ಮಾರುತಿ ಸುಜುಕಿ (Maruti Suzuki) ನೆಕ್ಸಾ ಸರಣಿಯ ತನ್ನ ಅತ್ಯಂತ ಚಿಕ್ಕ ಎಸ್ಯುವಿಯಾಗಿರುವ ಫ್ರಾಂಕ್ಸ್ (Maruti Fronx) 1 ಲಕ್ಷ ಮಾರಾಟದ ಮೈಲಿಗಲ್ಲನ್ನು ದಾಟಿದೆ. ಮಾರುತಿ ಸುಜುಕಿ ಕಂಪನಿಯು ಇದನ್ನು ಸಾಧಿಸಲು 300 ದಿನಗಳು (ಸುಮಾರು 10 ತಿಂಗಳುಗಳು) ತೆಗೆದುಕೊಂಡಿದೆ. ಮಾರುತಿ ಫ್ರಾಂಕ್ಸ್ ನ ಸುಮಾರು 9,000 ಯುನಿಟ್ ಗಳನ್ನು ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕನ್ ಮಾರುಕಟ್ಟೆಗಳಿಗೆ ರಫ್ತು ಕೂಡ ಮಾಡಲಾಗಿದೆ. ಭಾರತೀಯ ಕಾರು ಮಾರುಕಟ್ಟೆಯಲ್ಲಿ ಮುಂಚೂಣಿ ಸ್ಥಾನ ಹೊಂದಿರುವ ಮಾರುತಿ, ಬಿಡುಗಡೆ ಮಾಡುವ ಕಾರುಗಳು ಬಹುತೇಕ ಯಶಸ್ಸು ಕಾಣುತ್ತದೆ. ಅಂತೆಯೇ ಫ್ರಾಂಕ್ಸ್ ಕೂಡ ಜನಪ್ರಿಯಗೊಂಡಿದೆ.
ಬಿಡುಗಡೆಗೊಂಡ ಬಳಿಕ ಮೊದಲ ಮೂರು ತಿಂಗಳಲ್ಲಿ ಸೆಮಿಕಂಡಕ್ಟರ್ ಸಮಸ್ಯೆಯಿಂದಾಗಿ ಫ್ರಾಂಕ್ಸ್ ಕಾರಿನ ಡೆಲಿವರಿ ವಿಳಂಬವಾಗಿತ್ತು. ಆದಾಗ್ಯೂ ಫ್ರಾಂಕ್ಸ್ ಹೊಸ ಮೈಲಿಗಲ್ಲನ್ನು ಸಾಧಿಸಿದೆ ಎಂದು ಮಾರುತಿ ಹೇಳಿದೆ. ಪ್ರಸ್ತುತ ಬ್ರಾಂಡ್ ತನ್ನ ನೆಕ್ಸಾ ಮಳಿಗೆಗಳ ಮೂಲಕ ಪ್ರತಿ ತಿಂಗಳು ಸುಮಾರು 12,000-14,200 ಯುನಿಟ್ ಫ್ರಾಂಕ್ಸ್ ಅನ್ನು ಮಾರಾಟ ಮಾಡುತ್ತದೆ. ಅಂದ ಹಾಗೆ ಫ್ರಾಂಕ್ಸ್ ಕಾರು ಕೊಳ್ಳುವವರ ಸರಾಸರಿ ವಯಸ್ಸು 35 ವರ್ಷಗಳಿಗಿಂತ ಕಡಿಮೆಯಾಗಿದೆ. ಅವರಲ್ಲಿ ಹೆಚ್ಚಿನವರು ನಗರ ಆಧಾರಿತ, ಮೊದಲ ಬಾರಿಗೆ ಖರೀದಿಸುವವರು ಎಂದು ಮಾರುತಿ ಹೇಳಿಕೊಂಡಿದೆ.
