ಬೆಂಗಳೂರು: ಕಿಯಾ ಇಂಡಿಯಾ (Kia India) ಅನಂತಪುರದಲ್ಲಿನ ತನ್ನ ಉತ್ಪಾದನಾ ಘಟಕದಿಂದ ಒಂದು ಮಿಲಿಯನ್ (10 ಲಕ್ಷ) ವಾಹನ ಉತ್ಪಾದಿಸಿ ಮಾರಾಟ ಮಾಡಿದ ಐತಿಹಾಸಿಕ ಮೈಲುಗಲ್ಲನ್ನು ಸೃಷ್ಟಿಸಿದೆ. ಇತ್ತೀಚೆಗೆ ಬಿಡುಗಡೆಗೊಂಡ ಹೊಸ ಸೆಲ್ಟೋಸ್‌ನ ಮೊದಲ ಯುನಿಟ್ ಅನ್ನು ಬಿಡುಗಡೆ ಮಾಡುವ ಮೂಲಕ ಈ ಮೈಲುಗಲ್ಲನ್ನು ಸಾಧಿಸಲಾಗಿದೆ. ಈ ಸಂಭ್ರಮಾಚರಣೆಯು, ಅತ್ಯಂತ ಸುಧಾರಿತ, ಸುರಕ್ಷಿತ ಹಾಗೂ ಸ್ಮಾರ್ಟ್ ಆದ ಎಸ್‌ಯುವಿ ಆಗಿರುವ ಹೊಸ ಸೆಲ್ಟೋಸ್ ಉತ್ಪಾದನೆಯ ಪ್ರತೀಕವಾಗಿದೆ.
ಹೊಸ ಸೆಲ್ಟೋಸ್ ಎಸ್ಯುವಿಯಲ್ಲಿ ಹಲವು ಹೊಸ ವೈಶಿಷ್ಟ್ಯಗಳಿವೆ. 32 ಸೇಫ್ಟಿ ಫೀಚರ್ಗಳಲ್ಲಿ ಅತ್ಯಂತ ಸುಧಾರಿತ ಲೆವೆಲ್ 2 ಎಡಿಎಎಸ್ ಸೇರಿಕೊಂಡಿದೆ. ಜುಲೈ 14ರಿಂದ ಭಾರತದಲ್ಲಿ ಕಾರಿನ ಪ್ರೀ ಬುಕಿಂಗ್ ಆರಂಭಗೊಂಡಿದೆ. 10 ಲಕ್ಷದ ಕಾರನ್ನು ಬಿಡುಗಡೆ ಮಾಡಿ ಮಾತನಾಡಿದ ಕಿಯಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ತೇ-ಜಿನ್ ಪಾರ್ಕ್, ನಮ್ಮ ಉದ್ಯೋಗಿಗಳು ಮತ್ತು ನಮ್ಮ ಪಾಲುದಾರರಿಗೆ ಇದು ಅತ್ಯಂತ ಮಹತ್ವದ ಕ್ಷಣವಾಗಿದೆ. ಇವರೆಲ್ಲರೂ ನಮ್ಮ ಪಯಣದಲ್ಲಿ ನಮ್ಮ ಜೊತೆಯಾಗಿದ್ದಾರೆ ಮತ್ತು ಬೆಂಬಲ ನೀಡಿದ್ದಾರೆ. ಅಲ್ಲದೆ ಭಾರತದ ಗ್ರಾಹಕರಿಗೆ ಕಿಯಾ ಅವರ ಅವಿಭಾಜ್ಯ ಅಂಗವನ್ನಾಗಿಸಲು ಸಹಾಯ ಮಾಡಿದ್ದಾರೆ. ಅವರ ಬೆಂಬಲ ಮತ್ತು ಪ್ರೀತಿಗೆ ನಾವು ಅತ್ಯಂತ ಆಭಾರಿಯಾಗಿದ್ದೇವೆ. ಕಿಯಾ ಇಂಡಿಯಾದ ಭವಿಷ್ಯ ಅತ್ಯಂತ ಪ್ರಕಾಶಮಾನವಾಗಿದೆ ಮತ್ತು ಹೊಸ ಸೆಲ್ಟೋಸ್ ಅದ್ಭುತ ಅಧ್ಯಾಯ ಆರಂಭಿಸಿದೆ. ಈ ಮೂಲಕ ಭಾರತದ ಮಾರುಕಟ್ಟೆಯಲ್ಲಿ ವಾಹನೋದ್ಯಮದ ಪರಿಣಿತಿಯ ಕಡೆಗೆ ನಾವು ಪ್ರಯಾಣಿಸುತ್ತಿದ್ದೇವೆ ಎಂದರು.
