ನವ ದೆಹಲಿ: ಮಾರುತಿ ಸುಜುಕಿ ಕಂಪನಿಯು ತನ್ನ ಬಹುನಿರೀಕ್ಷಿತ ಮಿಡ್ ಸೈಜ್ ಎಸ್‌ಯುವಿ ಕಾರಿನ ಹೆಸರನ್ನು ಸೋಮವಾರ ಬಹಿರಂಗಪಡಿಸಿದ್ದು, ಗ್ರ್ಯಾಂಡ್ ವಿಟಾರ ಎಂದು ಘೋಷಿಸಿದೆ.
ಜುಲೈ ೨೦ರಂದು ಈ ಕಾರು ಮಾರುಕಟ್ಟೆಗೆ ಪರಿಚಯಗೊಳ್ಳಲಿದ್ದು, ಆನ್‌ಲೈನ್ ಬುಕಿಂಗ್ ಕೂಡ ಆರಂಭಗೊಂಡಿದೆ. ಈ ಕಾರಿನ ಅನಾವರಣದೊಂದಿಗೆ ಮಾರುತಿ ಸುಜುಕಿಯ ಮೂರನೇ ಎಸ್‌ಯುವಿ ಕಾರು ಮಾರುಕಟ್ಟೆಗೆ ಇಳಿಯಲಿದೆ.
ಜೂನ್ ೩೦ರಂದು ತನ್ನ ಜನಪ್ರಿಯ ಕಾಂಪಾಕ್ಟ್ ಎಸ್‌ಯುವಿ ಬ್ರೆಜಾವನ್ನು ಬಿಡುಗಡೆ ಮಾಡಿದ್ದ ಮಾರುತಿ ಸುಜುಕಿ ಅದೇ ವೇಳೆ ಮಿಡ್ ಸೈಜ್ ಎಸ್‌ಯುವಿ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಅಂತೆಯೇ ಜುಲೈ ೨೦ರಂದು ಭಾರತದ ಮಾರುಕಟ್ಟೆಗೆ ಎಂಟ್ರಿ ಪಡೆಯಲಿದೆ ಗ್ರ್ಯಾಂಡ್ ವಿಟಾರ.
ನೆಕ್ಸಾದಲ್ಲಿ ಮಾರಾಟ
ಗ್ರ್ಯಾಂಡ್ ವಿಟಾರ ಕಾರು ನೆಕ್ಸಾ ರೀಟೆಲ್ ಮೂಲಕ ಗ್ರಾಹಕರ ಮನೆ ಸೇರಲಿದೆ. ೧೧ ಸಾವಿರ ರೂಪಾಯಿ ಕೊಟ್ಟು ಬುಕ್ ಮಾಡಿಕೊಳ್ಳಬಹುದು. ಆನ್‌ಲೈನ್ ಅಥವಾ ಶೋರೂಮ್‌ಗೆ ಭೇಟಿ ಕೊಟ್ಟು ಬುಕ್ ಮಾಡಿಕೊಳ್ಳುವ ಅವಕಾಶ ನೀಡಿದೆ.
ಹಿಂದೆ ಬ್ರೆಜಾವನ್ನು ವಿಟಾರ ಬ್ರೆಜಾ ಎಂದು ಕರೆಯಲಾಗುತ್ತಿತ್ತು. ಆದರೆ, ಜೂನ್ ೩೦ರಂದು ಹೊಸ ಆವೃತ್ತಿಯ ಬ್ರೆಜಾ ಬಿಡುಗಡೆ ಮಾಡುವ ವೇಳೆ ವಿಟಾರ ಎಂಬ ಹೆಸರನ್ನು ಕೈ ಬಿಡಲಾಗಿತ್ತು. ಆ ಹೆಸರನ್ನು ನೂತನ ಎಸ್‌ಯುವಿಗೆ ಇಡುವ ಉದ್ದೇಶದಿಂದ ತೆಗೆಯಲಾಗಿತ್ತು ಎಂದು ಹೇಳಲಾಗುತ್ತಿದೆ.
ಎಸ್‌ಯುವಿ ಮಾರುಕಟ್ಟೆ ಹಿಗ್ಗುತ್ತಿರುವ ನಡುವೆಯೂ ಭಾರತದ ಜನಪ್ರಿಯ ಕಾರು ತಯಾರಕ ಸಂಸ್ಥೆ ಮಾರುತಿ ಆ ವಿಭಾಗದಲ್ಲಿ ಹೆಚ್ಚು ಕಾರುಗಳನ್ನು ಹೊಂದಿರಲಿಲ್ಲ. ತಮ್ಮ ಚಿಕ್ಕ ಕಾರುಗಳಿಗೆ ಎಸ್‌ಯುವಿ ರೂಪ ನೀಡುತ್ತಿದ್ದರೂ ಅದು ನಿರೀಕ್ಷಿತ ಯಶಸ್ಸು ಗಳಿಸಿಕೊಂಡಿರಲಿಲ್ಲ. ಹೀಗಾಗಿ ಎಸ್‌ಯುವಿ ಮಾರುಕಟ್ಟೆಗೆ ಎಂಟ್ರಿಯಾಗುವ ಪೂರ್ಣ ಯತ್ನದಲಿದೆ ಮಾರುತಿ ಸುಜುಕಿ.
ಹೈಬ್ರಿಡ್ ತಂತ್ರಜ್ಞಾನ
ವಿಟಾರ ಬ್ರೆಜಾದಲ್ಲಿ ಭವಿಷ್ಯದ ಬೇಡಿಕೆಗೆ ಅನುಗುಣವಾಗಿ ಹೈಬ್ರಿಡ್ ತಂತ್ರಜ್ಞಾನ ಬಳಸುವ ಸಾಧ್ಯತೆಗಳಿವೆ. ಬ್ರೆಜಾದ ಜತೆಗೆ ಅದೇ ಫ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿರುವ ಟೊಯೊಟಾದ ಅರ್ಬನ್ ಕ್ರೂಸರ್ ಹೈರೈಡರ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಇಳಿದಿತ್ತು. ಅದು ಲೈಟ್ ಹೈಬ್ರಿಡ್ ಹಾಗೂ ಸ್ಟ್ರಾಂಗ್ ಹೈಬ್ರಿಡ್ ಎಂಬ ಎರಡು ಮಾದರಿಯ ಎಂಜಿನ್‌ಗಳನ್ನು ಹೊಂದಿದೆ. ಆ ತಂತ್ರಜ್ಞಾನ ವಿಟಾರ ಬ್ರೆಜಾದಲ್ಲೂ ಲಭಿಸುವ ಸಾಧ್ಯತೆಗಳಿವೆ.
ಇದನ್ನೂ ಓದಿ: Hybrid tech ಮಾರುತಿ ಸುಜುಕಿಯ ಗುರಿ