Site icon Vistara News

Innova Hycross | 21 ಕಿ.ಮೀ ಮೈಲೇಜ್‌ ಕೊಡುತ್ತದೆ ಹೊಸ ಇನ್ನೋವಾ; 50 ಸಾವಿರ ರೂ. ಕೊಟ್ಟು ಬುಕ್‌ ಮಾಡಿ

ನವ ದೆಹಲಿ : ಭಾರತದ ಅತ್ಯಂತ ಜನಪ್ರಿಯ ಎಂಪಿವಿ ಕಾರು ಇನ್ನೊವಾದ ಹೊಸ ಆವೃತ್ತಿ ಇನ್ನೋವಾ ಹೈಕ್ರಾಸ್‌ (Innova Hycross) ಶುಕ್ರವಾರ ಭಾರತದಲ್ಲಿ ಅನಾವರಣಗೊಂಡಿತು. ಇಂಡೋನೇಷ್ಯಾದಲ್ಲಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಕಾರನ್ನು ಭಾರತಕ್ಕೂ ಪರಿಚಯ ಮಾಡಲಾಯಿತು. ಹೈಬ್ರಿಡ್‌ ಎಂಜಿನ್‌ನೊಂದಿಗೆ ಪರಿಚಯಗೊಂಡಿರುವ ಇದು ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇನ್ನೋವಾ ಕ್ರಿಸ್ಟಾಗಿಂತ ಸಂಪೂರ್ಣವಾಗಿ ವಿಭಿನ್ನ ತಾಂತ್ರಿಕತೆ ಹೊಂದಿದೆ. ಮೂಲಕ ಹಳೆ ಮಾದರಿಯ ಕಾರು ಭವಿಷ್ಯದಲ್ಲಿ ಲಭ್ಯವಿರುವುದಿಲ್ಲ ಎಂಬ ಸೂಚನೆ ಕೊಟ್ಟಂತಾಗಿದೆ. ಮೊನೊಕಾಕ್‌ ಫ್ಲಾಟ್‌ಫಾರ್ಮ್‌ ಹಾಗೂ ಹೈಬ್ರಿಡ್‌ ಪೆಟ್ರೋಲ್‌ ಎಂಜಿನ್‌ ಹೊಸ ಕಾರಿನ ವಿಶೇಷತೆಗಳಾಗಿದ್ದು, ೫೦ ಸಾವಿರ ರೂಪಾಯಿ ಕೊಟ್ಟು ಬುಕ್‌ ಮಾಡಿಕೊಳ್ಳಬಹುದಾಗಿದೆ.

ಕಾರು ಜನವರಿ ಮಧ್ಯಂತರದ ಬಳಿಕ ರಸ್ತೆಗೆ ಇಳಿಯಲಿದ್ದು, ಅದಕ್ಕಿಂತ ಮೊದಲು ನಡೆಯುವ ಆಟೊ ಎಕ್ಸ್‌ಪೊದ ವೇಳೆ ಬೆಲೆ ಪ್ರಕಟಗೊಳ್ಳಲಿದೆ. ಆದಾಗ್ಯೂ ಟೊಯೊಟಾ ಕಿರ್ಲೋಸ್ಕರ್‌ ವೆಬ್‌ಸೈಟ್‌ ಮೂಲಕ ೫೦ ಸಾವಿರ ರೂಪಾಯಿ ಪಾವತಿ ಮಾಡಿ ಬುಕ್‌ ಮಾಡಿಕೊಳ್ಳಬಹುದು ಎಂದು ಕಂಪನಿ ತಿಳಿಸಿದೆ. ಇನ್ನೋವಾ ಹೈ ಕ್ರಾಸ್‌ ಕೇವಲ ಪೆಟ್ರೋಲ್‌ ಎಂಜಿನ್‌ ಆವೃತ್ತಿಯಲ್ಲಿ ಮಾತ್ರ ಲಭ್ಯವಿದ್ದು, ಡೀಸೆಲ್‌ ಕಾರಿನ ತಯಾರಿ ನಿಲ್ಲಿಸಲಾಗಿದೆ. ಆದರೆ, ಹೈಬ್ರಿಡ್‌ ತಂತ್ರಜ್ಞಾನದ ಮೂಲಕ ಹೆಚ್ಚು ಲೀಟರ್‌ ಪೆಟ್ರೋಲ್‌ಗೆ ೨೧.೧ ಗರಿಷ್ಠ ಮೈಲೇಜ್‌ ಪಡೆಯಲು ಸಾಧ್ಯವಿದೆ ಎಂದು ಕಂಪನಿ ಹೇಳಿದೆ.

