Site icon Vistara News

Mahindra Car : ಮೂರು ತಿಂಗಳಲ್ಲಿ ಮೂರು ಬಾರಿ ಕೆಟ್ಟು ನಿಂತ ಇವಿ ಕಾರು, ಧರಣಿ ಕುಳಿತ ಮಾಲೀಕ!

Mahindra Car

ಚೆನ್ನೈ: ಚೆನ್ನೈನ ಕ್ರೋಮ್​​ಪೇಟ್ ಮೂಲದ ಮಹೀಂದ್ರಾ ಎಕ್ಸ್ ಯುವಿ 400 ಇವಿ ಕಾರಿನ ಮಾಲೀಕರೊಬ್ಬರು ಕಾರು ಪದೇಪದೆ ಕೆಟ್ಟು ನಿಲ್ಲುತ್ತದೆ ಎಂದು ಕೋಪಗೊಂಡು ಶೋರೂಮ್ (Mahindra Car) ಮುಂದೆ ಧರಣಿ ಕುಳಿತ ಪ್ರಸಂಗ ನಡೆದಿದೆ. ತಮ್ಮ ಮೂರು ತಿಂಗಳಷ್ಟು ಹೊಸ ವಾಹನವು ಮೂರು ಬಾರಿ ಅರ್ಧ ದಾರಿಯಲ್ಲಿ ಕೆಟ್ಟು ನಿಂತಿದೆ. ಆದರೆ, ಅದಕ್ಕೆ ಪೂರಕವಾಗಿರುವ ಮಾರ್ಗದರ್ಶನ ಕಂಪನಿ ಕಡೆಯಿಂದ ಸಿಗುತ್ತಿಲ್ಲ. ಹೀಗಾಗಿ ಧರಣಿ ಕುಳಿತಿದ್ದೇನೆ ಎಂಬುದಾಗಿ ಕಾರಿನ ಮಾಲೀಕರು ಹೇಳಿಕೊಂಡಿದ್ದಾರೆ.

ಮಹೀಂದ್ರಾ ಎಕ್ಸ್ ಯುವಿ 400 ಇವಿ ಮಾಲೀಕ ತಮ್ಮ ಕೋಪ ಮತ್ತು ಬ್ರಾಂಡ್ ಮತ್ತು ಅದರ ಉತ್ಪನ್ನ ಎರಡರಲ್ಲೂ ನಂಬಿಕೆ ಕಳೆದುಕೊಂಡಿರುವ ಬಗ್ಗೆ ಬ್ಯಾನರ್ ಬರೆದುಕೊಂಡು ಅದರ ಕೆಳಗೆ ಧರಣಿ ಕುಳಿತಿದ್ದಾರೆ. ಅದೇ ರೀತಿ ತಮಗೆ ಆಗಿರುವ ಮಾನಸಿಕ ತೊಂದರೆ ಮತ್ತು ಪರಿಹರಿಸಲಾಗದ ಸಮಸ್ಯೆಗಳನ್ನು ಉಲ್ಲೇಖಿಸಿ ಕಂಪನಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿಯೂ ಅವರು ಹೇಳಿದ್ದಾರೆ. ಇವಿ ಕಾರನ್ನು ಖರೀದಿಸಲು ನಾನು 21 ಲಕ್ಷ ರೂ.ಗಳನ್ನು ವ್ಯಯಿಸಿದ್ದೇನೆ. ಮಾಸಿಕ 32,000 ರೂ.ಗಳ ಇಎಂಐ ಪಾವತಿಸುತ್ತಿದ್ದೇನೆ. ವಿದೇಶಿ ಬ್ರಾಂಡ್ ಗಳಿಗಿಂತ ಮಹೀಂದ್ರಾವನ್ನು ಆಯ್ಕೆ ಮಾಡಿಕೊಂಡಿರುವುದು ಅಭಿಮಾನದಿಂದ. ಆದರೆ ಕಂಪನಿಯ ಸೂಕ್ತ ನೆರವು ನೀಡದ ಕಾರಣ ಭ್ರಮ ನಿರಸನಗೊಂಡಿದ್ದೇನೆ ಎಂಬುದಾಗಿ ಅವರು ಬರೆದುಕೊಂಡಿದ್ದಾರೆ.

ಈ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಯ ನಿಖರ ಸ್ವರೂಪವು ಗೊತ್ತಿಲ್ಲ. ಮಾಲೀಕರಿಗೂ ಆ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ದಾರಿ ಮಧ್ಯದಲ್ಲಿ ಕೆಟ್ಟು ನಿಂತಿದೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. ಈ ಮಾಡೆಲ್​ನ ಕಾರು ಹಲವಾರು ಬಾರಿ ಕೆಟ್ಟು ನಿಂತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ ಎನ್ನಲಾಗಿದೆ. ಶೋ ರೂಮ್​ಗೆ ಟೋಯಿಂಗ್ ಮಾಡುವುದು ಅನಿವಾರ್ಯವಾಗಿದೆ ಎನ್ನಲಾಗುತ್ತಿದೆ.

