ನವ ದೆಹಲಿ : ಮಾರುತಿ ಸುಜುಕಿಯ 5 ಡೋರ್ಗಳಜಿಮ್ನಿ ಗ್ರೇಟರ್ ನೊಯ್ಡಾದಲ್ಲಿ ನಡೆಯುತ್ತಿರುವ ಆಟೋ ಎಕ್ಸ್ಪೊದಲ್ಲಿ (Auto Expo 2023) ಪ್ರದರ್ಶನಗೊಂಡಿದೆ. ಈ ಕಾರು ಕೆಲವೇ ದಿನಗಳಲ್ಲಿ ಭಾರತೀಯ ರಸ್ತೆಗೆ ಇಳಿಯಲಿದ್ದು, ಬುಕಿಂಗ್ ಆರಂಭಗೊಂಡಿದೆ. ಮಹೀಂದ್ರಾ ಕಂಪನಿಯ ಥಾರ್ಗೆ ಪ್ರತಿಸ್ಪರ್ಧೆ ಒಡ್ಡಬಲ್ಲ ಎಸ್ಯುವಿ ಇದು ಎಂದು ಹೇಳಲಾಗಿದ್ದು, ನೆಕ್ಸಾ ಮೂಲಕ ಗ್ರಾಹಕರ ಮನೆ ಸೇರಲಿದೆ.
ಮಾರುತಿ ಸುಜುಕಿಯ ಭಾರತೀಯ ಉತ್ಪಾದನಾ ಘಟಕಗಳಲ್ಲಿ ಈಗಾಗಲೇ ಜಿಮ್ನಿಯ ಉತ್ಪಾದನೆ ಆರಂಭಗೊಂಡಿದೆ. ವಿದೇಶಗಳಿಗೆ ರಫ್ತು ಕೂಡ ಮಾಡಲಾಗುತ್ತಿದೆ. ಇದೀಗ ಆಟೋ ಎಕ್ಸ್ಪೊದಲ್ಲಿ ಅನಾವರಣಗೊಳಿಸುವ ಮೂಲಕ ಭಾರತದಲ್ಲೂ ಬುಕಿಂಗ್ ಆರಂಭಿಸಿದೆ. ಇದು ದೊಡ್ಡ ಗಾತ್ರದ ಎಸ್ಯುವಿಯಾಗಿದ್ದು, ಪೂರ್ಣ ಪ್ರಮಾಣದ ಆಫ್ರೋಡಿಂಗ್ಗೆ ಸೂಕ್ತ ಎನಿಸಿದೆ. ಇದು ಹಿಂದಿನ ಜಿಪ್ಸಿಯ ಸುಧಾರಿತ ರೂಪ ಎಂದು ಹೇಳಲಾಗುತ್ತಿದೆ.
ಲ್ಯಾಡರ್ ಫ್ರೇಮ್ ಚಾಸಿಸ್ ಮೇಲೆ ಜಿಮ್ನಿಯನ್ನು ನಿರ್ಮಿಸಲಾಗಿದ್ದು, ದೊಡ್ಡ ಗಾತ್ರದ ಬಾಡಿಯನ್ನೂ ಇಡಲಾಗಿದೆ. ತ್ರೀ ಲಿಂಕ್ ರಿಜಿಡ್ ಆಕ್ಸೆಲ್ ಸಸ್ಪೆನ್ಷನ್, ಆಲ್ಗ್ರಿಪ್ ಪ್ರೊ (4WD), 4L ಮಾಡೆಲ್ನ ಗಿಯರ್ ಹೊಂದಿದೆ. ಹೀಗಾಗಿ ಕಠಿಣಾತಿ ಕಠಿಣ ರಸ್ತೆಗಳಲ್ಲಿ ಸುಲಭವಾಗಿ ಸಂಚರಿಸಬಲ್ಲುದು.
