ಬೆಂಗಳೂರು : ಭಾರತದ ಕಾರು ಮಾರುಕಟ್ಟೆಯಲ್ಲಿ ಸಬ್ -4 ಮೀಟರ್ ಎಸ್‌ಯುವಿಗೆ ಇದೀಗ ಇದೀಗ ಸಿಕ್ಕಾಪಟ್ಟೆ ಡಿಮ್ಯಾಂಡ್. ಎಲ್ಲ ಕಂಪನಿಗಳು ಕನಿಷ್ಠ ಒಂದು ಸಬ್ ಕಾಂಪಾಕ್ಟ್ ಕಾರುಗಳನ್ನು ಹೊಂದಿದ್ದು ಮಾರುಕಟ್ಟೆಯಲ್ಲಿ ಹೋರಾಟ ನಡೆಸುತ್ತಿದೆ. ಅಂತೆಯೇ ನಿಸ್ಸಾನ್ ಇಂಡಿಯಾ ಕಳೆದ ಕೆಲವು ವರ್ಷಗಳಿಂದ ಮ್ಯಾಗ್ನೈಟ್ (Nissan Magnite) ಮೂಲಕ ಪ್ರತಿಸ್ಪರ್ಧಿಗಳಿಗೆ ಸೆಡ್ಡು ಹೊಡೆಯುತ್ತಿದೆ. ಈ ಕಾರು ಭಾರತೀಯ ಕಾರು ಗ್ರಾಹಕರ ಗಮನವನ್ನೂ ಸೆಳೆದಿದೆ. ಇದರ ಹಲವು ವೇರಿಯೆಂಟ್‌ಗಳಲ್ಲಿ ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್‌ನೊಂದಿಗಿನ ಎಎಮ್‌ಟಿ ಗೇರ್ ಬಾಕ್ಸ್ ಹೊಂದಿರುವ ಕಾರು ವಿಶೇಷ ಎನಿಸಿದೆ. ಅದುವೇ ನಿಸ್ಸಾನ್ ಮ್ಯಾಗ್ನೈಟ್ ಇಜಡ್ ಶಿಫ್ಟ್. (Nissan Magnite EZ- Shift). ಇದರಲ್ಲಿ ಟರ್ಬೊ ಇಲ್ಲದ ಎಂಜಿನ್‌ಗೆ ಸ್ವಯಂಚಾಲಿತ ಟ್ರಾನ್ಸ್ ಮಿಷನ್ ಜೋಡಿಸಲಾಗಿದೆ. ಈ ಕಾರು ಹೇಗಿದೆ, ನಾನಾ ಪರಿಸ್ಥಿತಿಯಲ್ಲಿ ಈ ಕಾರಿನ ಸ್ಪಂದನೆ ಹೇಗಿದೆ ಎಂಬುದನ್ನು ನೋಡೋಣ.
ಮ್ಯಾಗ್ನೈಟ್ ನೋಡಲು ತುಂಬಾ ಸುಂದರವಾದ ಕಾರು ಎಂಬುದರಲ್ಲಿ ಅನುಮಾನ ಇಲ್ಲ. 6 ಲಕ್ಷ ರೂ.ಗಳ ಆರಂಭಿಕ ಬೆಲೆ ಹೊಂದಿರುವ ಹೊರತಾಗಿಯೂ ಕಾರು ಹೆಚ್ಚು ಪ್ರೀಮಿಯಂ ಆಗಿದೆ. ದೊಡ್ಡ ಎಲ್- ಆಕಾರದ ಡಿಆರ್‌ಎಲ್‌ಗಳನ್ನು ಹೊಂದಿರುವ ಇದರ ಮುಂಭಾಗ ರಸ್ತೆಯಲ್ಲಿನ ಓಡಾಟದ ವೇಳೆ ಉತ್ತಮ ನೋಟ ನೀಡುತ್ತದೆ. ಮ್ಯಾಗ್ನೈಟ್ ನ ಸೈಡ್ ಪ್ರೊಫೈಲ್ ಕೂಡ ಆಕರ್ಷಕವಾಗಿದೆ. ವಿಶೇಷವಾಗಿ 16 ಇಂಚಿನ ಇಂಚಿನ ಮಿಶ್ರಲೋಹದ ವೀಲ್‌ಗಳು ನೋಟವನ್ನು ಹೆಚ್ಚಿಸಿದೆ. ಆರ್ಚ್‌ಗಳು ಇದು ಆಫ್-ರೋಡರ್ ವಾಹನದ ಲುಕ್ ಕೊಟ್ಟಿದೆ.