ನೂತನ ಇನ್ನೋವಾ ಹೈಕ್ರಾಸ್ ಕಾರು ಎಸ್‌ಯುವಿ (ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌)ನೋಟವನ್ನು ಹೊಂದಿದ್ದು, ಗಾತ್ರದಲ್ಲೂ ದೊಡ್ಡದಾಗಿದೆ. ಜತೆಗೆ ಹೊಸ ಯುಗದ ತಂತ್ರಜ್ಞಾನದೊಂದಿಗೆ ಹೆಚ್ಚು ಆರಾಮದಾಯಕ ಚಾಲನೆಗೂ ಪೂರವಕಾಗಿದೆ. ಜಿ, ಜಿಎಕ್ಸ್‌ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಕೇವಲ ಪೆಟ್ರೋಲ್‌ ಎಂಜಿನ್‌ ಮಾತ್ರ ಇರಲಿದ್ದು, ವಿಎಕ್ಸ್ ಹಾಗೂ ಝೆಡ್‌ಎಕ್ಸ್‌ ಮಾಡೆಲ್‌ ಸ್ಟ್ರಾಂಗ್‌ ಹೈಬ್ರಿಡ್‌ ಎಂಜಿನ್‌ಗಳನ್ನು ಹೊಂದಿವೆ. ಏಳು ಹಾಗೂ ಎಂಟು ಸೀಟ್‌ಗಳ ಸಾಮರ್ಥ್ಯದೊಂದಿಗೆ ಕಾರು ಮಾರುಕಟ್ಟೆಗೆ ಇಳಿಯಲಿದೆ. ಟಾಪ್‌ ವೇರಿಯಂಟ್‌ ಅಗಿರುವ ಝಡ್‌ಎಕ್ಸ್‌ನಲ್ಲಿ ಕೇವಲ ಏಳು ಸೀಟುಗಳು ಮಾತ್ರ ಲಭ್ಯವಿರುತ್ತದೆ ಹಾಗೂ ಆರು ಸೀಟಿಗೆ ಇಳಿಸಿಕೊಳ್ಳಬಹುದು.

ಮೊನೊಕಾಕ್‌ ಚಾಸಿಸ್‌

ಇದುವರೆಗೆ ಇನ್ನೋವಾ ಕಾರಿನಲ್ಲಿ ಲ್ಯಾಡರ್‌ ಫ್ರೇಮ್‌ ಚಾಸಿಸ್‌ಗಳನ್ನು ಬಳಸಲಾಗುತ್ತಿತ್ತು. ಆದರೆ ಹೊಸ ಹೈಕ್ರಾಸ್‌ನಲ್ಲಿ ಮೊನೊಕಾಕ್‌ ಚಾಸಿಸ್‌ ಬಳಸಲಾಗಿದೆ. ಇದರಿಂದಾಗಿ ಕಾರಿನ ಒಟ್ಟು ತೂಕವನ್ನು ೨೦೦ ಕೆ.ಜಿಯಷ್ಟು ಇಳಿಸಲಾಗಿದೆ. ಅದೇ ರೀತಿ ಫ್ರಂಟ್‌ವೀಲ್ ಡ್ರೈವ್‌ ಮೂಲಕ ಕಾರು ಚಾಲನೆ ಪಡೆಯಲಿದೆ. ೪,೭೫೫ ಮಿಲಿ ಮೀಟರ್‌ ಉದ್ದ, ೧೮೫೦ ಮಿಲಿ ಮೀಟರ್‌ ಅಗಲ, ೧೭೯೫ ಮಿಲಿ ಮೀಟರ್‌ ಎತ್ತರವಾಗಿದೆ ಹೊಸ ಹೈಕ್ರಾಸ್‌ ಇನ್ನೋವಾ. ೨೮೫೦ ಮಿಲಿ ಮೀಟರ್‌ ವೀಲ್‌ ಬೇಸ್‌ ಹೊಂದಿದ್ದು, ೧೮೫ ಮಿಲಿ ಮೀಟರ್‌ ಗ್ರೌಂಡ್ ಕ್ಲಿಯರೆನ್ಸ್‌ ಕೂಡ ಹೊಂದಿದೆ.

