ನವ ದೆಹಲಿ: ಮಾರುತಿ ಸುಜುಕಿ (Maruti Suzuki) ಕಂಪನಿಯು ಭಾರತೀಯ ಮಾರುಕಟ್ಟೆಗೆ ಎಲೆಕ್ಟ್ರಿಕ್ ಕಾರುಗಳನ್ನು ಇಳಿಸಲು ಅಷ್ಟೊಂದು ಉತ್ಸಾಹ ತೋರುತ್ತಿಲ್ಲ. ಬದಲಾಗಿ ಹೈಬ್ರಿಡ್ ತಾಂತ್ರಿಕತೆಯತ್ತ ಗಮನ ಹರಿಸುತ್ತಿದೆ. ಭಾರತೀಯರ ನಿರೀಕ್ಷೆಗೆ ಪೂರಕವಾಗಿ ಹೈಬ್ರಿಡ್ ಕಾರುಗಳು ಮೈಲೇಜ್ ಕೊಡುತ್ತಿರುವುದೇ ಅದಕ್ಕೆ ಕಾರಣ. ಅದೇ ಮಾದರಿಯಲ್ಲಿ ಸ್ವಿಫ್ಟ್ ಮತ್ತು ಡಿಜೈರ್ ನಂತಹ ಮಾಸ್ ಸೆಗ್ಮೆಂಟ್ ಜನಪ್ರಿಯ ಕಾರುಗಳಲ್ಲಿ ಹೈಬ್ರಿಡ್ ಆವೃತ್ತಿಗಳನ್ನು ಮಾರುಕಟ್ಟೆ ಇಳಿಸುವ ಸೂಚನೆ ಕೊಟ್ಟಿದೆ. ಒಂದು ವೇಳೆ ಇಂಥ ಕಾರುಗಳು ರಸ್ತೆಗೆ ಇಳಿದರೆ ದೊಡ್ಡ ಮಟ್ಟದ ಮೈಲೇಜ್ ಗ್ರಾಹಕರಿಗೆ ದೊರೆಯಲಿದೆ.
ಮಾರುತಿ ಸುಜುಕಿ ಬಹಳ ಸಮಯದಿಂದ ಭಾರತೀಯ ಮಾರುಕಟ್ಟೆಯಲ್ಲಿ ಹೈಬ್ರಿಡ್ ವಾಹನಗಳನ್ನು ನೀಡುತ್ತಿದೆ. ಭಾರತದಲ್ಲಿ ತನ್ನ ಮೊದಲ ಬಲವಾದ ಹೈಬ್ರಿಡ್ ಕೊಡುಗೆಯಾದ ಗ್ರ್ಯಾಂಡ್ ವಿಟಾರಾವನ್ನು ಯಶಸ್ವಿಯಾಗಿ ಪ್ರಾರಂಭಿಸಿದ ನಂತರ, ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಡಿಜೈರ್ ಮಾದರಿಗಳಲ್ಲೂ ಆ ತಾಂತ್ರಿಕತೆಯನ್ನು ಪರಿಚಯಿಸುವ ಉದ್ದೇಶ ಹೊಂದಿದೆ. ಮುಂದಿನ ತಲೆಮಾರಿನ ಸ್ವಿಫ್ಟ್ ಜೊತೆಗೆ, ಬಲವಾದ ಹೈಬ್ರಿಡ್ ಆವೃತ್ತಿಗಳು ಭಾರತೀಯ ಮಾರುಕಟ್ಟೆಯಲ್ಲಿ ಇಳಿಯಲಿದವೆ. ಈ ಚೊಚ್ಚಲ ಪ್ರಯತ್ನವು 2024 ರ ಮೊದಲ ತ್ರೈಮಾಸಿಕದಲ್ಲಿ ಸಾಧ್ಯವಾಗಬಹುದು ಎನ್ನಲಾಗಿದೆ. YED ಎಂಬ ಆಂತರಿಕ ಹೆಸರಿನಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಿಫ್ಟ್ ಮತ್ತು ಡಿಸೈರ್ ಸ್ಟ್ರಾಂಗ್ ಹೈಬ್ರಿಡ್ ಹಾಗೂ ಹೊಸ ಪವರ್ಟ್ರೇನ್ ಮೂಲಕ ರಸ್ತೆಗೆ ಇಳಿಯಲಿದೆ.
ಝಡ್ 12 ಇ ಎಂದು ಹೆಸರಿಸಲಾದ ಹೊಸ 1.2-ಲೀಟರ್ ಮೂರು ಸಿಲಿಂಡರ್ ಎಂಜಿನ್ ಚಾಲ್ತಿಯಲ್ಲಿರುವ ಕೆ 12 ಸಿ ಎಂಜಿನ್ಗಿಂತ ಭಿನ್ನವಾಗಿದೆ. ಗ್ರ್ಯಾಂಡ್ ವಿಟಾರಾ ಮತ್ತು ಅರ್ಬನ್ ಕ್ರೂಸರ್ ಹೈರೈಡರ್ ಗಳಲ್ಲಿ ಮೊದಲು ಅನಾವರಣಗೊಂಡ ಟೊಯೊಟಾದ ಹೈಬ್ರಿಡ್ ತಂತ್ರಜ್ಞಾನದಿಂದ ಬಲಗೊಂಡ ಈ ಎಂಜಿನ್ ಒಟ್ಟಾರೆ ವೆಚ್ಚಗಳನ್ನು ಕಡಿತಗೊಳಿಸಲು ಮತ್ತಷ್ಟು ಸುಧಾರಣೆಗೊಳ್ಳಲಿದೆ. ಈ ಕಾರ್ಯತಂತ್ರದ ತಂತ್ರವು ಸಣ್ಣ ವಾಹನಗಳಲ್ಲಿ ಹೈಬ್ರಿಡ್ ಬಳಕೆಯನ್ನು ವ್ಯಾಪಕಗೊಳಿಸಲಿದೆ.
