ಮುಂಬಯಿ: ಭಾರತದ ಜನಪ್ರಿಯ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ (Maruti Suzuki) ತನ್ನ ಕಾರುಗಳ ಬೆಲೆಯನ್ನು ಮುಂದಿನ ವರ್ಷಾರಂಭಕ್ಕೆ ಏರಿಕೆ ಮಾಡಲು ನಿರ್ಧರಿಸಿದೆ. ಮುಂಬಯಿ ಷೇರು ಪೇಟೆಗೆ ಮಾರುತಿ ಸುಜುಕಿ ಈ ಮಾಹಿತಿಯನ್ನು ನೀಡಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಾಗೂ ಸರಕಾರ ನಿಗದಿ ಮಾಡುವ ಮಾನದಂಡಗಳನ್ನು ಪೂರೈಸುವ ವೇಳೆ ಆಗುತ್ತಿರುವ ಹೆಚ್ಚುವರಿ ಆರ್ಥಿಕ ಹೊರೆಯನ್ನು ನಿಭಾಯಿಸಲು ದರ ಏರಿಕೆ ಮಾಡಲು ಮುಂದಾಗಿದೆ.
ಮಾರುತಿ ಸುಜುಕಿಯ ಎಲ್ಲ ಕಾರುಗಳಿಗೆ ಬೆಲೆ ಏರಿಕೆ ಅನ್ವಯವಾಗಲಿದೆ. ಕಚ್ಚಾ ವಸ್ತುಗಳು ದುಬಾರಿಯಾಗುತ್ತಿರುವ ಹೊರತಾಗಿಯೂ ಉತ್ಪನ್ನಗಳ ಬೆಲೆ ಇಳಿಕೆ ಮಾಡಲು ಕಂಪನಿಯು ಸತತ ಪ್ರಯತ್ನಗಳನ್ನು ಮಾಡುತ್ತಿದೆ ಎಂಬುದಾಗಿ ಎಂಬುದಾಗಿ ಸ್ಟಾಕ್ ಎಕ್ಸ್‌ಚೇಂಜ್‌ಗೆ ವಿವರಣೆ ನೀಡಲಾಗಿದೆ.
ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಜತೆಜತೆಗೆ ಬೆಲೆಯೂ ಏರಿಕೆ ಕಾಣುತ್ತಿದೆ. ಕಳೆದ ಹಲವು ತಿಂಗಳಿಂದ ಬೆಲೆ ಏರಿಕೆ ಪ್ರಕ್ರಿಯೆ ನಿರಂತರವಾಗಿ ನಡೆದುಕೊಂಡು ಬಂದಿದೆ. ಮಾರುತಿ ಸುಜುಕಿ ಮಾತ್ರವಲ್ಲದೆ, ಟಾಟಾ ಮೋಟಾರ್ಸ್ ಮತ್ತು ಹ್ಯುಂಡೈ ಕಂಪನಿಯೂ ದರ ಪಟ್ಟಿಯನ್ನು ಪರಿಷ್ಕರಣೆಗೆ ಒಳಪಡಿಸಿದೆ. ಕಿಯಾ ಕಂಪನಿಯೂ ತಮ್ನ ಕರೆನ್ಸ್ ಕಾರಿನ ದರವನ್ನು ೫೦ ಸಾವಿರ ರೂಪಾಯಿಯಷ್ಟು ಏರಿಕೆ ಮಾಡಿತ್ತು. ಐಷಾರಾಮಿ ಕಾರು ತಯಾರಕ ಕಂಪನಿಗಳಾದ ಆಡಿ ಮತ್ತು ಮರ್ಸಿಡೀಸ್ ಬೆಂಜ್ ಕೂಡ ಬೆಲೆ ಬೆಲೆ ಏರಿಕೆ ವಿಚಾರದಲ್ಲಿ ಹಿಂದೆ ಬಿದ್ದಿರಲಿಲ್ಲ.
ಬೆಲೆ ಏರಿಕೆಯ ಹೊರತಾಗಿಯೂ ಕಾರುಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ಕೆಲವೊಂದು ಕಂಪನಿಯ ನಿರ್ದಿಷ್ಟ ಕಾರುಗಳಿಗೆ ಗರಿಷ್ಠ ೧೮ ತಿಂಗಳು ವೇಟಿಂಗ್ ಪಿರಿಯೆಡ್ ಇದೆ. ಕೊರೊನಾ ಬಳಿಕ ಜನರು ಕಾರುಗಳ ಖರೀದಿಗೆ ಆಸಕ್ತಿ ವಹಿಸಿರುವುದು ಇದಕ್ಕೆ ಪ್ರಮುಖ ಕಾರಣವಾಗಿದ್ದರೆ, ಉತ್ಪಾದನೆ ವೇಳೆ ಸೆಮಿ ಕಂಡಕ್ಟರ್‌ನಂಥ ಮೂಲ ವಸ್ತುಗಳ ಪೂರೈಕೆಯಲ್ಲಿನ ಅಡಚಣೆಯೂ ವೇಟಿಂಗ್ ಪಿರಿಯೆಡ್ ಹೆಚ್ಚಾಗಲು ಕಾರಣವಾಗಿದೆ. ಸೆಮಿ ಕಂಡಕ್ಟರ್ ಪೂರೈಕೆ ಸಮಸ್ಯೆ ಈಗ ಬಗೆಹರಿದಿದೆ ಎಂಬ ಮಾಹಿತಿಯೂ ಇದೆ.
ಇದನ್ನೂ ಓದಿ | Bajaj Pulsar P150 | ಹೊಸ ಪಲ್ಸರ್‌ನಲ್ಲಿರುವ ವಿಶೇಷತೆಗಳೇನು? ಇಲ್ಲಿದೆ ಮಾಹಿತಿ