2019 ಆಗಸ್ಟ್‌ನಲ್ಲಿ ಸೆಲ್ಟೋಸ್ ಬಿಡುಗಡೆ ಮಾಡುವ ಮೂಲಕ ಭಾರತೀಯ ಮಾರುಕಟ್ಟೆಗೆ ಕಿಯಾ ಇಂಡಿಯಾ ಪ್ರವೇಶಿಸಿತ್ತು. ಇದು ಭಾರತದ ಅತ್ಯಂತ ಮೆಚ್ಚಿನ ಎಸ್‌ಯುವಿಗಳಲ್ಲಿ ಒಂದಾಯಿತು. ದಾಖಲೆಯ 46 ತಿಂಗಳುಗಳಲ್ಲಿ ಇದು 5,00,000 ಮಾರಾಟದ ಮೈಲುಗಲ್ಲನ್ನು ಸಾಧಿಸಿಕೊಂಡಿತ್ತು. ಕಿಯಾ 2020 ರಲ್ಲಿ ಕಾರ್ನಿವಾಲ್ ಮತ್ತು ಸೋನೆಟ್ ಮೂಲಕ ಉತ್ಪನ್ನದ ಪೋರ್ಟ್‌ಪೋಲಿಯೋ ವಿಸ್ತರಿಸಿಕೊಂಡಿತು. ಅಲ್ಲದೆ, 2022 ರಲ್ಲಿ ಕ್ಯಾರೆನ್ಸ್ ಮತ್ತು ಇವಿ6 ಅನ್ನು ಬಿಡುಗಡೆ ಮಾಡಿತು. ಇದರಿಂದ ಭಾರತದ ಮಾರುಕಟ್ಟೆಯಲ್ಲಿ ಕಿಯಾ ಸ್ಥಾನ ಇನ್ನಷ್ಟು ಸುಭದ್ರವಾಯಿತು. ಅನಂತಪುರದಲ್ಲಿ ಕಿಯಾದ ಅತ್ಯಾಧುನಿಕವಾದ ಉತ್ಪಾದನಾ ಘಟಕವಿದ್ದು, ಇದು ಈವರೆಗೆ 532,450 ಯುನಿಟ್ ಸೆಲ್ಟೋಸ್ ಕಾರನ್ನೇ ಉತ್ಪಾದನೆ ಮಾಡಲಾಗಿದೆ. 3,32,450 ಯುನಿಟ್ ಸೋನೆಟ್, 1,20,516 ಕ್ಯಾರೆನ್ಸ್ ಹಾಗೂ 584 ಕಾರ್ನಿವಾಲ್ ಕಾರನ್ನು ಉತ್ಪಾದನೆ ಮಾಡಲಾಗಿದೆ.
ಹೊಸ ಅಭಿಯಾನ
ಒಂದು ಮಿಲಿಯನ್ ಸಂಭ್ರಮಾಚರಣೆಯ ಭಾಗವಾಗಿ, “ನಮ್ಮ ಜೀವನವನ್ನು ಶ್ರೀಮಂತಗೊಳಿಸುವ ಸ್ಫೂರ್ತಿದಾಯಕ ಸಂಚಾರ ಸೌಲಭ್ಯಗಳು” ಎಂಬ ತನ್ನ ಧ್ಯೇಯವನ್ನೂ ಕಿಯಾ ಇಂಡಿಯಾ ಅನಾವರಣಗೊಳಿಸಿತು. ಇದರ ಅಡಿಯಲ್ಲಿ ಕಿಯಾ ಇಂಡಿಯಾ ಹೊಸ ಕಾಲದ ಭಾರತೀಯ ಗ್ರಾಹಕರಿಗೆ ಸ್ಫೂರ್ತಿದಾಯಕ ಸಂಚಾರ ಅನುಭವವನ್ನು ಒದಗಿಸುವುದರ ಮೇಲೆ ಗಮನ ಕೇಂದ್ರೀಕರಿಸಲಿದೆ. ಹೊಸ ಸೆಗ್ಮೆಂಟ್ ಪ್ರವೇಶಗಳು, ಗ್ರಾಹಕ ಕೇಂದ್ರಿತ ಅನ್ವೇಷಣೆಗಳು 300+ ಇಂದ 600+ ಸೇಲ್ಸ್‌ಪಾಯಿಂಟ್‌ಗಳಿಂದ ನೆಟ್‌ವರ್ಕ್ ಅನ್ನು ವಿಸ್ತರಿಸುವ ಮೂಲಕ 10% ಮಾರುಕಟ್ಟೆ ಪಾಲನ್ನು ಪಡೆದು ಕಿಯಾ 2.0 ಗೆ ಬದಲಾಗುವ ಗುರಿಯನ್ನು ಇದು ಹಾಕಿಕೊಂಡಿದೆ.