ಹೊಸ ವಿನ್ಯಾಸ

ಇನ್ನೋವಾ ಹೈ ಕ್ರಾಸ್‌ ಸಂಪೂರ್ಣವಾಗಿ ಹೊಸ ವಿನ್ಯಾಸ ಹೊಂದಿದೆ. ಹಳೆಯ ಎಸ್‌ಯುವಿ ನೋಟ ಹೋಗಿದ್ದು, ಎಸ್‌ಯುವಿ ಲುಕ್ ನೀಡಲಾಗಿದೆ. ಹೀಗಾಗಿ ಹಳೆ ಇನ್ನೋವಾ ಮುಂದುವರಿದ ಆವೃತ್ತಿ ಎಂದು ಅನಿಸದು. ಹನಿಕೂಂಬ್‌ ಮೆಶ್‌ಗ್ರಿಲ್‌, ಸ್ಲೀಕ್‌ ಹೆಡ್‌ಲ್ಯಾಂಪ್‌, ಡಿಆರ್‌ಎಲ್‌ಗಳನ್ನು ಅತ್ಯಾಕರ್ಷಕವಾಗಿದೆ. ೧೮ ಇಂಚಿನ ದೊಡ್ಡ ವೀಲ್‌ಗಳು, ಬಾಡಿ ಕ್ಲಾಡಿಂಗ್‌, ಬಳಸಲಾಗಿದೆ. ಅಂತೆಯೇ ಮೊನೊಕಾಕ್‌ ಚಾಸಿಸ್ ಕಾರಣಕ್ಕೆ ಒಟ್ಟಾರೆ ೧೦೦ ಮಿಲಿ ಮೀಟರ್‌ ವೀಲ್‌ ಬೇಸ್‌ ಹೆಚ್ಚಿಸಲಾಗಿದೆ.

ಇಂಟೀರಿಯರ್‌ ಹೇಗಿದೆ?

ಹೊಸ ಮಾದರಿಯ ಡ್ಯಾಶ್‌ ಬೋರ್ಡ್‌ನಿಂದಾಗಿ ಕ್ಯಾಬಿನ್‌ ಸಂಪೂರ್ಣವಾಗಿ ಭಿನ್ನ ನೋಟ ನೀಡುತ್ತದೆ. ಫ್ಲೋಟಿಂಗ್‌ ಟಚ್‌ ಸ್ಕ್ರಿನ್‌ ಇನ್ಪೋಟೈಮ್‌ಮೆಂಟ್‌ ಮೊದಲ ಆಕರ್ಷಣೆಯಾಗಿದೆ. ರಿಕ್ಲೈನಿಂಗ್‌ ಸೀಟ್‌ಗಳು, ಡ್ಯುಯಲ್‌ ಟೋನ್‌ ಇಂಟೀರಿಯರ್‌ ಕಲರ್‌ಗಳು, ವೆಂಟಿಲೇಟೆಡ್‌ ಸೀಟ್‌ಗಳು, ಮೂಡ್‌ ಲೈಟಿಂಗ್‌, ಪನೋರಮಿಕ್‌ ಸನ್‌ರೂಫ್‌, ರೂಫ್‌ ಮೌಂಟೆಡ್‌ ಎಸಿ ವೆಂಟ್‌ಗಳನ್ನು ಹೊಂದಿವೆ. ಸುರಕ್ಷತೆಯ ವಿಚಾರಕ್ಕೆ ಬಂದಾಗ ಈ ಕಾರು ಟೊಯೊಟಾ ಸೇಫ್ಟಿ ಸೆನ್ಸ್‌ ಆಯ್ಕೆಯನ್ನೂ ನೀಡಲಾಗಿದೆ. ಆರು ಏರ್‌ಬ್ಯಾಗ್‌ಗಳು ಪ್ರಯಾಣಿಕರ ಸುರಕ್ಷತೆ ಹೆಚ್ಚಿಸುತ್ತದೆ. ಅಲ್ಲದೆ, ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಮ್‌ ಹೊಂದಿರುವ ಟೊಯೊಟಾದ ಮೊದಲ ಕಾರು ಇದು.

ಎಂಜಿನ್‌ ಸಾಮರ್ಥ್ಯವೇನು?