ಮ್ಯಾಗ್ನೈಟ್‌ನ ಬಾಡಿಲೈನ್‌ಗಳು ಹೆಚ್ಚು ತಿಕ್ಷ್ಣವಾಗಿದ್ದು ಕಾಂಪ್ಯಾಕ್ಟ್ ಎಸ್‌ಯುವಿಗೆ ಉತ್ತಮ ನೋಟ ನೀಡುತ್ತದೆ. ಅಥ್ಲೆಟಿಕ್ ನೋಟಕ್ಕಾಗಿ ರೂಫ್ ಅನ್ನು ಸ್ಲ್ಯಾಪಿಂಗ್ ಆಗಿ ಇಡಲಾಗಿದೆ. ಅದೇ ರೀತಿ ದೊಡ್ಡ ಗಾತ್ರದ ಸ್ಪಾಯ್ಲರ್‌ಗಳು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಿದೆ.
ವಿಶೇಷ ನೀಲಿ ಬಣ್ಣ
ಕಾರಿನ ಆಕರ್ಷಕ ನೀಲಿ ಬಣ್ಣವು ಎಲ್ಲಾ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಆದರೆ, ಬಹುತೇಕ ಎಲ್ಲವೂ ಬಿಳಿ ರೂಫ್ ಕಲರ್ ಹೊಂದಿದೆ. ಹೀಗಾಗಿ ಬ್ಲ್ಯಾಕ್ ರೂಫ್ ಬೇಕಾದರೆ ಇಲ್ಲಿ ವಿಶ್ಲೇಷಣೆ ಮಾಡುತ್ತಿರುವ ಇಝಡ್-ಶಿಫ್ಟ್ ಕಾನ್ಫಿಗರೇಶನ್ ಕಾರನ್ನು ಖರೀದಿ ಮಾಡಬೇಕಾಗುತ್ತದೆ.
ಬೂಟ್ ಡೋರ್‌ನ ಕೆಳಗಿನ ಬಲಭಾಗದಲ್ಲಿರುವ ‘ಇಝಡ್-ಶಿಫ್ಟ್’ ಬ್ಯಾಡ್ಜ್ ನೀಡಲಾಗಿದೆ. ಎಎಂಟಿ ವೇರಿಯೆಂಟ್‌ನಲ್ಲಿ ಇದೊಂದು ಬದಲಾವಣೆ ಹೊರತುಪಡಿಸಿ ವಿನ್ಯಾಸದಲ್ಲಿ ಬೇರೆ ಬದಲಾವಣೆ ಇಲ್ಲ. ಎಲ್ಲ ಕಾರು ಕಂಪನಿಗಳು ಟೈಲ್ ಲ್ಯಾಂಪ್ ಅನ್ನು ಎಲ್‌ಇಡಿಗೆ ಪರಿವರ್ತಿಸಿದ್ದರೂ ನಿಸ್ಸಾನ್ ಇನ್ನೂ ಮಾಡಿಲ್ಲ. ಆದಾಗ್ಯೂ ಹಿಂಭಾಗದ ವಿನ್ಯಾಸದಲ್ಲಿ ಯಾವುದೇ ಕೊರತೆ ಇಲ್ಲ. ಕಾರಿನ ಹಿಂಭಾಗದ ಬಂಪರ್ ಲೇಯರ್ಡ್ ವಿನ್ಯಾಸ ಹೊಂದಿದೆ. ಟೈಲ್‌ಗೇಟ್ ಹೆಚ್ಚು ದೊಡ್ಡದಾಗಿದ್ದು ಮಧ್ಯದಲ್ಲಿ ಮ್ಯಾಗ್ನೈಟ್ ಎಂದು ಬರೆಯಲಾಗಿದೆ. ಹೀಗಾಗಿ ಇದು ಮುಂಭಾಗದಂತೆಯೇ ಹೆಚ್ಚು ಅತ್ಯಾಕರ್ಷಕವಾಗಿ ಕಾಣುತ್ತದೆ.
