ನವ ದೆಹಲಿ : ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ ಆಟೋ ಎಕ್ಸ್ಪೋದಲ್ಲಿ (Auto Expo 2023) ಕಾರು, ಬೈಕ್ಗಳು ಸೇರಿದಂತೆ ಹಲವಾರು ವಾಹನಗಳನ್ನು ಪ್ರದರ್ಶಿಸಲಾಗಿದೆ. ಅವುಗಳ ನಡುವೆ ಗಮನ ಸೆಳೆದಿರುವುದು ಸ್ವಯಂ ಸಮತೋಲನ ಸಾಧಿಸುವ (self Balancing) ಸ್ಕೂಟರ್. ಮುಂಬಯಿ ಮೂಲದ ಲೈಗರ್ ಮೊಬಿಲಿಟಿ ಕಂಪನಿ ಈ ಸ್ಕೂಟರ್ ಅನ್ನು ತಯಾರಿಸಿ ಮಾರುಕಟ್ಟೆಗೆ ಇಳಿಸಿದೆ. 2023ರ ಮಧ್ಯದಲ್ಲಿ ಇದು ಮಾರುಕಟ್ಟೆಗೆ ಇಳಿಯಲಿದೆ ಎಂದು ಕಂಪನಿ ಹೇಳಿದೆ. ಅದೇ ರೀತಿ ಕಂಪನಿಯು 2025ರ ವೇಳೆಗೆ ಸ್ಕೂಟರ್ಗಳನ್ನು ವಿದೇಶಕ್ಕೆ ರಫ್ತು ಮಾಡುವ ಉದ್ದೇಶವನ್ನೂ ಹೊಂದಲಾಗಿದೆ.
ಇದು ಸುರಕ್ಷತೆಯ ಸವಾರಿಯ ಮೂಲಕ ಜನಪ್ರಿಯತೆ ಪಡೆಯಲಿದೆ ಎಂದು ಕಂಪನಿ ಹೇಳಿದ್ದು, ಭಾರತೀಯ ಮಾರುಕಟ್ಟೆಗೆಯಲ್ಲಿ ಪ್ರಪ್ರಥಮ ಸ್ವಯಂ ಸಮತೋಲನ ಪಡೆದುಕೊಳ್ಳುವ ಕಾರಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಎಕ್ಸ್ಪೊದಲ್ಲಿ ಸ್ವಯಂ ಸಮತೋಲನದ ಪ್ರದರ್ಶನವನ್ನೂ ಮಾಡಲಾಗುತ್ತಿದೆ. ಬಟನ್ ಒತ್ತುವ ಮೂಲಕ ಸೆಲ್ಫ್ ಬ್ಯಾನೆಲ್ಸ್ ಫೀಚರ್ ಆನ್ ಮತ್ತು ಆಫ್ ಮಾಡುವ ಅವಕಾಶವನ್ನೂ ನೀಡಲಾಗಿದೆ. ಮಾಹಿತಿ ಪ್ರಕಾರ ಸರಕಾರದ ಸಬ್ಸಿಡಿ ಪಡೆದ ಬಳಿಕ ಈ ಸ್ಕೂಟರ್ಗೆ 90 ಸಾವಿರದಿಂದ 1 ಲಕ್ಷ ರೂಪಾಯಿ ಬೆಲೆ ನಿಗದಿಯಾಗಬಹುದು (ಎಕ್ಸ್ ಶೋರೂಮ್ ಬೆಲೆ) ಎಂದು ಹೇಳಲಾಗಿದೆ.
ಭಾರತದ ಹವಾಗುಣಕ್ಕೆ ಪೂರಕವಾಗಿರುವ ಲಿಕ್ವಿಡ್ ಕೂಲ್ಡ್ ಲೀಥಿಯಮ್ ಬ್ಯಾಟರಿಯನ್ನು ಕಂಪನಿ ಈ ಸ್ಕೂಟರ್ಗೆ ಬಳಸಿದೆ. ಲೈಗರ್ ಎಕ್ಸ್ ಹಾಗೂ ಲೈಗರ್ ಎಕ್ಸ್1 ಎಂಬ ಎರಡು ಮಾಡೆಲ್ನ ಸ್ಕೂಟರ್ ಲಭ್ಯ ಇದೆ. ಆದರೆ, ಅದರ ಪೂರ್ಣ ಮಾಹಿತಿಯನ್ನು ಇನ್ನೂ ಕಂಪನಿ ಪ್ರಕಟಿಸಿಲ್ಲ. ಎರಡೂ ಸ್ಕೂಟರ್ ಗರಿಷ್ಠ 65 ಕಿಲೋಮೀಟರ್ ವೇಗದಲ್ಲಿ ಸಾಗುತ್ತದೆ. ಲೈಗರ್ ಎಕ್ಸ್ ಒಂದು ಬಾರಿ ಚಾರ್ಜ್ ಮಾಡಿದರೆ 60 ಕಿಲೋಮೀಟರ್ ದೂರ ಸಾಗಿದರೆ, ಎಕ್ಸ್1 100 ಕಿಲೋಮೀಟರ್ ತನಕ ಸಾಗುತ್ತದೆ ಎಂದು ಹೇಳಲಾಗಿದೆ.
ಲೈಗರ್ ಎಕ್ಸ್ನಲ್ಲಿ ಡಿಟಾಚೇಬಲ್ ಬ್ಯಾಟರಿಯಿದ್ದು, ಹೊರಗೆ ತೆಗೆದು ಚಾರ್ಜ್ ಮಾಡಬಹುದು. ಮೂರು ಗಂಟೆಗಳಲ್ಲಿ ಇದು ಫುಲ್ ಚಾರ್ಜ್ ಆಗುತ್ತದೆ. ಲೈಗರ್ ಎಕ್ಸ್1 ಸ್ಕೂಟರ್ನಲ್ಲಿ ನಾನ್ ಡಿಟ್ಯಾಚೇಬಲ್ ಬ್ಯಾಟರಿಯಿರುತ್ತದೆ ಹಾಗೂ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಆಗಲು 4.5 ಗಂಟೆಯಲ್ಲಿ ಚಾರ್ಜ್ ಆಗುತ್ತದೆ. ಹೆಚ್ಚುವರಿ ದರಕ್ಕೆ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನೂ ಕಂಪನಿ ನೀಡಿದೆ. ರಿವರ್ಸ್ ಬಟನ್, ಲರ್ನರ್ ಮೋಡ್ ಸೇರಿದಂತೆ ಓವರ್ ದಿ ಏರ್ (ಒಟಿಎ) ಫೀಚರ್ಗಳನ್ನು ಹೊಂದಿದೆ.
ಇದನ್ನೂ ಓದಿ | Auto Expo 2023 | ವಿಭಿನ್ನ ವಿನ್ಯಾಸದ ಮೂಲಕ ಗಮನ ಸೆಳೆದ ಟಾಟಾದ ಕರ್ವ್; ಇವಿ, ಪೆಟ್ರೋಲ್ ಎಂಜಿನ್ನಲ್ಲಿ ಲಭ್ಯ