ಇನ್ನೋವಾ ಹೈ ಕ್ರಾಸ್‌ನಲ್ಲಿ ಹೊಸ ಎಂಜಿನ್‌ ಬಳಸಲಾಗಿದೆ. ಈ ಹಿಂದಿನ ಇನ್ನೋವಾ ಕ್ರಿಸ್ಟಾದಲ್ಲಿ ೨.೭ ಲೀಟರ್‌ನ ಎಂಜಿನ್‌ಗಳಿತ್ತು. ಆದರೆ, ಈ ಬಾರಿ ೨ ಲೀಟರ್‌ ಪೆಟ್ರೋಲ್‌ ಎಂಜಿನ್‌ ಬಳಸಲಾಗಿದೆ. ಇದರಲ್ಲಿ ಸ್ಟ್ರಾಂಗ್‌ ಹೈಬ್ರಿಡ್‌ ಆಯ್ಕೆಯನ್ನು ಕೊಡಲಾಗಿದೆ. ೨ ಲೀಟರ್‌ನ ಪೆಟ್ರೋಲ್‌ ಎಂಜಿನ್‌ ೧೭೪ ಪಿಎಸ್‌ ಪವರ್‌ ಬಿಡುಗಡೆ ಮಾಡಿದರೆ, ೨೦೫ ಎನ್‌ಎಮ್‌ ಟಾರ್ಕ್ಯೂ ಬಿಡುಗಡೆ ಮಾಡುತ್ತದೆ. ಸ್ಟ್ರಾಂಗ್ ಹೈಬ್ರಿಡ್‌ ಎಂಜಿನ್‌ ಹಾಗೂ ಎಲೆಕ್ಟ್ರಿಕ್‌ ಮೋಟಾರ್ ಸೇರಿ ೧೮೬ ಪಿಎಸ್‌ ಪವರ್‌ ಬಿಡುಗಡೆ ಮಾಡುತ್ತದೆ. ೨೦೬ ಎನ್‌ಎಮ್‌ ಟಾರ್ಕ್ಯೂ ಬಿಡುಗಡೆ ಮಾಡುತ್ತದೆ. ಪೆಟ್ರೋಲ್ ಎಂಜಿನ್‌ ಕಾರಿನಲ್ಲಿ ಆಟೋಮ್ಯಾಟಿಕ್‌ ಸಿವಿಟಿ ಗೇರ್‌ ಬಾಕ್ಸ್ ಇರಲಿದ್ದು, ಹೈಬ್ರಿಡ್‌ ಎಂಜಿನ್‌ನಲ್ಲಿ ಇ-ಸಿವಿಟಿ ಗೇರ್‌ ಬಾಕ್ಸ್ ಹೊಂದಿರುತ್ತದೆ. ಡೀಸೆಲ್‌ ಎಂಜಿನ್‌ ಇಲ್ಲದಿರುವುದು ಹಾಗೂ ಮ್ಯಾನುಯಲ್‌ ಗೇರ್‌ಬಾಕ್ಸ್‌ ಆಯ್ಕೆ ನೀಡದಿರುವುದು ವಾಣಿಜ್ಯ ಬಳಕೆಯ ಖರೀದಿದಾರರಿಗೆ ದೊಡ್ಡ ಹಿನ್ನಡೆಯಾಗಿದೆ.

ಬೆಲೆ ಎಷ್ಟು?

ಜನವರಿಯಲ್ಲಿ ಕಾರು ಮಾರುಕಟ್ಟೆಗೆ ಇಳಿಯುವ ವೇಳೆ ಅಥವಾ ಆಟೋ ಎಕ್ಸ್‌ಪೋದಲ್ಲಿ ಬೆಲೆ ಪ್ರಕಟಗೊಳ್ಳಬಹುದು. ಆದರೆ ೨೦ರಿಂದ ೩೦ ಲಕ್ಷ ರೂಪಾಯಿ ಎಕ್ಸ್‌ ಶೋ ರೂಮ್‌ ನಿಗದಿ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಇದನ್ನೂ ಓದಿ | Urban Cruiser Hyryder | ಟೊಯೊಟಾ ಅರ್ಬನ್‌ ಕ್ರೂಸರ್‌ ಹೈರೈಡರ್‌ ಬೆಲೆ ಅನಾವರಣ

Exit mobile version