ನವ ದೆಹಲಿ: ಸಮಿ ಕಂಡಕ್ಟರ್ ಚಿಪ್ಗಳ ಕೊರತೆ ಭಾರತೀಯ ಕಾರು ಮಾರುಕಟ್ಟೆಯನ್ನು ಕಳೆದ ಕೆಲವು ವರ್ಷಗಳಿಂದ ನಲುಗುವಂತೆ ಮಾಡಿದೆ. ಆ ಸಮಸ್ಯೆ ಬಹುತೇಕ ಮುಗಿದು ಹೋಯಿತು ಎಂದು ಅಂದುಕೊಳ್ಳುವಷ್ಟರಲ್ಲಿ ಮಾರುತಿ ಸುಜುಕಿ (Maruti Suzuki) ಕಂಪನಿ, ಇಲ್ಲ ಇನ್ನೂ ಕೊರತೆ ಮುಂದುವರಿದಿದೆ ಎಂದಿದೆ. ಸೆಮಿ ಕಂಡಕ್ಟರ್ಗಳ ಪೂರೈಕೆಯ ಕೊರತೆಯಿಂದ ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ಕಾರು ಉತ್ಪಾದನೆ ಮಾಡಿ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ.
ಇನ್ನೂ ಕೆಲವು ತ್ರೈಮಾಸಿಕಗಳ ತನಕ ಚಿಪ್ಗಳ ಕೊರತೆ ಮುಂದುವರಿಯಲಿದೆ ಎಂದು ಮಾರುತಿ ಸುಜುಕಿ ಹೇಳಿದೆ. ಕೊರತೆಯಿಂದಾಗಿ ಆರ್ಡರ್ ಬ್ಲಾಕಿಂಗ್ ಹೆಚ್ಚಾಗಿದೆ ಎಂದು ಹೇಳಿದೆ. ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿಯಾಗಿರುವ ಮಾರುತಿ ಸುಜುಕಿ ಒಟ್ಟು 3.69 ಲಕ್ಷ ಬುಕಿಂಗ್ಗಳನ್ನು ವಿತರಣೆ ಮಾಡಲು ಬಾಕಿ ಉಳಿಸಿಕೊಂಡಿದೆ. ಅದರಲ್ಲಿ 94 ಸಾವಿರ ಎರ್ಟಿಗಾ ಕಾರುಗಳ ಆರ್ಡರ್ ಬಾಕಿಯಿದೆ.
ಗ್ರಾಂಡ್ ವಿಟಾರಾ ಕಾರಿಗೆ ಬಂದಿರುವ 37 ಸಾವಿರ ಬುಕಿಂಗ್ಗಳ ವಿತರಣೆ ಬಾಕಿಯಿದೆ. 61 ಸಾವಿರ ಬ್ರೇಜಾ ಕಾರುಗಳನ್ನು ಗ್ರಾಹಕರಿಗೆ ನೀಡಬೇಕಾಗಿದೆ. 22 ಸಾವಿರ ಜಿಮ್ನಿ ಹಾಗೂ 12 ಸಾವಿರ ಫ್ರಾಂಕ್ಸ್ ಕಾರುಗಳನ್ನು ವಿತರಣೆ ಮಾಡಬೇಕಾಗಿದೆ. ಚಿಪ್ ಕೊರತೆಯಿಂದಾಗಿ ಕಳೆದ ಅಕ್ಟೋಬರ್ನಿಂದ ಡಿಸೆಂಬರ್ ತನಕ 46 ಸಾವಿರ ಕಾರುಗಳನ್ನು ವಿತರಣೆ ಮಾಡಲು ಕಂಪನಿಗೆ ಸಾಧ್ಯವಾಗಿಲ್ಲ.
ಇದನ್ನೂ ಓದಿ : Maruti Suzuki : 2030ರೊಳಗೆ ಆರು ಎಲೆಕ್ಟ್ರಿಕ್ ಕಾರುಗಳನ್ನು ರಸ್ತೆಗಿಳಿಸಲಿದೆ ಮಾರುತಿ ಸುಜುಕಿ
ಸೆಮಿ ಕಂಡಕ್ಟರ್ಗಳ ಕೊರತೆ ಇನ್ನೂ ಮುಂದುವರಿದಿದೆ. ಇನ್ನೂ ಹಲವು ತ್ರೈಮಾಸಿಕಗಳ ತನಕ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮಾರುತಿ ಸುಜುಕಿಯ ಹಿರಿಯ ಕಾರ್ಯಕಾರಿ ಅಧಿಕಾರಿ ಶಂಶಾಂಕ್ ಶ್ರೀವಾಸ್ತವ ಅವರು ಹೇಳಿದ್ದಾರೆ. ಮಂದುವರಿದ ಅವರು ಎಷ್ಟು ಸಮಯದ ತನಕ ಸಮಸ್ಯೆ ಮುಂದುವರಿಯುತ್ತದೆ ಎಂದು ಅಂದಾಜಿಸುವುದೂ ಕಷ್ಟ ಎಂದು ಹೇಳಿದ್ದಾರೆ.