ಬೆಂಗಳೂರು: ಈ ವರ್ಷದ ಮೇ ತಿಂಗಳಲ್ಲಿ, ಜೀಪ್ ಕಂಪನಿಯು ಬಿಎಸ್ 6 ಫೇಸ್ 2 ಅನಿನಲ ಹೊರಸೂಸುವಿಕೆಯ ಮಾನದಂಡಗಳನ್ನು ಪೂರೈಸದ ಕಾರಣ ಭಾರತದಲ್ಲಿ ಕಂಪಾಸ್ ಸರಣಿಯಿಂದ ಪೆಟ್ರೋಲ್ ಎಂಜಿನ್ ಅನ್ನು ಸ್ಥಗಿತಗೊಳಿಸಿತು. ಆದಾಗ್ಯೂ, ಈಗ ಜೀಪ್ ಇಂಡಿಯಾ ಪೆಟ್ರೋಲ್ ಎಂಜಿನ್ ಅನ್ನು ಭಾರತಕ್ಕೆ ಮತ್ತೆ ತರುವ ಪ್ರಯತ್ನ ಮಾಡುತ್ತಿದೆ. ಅಂತೆಯೇ ಮುಂದಿನ ಎರಡು ವರ್ಷಗಳಲ್ಲಿ ಕಂಪಾಸ್ ತನ್ನ ಪೆಟ್ರೋಲ್ ಎಂಜಿನ್ ಅನ್ನು ಮರಳಿ ತರಲು ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕಂಪಾಸ್ ನ ಸರಾಸರಿ ಮಾರಾಟವು ಕಳೆದ ಕೆಲವು ತಿಂಗಳುಗಳಲ್ಲಿ ತಿಂಗಳಿಗೆ 550-650 ಯುನಿಟ್ ಗಳಿಂದ 250-300 ಯುನಿಟ್ಗಳಿಗೆ ಇಳಿಕೆಯಾಗಿದೆ. ಕಂಪಾಸ್ ಕಾರಿನ ಒಟ್ಟು ಮಾರಾಟದಲ್ಲಿ ಪೆಟ್ರೋಲ್ ಎಂಜಿನ್ ಸುಮಾರು 50 ಪ್ರತಿಶತದಷ್ಟು ಕೊಡುಗೆ ನೀಡುತ್ತಿತ್ತು. ಹೀಗಾಗಿ ಪೆಟ್ರೋಲ್ ಎಂಜಿನ್ ಸ್ಥಗಿತಗೊಂಡಿರುವ ಪರಿಣಾಮ ಒಟ್ಟು ಮಾರಾಟದ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಶೀಘ್ರದಲ್ಲೇ ಹೊಸ ಪೆಟ್ರೋಲ್ ಎಂಜಿನ್ ಅನ್ನು ಭಾರತಕ್ಕೆ ತರುವ ಯೋಜನೆ ರೂಪಿಸಿದೆ ಜೀಪ್ ಕಂಪನಿ.
ಡೀಸೆಲ್ ಎಂಜಿನ್ಗಳು ಹೆಚ್ಚು ಟಾರ್ಕ್ ನೀಡುವ ಕಾರಣ ಎಸ್ಯು ಸೆಗ್ಮೆಂಟ್ನಲ್ಲಿ ಇನ್ನೂ ಜನಪ್ರಿಯವಾಗಿದ್ದರೂ ದೀರ್ಘಾವಧಿಯಲ್ಲಿ ಡೀಸೆಲ್ ಎಂಜಿನ್ಗೆ ಅನಿಶ್ಚಿತತೆ ಕಾಡುತ್ತಿದೆ. ಭಾರತೀಯ ಆಟೊಮೊಬೈಲ್ ಮಾರುಕಟ್ಟೆ ಪೆಟ್ರೋಲ್ ಎಂಜಿನ್ ಕಡೆಗೆ ಒಲವು ತೋರುತ್ತಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ವಿಶೇಷವಾಗಿ ದೆಹಲಿ-ಎನ್ ಸಿಆರ್ ನಂತಹ ಪ್ರದೇಶಗಳಲ್ಲಿ ಡೀಸೆಲ್ ವಾಹನವನ್ನು ಕೇವಲ 10 ವರ್ಷಗಳವರೆಗೆ ಮಾತ್ರ ಹೊಂದಬಹುದು ಎಂಬ ನಿಯಮವಿದೆ. ಹೀಗಾಗಿ ದೆಹಲಿಯಲ್ಲಿ ಶೇಕಡಾ 80ರಷ್ಟು ಪೆಟ್ರೊಲ್ ಎಂಜಿನ್ ಇರುವ ಜೀಪ್ ಕಂಪಾಸ್ ಮಾರಾಟವಾಗುತ್ತಿತ್ತು. ಆದರೆ ಪೆಟ್ರೋಲ್ ಎಂಜಿನ್ ಸ್ಥಗಿತಗೊಂಡ ಕಾರಣ ಮಾರಾಟದಲ್ಲಿ ಇಳಿಕೆ ಕಂಡಿದೆ.