ಇಂಟೀರಿಯರ್ ವಿವರ ಇಲ್ಲಿದೆ
ಹೊರ ನೋಟದಂತೆಯೇ ಒಳ ನೋಟದಲ್ಲೂ ಹೆಚ್ಚು ಕೆಲಸ ಮಾಡಲಾಗಿದೆ. ಪ್ರಯಾಣಿಕರಿಗೆ ಹೆಚ್ಚು ಉತ್ಸಾಹ ತುಂಬಬಲ್ಲ ವಿನ್ಯಾಸ ನೀಡಲಾಗಿದೆ. 8-ಇಂಚಿನ ಟಚ್ ಸ್ಕ್ರೀನ್ ದೊಡ್ಡ ಆಕರ್ಷಣೆಯಾಗಿದೆ. ಗ್ರಾಫಿಕ್ಸ್ ನಿಖರ ಮಾಹಿತಿಯೊಂದಿಗೆ 7-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕೂಡ ನೀಡಿದ್ದಾರೆ. ಎಸಿ ಸೇರಿದಂತೆ ಕ್ಲೈಮೇಟ್ ಕಂಟ್ರೋಲ್‌ಗಳನ್ನು ರೌಂಡ್ ನಾಬ್‌ಗಳಲ್ಲಿ ನಿಯತ್ರಿಸಬಹುದು. ಒಟ್ಟಾರೆಯಾಗಿ ಕ್ಯಾಬಿನ್ ಒಳಗೆ ಪ್ರೀಮಿಯಂ ಫೀಲ್ ಇದೆ.
ಇದನ್ನೂ ಓದಿ: Tata Nexon EV: ಕೇವಲ 200 ರೂ. ಖರ್ಚಿನಲ್ಲಿ ಈ ಕಾರು 323 ಕಿ.ಮೀ ದೂರ ಸಾಗುತ್ತದೆ!
ಇನ್ನು ಇಂಟೀರಿಯರ್‌ಗೆ ಬಳಸಿದ ಪ್ಲಾಸ್ಟಿಕ್‌ನ ಗುಣಮಟ್ಟ ತಕ್ಕ ಮಟ್ಟಿಗಿದೆ. ಫಿಟ್ ಮತ್ತು ಫಿನಿಶ್ ಸಮಾಧಾನಕರ. ಡಿಜಿಟಲ್ ಕ್ಲಸ್ಟರ್‌ನಲ್ಲಿ ಮಾಹಿತಿ ಪುನರಾವರ್ತನೆಯಾಗುತ್ತದೆ. ಒಂದೇ ನೋಟಕ್ಕೆ ಗುರುತಿಸಲು ಸಾಧ್ಯವೂ ಇಲ್ಲ ಎಂಬುದು ಸಣ್ಣ ಹಿನ್ನಡೆ. ರಿಯರ್ ಸೀಟ್‌ಗೆ ಪ್ರತ್ಯೇಕ ಎಸಿ ವೆಂಟ್‌ಗಳನ್ನು ನೀಡಲಾಗಿದೆ. ಸೀಟ್‌ಗಳು ಆರಾಮವಾಗಿ ಕುಳಿತುಕೊಳ್ಳುವುದಕ್ಕೆ ನೆರವಾಗುತ್ತದೆ. ದೀರ್ಘ ಪ್ರಯಾಣದ ವೇಳೆ ತೊಡೆಯ ಭಾಗಕ್ಕೆ ಹೆಚ್ಚು ಆರಾಮ ನೀಡುವಂಥ ಸೀಟ್‌ಗಳನ್ನು ಕೊಡಲಾಗಿದೆ.
