ಶ್ರೀನಗರ: ಕಾಶ್ಮೀರ ಎನ್ನುತ್ತಿದ್ದಂತೆ ಮನಸ್ಸಿಗೆ ಬರುವುದು ಹಿಮ ಕಣಿವೆಗಳು, ಚಂದದ ಸರೋವರಗಳು, ಸುಂದರ ಮುಖಗಳು ಅಥವಾ ಗುಂಡಿನ ಮೊರೆತ! ಇಂಥ ಕಾಶ್ಮೀರದ ರಾಜಧಾನಿ ಶ್ರೀನಗರದ ಗಣಿತ ಶಿಕ್ಷಕರೊಬ್ಬರು ಸೌರಶಕ್ತಿ ಚಾಲಿತ ಕಾರೊಂದನ್ನು (solar car) ನಿರ್ಮಿಸಿ ಗಮನಸೆಳೆದಿದ್ದಾರೆ.
ನೀವೇ ಮಾಡಿ ನೋಡಿ ಮಾದರಿಯ ಕೈಕೆಲಸದಂತೆ ಕಳೆದ ೧೧ ವರ್ಷಗಳಿಂದ ಈ ಕೆಲಸದಲ್ಲಿ ಶ್ರದ್ಧೆಯಿಂದ ವ್ಯಸ್ತರಾಗಿದ್ದ ಅವರ ಹೆಸರು ಬಿಲಾಲ್ ಅಹಮದ್. ವೃತ್ತಿಯಲ್ಲಿ ಗಣಿತ ಶಿಕ್ಷಕರಾಗಿರುವ ಅವರು, ಸುದೀರ್ಘ ಕಾಲದಿಂದಲೂ ಕಾರುಗಳ ಬಗ್ಗೆ ಅತೀವ ಆಸಕ್ತರಾಗಿದ್ದರು. ಸಾಮಾನ್ಯ ಕಾರುಗಳನ್ನು ನಿರ್ಮಿಸುವುದು ಹೇಗೆ ಎನ್ನುವುದರಿಂದ ಹಿಡಿದು, ಐಷಾರಾಮಿ ಕಾರುಗಳ ಒಳ-ಹೊರಗನ್ನೆಲ್ಲಾ ವಿವರವಾಗಿ ಅಧ್ಯಯನ ಮಾಡಿದ್ದರು. ಒಂದಿಲ್ಲೊಂದು ದಿನ ತಾವೂ ಇಂಥದ್ದೊಂದು ಕಾರು ನಿರ್ಮಿಸಬೇಕೆಂಬ ಕನಸು ಕಾಣುತ್ತಿದ್ದರು.
“ಬ್ಯಾಕ್ ಟು ದ ಫ್ಯೂಚರ್ʼʼ ಸಿನಿಮಾದಲ್ಲಿ ಎಲ್ಲರ ಕಣ್ಸೆಳೆದಿದ್ದ ಡಿಲೋರಿನ್ ಕಾರಿನ ಮಾದರಿಯನ್ನು ಹೋಲುವಂತ ಕಾರನ್ನು ಅಹಮದ್ ನಿರ್ಮಿಸಿ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಡಿಲೋರಿನ್ ಕಾರಿನ ಮಾದರಿಯಿಂದಲೇ ತಾವು ಸ್ಫೂರ್ತಿ ಪಡೆದಿದ್ದಾಗಿ ಅವರು ಹೇಳಿಕೊಂಡಿದ್ದಾರೆ. “ಮರ್ಸಿಡಿಸ್, ಫೆರಾರಿ, ಬಿಎಂಡಬ್ಲ್ಯೂ ನಂಥ ಐಷಾರಾಮಿ ಕಾರುಗಳನ್ನು ಹೊಂದುವುದು ಸಾಮಾನ್ಯರಿಗೆ ಕನಸಿನ ಮಾತು. ಕೆಲವರಿಗಷ್ಟೆ ಅದು ಕೈಗೆಟುಕಲು ಸಾಧ್ಯ. ಹಾಗಾಗಿ ಸೌರಶಕ್ತಿಯ ಕಾರಿನ ಮಾದರಿ ಐಷಾರಾಮಿ ಕಾರುಗಳಂತಿರಬೇಕು. ಈ ಬಗ್ಗೆ ಜನರಿಗೂ ಸಂತೋಷವಿರಬೇಕು ಎಂಬ ಭಾವನೆ ನನ್ನಲ್ಲಿತ್ತುʼʼ ಎಂದು ಅಹಮದ್ ಈ ಕಾರಿಗೆ ಐಷರಾಮಿ ಟಚ್ ನೀಡಿರುವ ಕುರಿತು ಹೇಳಿದ್ದಾರೆ.
