ಬೆಂಗಳೂರು: ಸಬ್ ಕಾಂಪಾಕ್ಟ್ ಎಸ್‌ಯುವಿ ವಿಭಾಗದ ಜನಪ್ರಿಯ ಕಾರು Maruti Suzuki Brezza 2022 ಹೊಚ್ಚ ಹೊಸ ರೂಪದೊಂದಿಗೆ ಬುಧವಾರ ಮಾರುಕಟ್ಟೆಗೆ ಇಳಿದಿದೆ. ಈ ಹಿಂದಿನ ಕಾರಿಗಿಂತ ವಿಭಿನ್ನ ನೋಟ ಹೊಂದಿರುವ ಹೊಸ ಅವತಾರದ ಬ್ರೆಜಾ, ಗ್ರಾಹಕರ ಮನಗೆಲ್ಲು ಸರ್ವ ರೀತಿಯಲ್ಲೂ ಪ್ರಯತ್ನ ನಡೆಸಿದೆ.
ಈ ಹಿಂದಿನ ವಿಟಾರ ಬ್ರೆಜಾದಲ್ಲಿನ ‘ವಿಟಾರ’ ಹೆಸರನ್ನು ಕೈಬಿಡಲಾಗಿದ್ದು, ಕೇವಲ ಬ್ರೆಜಾ ಹೆಸರಿನಲ್ಲಿ ಭಾರತೀಯರ ಮನೆಮಾತಾಗಲಿದೆ. ದಶಕಗಳ ಹಿಂದೆ ಭಾರತದಲ್ಲಿ ಮಾರುತಿ ಕಂಪನಿ ವಿಟಾರ ಎಂಬ ಎಸ್‌ಯುವಿಯನ್ನು ಭಾರತದಲ್ಲಿ ಮಾರುಕಟ್ಟೆಗೆ ಇಳಿಸಿತ್ತು. ಅದು ಜನಪ್ರಿಯತೆ ಗಳಿಸದ ಕಾರಣ ಬಹುತೇಕ ಭಾರತೀಯರಿಗೆ ಅದರ ಬಗ್ಗೆ ಗೊತ್ತಿಲ್ಲ. ಅಂತೆಯೆ ಬ್ರೇಜಾ ಎಸ್‌ಯುವಿಯನ್ನು ಮಾರುಕಟ್ಟೆಗೆ ಇಳಿಸುವ ವೇಳೆ ವಿಟಾರ ಕೂಡ ಸೇರಿಸಲಾಗಿತ್ತು. ಇದೀಗ ಆ ಹೆಸರನ್ನು ಕೈಬಿಡಲಾಗಿದೆ.
ಸುರಕ್ಷತೆಗೆ ಆದ್ಯತೆ
ಎಕ್ಸ್‌ಟೀರಿಯರ್ ಹಾಗೂ ಇಂಟೀರಿಯರ್ ಸೇರಿದಂತೆ ಎಲ್ಲ ರೀತಿಯಲ್ಲೂ ವಿಭಿನ್ನ ನೋಟ ಹಾಗೂ ಫೀಚರ್‌ಗಳನ್ನು ಹೊಂದಿರುವ ಬ್ರೆಜಾ ಭಾರತದ ಎಸ್‌ಯುವಿ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವುದಕ್ಕೆ ಮುಂದಾಗಿದೆ. ಕಾರಿನ ಹೊರ ಆವರಣ ಸಂಪೂರ್ಣ ಬದಲಾಗಿದ್ದು, ಇತ್ತೀಚಿಗೆ ಮಾರುಕಟ್ಟೆಗೆ ಇಳಿಯುತ್ತಿರುವ ಕಾರುಗಳು ಹೊಂದಿರುವ ಮಸ್ಕ್ಯುಲರ್ ಲುಕ್ ನೀಡಲಾಗಿದೆ. ಎಲ್‌ಇಡಿ ಹೆಡ್‌ಲೈಟ್‌ಗಳು, ಆಕರ್ಷಕ್ ಟೈಲ್ ಲ್ಯಾಂಪ್‌ಗಳು ಕಾರಿಗೆ ಹೊಸ ರೂಪ ಕೊಟ್ಟಿದೆ.