ಫೀಚರ್‌ಗಳಲ್ಲಿ ಅತ್ಯುತ್ತಮ
ಮ್ಯಾಗ್ನೈಟ್ ಇಝಡ್-ಶಿಫ್ಟ್ ಎಎಂಟಿ ಹೆಚ್ಚು ಫೀಚರ್‌ಗಳನ್ನು ಹೊಂದಿದೆ. ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಎಲ್ಇಡಿ ಫಾಗ್ ಲ್ಯಾಂಪ್‌ಗಳು, 360 ಡಿಗ್ರಿ ಕ್ಯಾಮೆರಾ, ಕ್ರೂಸ್ ಕಂಟ್ರೋಲ್, ಪಿಎಂ 2.5 ಏರ್ ಕಂಡಿಷನರ್ ಹೊಂದಿದೆ. ಮುಂಭಾಗದಲ್ಲಿ ಯುಎಸ್‌ಬಿ ಮತ್ತು 12 ವೋಲ್ಟ್ ಸಾಕೆಟ್ ಮತ್ತು ಹಿಂಭಾಗದಲ್ಲಿ ಒಂದು ಸಾಕೆಟ್ ನೀಡಲಾಗಿದೆ. ಸ್ಟೋರೇಜ್ ಸ್ಪೇಸ್‌ಗಳನ್ನು ಯಥೇಚ್ಛವಾಗಿ ನೀಡಲಾಗಿದೆ. ಆದರೆ ಆರ್ಮ್‌ರೆಸ್ಟ್ ಒಳಗೆ ಜಾಗ ಕೊಟ್ಟಿಲ್ಲ. ಕೇವಲ ಕುಷನ್ ಮಾತ್ರ ಇಡಲಾಗಿದೆ. ವೈರ್ ಲೆಸ್ ಚಾರ್ಜರ್, ಆಂಬಿಯೆಂಟ್ ಮೂಡ್ ಲೈಟಿಂಗ್, ಮ್ಯೂಸಿಕ್ ಸಿಸ್ಟಮ್ ಇಲ್ಲದಿರುವುದನ್ನು ಕೊರತೆ ಎನ್ನಬಹುದು. ಆದರೆ ಬೆಲೆಯ ವಿಚಾರಕ್ಕೆ ಬಂದಾಗ ಇದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ.
ಸೆಫ್ಟಿ ಫೀಚರ್ ಕೂಡ ಅತ್ಯುತ್ತಮವಾಗಿದೆ. ಗ್ಲೋಬಲ್ ಅನ್ ಕ್ಯಾಪ್ ಪ್ರಕಾರ 4 ಸ್ಟಾರ್ ರೇಟಿಂಗ್ ಇದೆ. ಇನ್ನು ಎರಡು ಏರ್‌ಬ್ಯಾಗ್‌ಗಳು ಸಾಕಷ್ಟು ಸುರಕ್ಷತೆ ಕೊಡುತ್ತದೆ. ಸೀಟ್ ಬೆಲ್ಟ್ ವಾರ್ನಿಂಗ್ ಡೋರ್ ಓಪನ್ ವಾರ್ನಿಂಗ್ ಕಾರಿನಲ್ಲಿದೆ. ಹೀಗಾಗಿ ಭಾರತದ ಮಟ್ಟಿಗೆ ಸಮಾಧಾನಕರ ಸುರಕ್ಷತೆ ಖಾತರಿಯಿದೆ.
ಎಎಂಟಿ ಡ್ರೈವಿಂಗ್ ಅನುಭವ ಹೇಗಿದೆ?