ಇಂಧನದ ಬೆಲೆ ಸದಾ ಏರುತ್ತಲೇ ಇರುವ ಹಿನ್ನೆಲೆಯಲ್ಲಿ, ಸೋಲಾರ್ ಕಾರು ನಿರ್ಮಿಸುವುದೇ ಉಚಿತವೆನಿಸಿತು. ಆದರೆ ಕಾಶ್ಮೀರದಲ್ಲಿ ಬಿಸಿಲು ಚುರುಕಾಗಿರುವ ದಿನಗಳೇ ಕಡಿಮೆ, ಮೋಡ ಮುಸುಕಿರುವುದೇ ಹೆಚ್ಚು. ಹಾಗಾಗಿ ಸೂರ್ಯನ ಬೆಳಕು ಕಡಿಮೆ ಇದ್ದಾಗಲೂ ಹೆಚ್ಚಿನ ಕ್ಷಮತೆಯನ್ನು ತೋರುವಂಥ ಸೌರಶಕ್ತಿ ಫಲಕಗಳನ್ನು ಚೆನ್ನೈನಿಂದ ತರಿಸಿದ್ದಾಗಿ ಅಹಮದ್ ಹೇಳಿದ್ದಾರೆ.
ಈ ಕಾರಿನ ಎರಡೂ ಪಕ್ಕದ ಬಾಗಿಲುಗಳು ಮೇಲ್ಮುಖವಾಗಿ ತೆರೆದುಕೊಂಡು, ಇದರ ಮೇಲಿನ ಸೌರ ಫಲಕಗಳು ಬೆಳಕಿಗೆ ಒಡ್ಡಿಕೊಳ್ಳುತ್ತವೆ. ಕಾರು ಚಲನೆಯಲ್ಲಿರುವಾಗಲೂ ಬಾಗಿಲನ್ನು ಹೀಗೆ ತೆರೆದುಕೊಂಡೇ ಇರಬಹುದಾಗಿದೆ. ಗಣಿತ ಶಿಕ್ಷಕರ ಕಾರು ಪ್ರೇಮವನ್ನ ಎಲಾನ್ ಮಸ್ಕ್, ಆನಂದ್ ಮಹೀಂದ್ರಾ ಅವರಂಥ ಖ್ಯಾತನಾಮರೂ ಮೆಚ್ಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆದಿರುವ ಈ ಕಾರಿಗೆ ಭರಪೂರ ಪ್ರತಿಕ್ರಿಯೆಗಳು ಸಹ ಹರಿದುಬಂದಿವೆ. ಅದರಲ್ಲೂ ಬಹಳಷ್ಟು ಮಂದಿ ಡಿಲೋರಿನ್ ಕಾರಿನ ಮಾದರಿಯಲ್ಲಿಯೇ ಇದೂ ಇದೆ ಎಂದು ಮೆಚ್ಚಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ | ಕ್ರಿಸ್ಟಿಯಾನೊ ರೊನಾಲ್ಡೊನ ದುಬಾರಿ ಬೆಲೆಯ Bugatti Veyron ಕಾರು ಗುದ್ದಿಸಿ ಪುಡಿಮಾಡಿದ ಚಾಲಕ