ಬಾಕ್ಸಿ ಡಿಸೈನ್, ಸರ್ಕ್ಯುಲರ್ ಹೆಡ್ಲೈಟ್, ವರ್ಟಿಕಲ್ ಸ್ಲಾಟ್ ಗ್ರಿಲ್, ದೊಡ್ಡ ಗಾತ್ರದ ಫೆಂಡರ್ ಹೊಂದಿರುವ ಜಿಮ್ಮಿ ದೊಡ್ಡದಾಗಿ ಕಾಣುತ್ತದೆ. ಐದು ಮೊನೊಟೊನ್ ಹಾಗೂ ಎರಡು ಡ್ಯುಯಲ್ ಟೋನ್ ಸೇರಿದಂತೆ ಏಳು ಬಣ್ಣಗಳಲ್ಲಿ ಜಿಮ್ಮಿ ಲಭ್ಯವಿದೆ. ಕೈನೆಟಿಕ್ ಯೆಲ್ಲ ಕಲರ್ ಇದರ ಸಿಗ್ನೇಚರ್ ಬಣ್ಣವಾಗಿದೆ.
ಇಂಟೀರಿಯರ್
9 ಇಂಚಿನ ಸ್ಮಾರ್ಟ್ಪ್ಲೇ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಕಾರು ಹೊಂದಿದ್ದು, ಅದರಲ್ಲಿ ವೈರ್ಲೆಸ್ ಡಿಸ್ಪ್ಲೇ, ವೈರ್ಲೆಸ್ ಆಪಲ್ ಕಾರ್ಪ್ಲೇ, ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯ ಫೀಚರ್ಗಳಿವೆ. ಅದೇ ರೀತಿ ಕ್ಯಾಬಿನ್ ಹಾಗೂ ಇಂಟೀರಿಯರ್ ಕಲರ್ ಆಫ್ರೋಡಿಂಗ್ ಹೊಂದಿಕೆಯಾಗುವಂತೆ ತಯಾರಿಸಲಾಗಿದೆ.
ಎಂಜಿನ್ ಸಾಮರ್ಥ್ಯ: ಕಾರಿನಲ್ಲಿ 1.5 ಲೀಟರ್ ಸಾಮರ್ಥ್ಯದ ಎಂಜಿನ್ ಇದ್ದು, ಸ್ಟಾರ್ಟ್- ಸ್ಟಾಪ್ ಫೀಚರ್ ಹೊಂದಿದೆ. ಇದು 6000 ಆರ್ಪಿಎಮ್ನಲ್ಲಿ 277.1 ಕಿಲೋ ವ್ಯಾಟ್ ಪವರ್ ಹಾಗೂ 4000 ಆರ್ಪಿಎಮ್ನಲ್ಲಿ 132.4 ಎನ್ಎಮ್ ಟಾರ್ಕ್ಯೂ ಬಿಡುಗಡೆ ಮಾಡುತ್ತದೆ. ಇದರಲ್ಲಿ 5 ಸ್ಪೀಡ್ನ ಮ್ಯಾನುಯಲ್ ಹಾಗೂ 4 ಸ್ಪೀಡ್ನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ವ್ಯವಸ್ಥೆಗಳಿವೆ.
ಆರು ಏರ್ಬ್ಯಾಗ್ಗಳು, ಲಿಮಿಟೆಡ್ ಸ್ಲಿಪ್ ಡಿಫರೆನ್ಸಿಯಲ್ (ಎಲ್ಎಸ್ಡಿ), ಹೋಲ್ಡ್ ಅಸಿಸ್ಟ್ ಸಮೇತ ಇಎಸ್ಪಿ, ಹಿಲ್ ಡಿಸೆಂಟ್ ಕಂಟ್ರೋಲ್, ರಿಯಲ್ ವ್ಯೂ ಕ್ಯಾಮೆರಾ, ಎಬಿಎಸ್ ಹಾಗೂ ಇಬಿಡಿಯಂಥ ಸುರಕ್ಷತಾ ಫೀಚರ್ಗಳನ್ನು ಜಿಮ್ಮಿ ಹೊಂದಿದೆ.
ಇದನ್ನೂ ಓದಿ | Auto Expo 2023 | ಟಾಟಾ ಹ್ಯಾರಿಯರ್ ಇವಿ ಆಟೋ ಎಕ್ಸ್ಪೊದಲ್ಲಿ ಅನಾವರಣ, 2024ಕ್ಕೆ ಮಾರುಕಟ್ಟೆಗೆ