ಇತ್ತೀಚೆಗೆ ಜೀಪ್ ಇಂಡಿಯಾದ ಮುಖ್ಯಸ್ಥರಾಗಿ ನೇಮಕಗೊಂಡ ಆದಿತ್ಯ ಜೈರಾಜ್ ಅವರಿಗೆ ದೇಶದಲ್ಲಿ ಬ್ರಾಂಡ್ ಬೆಳೆಸುವ ಜವಾಬ್ದಾರಿ ವಹಿಸಲಾಗಿತ್ತು. ಈ ಮೂಲಕ ಕಂಪನಿಯು ತನ್ನ ನೆಲೆಯನ್ನು ಕಂಡುಕೊಳ್ಳಲು ಗಮನ ಹರಿಸಿದೆ.
1.3 ಪೆಟ್ರೋಲ್ ಎಂಜಿನ್
1.4-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ನಿಲ್ಲಿಸಿರುವುದು ಬಿಎಸ್6 ಮಾನದಂಡ ಪೂರೈಕೆ ಮಾಡಲಾಗದ ಕಾರಣಕ್ಕೆ. ಈ ಕೊರತೆ ಸರಿದೂಗಿಸಲು ಕಂಪನಿಯು ಈಗ ಭಾರತದಲ್ಲಿ ಹೊಸ 1.3-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ತಯಾರಿಸಲು ಸಿದ್ದತೆ ನಡೆಸುತ್ತಿದೆ. ಆದರೆ, ಎಂಜಿನ್ ಭಾರತಕ್ಕೆ ಬರಲು ಇನ್ನೂ ಸಾಕಷ್ಟು ಸಮಯ ಬೇಕಾಗಿದೆ. ಅಂದರೆ ಸುಮಾರು 18-24 ತಿಂಗಳುಗಳ ತೆಗೆದುಕೊಳ್ಳುವ ನಿರೀಕ್ಷೆಯಿದೆ. ಇದು 2025ಕ್ಕಿಂತ ಮೊದಲು ಯಾವುದೇ ಸಮಯದಲ್ಲಿ ಬರುವ ಸಾಧ್ಯತೆಯಿಲ್ಲ. ಜೀಪ್ ಪ್ರಸ್ತುತ ಇರುವ ಮಾಡೆಲ್ಗೆ ಎಂಜಿನ್ ಅನ್ನು ನೀಡುತ್ತದೆಯೇ ಅಥವಾ 2026 ರಲ್ಲಿ ಬರಲಿರುವ ಮುಂದಿನ ತಲೆಮಾರಿನ ಕಂಪಾಸ್ ನೊಂದಿಗೆ ನೇರವಾಗಿ ತರುತ್ತದೆಯೇ ಎಂಬುದು ಚರ್ಚೆಯ ವಿಷಯ.
ಇದನ್ನೂ ಓದಿ : Cars with high Resale Value : ಅತಿ ಹೆಚ್ಚು ರೀಸೇಲ್ ವ್ಯಾಲ್ಯೂ ಹೊಂದಿರುವ ಭಾರತದ ಕಾರುಗಳು
ಹೊಸ ನಾಲ್ಕು ಸಿಲಿಂಡರ್, 1.3-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು 2018 ರಲ್ಲಿ ಜೀಪ್ ರೆನೆಗೇಡ್ ನೊಂದಿಗೆ ಪರಿಚಯಿಸಲಾಗಿತ್ತು. 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಿ 130 ಬಿ ಎಚ್ಪಿ ಮತ್ತು 6-ಸ್ಪೀಡ್ ಡಿಸಿಟಿ ಗೇರ್ಬಾಕ್ಸ್ನಲ್ಲಿ 150 ಬಿಎಚ್ಪಿ ಪವರ್ ಪಡೆಯಲಾಗಿತ್ತು. ಎರಡೂ ಫ್ರಂಟ್-ವೀಲ್ ಡ್ರೈವ್ ನೊಂದಿಗೆ ನೀಡಲಾಗಿತ್ತು.