ಫ್ರಾಂಕ್ಸ್ ಪ್ರಸ್ತುತ ಎಸ್ ಯುವಿ ಮಾರುಕಟ್ಟೆಯಲ್ಲಿ 12 ಪ್ರತಿಶತದಷ್ಟು ಪಾಲನ್ನು ಹೊಂದಿದೆ. ಎಂಟ್ರಿ ಲೆವೆಲ್ ಮಾರುಕಟ್ಟೆ ಪಾಲು 17 ಪ್ರತಿಶತದಿಂದ 30 ಪ್ರತಿಶತಕ್ಕೆ ಏರಿದೆ. ಫ್ರಾಂಕ್ಸ್ ನ ಬೆಲೆಯು ಬಲೆನೊಗೆ ಸಮಾನವಾಗಿದ್ದರೂ ಇದು ತನ್ನದೇ ಆದ ಗ್ರಾಹಕರನ್ನು ಹೊಂದಿದೆ. ಈ ಗ್ರಾಹಕು ಎಂಟ್ರಿ ಲೆವೆಲ್ ಕಾಂಪ್ಯಾಕ್ಟ್ ಎಸ್ ಯುವಿಯನ್ನು ಹುಡುಕುತ್ತಿದ್ದಾರೆ. ಬಲೆನೊಗೆ ಸಂಬಂಧಿಸಿದಂತೆ ಪ್ರೀಮಿಯಂ ಹ್ಯಾಚ್ ಬ್ಯಾಕ್ ಮಾರಾಟವು ಕಳೆದ ವರ್ಷದಲ್ಲಿ ಐದು ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಮಾರುತಿ ಹೇಳಿದೆ.
ಎಂಜಿನ್ ಆಯ್ಕೆಗಳು
ಫ್ರಾಂಕ್ಸ್ ಎರಡು ಪವರ್ ಟ್ರೇನ್ ಆಯ್ಕೆಗಳೊಂದಿಗೆ ಲಭ್ಯವಿದೆ – 1.2-ಲೀಟರ್ ಪೆಟ್ರೋಲ್ ಎಂಜಿನ್ 90 ಬಿಹೆಚ್ ಪಿ ಮತ್ತು 113 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್ನೊಂದಿಗೆ ಬರುತ್ತದೆ. ಅದೇ ರೀತಿ 1.0-ಲೀಟರ್ ಬೂಸ್ಟರ್ ಜೆಟ್ ಎಂಜಿನ್ 100 ಬಿಹೆಚ್ ಪಿ ಮತ್ತು 148 ಎನ್ಎಂ ಅನ್ನು ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಟ್ರಾನ್ಸ್ಮಿಷನ್ಗೆ ಜೋಡಿಸಲ್ಪಟ್ಟಿದೆ. ಒಟ್ಟು ಫ್ರಾಂಕ್ಸ್ ಗ್ರಾಹಕರಲ್ಲಿ ಸುಮಾರು 7 ಪ್ರತಿಶತದಷ್ಟು ಜನರು ಬೂಸ್ಟರ್ ಜೆಟ್ ಎಂಜಿನ್ ಅನ್ನು ಆಯ್ಕೆ ಮಾಡುತ್ತಾರೆ ಎಂದು ಮಾರುತಿ ಹೇಳಿದೆ.
ಇದನ್ನೂ ಓದಿ : Tata Tiago Ev : ಈ ಎಲೆಕ್ಟ್ರಿಕ್ ಕಾರು ಖರೀದಿಸಿ, 80 ಸಾವಿರ ಉಳಿಸಿ
ಒಟ್ಟು ಫ್ರಾಂಕ್ಸ್ ಮಾರಾಟದಲ್ಲಿ ಸುಮಾರು 24 ಪ್ರತಿಶತದಷ್ಟು ಆಟೋಮ್ಯಾಟಿಕ್ ಗೇರ್ ಬಾಕ್ಸ್ ವೇರಿಯೆಂಟ್ಗಳಾಗಿವೆ. 1.2-ಲೀಟರ್ ಎಂಜಿನ್ ನಲ್ಲಿ ಸಿಎನ್ ಜಿ ಆಯ್ಕೆಯೂ ಇದೆ. ಇದು ಫ್ರಾಂಕ್ಸ್ ಮಾರಾಟದಲ್ಲಿ 20 ಪ್ರತಿಶತದಷ್ಟು ಕೊಡುಗೆ ನೀಡುತ್ತದೆ. ಫ್ರಾಂಕ್ಸ್ ಪೆಟ್ರೋಲ್ ಪ್ರಸ್ತುತ ಹೆಚ್ಚಿನ ಮಳಿಗೆಗಳಲ್ಲಿ ಎರಡು ತಿಂಗಳ ಕಾಯುವಿಕೆ ಅವಧಿಯನ್ನು ಹೊಂದಿದೆ. ಆದರೆ ಟರ್ಬೊ-ಪೆಟ್ರೋಲ್ ಮಾದರಿಗಳು ಸುಲಭವಾಗಿ ಲಭ್ಯವಿದೆ.