Site icon Vistara News

Maruti Suzuki : ಮಾರುತಿ ಸುಜುಕಿಯ ಕಾಂಪಾಕ್ಟ್​ ಎಸ್​ಯುವಿ ಫ್ರಾಂಕ್ಸ್​ ಬಿಡುಗಡೆ; ಬೆಲೆ ಎಷ್ಟು?

#image_title

ಮುಂಬಯಿ: ಮಾರುತಿ ಸುಜುಕಿ ಕಂಪನಿಯ ಬಹುನಿರೀಕ್ಷಿತ ಕಾಂಪ್ಯಾಕ್ಟ್​ ಎಸ್​​ಯುವಿ ಕಾರು ಫ್ರಾಂಕ್ಸ್​ ಕಾರು ಭಾರತದ ಮಾರುಕಟ್ಟೆಗೆ ಇಳಿದಿದೆ. ಟಾಟಾ ಮೋಟಾರ್ಸ್​ನ ಪಂಚ್​ ಹಾಗೂ ಸಿಟ್ರಾನ್ ಕಂಪನಿಯ ಸಿ3ಗೆ ಪೈಪೋಟಿ ಒಡ್ಡಲೆಂದೇ ರಸ್ತೆಗಿಳಿಸಿರುವ ಈ ಕಾರಿನ ಬುಕಿಂಗ್​ ಆರಂಭಗೊಂಡಿದೆ. 7.44 ಲಕ್ಷ ರೂಪಾಯಿಂದ ಆರಂಭಗೊಂಡು 13.13 ಲಕ್ಷ ರೂಪಾಯಿ ಬೆಲೆ ಇದಕ್ಕೆ ನಿಗದಿ ಮಾಡಲಾಗಿದೆ. (ಎಕ್ಸ್​ ಶೋರೂಮ್​ ಬೆಲೆ). 11 ಸಾವಿರ ರೂಪಾಯಿ ಪಾವತಿ ಮಾಡಿ ಗ್ರಾಹಕರು ಕಾರನ್ನು ಬುಕ್​ ಮಾಡಿಕೊಳ್ಳಬಹುದು. ಅದೇ ರೀತಿ ಮಾಸಿಕ 17,378 ರೂಪಾಯಿ ಪಾವತಿ ಮಾಡಿಯೂ ಕಾರನ್ನು ತಮ್ಮದಾಗಿಸಿಕೊಳ್ಳಬಹುದು ಎಂದು ಕಂಪನಿ ಹೇಳಿದೆ.

ಮಾರುತಿ ಸುಜುಕಿಯ ನೆಕ್ಸಾ ಶೋರೂಮ್​ಗಳಲ್ಲಿ ಈ ಕಾರು ಲಭ್ಯವಿರುತ್ತದೆ. ಸಿಗ್ಮಾ, ಡೆಲ್ಟಾ, ಡೆಲ್ಟಾ ಪ್ಲಸ್​, ಝೀಟಾ ಮತ್ತು ಆಲ್ಫಾ ಎಂಬ ಐದು ವೇರಿಯೆಂಟ್​ಗಳಲ್ಲಿ ಕಾರು ಲಭ್ಯವಿದೆ. 1.2 ಕೆ. ಸೀರಿಸ್​ನ ಡ್ಯುಯಲ್​ ಜೆಟ್ ಎಂಜಿನ್​ ಹಾಗೂ 1.0 ಲೀಟರ್​ನ ಟರ್ಬೊ ಬೂಸ್ಟರ್​ಜೆಟ್ ಸೀರಿಸ್​ನಲ್ಲಿ ಕಾರುಗಳು ಲಭ್ಯವಿದೆ. ಎರಡು ಎಂಜಿನ್​ ಆಯ್ಕೆಯಲ್ಲೂ ಮ್ಯಾನುಯಲ್​ ಹಾಗೂ ಆಟೋಮ್ಯಾಟಿಕ್ ಗೇರ್​ ಬಾಕ್ಸ್ ಆಯ್ಕೆಯಿದೆ.