ಕನಿಷ್ಠ ಸುರಕ್ಷತಾ ರೇಟಿಂಗ್ ಹೊಂದಿರುವ ಮಾರುತಿ ಕಾರುಗಳ ಪೈಕಿ ಗ್ಲೋಬಲ್ ಅನ್‌ಕ್ಯಾಪ್‌ನಲ್ಲಿ ೪ ಸ್ಟಾರ್ ರೇಟಿಂಗ್ ಹೊಂದಿದ್ದ ಬ್ರೆಜಾದಲ್ಲಿ ಈ ಬಾರಿ ೬ ಏರ್ ಬ್ಯಾಗ್ ಸೇರಿದಂತೆ ಸುರಕ್ಷತಾ ಫೀಚರ್‌ಗಳನ್ನು ಇನ್ನಷ್ಟು ಹೆಚ್ಚಿಸಲಾಗಿದ್ದು ಗ್ರಾಹಕರಿಗೆ ಭರವಸೆ ನೀಡುವ ಎಲ್ಲ ಪ್ರಯತ್ನ ನಡೆಸಲಾಗಿದೆ. ಜತೆಗೆ ಹ್ಯುಂಡೈ ಕಂಪನಿಯ ಕ್ರೆಟಾಗೆ ಸ್ಪರ್ಧೆ ನೀಡುವ ಮಾತನಾಡುತ್ತಿದೆ ಮಾರುತಿ ಸುಜುಕಿ ಕಂಪನಿ.
ಮಾರುತಿ ಕಂಪನಿ ನೀಡಿರುವ ಮಾಹಿತಿ ಪ್ರಕಾರ ಬಿಡುಗಡೆಗೆ ಮೊದಲೇ ಬ್ರೆಜಾಗೆ ೪೫ ಲಕ್ಷ ಬುಕಿಂಗ್ ಬಂದಿದೆ. ಜತೆಗೆ ಬುಕಿಂಗ್ ಆರಂಭಗೊಂಡ ಬಳಿಕ ಪ್ರತಿ ನಿಮಿಷಕ್ಕೆ ನಾಲ್ಕು ಆರ್ಡರ್‌ಗಳು ಬರುತ್ತಿವೆ.
ಹೊಸ ಲಕ್ಷಣಗಳು
ಎಲೆಕ್ಟ್ರಿಕ್ ಸನ್‌ರೂಫ್ ಭಾರತದ ಕಾರು ಮಾರುಕಟ್ಟೆಯ ಆಕರ್ಷಕ ಫೀಚರ್. ಆದರೆ, ಮಾರುತಿಯ ಯಾವುದೇ ಕಾರುಗಳು ಈ ವ್ಯವಸ್ಥೆ ಹೊಂದಿರಲಿಲ್ಲ. ಹೊಸ ಬ್ರೆಜಾ ಮೂಲಕ ಈ ಕೊರತೆ ಮಾರುತಿ ಸುಜುಕಿ ಸುಜುಕಿ ನೀಗಿಸಿದೆ. ಅದೇ ರೀತಿ ಈ ಸೆಗ್ಮೆಂಟ್‌ನಲ್ಲೇ ಮೊದಲು ಎಂಬಂತೆ ‘ಹೆಡ್ ಅಪ್ ಡಿಸ್‌ಪ್ಲೆ’ (ಎಚ್‌ಯುಡಿ) ಫೀಚರ್ ಅನ್ನು ಮೊದಲ ಬಾರಿಗೆ ಬ್ರೆಜಾದಲ್ಲಿ ಪರಿಚಯಿಸಲಾಗಿದೆ. ಹಳೆಯ ಬ್ರೆಜಾ ಕಾರಿನ ಹಿಂದಿನ ಸೀಟಿನ ಪ್ರಯಾಣಿಕರಿಗಾಗಿ ಪ್ರತ್ಯೇಕ ಎಸಿ ವೆಂಟ್ ಇರಲಿಲ್ಲ. ಹೊಸ ಮಾದರಿಯಲ್ಲಿ ಅದನ್ನೂ ಕೊಡಲಾಗಿದೆ.
