ನವ ದೆಹಲಿ : ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಪರಿಸರಕ್ಕೆ ಪೂರಕವಾಗಿರುವ ಇಂಥ ಕಾರುಗಳ ಖರೀದಿಗೆ ಗ್ರಾಹಕರು ಕೂಡ ಮನಸ್ಸು ಮಾಡುತ್ತಿದ್ದಾರೆ. ಚಾರ್ಜಿಂಗ್ ಸ್ಟೇಷನ್ ಸೇರಿದಂತೆ ಉಳಿದ ಮೂಲ ಸೌಕರ್ಯಗಳು ಅಭಿವೃದ್ಧಿಯಾದರೆ ಇನ್ನಷ್ಟು ಮಂದಿ ಇವಿ ಕಾರುಗಳ ಬಗ್ಗೆ ಒಲವು ತೋರುವುದು ಖಚಿತ. ಇಂಥದ್ದೊಂದು ಸಮಯಕ್ಕೆ ಕಾದು ಕುಳಿತಿದ್ದ ಮಾರುತಿ ಸುಜುಕಿ ಕಂಪನಿ 2030ರ ಒಳಗೆ ಆರು ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ಇಳಿಸುವ ಉದ್ದೇಶ ಹೊಂದಿದೆ.
ಮಾರುತಿ ಸುಜುಕಿ ಕಂಪನಿಯ ಮಾರುಕಟ್ಟೆ ವಿಭಾಗದ ಹಿರಿಯ ಅಧಿಕಾರಿ ಶಶಾಂಕ್ ಶ್ರೀವಾಸ್ತವ್ ಈ ಕುರಿತು ಮಾಹಿತಿ ನೀಡಿದ್ದು, ವಿಭಿನ್ನ ಸೆಗ್ಮೆಂಟ್ಗಳಲ್ಲಿ ಆರು ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ಇಳಿಸಲಿದ್ದೇವೆ ಎಂದು ಹೇಳಿದ್ದಾರೆ. ಮಾರುತಿ ಸುಜುಕಿ ಕಂಪನಿ ಕಳೆದ ಜನವರಿಯಲ್ಲಿ ಗ್ರೇಟರ್ ನೊಯ್ಡಾದಲ್ಲಿ ನಡೆದ ಆಟೋ ಎಕ್ಸ್ಪೋದಲ್ಲಿ ಮೊಟ್ಟ ಮೊದಲ ಇವಿ ಕಾನ್ಸೆಪ್ಟ್ ಬಿಡುಗಡೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಶಶಾಂಕ್ ಅವರು ಹೇಳಿಕೆ ಪ್ರಕಟಿಸಿದ್ದಾರೆ.
ಪ್ರಸ್ತುತ ಭಾರತದ ಕಾರು ಮಾರುಕಟ್ಟೆಯಲ್ಲಿ ಶೇಕಡಾ 1ರಷ್ಟು ಇವಿ ಕಾರುಗಳಿವೆ. ಆದರೆ, 2024-25ರ ವೇಳೆಗೆ ಅದರ ಪ್ರಮಾಣ ಶೇಕಡಾ 3ಕ್ಕೆ ಏರಿಕೆಯಾಗಲಿದೆ. 2023ರ ಅವಧಿಗೆ ಶೇಕಡಾ 17ರಷ್ಟು ಅಗಲಿದೆ. ಅಷ್ಟರೊಳಗೆ ಆರು ಕಾರುಗಳು ಬಿಡುಗಡೆಗೊಳ್ಳಲಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Mahindra & Mahindra | ಪುಣೆಯಲ್ಲಿ ಹೊಸ ಇವಿ ಕಾರು ಉತ್ಪಾದನಾ ಘಟಕ ಸ್ಥಾಪಿಸಲಿದೆ ಮಹೀಂದ್ರಾ
ಬ್ಯಾಟರಿಯ ಬೆಲೆಯ ಕಾರಣದಿಂದಾಗಿ ಬ್ಯಾಟರಿ ಚಾಲಿತ ವಾಹನಗಳು ದುಬಾರಿ ಎನಿಸಿಕೊಳ್ಳುತ್ತಿವೆ. ಉದಾಹರಣೆಗೆ ಸಾಮಾನ್ಯ ಕಾರುಗಳಿಗೆ 100 ರೂಪಾಯಿ ಖರ್ಚಾದರೆ 160 ರೂಪಾಯಿ ಬ್ಯಾಟರಿ ಚಾಲಿತ ಕಾರುಗಳಿಗೆ ಆಗುತ್ತಿವೆ. ಹೀಗಾಗಿ ಬ್ಯಾಟರಿ ನಿರ್ಮಾಣದ ಬೆಲೆಯನ್ನು ಇಳಿಸುವುದೇ ನಮ್ಮ ಗುರಿ ಎಂಬುದಾಗಿ ಶಶಾಂಕ್ ಅವರು ಹೇಳಿದ್ದಾರೆ.