ಬಣ್ಣಗಳ ಆಯ್ಕೆ

ಫ್ರಾಂಕ್ಸ್​ ಕಾರು 10 ಮೊಮೊಟೋನ್​ ಹಾಗೂ ಡ್ಯುಯಲ್​ ಟೋನ್ ಪೇಂಟ್​ ಆಯ್ಕೆಯೊಂದಿಗೆ ಬಿಡುಗಡೆಗೊಂಡಿದೆ. ಆರ್ಕ್​ಟಿಕ್​ ವೈಟ್​, ಸ್ಪ್ಲೆಂಡಿಡ್​ ಸಿಲ್ವ್​, ಗ್ರಾಂಡ್ಯುರ್​ ಗ್ರೇ, ಬ್ಲ್ಯೂಯಿಶ್​ ಬ್ಲ್ಯಾಕ್​, ಸೆಲೆಸ್ಟಿಯಲ್​ ಬ್ಲ್ಯೂ, ಆಪ್ಲೆಂಟ್​ ರೆಡ್​, ಅರ್ತನ್​ ಬ್ರೌನ್ ಬಣ್ಣಗಳ ಜತೆಗೆ ಡ್ಯುಯಲ್ ಟೋನ್​ ಪೇಂಟ್​ಗಳು ಲಭ್ಯವಿದೆ.

ಫೀಚರ್​ಗಳೇನು?

ಫ್ರಾಂಕ್ಸ್​ ಕಾರಿನಲ್ಲಿ 2022ರಲ್ಲಿ ಬಿಡುಗಡೆಯಾದ ಬಲೆನೊ ಕಾರಿನ ಎಲ್ಲ ಫೀಚರ್​ಗಳಿವೆ. ಹೆಡ್​ಅಪ್​ ಡಿಸ್​ಪ್ಲೇ, 9 ಇಂಚಿನ ಇನ್ಫೋಟೈನ್​ಮೆಂಟ್​ ಸಿಸ್ಟಮ್​, ನಾಲ್ಕು ಸ್ಪೀಕರ್​ ಹಾಗೂ ಎರಡು ಟ್ವೀಟರ್​, ಸುಜುಕಿ ಕನೆಕ್ಟ್​ ಟೆಲಿಮ್ಯಾಟಿಕ್ಸ್, ಆಂಡ್ರಾಯ್ಡ್ ಆಟೋ ಹಾಗೂ ಆ್ಯಪಲ್​ ಕಾರ್​ಪ್ಲೇ, ವೈರ್​ಲೆಸ್​ ಫೋನ್​ ಚಾರ್ಜಿಂಗ್​, ಎಂಜಿನ್ ಸ್ಟಾರ್ಟ್​​-ಸ್ಟಾಪ್​, ಕ್ರೂಸ್ ಕಂಟ್ರೋಲ್​ ಫೀಚರ್​ಗಳನ್ನು ನೀಡಲಾಗಿದೆ.

ಕಾರಿನ ವಿನ್ಯಾಸ ಗ್ರಾಂಡ್ ವಿಟಾರದ ರೀತಿಯಲ್ಲಿದೆ. ಕ್ರೋಮ್ ಬಾರ್​, ಎಕ್ಸಾಗಾನಲ್ ಗ್ರಿಲ್​, ಫಾಕ್ಸ್​ ಸ್ಕಿಡ್​ ಪ್ಲೇಟ್​ ಕಾರು ಅತ್ಯಾಕರ್ಷಕವಾಗಿ ಕಾಣುವಂತೆ ಮಾಡಿದೆ. 16 ಇಂಚಿನ ಡ್ಯುಯಲ್ ಕಟ್​ ಅಲಾಯ್​ ವೀಲ್​ ನೀಡಲಾಗಿದೆ. ಹಿಂಬದಿಯಲ್ಲಿ ಎಲ್​ಇಡಿ ಬ್ಲಾಕ್​ ಟೈಲ್​ ಲ್ಯಾಂಪ್​, ಎಲ್​ಇಡಿ ಸ್ಟ್ರಿಪ್​ ಹಾಗೂ ಇಂಟಿಗ್ರೆಟೆಡ್​ ಸ್ಪಾಯಿಲರ್ ಅನ್ನು ಹಿಂದೆ ಕೊಡಲಾಗಿದೆ.

ಎಂಜಿನ್​ ಹೇಗಿದೆ?