೧೦ ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ ಕಾರಿನ ಒಳ ಆವರಣದ ನೋಟವನ್ನೇ ಬದಲಿಸಿದೆ. ಇದು ವಾಯ್ಸ್ ಅಸಿಸ್ಟ್ ಸೇರಿದಂತೆ ವಿಭಿನ್ನ ೪೦ಕ್ಕೂ ಅಧಿಕ ಲಕ್ಷಣಗಳನ್ನು ಹೊಂದಿವೆ. ೩೬೦ ಡಿಗ್ರಿ ಪಾರ್ಕಿಂಗ್ ಕ್ಯಾಮೆರಾವೂ ಇದೆ. ಒಟ್ಟಾರೆಯಾಗಿ ಕಾರಿನ ಒಳ ನೋಟ ಹಿಂದಿನ ಆವೃತ್ತಿಗಿಂತ ಸಂಪೂರ್ಣ ಭಿನ್ನವಾಗಿದ್ದು, ಕೊಡುವ ಕಾಸಿಗೆ ತಕ್ಕ ಅನುಭವವನ್ನೂ ಪಡೆಯಲು ಸಾಧ್ಯವಿದೆ.
ಎಂಜಿನ್ ಸಾಮರ್ಥ್ಯ?
೧.೫ ಲೀಟರ್‌ನ ಕೆ೧೫ ಸಿ ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಅನ್ನು ಕಾರಿನಲ್ಲಿ ಬಳಸಲಾಗಿದ್ದು, ೧೪೬೨ ಸಿಸಿ ಸಾಮರ್ಥ್ಯ ಹೊಂದಿದೆ. ಇದು ೬೦೦೦ ಆರ್‌ಪಿಎಮ್‌ನಲ್ಲಿ ೧೦೨ ಬಿಎಚ್‌ಪಿ ಪವರ್ ಹಾಗೂ ೪೪೦೦ ಆರ್‌ಪಿಎಮ್‌ನಲ್ಲಿ ೧೩೬.೮ ಎನ್ ಎಮ್ ಟಾರ್ಕ್ಯೂ ಸೃಷ್ಟಿಸಲಿದೆ.
ಬೆಲೆ ಎಷ್ಟು?
ಬ್ರೆಜಾ ಕಾರಿನ ಆರಂಭಿಕ ಬೆಲೆ ೭.೯೯ ಲಕ್ಷ ರೂಪಾಯಿ (ಎಕ್ಸ್ ಶೋರೂಮ್) ನಿಗದಿ ಮಾಡಲಾಗಿದ್ದು, ಟಾಪ್ ಎಂಡ್ ಕಾರಿಗೆ ೧೩.೯೬ ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಈ ಮೂಲಕ ಸಬ್‌ಕಾಂಪಾಕ್ಟ್ ಎಸ್‌ಯುವಿ ಮಾರುಕಟ್ಟೆಯಲ್ಲಿ ದುಬಾರಿ ಎನಿಸಿಕೊಂಡಿದೆ. ಏಳು ಅವತರಣಿಕೆಯಲ್ಲಿ ಬ್ರೆಜಾ ಕಾರು ದೊರೆಯಲಿದೆ. ಎಲ್ಲ ಶ್ರೇಣಿಯಲ್ಲಿ ೫ ಸ್ಪೀಡ್‌ನ ಮ್ಯಾನ್ಯುಯಲ್ ಗೇರ್ ಬಾಕ್ಸ್ ಇರಲಿದ್ದು, ಎಲ್‌ಎಕ್ಸ್‌ಐ ಬಿಟ್ಟು ಉಳಿದೆಲ್ಲ ಶ್ರೇಣಿಯಲ್ಲಿ ಹೊಸ ೬ ಸ್ಪೀಡ್‌ನ ಗೇರ್ ಬಾಕ್ಸ್‌ನ ಆಯ್ಕೆಯೂ ನೀಡಲಾಗಿದೆ.
ಇದನ್ನೂ ಓದಿ: ಮಹೀಂದ್ರಾ Scorpio N ಅನಾವರಣ, ಏನೇನಿವೆ ಹೊಸ ಫೀಚರ್‌ಗಳು?