾಯಿಯವರೆಗೆ ನಿಗದಿ ಮಾಡಲಾಗಿದೆ. ಅಂತಯೇ ಡೀಸೆಲ್ ಕಾರಿನ ಬೆಲೆ ೧೨.೫ ಲಕ್ಷ ರೂಪಾಯಿಂದ ಆರಂಭಗೊಂಡು ೧೯.೫ ಲಕ್ಷ ರೂಪಾಯಿವರೆಗಿದೆ. ಮಹೀಂದ್ರಾ ಕಂಪನಿಯು ಮೊದಲ ೨೫ ಸಾವಿರ ಕಾರುಗಳನ್ನು ಈಗ ಪ್ರಕಟಿಸಲಾದ ದರಕ್ಕೆ ಮಾರಾಟ ಮಾಡಲಿದೆ. ಉಳಿದ ಕಾರುಗಳನ್ನು ಆ ಸಮಯದ ಬೆಲೆಯಂತೆ ಮಾರಲಿದೆ.
ವಿಪರೀತ ಬೇಡಿಕೆ ಬಂದಿರುವ ಕಾರಣ ವೆಬ್‌ಸೈಟ್‌ನಲ್ಲಿಯೇ ಸಮಸ್ಯೆ ಶುರುವಾಗಿ ಹಣ ಪಾವತಿಗೆ ಸಮಸ್ಯೆ ಉಂಟಾಗಿತ್ತು. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಕಂಪನಿ ಹೇಳಿದೆ.
ಸ್ಕಾರ್ಪಿಯೊ ಎನ್ ಎಸ್‌ಯುವಿ ಟಾಟಾ ಸಫಾರಿ, ಎಂಜಿ ಹೆಕ್ಟರ್ ಪ್ಲಸ್, ಹ್ಯುಂಡೈ ಅಲ್‌ಕಜಾರ್ ಕಾರಿನೊಂದಿಗೆ ಪೈಪೋಟಿ ನಡೆಸಲಿದೆ.
ಕಳೆದ ಎರಡು ದಶಕಗಳಿಂದ ಮಾರುಕಟ್ಟೆಯಲ್ಲಿರುವ ಸ್ಕಾರ್ಪಿಯೊಗೆ ಹೊಸ ರೂಪ ಕೊಡುವ ಉದ್ದೇಶದಿಂದ ಎನ್ ಎಂಬುದಾಗಿ ಸೇರಿಸಲಾಗಿದೆ.
ಇದನ್ನೂ ಓದಿ | ಮಹೀಂದ್ರಾದ ಎಲೆಕ್ಟ್ರಿಕ್ XUV400 ಬಿಡುಗಡೆ ಯಾವಾಗ?