ಹೊಚ್ಚ ಹೊಸ 1.0 ಲೀಟರ್​ನ ಟರ್ಬೊ ಬೂಸ್ಟರ್​ಜೆಟ್​ ಎಂಜಿನ್​ 99 ಬಿಎಚ್​​ಪಿ ಪವರ್​ ಹಾಗೂ 147 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಅದೇ ರೀತಿ 1.2 ಲೀಟರ್​ನ ಎಂಜಿನ್​ ಆಯ್ಕೆಯನ್ನೂ ಗ್ರಾಹಕರಿಗೆ ನೀಡಲಾಗಿದೆ. ಇದು 89 ಬಿಎಚ್​ಪಿ ಪವರ್​ ಹಾಗೂ 113 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಐದು ಸ್ಪೀಡ್​ನ ಮ್ಯಾನುಯಲ್, ಐದು ಸ್ಪೀಡ್​ನ ಎಜಿಎಸ್​ ಹಾಗೂ 6 ಸ್ಪೀಡ್​ನ ಆಟೋಮ್ಯಾಟಿಕ್​ ಗೇರ್​ ಬಾಕ್ಸ್​ ಇದರಲ್ಲಿದೆ.

ಸೇಫ್ಟಿ ಫೀಚರ್​ಗಳು

ಸುಜುಕಿಯ ಹಿಯರ್​ಟೆಕ್ಟ್​ ಫ್ಲಾಟ್​ಫಾರ್ಮ್​ ಮೇಲೆ ಕಾರನ್ನು ನಿರ್ಮಿಸಲಾಗಿದೆ. ಆರು ಏರ್​ಬ್ಯಾಗ್​ಗಳು, ತ್ರಿ ಪಾಯಿಂಟ್​ ಇಎಲ್​ಆರ್​ ಸೀಟ್​ಬೆಲ್ಟ್​, ಇಎಸ್​ಪಿ ಹಾಗೂ ಹಿಲ್ ರೋಡ್​ ಅಸಿಸ್ಟ್​​ ಹಾಗೂ ರೋಲ್​​ಓವರ್​ ಮಿಟಿಗೇಷನ್​, ಎಬಿಎಸ್​ ಮತ್ತು ಇಬಿಡಿ ಫೀಚರ್​ಗಳಿವೆ.

ಇದನ್ನೂ ಓದಿ : Maruti Suzuki : 25.51 ಕಿಲೋ ಮೀಟರ್​ ಮೈಲೇಜ್​ ಕೊಡುವ ಮಾರುತಿ ಸುಜುಕಿ ಬ್ರೆಜಾ ಬಿಡುಗಡೆ

ಗಾತ್ರ ಎಷ್ಟಿದೆ?

ಮಾರುತಿ ಸುಜುಕಿ ಫ್ರಾಂಕ್ಸ್​ 3,995 ಮಿಲಿ ಮೀಟರ್​ ಉದ್ದವಿದೆ. 1756 ಎಮ್​ಎಮ್​ ಅಗಲ, 1550 ಎತ್ತರ ಹೊಂದಿದೆ. ವೀಲ್​ಬೇಸ್​ 2520 ಮಿಲಿ ಮೀಟರ್​. ಕಾರು ಇನ್ನಷ್ಟು ಅಕರ್ಷಕವಾಗಿ ಕಾಣುವಂತೆ ಆಕ್ಸೆಸರಿ ಪ್ಯಾಕೇಜ್​ಗಳನ್ನೂ ಮಾರುತಿ ನೀಡಿದೆ. ಫ್ರಂಟ್​ ಮತ್ತು ರಿಯರ್​ ಸ್ಕಿಡ್​ ಪ್ಲೇಟ್​, ಕೆಂಪು ಬಣ್ಣದ ಇನ್​ಸರ್ಟ್​​ಗಳು, ಸೈಡ್​ ಸ್ಕಿಡ್​ ಪ್ಲೇಟ್​ಗಳು, ಒಆರ್​ವಿಎಮ್​ ಕವರ್​ಗಳನ್ನು ನೀಡಲಾಗಿದೆ.

ಪ್ರತಿಸ್ಪರ್ಧಿ ಕಾರುಗಳು

ಟಾಟಾದ ಪಂಚ್​​, ಸಿಟ್ರಾನ್​ ಸಿ3, ರೆನೊ ಕೈಗರ್​ ಮತ್ತು ನಿಸ್ಸಾನ್​ ಮ್ಯಾಗ್ನೈಟ್​ ಫ್ರಾಂಕ್ಸ್ ಕಾರಿನ ಪ್ರತಿಸ್ಪರ್ಧಿಗಳಾಗಿವೆ.

Exit mobile version