ಗರಿಷ್ಠ ಮೈಲೇಜ್
ಭಾರತೀಯ ವಾಹನ ಮಾರುಕಟ್ಟೆಯು ಇಂಧನ ದಕ್ಷತೆಗೆ ಒತ್ತು ನೀಡುವ ವಾಹನಗಳಿಗೆ ಒಲವು ತೋರುತ್ತದೆ. ಮುಂದಿನ ತಲೆಮಾರಿನ ಸ್ವಿಫ್ಟ್ ಮತ್ತು ಡಿಸೈರ್ ಮಾದರಿಗಳು ಭಾರತೀಯ ಸನ್ನಿವೇಶದಲ್ಲಿ ಇಂಧನ ದಕ್ಷತೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಲಿದೆ. ಪ್ರಸ್ತುತ, ಸ್ವಿಫ್ಟ್ 22.56 ಕಿ.ಮೀ / ಲೀಟರ್ ಮೈಲೇಜ್ ಹೊಂದಿದ್ದರೆ, ಡಿಸೈರ್ ಗಮನಾರ್ಹ 24.1 ಕಿ.ಮೀ / ಲೀಟರ್ ಮೈಲೇಜ್ ನೀಡುತ್ತದೆ. ಇತ್ತೀಚೆಗೆ ಪರಿಚಯಿಸಲಾದ ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್ ಪ್ರತಿ ಲೀಟರ್ ಗೆ 27.97 ಕಿ.ಮೀ ಮೈಲೇಜ್ ನೀಡುತ್ತದೆ. ಸ್ವಿಫ್ಟ್ ಮತ್ತು ಡಿಜೈರ್ ಸ್ಟ್ರಾಂಗ್ ಹೈಬ್ರಿಡ್ ಗಳ ಆಗಮನದೊಂದಿಗೆ, ಇಂಧನ ದಕ್ಷತೆಯು ಪ್ರತಿ ಲೀಟರ್ ಗೆ 35 ರಿಂದ 40 ಕಿ.ಮೀ ಗೆ ತಲುಪಲಿದೆ.
ಇದನ್ನೂ ಓದಿ : EV Scooters : ಓಲಾ ಎಸ್ 1 ಪ್ರೊ ಜೆನ್ 2 ಸ್ಕೂಟರ್ ಬಿಡುಗಡೆ
ಹೈಬ್ರಿಡ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಬೆಲೆಯು ವಾಹನದ ವೆಚ್ಚದಲ್ಲಿ ಪ್ರತಿಫಲಿಸಲಿದೆ. ಹೈಬ್ರಿಡ್ ತಂತ್ರಜ್ಞಾನದ ಸಂಯೋಜನೆಯು ವಾಹನದ ಅಂತಿಮ ಬೆಲೆಯನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸುತ್ತದೆ ಎಂಬುದು ಸ್ಪಷ್ಟ. ಮಾರುತಿ ಸುಜುಕಿ ಮತ್ತು ಟೊಯೊಟಾ ಕಂಪನಿಗಳು ಪೆಟ್ರೋಲ್ ಮತ್ತು ಹೈಬ್ರಿಡ್ ಮಾದರಿಗಳ ನಡುವಿನ ಬೆಲೆ ಅಸಮಾನತೆಯನ್ನು ಕಡಿಮೆ ಮಾಡಲು ಶ್ರಮಿಸುತ್ತಿವೆ ಎಂದು ವರದಿಗಳು ಸೂಚಿಸುತ್ತವೆ. ಕುತೂಹಲಕಾರಿ ಸಂಗತಿಯೆಂದರೆ, ಗ್ರ್ಯಾಂಡ್ ವಿಟಾರಾದ ಸ್ಟ್ರಾಂಗ್ ಮತ್ತು ಮೈಲ್ಡ್ ಹೈಬ್ರಿಡ್ ಆವೃತ್ತಿಗಳ ನಡುವಿನ ಬೆಲೆ ವ್ಯತ್ಯಾಸವು ಸರಿಸುಮಾರು 2.6 ಲಕ್ಷಗಳಷ್ಟಿದೆ. ಮಾರುತಿ ಸುಜುಕಿ ಅದನ್ನು ಸುಮಾರು 1 ಲಕ್ಷ ರೂಪಾಯಿಗಳಿಗೆ ಇಳಿಸಲು ಬಯಸಿದೆ.