ಬೆಂಗಳೂರು: ರಾಯಲ್ ಎನ್‌ಫೀಲ್ಡ್ (Royel Enfield) ಶೋ ರೂಮ್ಗೆ ಹೋಗಿ 350 ಸಿಸಿ ಕ್ಲಾಸಿಕ್ ಬೈಕ್ನ ಬೆಲೆ ಎಷ್ಟೆಂದು ಕೇಳಿ ನೋಡಿ. 2.5 ಲಕ್ಷ ರೂಪಾಯಿಂದ ಬೇಸಿಕ್ ವರ್ಷನ್ ಆರಂಭಗೊಳುತ್ತದೆ. ಬಣ್ಣ ಹಾಗೂ ವಿನ್ಯಾಸ ಬದಲಾದಂತೆ ಬೆಲೆಯೂ ಏರಿಕೆಯಾಗಿ ಸುಮಾರು 2 ಲಕ್ಷ 90 ಸಾವಿರ ರೂಪಾಯಿ ತಲುಪುತ್ತದೆ. ಇಷ್ಟೊಂದು ದುಬಾರಿ ಬೈಕ್ಗೆ 80ರ ದಶಕದಲ್ಲಿ ಎಷ್ಟು ದರವಿತ್ತು ಎಂದು ಕೇಳಿದರೆ ಅಚ್ಚರಿಯಾಗುವುದು ಸಹಜ. ಈಗ ಆ ದರಕ್ಕೆ ಒಂದು ಸೈಕಲ್ ಕೂಡ ಬರುವುದಿಲ್ಲ!
ರಾಯಲ್ ಎನ್‌ಫೀಲ್ಡ್ 4567 ಕೆ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ 1986ರಲ್ಲಿ ಗ್ರಾಹಕರೊಬ್ಬರು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಸಿಸಿ ಬೈಕ್ ಖರೀದಿ ಮಾಡಿದ ಬಿಲ್ನ ಚಿತ್ರ ಹರಿದಾಡುತ್ತಿದೆ. ಅದನ್ನು ವೀಕ್ಷಿಸಿದ ಮಂದಿ ಇಷ್ಟೂ ಕಡಿಮೆಗೆ ಬುಲೆಟ್ ಸಿಗುತ್ತಿತ್ತಾ ಎಂದು ಪಶ್ನಿಸಿದ್ದಾರೆ. ಯಾಕೆಂದರೆ ಕೈ ಬರಹದ ಆ ಬಿಲ್ ಪ್ರಕಾರ 18,550 ರೂಪಾಯಿಗೆ ಬೈಕ್ ಅವರ ಮನೆ ಸೇರಿದೆ. ಇಷ್ಟೊಂದು ಕಡಿಮೆಗೆ ಬೈಕ್ ಸಿಗುತ್ತಿದ್ದರೆ ಒಂದು ತೆಗೆದುಕೊಳ್ಳಬಹುದಿತ್ತು ಎಂದು ಅನಿಸುತ್ತದೆ. ಆದರೆ, ಇದು 36 ವರ್ಷಗಳ ಹಿಂದಿನ ಮಾತು. ಆಗ ಹಣದ ಮೌಲ್ಯವೂ ಅಷ್ಠೇ ಇತ್ತು. 18 ಸಾವಿರ ರೂಪಾಯಿ ಸಂಗ್ರಹ ಮಾಡಬೇಕಿದ್ದರೆ ವರ್ಷಾನುಗಟ್ಟಲೆ ದುಡಿಯಬೇಕಾಗಿತ್ತು. ಹೀಗಾಗಿ ಅಂದಿನ ಕಾಲಕ್ಕೆ ಅದು ದುಬಾರಿಯೇ ಸರಿ.
ಜಾರ್ಖಂಡ್ನ ಬೊಕಾರೊ ಸ್ಟೀಲ್ ಕಾರ್ಖಾನೆ ಪ್ರದೇಶದ ಶೋ ರೂಮ್ ಒಂದರಿಂದ ಈ ಬೈಕ್ ಮಾರಾಟವಾಗಿದೆ. ಆರ್ ಎಸ್ ಎಂಜಿನಿಯರಿಂಗ್ ಇಂಡಸ್ಟ್ರಿ ಎಂಬ ಕಂಪನಿ ಇಲ್ಲಿ ಖರೀದಿದಾರ. ಹೀಗಾಗಿ ಇದು ದುಡ್ಡಿದ್ದ ಕಂಪನಿಯೊಂದರ ಖರೀದಿಯೇ ಸರಿ. ಈ ಇನ್ಸ್ಟಾಗ್ರಾಮ್ ಪೋಸ್ಟ್ಗೆ ವ್ಯಕ್ತಿಯೊಬ್ಬರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅವರು ಹೇಳುವಂತೆ ಅದಕ್ಕಿಂತ ಎರಡು ವರ್ಷ ಹಿಂದೆ ಪ್ರೀಮಿಯರ್ ಪದ್ಮಿನಿಕಾರು 16 ಸಾವಿರ ರೂಪಾಯಿಗೆ ಸಿಗುತ್ತಿತ್ತು. ಒಟ್ಟಿನಲ್ಲಿ ಇದು ಆಗಿನ ಕಾಲಕ್ಕೆ ದುಬಾರಿ ಖರೀದಿಯೇ ಆಗಿದೆ.
ಇದನ್ನೂ ಓದಿ | Royal Enfield | ಹಂಟರ್ ಮೇನಿಯಾ; ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಮಾರಾಟದಲ್ಲಿ ಭರ್ಜರಿ ಏರಿಕೆ