Site icon Vistara News

Mahindra XUV 700 : ಶಿರಡಿ ಬಾಬಾ ದೇಗುಲಕ್ಕೆ ಹೊಚ್ಚ ಹೊಸ ಎಸ್​ಯುವಿ ಕಾರು ದೇಣಿಗೆ ಕೊಟ್ಟ ಮಹೀಂದ್ರಾ ಕಂಪನಿ

Mahinda 700

ನವ ದೆಹಲಿ: ಭಾರತದಲ್ಲಿ, ದೇವಾಲಯಗಳಿಗೆ ದೇಣಿಗೆಗಳನ್ನು ನೀಡುವ ಹಳೆಯ ಸಂಪ್ರದಾಯ ಮುಂದುವರಿದಿದೆ. ಪ್ರತಿಷ್ಠಿತ ಕಂಪನಿಗಳು ಮತ್ತು ವ್ಯಕ್ತಿಗಳು ದೇಗುಗಳಿಗೆ ದತ್ತಿ ನೀಡುವ ಮೂಲಕ ತಮ್ಮ ಭಕ್ತಿ ಪ್ರದರ್ಶಿಸುತ್ತಿದ್ದಾರೆ. ಪ್ರಸಿದ್ಧ ಆಟೋಮೊಬೈಲ್ ತಯಾರಕ ಮಹೀಂದ್ರಾ & ಮಹೀಂದ್ರಾ ಕಂಪನಿಯು ಶಿರಡಿಯ ಶ್ರೀ ಸಾಯಿಬಾಬಾ ಸಂಸ್ಥಾನದ ದೈವಿಕ ನಿವಾಸಕ್ಕೆ ಹೊಚ್ಚ ಹೊಸ ಮಹೀಂದ್ರಾ ಎಕ್ಸ್ ಯುವಿ 700 ಎಎಕ್ಸ್ 7 ಎಲ್ ಅನ್ನು ಉಡುಗೊರೆಯಾಗಿ ನೀಡಿದೆ. ಸಮಾರಂಭ ಮತ್ತು ಮೆರವಣಿಗೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ದೇಣಿಗೆ ನೀಡಿದ ಮಹೀಂದ್ರಾ ಎಕ್ಸ್ ಯುವಿ 700 ಅನ್ನು ಸ್ವೀಕರಿಸುವ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನವು ನಡೆಸಿದ ಸಮಾರಂಭ ಮತ್ತು ಮೆರವಣಿಗೆಯ ವೀಡಿಯೊವನ್ನು ಸಾಯಿ ಲೀಲಾ ಟೈಮ್ಸ್ ತನ್ನ ಚಾನೆಲ್ ಹಂಚಿಕೊಳ್ಳಲಾಗಿದೆ. ದೇಶದ ಅತಿದೊಡ್ಡ ಎಸ್​​ಯುವಿ ತಯಾರಕರಾದ ಮಹೀಂದ್ರಾ ಮತ್ತು ಮಹೀಂದ್ರಾ ಶಿರಡಿಯ ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ಹೊಚ್ಚ ಹೊಸ ಎಕ್ಸ್ ಯುವಿ 700 ಎಎಕ್ಸ್ 7 ಎಲ್ ಅನ್ನು ಕೊಡುಗೆಯಾಗಿ ನೀಡಿದೆ ಎಂದು ವೀಡಿಯೊದ ನಿರೂಪಕ ಹೇಳಿದ್ದಾರೆ.

ವೀಡಿಯೊದ ಪ್ರಕಾರ, ಮಹೀಂದ್ರಾ & ಮಹೀಂದ್ರಾದ ಆಟೋಮೋಟಿವ್ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ಮಹೀಂದ್ರಾ ಗ್ರೂಪ್ ಎಕ್ಸಿಕ್ಯೂಟಿವ್ ಬೋರ್ಡ್ ಸದಸ್ಯ ವೀಜಯ್ ನಕ್ರಾ ಅವರು ಕಾರನ್ನು ಹಸ್ತಾಂತರಿಸಿದರು. ಶಿರಡಿಯ ಸಾಯಿಬಾಬಾ ದೇವಾಲಯದ ಮುಂದೆ ಅಧಿಕೃತ ಸಮಾರಂಭ ಹಾಗೂ ಮೆರವಣಿಗೆಯ ನಂತರ ಮಹೀಂದ್ರಾ ಕಾರ್ಯನಿರ್ವಾಹಕರು ಕಾರಿನ ಕೀಗಳನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಆಡಳಿತಾಧಿಕಾರಿ ಡಾ.ಆಕಾಶ್ ಕಿಸ್ವೆ ಅವರಿಗೆ ಹಸ್ತಾಂತರಿಸಿದರು.

