ಬೆಂಗಳೂರು: ಆಫ್ ರೋಡಿಂಗ್ ಪ್ರೇಮಿಗಳ ಮನ ಗೆದ್ದಿರುವ ಮಹೀಂದ್ರಾ ಕಂಪನಿಯ ಥಾರ್ (Mahindra Thar), ಅಗ್ಗದ ದರದಲ್ಲಿ ಮಾರುಕಟ್ಟೆಗೆ ಇಳಿಯಲಿದೆ. ಈ ಹಿಂದೆ ಇಂಥದ್ದೊಂದು ಸಾಧ್ಯತೆಗಳ ಬಗ್ಗೆ ಮಾತನಾಡಲಾಗುತ್ತಿತ್ತು. ಇದೀಗ ಕಾರು ಡೀಲರ್ಶಿಪ್ ಯಾರ್ಡ್ಗೆ ತಲುಪಿದ್ದು, ಕೆಲವೇ ದಿನಗಳಲ್ಲಿ ಅನಾವರಣಗೊಳ್ಳಲಿದೆ. ಹಾಗಾದರೆ ಈಗಿರುವ ಮಹೀಂದ್ರಾ ಥಾರ್ಗೂ ಅಗ್ಗದ ಬೆಲೆಯ ಮಹೀಂದ್ರಾ ಥಾರ್ ನಡುವೆ ಇರುವ ವ್ಯತ್ಯಾಸ ಏನಿರಬಹುದು ಎಂಬುದನ್ನು ನೋಡೋಣ.
ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಹಿಂದ್ರಾ ಥಾರ್ ಸಂಪೂರ್ಣವಾಗಿ ಆಫ್ರೋಡಿಂಗ್ ವಾಹನ. ಹೀಗಾಗಿ ಫೋರ್ ವೀಲ್ ಡ್ರೈವ್ ಆಯ್ಕೆಯೊಂದಿಗೆ ಬರುತ್ತದೆ. ಆದರೆ, ಅಗ್ಗದ ದರದಲ್ಲಿ ಮಾರುಕಟ್ಟೆಗೆ ಇಳಿಯಲಿರುವ ಮಹೀಂದ್ರಾ ಥಾರ್ನಲ್ಲಿ ಈ ಆಯ್ಕೆ ಇರುವುದಿಲ್ಲ. ಬದಲಾಗಿ 2 ವೀಲ್ ಡ್ರೈವ್ (2ಡಬ್ಲ್ಯುಡಿ) ಆಯ್ಕೆ ಇರುತ್ತದೆ.
2 ವೀಲ್ ಡ್ರೈವ್ ಥಾರ್ನಲ್ಲಿ 1.5 ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಇರಲಿದೆ. ಇದು ಮಹೀಂದ್ರಾ ಎಕ್ಸ್ಯುವಿ 300 ಕಾರಿನಲ್ಲಿ ಬರುವ ಎಂಜಿನ್ ಆಗಿದೆ. ಇದು 3500 ಆರ್ಪಿಎಮ್ನಲ್ಲಿ 116 ಬಿಎಚ್ಪಿ ಪವರ್ ಹಾಗೂ 2000 ಆರ್ಪಿಎಮ್ನಲ್ಲಿ 300 ಎನ್ಎಮ್ ಟಾರ್ಕ್ಯೂ ಬಿಡುಗಡೆ ಮಾಡಲಿದೆ.
ಫೋರ್ವೀಲ್ ಡ್ರೈವ್ ಹೊಂದಿರುವ ಹಾಲಿ ಥಾರ್ನಲ್ಲಿ 2 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಹಾಗೂ 2.2 ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ಗಳಿವೆ. ಇದರ ಎಂಜಿನ್ಗೆ ಹೋಲಿಸಿದರೆ ಸುಮಾರು 15 ಬಿಎಚ್ಪಿಯಷ್ಟು ಕಡಿಮೆ ಪವರ್ ಅನ್ನು ಹೊಸ ಎಂಜಿನ್ ಉತ್ಪಾದಿಸುತ್ತದೆ. ಆದರೆ ಟಾರ್ಕ್ಯೂ ಅಷ್ಟೇ ಪ್ರಮಾಣದಲ್ಲಿದೆ.
ಸಣ್ಣ ಗಾತ್ರದ ಎಂಜಿನ್ ಹಾಗೂ ಫೋರ್ ವೀಲ್ ಡ್ರೈವ್ ವ್ಯವಸ್ಥೆ ಇಲ್ಲದಿರುವ ಕಾರಣ ಹೊಸ ಥಾರ್ನ ತೂಕವೂ ಕಡಿಮೆಯಾಗಲಿದೆ. ಇದರಿಂದಾಗಿ ಮೈಲೇಜ್ ಹೆಚ್ಚು ಬರುವ ಸಾಧ್ಯತೆಗಳಿವೆ. ಆದಾಗ್ಯೂ, ಕ್ಷಮತೆಯಲ್ಲಿ ವ್ಯತ್ಯಯವಾಗಲಾರದು ಎನ್ನಲಾಗಿದೆ.
ಫೋರ್ ವೀಲ್ ಡ್ರೈವ್ ಇಲ್ಲದಿರುವ ಕಾರಣ ಉತ್ಪಾದನಾ ವೆಚ್ಚದ ಜತೆಗೆ ತೆರಿಗೆಯಲ್ಲೂ ಉಳಿತಾಯವಾಗಲಿದೆ. ಇದರಿಂದಾಗಿ ಸಹಜವಾಗಿಯೇ ಗ್ರಾಹಕರಿಗೆ ಕಡಿಮೆ ಮೊತ್ತಕ್ಕೆ ಥಾರ್ ದೊರೆಯಲಿದೆ.
ಹೊಸ ಥಾರ್ನಲ್ಲಿ ಸ್ಟಾರ್ಟ್/ಸ್ಟಾಪ್ ಫಂಕ್ಷನ್ ಕೂಡ ಇದೆ ಎಂಬ ಮಾಹಿತಿ ಇದೆ. ಜತೆಗೆ ಸೆಂಟ್ರಲ್ ಕನ್ಸೋಲ್ ಮೂಲಕ ಲಾಕ್ ಮತ್ತು ಅನ್ಲಾಕ್ ವ್ಯವಸ್ಥೆ ಕಲ್ಪಿಸಿದೆ. ನೋಟದ ವಿಚಾರದಲ್ಲಿ ಹೆಚ್ಚು ಬದಲಾವಣೆ ಇರದು. ಆದರೆ, 4 ಡಬ್ಲ್ಯುಡಿ ಎಂಬ ಟ್ಯಾಗ್ ಇರದು.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಆನಂದ ಮಹೀಂದ್ರಾ ಎಂಬ ಸ್ಫೂರ್ತಿಯ ಸೆಲೆ, Best supporting HERO!