ಸಿಎಸ್‌ಆರ್ ಕಾರ್ಯಕ್ರಮಗಳು
ಕಿಯಾ ತನ್ನ ಸಿಎಸ್‌ಆರ್ ಉಪಕ್ರಮಗಳಾದ ಪ್ರಾಜೆಕ್ಟ್ ಡ್ರಾಪ್ (ಪ್ಲಾಸ್ಟಿಕ್ ಬಳಕೆ ಇಳಿಕೆ) ಮತ್ತು ಉಪಹಾರ್ (ಅಗತ್ಯವಿರುವ ಗ್ರಾಹಕರಿಗೆ ಹಣ್ಣಿನ ಸಸ್ಯಗಳ ಉಡುಗೊರೆ ನೀಡುವುದು) ಮೂಲಕ ಬದಲಾವಣೆಗಳನ್ನು ಉಂಟುಮಾಡುವ ಕಾರ್ಯಕ್ರಮಗಳನ್ನು ಆರಂಭಿಸಿದೆ.
ಕಿಯಾ ಇಂಡಿಯಾ ಕೈಗೊಂಡ ಇತರ ಕೆಲವು ಸಿಎಸ್‌ಆರ್ ಚಟುವಟಿಕೆಗಳೆಂದರೆ, ಸ್ಥಳೀಯ ವಿದ್ಯಾರ್ಥಿಗಳಿಗೆ ಆಟೋ ಸರ್ವೀಸ್ ಟೆಕ್ನೀಶಿಯನ್ ಪ್ರೋಗ್ರಾಮ್, ಪೆನುಕೊಂಡ ಸರ್ಕಾರಿ ಡಿಗ್ರಿ ಕಾಲೇಜಿಗೆ ಲೈಬ್ರರಿ ಬ್ಲಾಕ್ ಕಟ್ಟಡ, ಧೋನೆ ಐಟಿಐ ಕಾಲೇಜಿನ ಆಧುನಿಕ ಲ್ಯಾಬ್‌ಗೆ ಕೊಡುಗೆ, ಅನಂತಪುರದಲ್ಲಿ ಸೂಪರ್ ಸ್ಪೆಷಾಲಿಟಿ ಕ್ಯಾಥ್‌ಲ್ಯಾಬ್‌ಗೆ ಕನ್ಸ್ಯೂಮಬಲ್‌ಗಳ ದೇಣಿಗೆ, ಸುಬ್ಬರೌನಿ ಪಳ್ಳಿಯಲ್ಲಿ ಪ್ಲಾಂಟೇಶನ್ ಅಭಿಯಾನ, ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ಗುಂಟೂರು ಪೆನುಕೊಂಡದಲ್ಲಿ ವೈದ್ಯಕೀಯ ಸಲಕರಣೆ ಮತ್ತು ಡೇ ಕೇರ್ ಶೆಲ್ಟರ್.
ಇದನ್ನೂ ಓದಿ : Hond Dio 125 : ಹೋಂಡಾ ಡಿಯೋ 125 ಸ್ಕೂಟರ್ ಬಿಡುಗಡೆ, ಬೆಲೆ ಮತ್ತಿತರ ಮಾಹಿತಿ ಇಲ್ಲಿದೆ…
ಅನಂತಪುರದಲ್ಲಿನ ಜಾಗತಿಕ ಘಟಕದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ 1 ಮಿಲಿಯನ್ ಯುನಿಟ್‌ಗಳ ಪ್ರೊಡಕ್ಷನ್ ಅನ್ನು ಆಚರಿಸುವ ಮೂಲಕ ಗಮನಾರ್ಹ ಸಾಧನೆಯನ್ನು ಕಿಯಾ ಇಂಡಿಯಾ ಮಾಡಿದೆ. 1 ಮಿಲಿಯನ್‌ನ ಕೊನೆಯ ಕಾರು ಆಗಿ ಹೊಸ ಸೆಲ್ಟೋಸ್ ಅನ್ನು ಈ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಹಣಕಾಸು, ಯೋಜನೆ ಮತ್ತು ಶಾಸನಸಭೆ ವ್ಯವಹಾರಗಳ ಸಚಿವ ಶ್ರೀ ಬುಗ್ಗನ ರಾಜೇಂದ್ರನಾಥ ರೆಡ್ಡಿ, ಉದ್ಯಮಗಳು, ಮೂಲಸೌಕರ್ಯ, ಹೂಡಿಕೆ ಮತ್ತು ವಾಣಿಜ್ಯ, ಮಾಹಿತಿ ತಂತ್ರಜ್ಞಾನ ಸಚಿವ ಗುಡಿವಡ ಅಮರನಾಥ, ಸಂಸತ್ ಸದಸ್ಯ ಗೊರಂಟ್ಲ ಮಾಧವ ಹಾಗೂ ಪೆನುಕೊಂಡದ ಶಾಸಕ ಜಿ ಶಂಕರನಾರಾಯಣ ಇದ್ದರು.