ಹೊಸ ಮಾಡೆಲ್​ನಲ್ಲಿ ಒಂದು ಕಾರು ಬಾಬಾಗೆ ಅರ್ಪಣೆ

ಡಾ. ಆಕಾಶ್ ಕಿಸ್ವೆ ಅವರು ಮಾತನಾಡುತ್ತಾ, ಮಹೀಂದ್ರಾ ಮತ್ತು ಮಹೀಂದ್ರಾ ದೇಶದಲ್ಲಿ ಹೊಸ ಮಾದರಿಯನ್ನು ಬಿಡುಗಡೆ ಮಾಡಿದಾಗಲೆಲ್ಲ ಒಂದು ಕಾರನ್ನು ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ನೀಡುತ್ತದೆ ಎಂಬ ವಿಚಾರವನ್ನು ಬಹಿರಂಗ ಮಾಡಿದ್ದಾರೆ. ಕಂಪನಿಯು ಇಲ್ಲಿಯವರೆಗೆ ಬೊಲೆರೊ ಸ್ಕಾರ್ಪಿಯೋ, ಕ್ಸೈಲೊ ಲೋಗನ್, ಮ್ಯಾಕ್ಸಿಮೊ, ಯುವರಾಜ್ ಟ್ರ್ಯಾಕ್ಟರ್, ಎಕ್ಸ್ ಯುವಿ 500, ಎಕ್ಸ್ ಯುವಿ 300, ಮರಾಜೊ, ಥಾರ್ ಮತ್ತು ಇತರ ನಾಲ್ಕು ಮಾಡೆಲ್​ಗಳನ್ನು ಟ್ರಸ್ಟ್​​ಗೆ ನೀಡಿದೆ.

ಎಕ್ಸ್ ಯುವಿ 700 ಮಹೀಂದ್ರಾದ ಹೆಚ್ಚು ಬೇಡಿಕೆಯ ಮಾಡೆಲ್​ ಅಗಿದ್ದು, ಆಗಸ್ಟ್ 2021ರಲ್ಲಿ ಬಿಡುಗಡೆಯಾದಾಗಿನಿಂದ ಕಂಪನಿಯು ಹೆಚ್ಚಿನ ಸಂಖ್ಯೆಯ ಕಾರುಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಹಳೆಯ ಎಕ್ಸ್ ಯುವಿ 500ಗೆ ಪರ್ಯಾಯವಾಗಿ ಪರಿಚಯಿಸಲಾದ ಎಕ್ಸ್ ಯುವಿ 700 ಅನ್ನು ಮೊನೊಕಾಕ್ ರಚನೆಯಲ್ಲಿ ನಿರ್ಮಿಸಲಾಗಿದೆ ಫ್ರಂಟ್​ ವೀಲ್ ಡ್ರೈವ್ ಮತ್ತು ಆಲ್-ವೀಲ್ ಡ್ರೈವ್ ಆಯ್ಕೆಗಳೊಂದಿಗೆ ಬರುತ್ತದೆ. 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್​ ಎಂಜಿನ್ ಹೊಂದಿದೆ. ಇವೆರಡೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತವೆ.

ಇದನ್ನೂ ಓದಿ : EV Cars : ಎಲೆಕ್ಟ್ರಿಕ್​ ವಾಹನಗಳು ಪೆಟ್ರೋಲ್​, ಡೀಸೆಲ್​ ಕಾರುಗಳಿಗಿಂತ ಹೆಚ್ಚು ಅಪಾಯಕಾರಿಯಂತೆ!

ಎಕ್ಸ್ ಯುವಿ 700 ತನ್ನ ವಿಭಾಗದಲ್ಲಿ ಎಡಿಎಎಸ್ ಅಥವಾ ಅಡ್ವಾನ್ಸ್​​ಡ್​ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ಅನ್ನು ನೀಡಿದ ಮೊದಲನೆಯ ಕಾರು. ಈ ಬೈಕಿನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಟ್ರಾಫಿಕ್ ಸೈನ್ ರೆಕಗ್ನಿಷನ್, ಆಟೋನಮಸ್ ಎಮರ್ಜೆನ್ಸಿ ಬ್ರೇಕಿಂಗ್, ಡ್ರೈವರ್ ಮಂಪರು ಪತ್ತೆ, ಫ್ರಂಟ್ ಕೊಲಿಷನ್ ವಾರ್ನಿಂಗ್, ಲೇನ್ ಕೀಪ್ ಅಸಿಸ್ಟ್ ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ನಂತಹ ಫೀಚರ್ ಗಳನ್ನು ಅಳವಡಿಸಲಾಗಿದೆ. ಈ ಎಸ್​​​ಯುವಿ ಜಿಎನ್ ಸಿಎಪಿಯಲ್ಲಿ 5-ಸ್ಟಾರ್ ರೇಟಿಂಗ್ ಅನ್ನು ಸಾಧಿಸಿದೆ. ವಯಸ್ಕ ಪ್ರಯಾಣಿಕರ ಸುರಕ್ಷತೆಗೆ 5 ಸ್ಟಾರ್​​ಗಳು ಮತ್ತು ಮಕ್ಕಳ ಸುರಕ್ಷತೆಗೆ 4 ಸ್ಟಾರ್​​ಗಳು.

ಗುರುವಾಯೂರ್​ ದೇಗುಲಕ್ಕೆ ಥಾರ್​

ಮಹೀಂದ್ರಾ ಕಂಪನಿಯು ಇತ್ತೀಚೆಗೆ ತನ್ನ ಥಾರ್ ಕಾರನ್ನು ಕೇರಳದ ಗುರುವಾಯೂರ್​ ದೇವಸ್ಥಾನಕ್ಕೆ ನೀಡಿತ್ತು. ಈ ಮೂಲಕ ದೇಶದ ಬೇರೆಬೇರೆ ದೇಗುಲಕ್ಕೆ ಕಾರುಗಳನ್ನು ದೇಣಿಗೆ ನೀಡುವ ಸಂಪ್ರದಾಯವನ್ನು ಮುಂದುವರಿಸಿತ್ತು.

Exit mobile version