ಮ್ಯಾಗ್ನೈಟ್ ಇಝಡ್-ಶಿಫ್ಟ್ ಎಎಂಟಿ ಟ್ರಾನ್ಸ್‌ಮಿಷನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ ನಗರದಲ್ಲಿ ಮತ್ತು ಹೈವೆ ರಸ್ತೆಯಲ್ಲಿ ಅತ್ಯುತ್ತಮ ಪ್ರಯಾಣದ ಅನುಭವ ನೀಡುತ್ತದೆ. ನಿಧಾನಗತಿಯ ವೇಗದಲ್ಲಿ ಇದು ಸ್ವಲ್ಪ ಗೊಂದಲಕ್ಕೆ ಈಡು ಮಾಡುತ್ತದೆ. ಗೇರ್ ಬದಲಾವಣೆ ಸಾಕಷ್ಟು ಸಮಯ ತೆಗೆದುಕೊಳ್ಳುವುದು ಗೊಂದಲಕ್ಕೆ ಈಡು ಮಾಡುತ್ತದೆ. ಆಕ್ಸಿಲೇಟರ್ ಮೇಲೆ ಹೆಚ್ಚು ಬಲ ನೀಡಬೇಕಾಗುತ್ತದೆ. ನೀವು ನಿರೀಕ್ಷೆ ಮಾಡುವುದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಗೇರ್ ಬದಲಾವಣೆ ಆಗುವಾಗಲು ಹೆಚ್ಚು ಅಲುಗಾಟದ ಅನುಭವ ಕೊಡುತ್ತದೆ. ಇನ್ನು ಹಂಪ್‌ನಂಥ ಅಡೆ ತಡೆಗಳನ್ನು ದಾಟುವಾಗ ಗೊಂದಲ ಗ್ಯಾರಂಟಿ. ಆಕ್ಸಿಲೇಟರ್ ಕೊಟ್ಟರೆ ಟೈರ್ ಸ್ಪಿನ್ ಆಗುತ್ತದೆ. ಕೊಡದೇ ಹೋದರೆ ಕಾರು ಮುಂದಕ್ಕೆ ಹೋಗುವುದಿಲ್ಲ ಎಂಬ ಗೊಂದಲ ಗ್ಯಾರಂಟಿ. ಆದರೆ, ಹೈವೆ ರಸ್ತೆಯಲ್ಲಿ ನಯವಾದ ಚಾಲನೆಯ ಖಾತರಿ.
ಎಂಜಿನ್ ಸಣ್ಣದಾಗಿರುವ ಕಾರಣ ಗೇರ್ ಬಾಕ್ಸ್‌ನ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ. 100 ಸಿಸಿಯ ಎಂಜಿನ್ 72 ಪಿಎಸ್ ಮತ್ತು 96 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೀಗಾಗಿ ಎತ್ತರದ ಮಾರ್ಗದಲ್ಲಿ ಪ್ರಯಾಣ ಮಾಡುವಾಗ ಕಾರು ಬೇಗ ಸುಸ್ತಾಗುತ್ತದೆ! ನೇರ ರಸ್ತೆಯಲ್ಲಿ ಸಾಗುವಾಗಲೂ ಎಎಂಟಿ ಗೇರ್ ಬಾಕ್ಸ್ ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ವೈಫಲ್ಯ ಕಾಣುತ್ತದೆ. ಒಂದು ವೇಳೆ ಹೆಚ್ಚು ಶಕ್ತಿ ಬೇಕಾದರೆ ಹೆಚ್ಚು ಇಂಧನ ಖಾಲಿಯಾಗುವುದು ಖಾತರಿ.