ಹಲವು ದೂರುಗಳು ದಾಖಲು

ಸಾಮಾಜಿಕ ಮಾಧ್ಯಮಗಳಲ್ಲಿ ಮಹೀಂದ್ರಾ ಇವಿ ಗ್ರಾಹಕರು ತಮ್ಮ ಕಾರುಗಳಲ್ಲಿ ಉಂಟಾಗಿರುವ ವಿವಿಧ ಸಮಸ್ಯೆಗಳ ಬಗ್ಗೆ ಕುಂದುಕೊರತೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹೆಚ್ಚಿನ ಮಹೀಂದ್ರಾ ವಾಹನಗಳಿಗೆ ವ್ಯಾಪಕವಾದ ಕಾಯುವಿಕೆ ಅವಧಿಗಳ ಹೊರತಾಗಿಯೂ, ಈ ಕಾರುಗಳ ಗುಣಮಟ್ಟವು ನಿರೀಕ್ಷೆಗಳಿಗಿಂತ ಕಡಿಮೆಯಾಗಿದೆ ಎಂದು ದೂರಲಾಗುತ್ತಿದೆ. ಉದಾಹರಣೆಗೆ ಎಕ್ಸ್ ಯುವಿ 400 ಇವಿ ಹಲವಾರು ದೂರುಗಳನ್ನು ಪಡೆದುಕೊಂಡಿವೆ. ಅದಲ್ಲದೆ ಸಮಕಾಲೀನ ಮಾದರಿಗಳಾದ ಸ್ಕಾರ್ಪಿಯೋ-ಎನ್, ಎಕ್ಸ್ ಯುವಿ 700, ಥಾರ್ ಮತ್ತು ಎಕ್ಸ್ ಯುವಿ 400 ಇವಿಯಲ್ಲೂ ಸಮಸ್ಯೆ ಕಾಣಿಸಿಕೊಂಡಿದೆ.

ತಪ್ಪು ಡೇಟಾಗಳ ಪ್ರದರ್ಶನ

ಮಹೀಂದ್ರಾ ವಾಹನಗಳಲ್ಲಿ ಈಗ ಗರಿಷ್ಠ ಫೀಚರ್​ಗಳನ್ನು ನೀಡಲಾಗಿದೆ. ಅವುಗಳೆಲ್ಲವೂ ಸೆನ್ಸ ಆಧರಿತವಾಗಿದೆ. ಆದರೆ, ಈ ಸೆನ್ಸರ್​ಗಳು ಸೂಕ್ತ ಮಾಹಿತಿ ಪ್ರದರ್ಶನ ಮಾಡುತ್ತಿಲ್ಲ ಎಂಬ ಆರೋಪಗಳಿವೆ. ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಇದಲ್ಲಿ ಪ್ರಮುಖವಾದದ್ದು. ಇದಲ್ಲದೆ, ಡೋರ್ ಸೆನ್ಸರ್​ಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಮಹೀಂದ್ರಾ ವಾಹನದ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Shah Rukh Khan : ಶಾರುಖ್‌ ಎನರ್ಜಿ ಕಂಡು ಬೆರಗಾದ ಉದ್ಯಮಿ ಆನಂದ್‌ ಮಹೀಂದ್ರಾ! ನೀವೂ ಡ್ಯಾನ್ಸ್‌ ನೋಡಿ

ಹೆಚ್ಚಿನ ಮಹೀಂದ್ರಾ ವಾಹನಗಳು ಲ್ಯಾಡರ್-ಆನ್-ಫ್ರೇಮ್​ನಲ್ಲಿ ನಿರ್ಮಾಣಗೊಂಡಿವೆ. ಈ ವಾಹನಗಳು ತಮ್ಮ ದೃಢವಾದ ಮತ್ತು ಒರಟಾದ ನಿರ್ಮಾಣಕ್ಕೆ ಹೆಸರುವಾಸಿ. ಆದಾಗ್ಯೂ, ಆದರೆ, ಮಹೀಂದ್ರಾ ವಾಹನಗಳು ಸುಮಾರು 40,000 ಕಿಲೋಮೀಟರ್ ದೂರವನ್ನು ಕ್ರಮಿಸಿದ ನಂತರ ಸದ್ದು ಮಾಡುತ್ತವೆ ಎನ್ನಲಾಗಿದೆ.

Exit mobile version