Site icon Vistara News

Tata Nano | ಟಾಟಾ ನ್ಯಾನೊ ಇವಿ ಕಾರು ಮಾರುಕಟ್ಟೆಗೆ ಇಳಿಯುತ್ತಿರುವುದು ನಿಜವೇ? ವೈರಲ್‌ ವಿಡಿಯೊದ ಸತ್ಯಾಂಶವೇನು?

tata nano

ಮುಂಬಯಿ : ಉದ್ಯಮಿ ರತನ್‌ ಟಾಟಾ ಅವರು ಅಗ್ಗದ ದರದಲ್ಲಿ ನೀಡಬೇಕು ಎಂಬ ಕಾರಣಕ್ಕೆ ತಯಾರಿಸಿದ್ದ ನ್ಯಾನೊ (Tata Nano) ಕಾರು ಜನಪ್ರಿಯತೆ ಪಡೆಯದ ಕಾರಣ ಮಾರುಕಟ್ಟೆಯಿಂದ ಹಿಂದಕ್ಕೆ ಸರಿಯಿತು. ೨೦೨೦ರಿಂದ ಅದರ ಉತ್ಪಾದನೆ ನಡೆಯುತ್ತಿಲ್ಲ. ಆದರೆ, ಕೆಲವು ದಿನಗಳಿಂದ ನ್ಯಾನೊ ಕಾರು ಎಲೆಕ್ಟ್ರಿಕ್‌ ರೂಪದಲ್ಲಿ ಮತ್ತೆ ಮಾರುಕಟ್ಟೆಗೆ ಇಳಿಯಲಿದೆ ಎಂಬುದಾಗಿ ಸುದ್ದಿ ಹರಡಲು ಆರಂಭಗೊಂಡಿದೆ. ನ್ಯಾನೊ ಇವಿ ಎಂದು ಹೇಳಿಕೊಂಡಿರುವ ಚಿತ್ರಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿದ್ದವು. ಆದರೆ, ವಾಸ್ತವ ಸಮಾಚಾರವೇ ಬೇರೆ. ಟಾಟಾ ಕಂಪನಿ ಮುಂದೆ ಇಂಥದ್ದೊಂದು ಯೋಜನೆಯೇ ಇಲ್ಲ. ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿರುವ ಸುದ್ದಿ ಶುದ್ಧ ಸುಳ್ಳು.

ಹಾಗಾದರೆ ಕಾರಿನ ಚಿತ್ರ ಯಾವುದು? ಅದು ಟೊಯೊಟಾ ಕಂಪನಿಯ ಐಗೊ ಕಾರಿನದ್ದು. ಅದು ಯುರೋಪ್‌ನ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾಂಪಾಕ್ಟ್‌ ಹ್ಯಾಚ್‌ಬ್ಯಾಕ್‌. ಈ ಕಾರು ಅತ್ಯಾಕರ್ಷಕ ನೋಟವನ್ನೂ ಕೂಡ ಹೊಂದಿದೆ. ಅಷ್ಟಕ್ಕೂ ಅದು ಇವಿ ಕಾರು ಅಲ್ಲ. ಬದಲಾಗಿ ೧.೦ ಲೀಟರ್‌ನ ಪೆಟ್ರೋಲ್‌ ಎಂಜಿನ್‌ ಹೊಂದಿರುವ ಕಾರು. ಇದೇ ಕಾರಿನ ಹಿಂದೆ ಮುಂದೆ, ಟಾಟಾದ ಲೋಗೋವನ್ನು ಅಂಟಿಸಿ, ನ್ಯಾನೊ ಎಲೆಕ್ಟ್ರಿಕ್‌ (Tata Nano) ಅವತಾರದಲ್ಲಿ ಬರುತ್ತದೆ ಎಂದು ವೈರಲ್‌ ಮಾಡಲಾಗಿದೆ.

ರತನ್ ಟಾಟಾ ಅವರ ಕನಸಿನ ಕಾರು ಎಲೆಕ್ಟ್ರಿಕ್‌ ರೂಪದಲ್ಲಿ ಬರುತ್ತದೆ. ೨ರಿಂದ ಮೂರು ಲಕ್ಷ ರೂಪಾಯಿಯೊಳಗೆ ಈ ಕಾರು ಗ್ರಾಹಕರ ಕೈಸೇರಲಿದ್ದು, ಅಗ್ಗದ ದರ ಕಾರು ಎಂಬುದಾಗಿ ಹೇಳಲಾಗಿತ್ತು. ಅಲ್ಲದೆ, ಒಂದು ಬಾರಿ ಚಾರ್ಜ್‌ ಮಾಡಿದರೆ ೨೦೦ ಕಿ.ಮೀ ಓಡುತ್ತದೆ ಎಂಬುದಾಗಿ ಸುದ್ದಿ ಹರಡಿತ್ತು.

೨೦೨೦ರಲ್ಲಿ ಉತ್ಪಾದನೆ ನಿಲ್ಲಿಸುವ ಮೊದಲು ಟಾಟಾ ನ್ಯಾನೊ (Tata Nano) ೬೨೪ ಸಿಸಿಯ ೨ ಸಿಲಿಂಡರ್‌ ಎಂಜಿನ್‌ನೊಂದಿಗೆ ಬರುತ್ತಿತ್ತು. ಇದು ಗರಿಷ್ಠ ೩೭ ಬಿಎಚ್‌ಪಿ ಪವರ್‌ ಹಾಗೂ ೫೧ ಎನ್‌ಎಮ್‌ ಟಾರ್ಕ್ಯೂ ಬಿಡುಗಡೆ ಮಾಡುತ್ತಿತ್ತು. ಆದರೆ, ಈ ಕಾರು ಈಗಿಲ್ಲ. ಆದರೆ ವ್ಯಕ್ತಿಯೊಬ್ಬರು ಪೆಟ್ರೋಲ್‌ ಎಂಜಿನ್‌ ತೆಗೆದು ಎಲೆಕ್ಟ್ರಿಕ್‌ ಎಂಜಿನ್‌ ಅಳವಡಿಸಿ ಈ ಕಾರು ಓಡಿಸುತ್ತಿದ್ದಾರೆ ಎನ್ನಲಾಗಿದೆ. ೭೨ ವ್ಯಾಟ್‌ನ ಬ್ಯಾಟರಿಯನ್ನು ಒಂದು ಬಾರಿ ಚಾರ್ಜ್‌ಗೆ೧೬೦ ಕಿಲೋಮೀಟರ್‌ ಪ್ರಯಾಣ ಮಾಡಬಹುದು ಎಂದು ಅವರು ಹೇಳುತ್ತಿದ್ದಾರೆ.

ಇದನ್ನೂ ಓದಿ | Maruti Suzuki | ಕಾರುಗಳ ಬೆಲೆ ಏರಿಕೆ ಮಾಡಲಿದೆ ಮಾರುತಿ ಸುಜುಕಿ; ಏನು ಕಾರಣ?

Exit mobile version