ಸಸ್ಪೆನ್ಷನ್ ಮ್ಯಾಗ್ನೈಟ್ ಪಾಲಿಗೆ ಉತ್ತಮ ಅಂಶ. ಇದು ಪ್ರಯಾಣದ ಗುಣಮಟ್ಟ ಹೆಚ್ಚಿಸುತ್ತದೆ. ಸಣ್ಣ ಹಂಪ್‌ಗಳಲ್ಲಿ ಸರಾಗವಾಗಿ ಸಾಗುತ್ತದೆ. ಆದರೆ ಟೆಸ್ಟ್ ರೈಡ್‌ಗೆ ಕೊಟ್ಟ ಕಾರಿನ ಮುಂದಿನ ಎರಡೂ ಸಸ್ಪೆನ್ಷನ್‌ನಲ್ಲಿ ಸಣ್ಣ ಹಳ್ಳಕ್ಕೆ ಬಿದ್ದಾಗಲೂ ಅನಗತ್ಯ ಸದ್ದೊಂದು ಹೊರಡುತ್ತಿತ್ತು. ಆದರೆ, ಹಳ್ಳಿಯ ಕಚ್ಚಾ ರಸ್ತೆಯಲ್ಲೂ ಉತ್ತಮ ಸವಾರಿ ಅನುಭವ ನೀಡುತ್ತಿತ್ತು. ನಗರದ ಸವಾರಿಯ ವೇಳೆ ಕ್ಯಾಬಿನ್ ಒಳಗೆ ವೈಬ್ರೇಷನ್ ಬರುತ್ತದೆ. ಹೈವೆನಲ್ಲಿ ಗೊತ್ತಾಗುವುದಿಲ್ಲ. ಆದರೆ, ಅಷ್ಟೊಂದು ಪ್ರಮಾಣದಲ್ಲಿ ರೋಡ್ ಗ್ರಿಪ್ ನೀಡುವುದಿಲ್ಲ ಎಂದು ಹೇಳಬಹುದು. 100 ಕಿ.ಮೀ ವೇಗದ ದಾಟಿದ ಬಳಿಕ ಇದು ಅನುಭವಕ್ಕೆ ಬರುತ್ತದೆ. ಇನ್ನು ಬ್ರೇಕಿಂಗ್ ಉತ್ತಮವಾಗಿದೆ. ತಕ್ಷಣವೇ ಪ್ರತಿಕ್ರಿಯೆ ಕೊಡುತ್ತದೆ.
ನಿಸ್ಸಾನ್ ಮ್ಯಾಗ್ನೈಟ್ ಇಝಡ್-ಶಿಫ್ಟ್ ಬಗ್ಗೆ ಇನ್ನೇನು ಹೇಳಬಹುದು?
ನಿಸ್ಸಾನ್ ಮ್ಯಾಗ್ನೈಟ್ 6 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋರೂಮ್ ಬೆಲೆ) ಮತ್ತು 10.86 ಲಕ್ಷ ರೂ.ಗಳವರೆಗೆ ಇದೆ. ಬೆಲೆ ವಿಚಾರಕ್ಕೆ ಬಂದಾಗ ಉತ್ತಮವಾಗಿದೆ. ಹೀಗಾಗಿ ನಿಸ್ಸಾನ್ ಎಎಂಟಿ ಉತ್ತಮ ಪ್ಯಾಕೇಜ್ ಎಂದೇ ಹೇಳಬಹುದು. ಈ ದರಕ್ಕೆ ಒಳ್ಳೆಯ ಫಿಚರ್‌ಗಳನ್ನು ಕಾರಿನಲ್ಲಿ ನೀಡಲಾಗಿದೆ.
ಹ್ಯಾಚ್ ಬ್ಯಾಕ್ ಬೆಲೆಗೆ ಕಾರು ಕೊಡುತ್ತಿರುವ ಕಾರಣ ಕಾಂಪ್ಯಾಕ್ಟ್ ಎಸ್‌ಯುವಿ ವರ್ಗದಲ್ಲಿ ಅತ್ಯುತ್ತಮ ಎಂದೇ ಹೇಳಬಹುದು. ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್ ಅತ್ಯಂತ ಕಡಿಮೆ ಶಕ್ತಿ ನೀಡುತ್ತದೆ. ಎಎಂಟಿ ನಗರ ಚಾಲನೆಗೆ ಸಾಕಷ್ಟು ಉತ್ತಮವಾಗಿದ್ದರೂ ನೀವು ಟರ್ಬೊ ಸಿವಿಟಿ ಇನ್ನಷ್ಟು ಪವರ್ ಹೊಂದಿದೆ ಎಂಬುದನ್ನು ಗಮನ ಹರಿಸಬೇಕಾಗುತ್ತದೆ.